Haveri Accident | ಹಾವೇರಿ ಬಳಿ ಭೀಕರ ಅಪಘಾತ: ಹದಿಮೂರಕ್ಕೂ ಹೆಚ್ಚು ಸಾವು

Update: 2024-06-28 03:06 GMT

ರಸ್ತೆಯಲ್ಲಿ ನಿಂತಿದ್ದ ಲಾರಿಯೊಂದಕ್ಕೆ ಟೆಂಪೋ ಟ್ರಾವೆಲ್ಲರ್ (ಟಿಟಿ) ಡಿಕ್ಕಿ ಹೊಡೆದು ದೇವರ ದರ್ಶನ ಪಡೆದು ವಾಪಸ್ಸಾಗುತ್ತಿದ್ದ ಒಂದೇ ಕುಟುಂಬದ 13 ಜನರು ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಶುಕ್ರವಾರ ಬೆಳಗಿನಜಾವ ನಡೆದಿದೆ.

ಮೃತರನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದವರು ಎಂದು ಗುರುತಿಸಲಾಗಿದೆ. ಪೂನಾ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ‌ ನಿಂತಿದ್ದ ಲಾರಿಗೆ ಅತಿವೇಗದಲ್ಲಿ ಬಂದ ಟಿಟಿ, ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಟಿಟಿಯಲ್ಲಿದ್ದವರ ಪೈಕಿ 13 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಟಿಟಿಯಲ್ಲಿದ್ದವರ ದೇಹಗಳು ನಜ್ಜುಗುಜ್ಜಾಗಿದ್ದು ವಾಹನದ ಭಾಗಗಳಿಗೆ ಅಂಟಿಕೊಂಡಿವೆ.

ವಾಹನದಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯುವ ಕಾರ್ಯದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ‌ ನಿರತರಾಗಿದ್ದಾರೆ.

ಮೃತಪಟ್ಟವರ ವಿವರ

ಘಟನೆಯಲ್ಲಿ ಭದ್ರಾವತಿ ಮೂಲದ ಪರಶುರಾಮ್ (45 ವರ್ಷ), ಭಾಗ್ಯ (40), ನಾಗೇಶ್ (50), ವಿಶಾಲಾಕ್ಷಿ (40), ಅರ್ಪಿತಾ (18), ಸುಭದ್ರಾಬಾಯಿ (65), ಪುಣ್ಯ (50), ಮಂಜುಳುಬಾಯಿ (62), ಆದರ್ಶ (23), ಮಾನಸ (24), ರೂಪಾ (40), ಮಂಜುಳಾ (50) ಹಾಗೂ ಮತ್ತೊಬ್ಬರ ಹೆಸರು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Similar News