ಹೊಸದಿಲ್ಲಿ, ಮಾ.10- ಅನುಪ್ ಚಂದ್ರ ಪಾಂಡೆ ಅವರ ನಿವೃತ್ತಿ ಮತ್ತು ಅರುಣ್ ಗೋಯೆಲ್ ಅವರ ಹಠಾತ್ ರಾಜೀನಾಮೆಯಿಂದ ಖಾಲಿಯಾದ ಸ್ಥಾನಗಳನ್ನು ಮಾರ್ಚ್ 15 ರೊಳಗೆ ಭರ್ತಿ ಮಾಡುವ ಸಾಧ್ಯತೆಯಿದೆ.
ಶುಕ್ರವಾರ ಬೆಳಗ್ಗೆ ಗೋಯೆಲ್ ರಾಜೀನಾಮೆ ನೀಡಿದರು.ಪಾಂಡೆ ಅವರು ಫೆ.14 ರಂದು 65 ವರ್ಷ ಪೂರೈಸಿ ನಿವೃತ್ತರಾದರು. ಈಗ ಆಯೋಗದಲ್ಲಿ ಇರುವುದು ಸಿಇಸಿ ರಾಜೀವ್ ಕುಮಾರ್ ಮಾತ್ರ.
ಮೂಲಗಳ ಪ್ರಕಾರ, ಆಯ್ಕೆ ಸಮಿತಿಯು ಮಾರ್ಚ್ 13 ಅಥವಾ 14 ರಂದು ಸಭೆ ಸೇರಬಹುದು ಮತ್ತು ಮಾರ್ಚ್ 15 ರೊಳಗೆ ನೇಮಕ ಮಾಡುವ ಸಾಧ್ಯತೆಯಿದೆ. ಈಮೊದಲು ಚುನಾವಣಾ ಆಯುಕ್ತರನ್ನು ಸರ್ಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇಮಕ ಮಾಡುತ್ತಿದ್ದರು ಮತ್ತು ಹಿರಿಯ ಆಯುಕ್ತರು ಇಸಿ ಆಗಿ ನೇಮಕಗೊಳ್ಳುತ್ತಿದ್ದರು. ಆಯೋಗದಲ್ಲಿ ಸಿಇಸಿ ಮಾತ್ರ ಇರುತ್ತಿದ್ದರು. ಈಗ ಸಿಇಸಿ ಮತ್ತು ಇಬ್ಬರು ಆಯುಕ್ತರು ಇರಲಿದ್ದಾರೆ. ಹೆಚ್ಚುವರಿ ಆಯುಕ್ತರನ್ನು ಅಕ್ಟೋಬರ್ 16, 1989 ರಂದು ನೇಮಿಸಲಾಯಿತು. ಅವರು ಜನವರಿ 1, 1990 ರವರೆಗೆ ಅಧಿಕಾರಾವಧಿ ಹೊಂದಿದ್ದರು. ಆನಂತರ, ಅಕ್ಟೋಬರ್ 1, 1993 ರಂದು ಇಬ್ಬರು ಹೆಚ್ಚುವರಿ ಚುನಾವಣಾ ಆಯುಕ್ತರನ್ನು ನೇಮಿಸಲಾಯಿತು.