ಎಂ.ಪಿ ಟಿಕೆಟ್ ಆಮಿಷ|ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಣ್ಣ, ತಂಗಿಯ ವಿರುದ್ಧ ಎಫ್ಐಆರ್
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಕೂಡ ನನ್ನ ತಮ್ಮ ಪ್ರಹ್ಲಾದ ಜೋಶಿ ಮಾತು ಕೇಳುತ್ತಾರೆ. ತಕ್ಷಣವೇ 5 ಕೋಟಿ ರೂ.ವ್ಯವಸ್ಥೆ ಮಾಡಿ ಎಂದು ಹೇಳಿದ್ದ ಗೋಪಾಲ್ ಜೋಶಿ ಅವರು ದೇವಾನಂದ್ ಚವ್ಹಾಣ್ ಅವರಿಂದ ಎರಡು ಕೋಟಿ ಪಡೆದು ವಂಚಿಸಿದ್ದ ಆರೋಪದ ಮೇಲೆ ದೂರು ದಾಖಲಾಗಿದೆ.;
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷ ತೋರಿ ವಿಜಯಪುರದ ಮಾಜಿ ಶಾಸಕರಿಂದ 2 ಕೋಟಿ ರೂ. ಪಡೆದು ವಂಚಿಸಿದ್ದಲ್ಲದೇ ಹಣ ವಾಪಸ್ ಕೇಳಿದ್ದಕ್ಕೆ ಹಲ್ಲೆ ನಡೆಸಿರುವ ಆರೋಪದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಅಣ್ಣ ಗಣೇಶ್ ಜೋಶಿ, ತಂಗಿ ವಿಜಯಲಕ್ಷ್ಮಿ ಹಾಗೂ ಗೋಪಾಲ್ ಜೋಶಿ ಅವರ ಪುತ್ರ ಅಜಯ್ ಜೋಶಿ ವಿರುದ್ಧ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2018 ರಲ್ಲಿ ವಿಜಯಪುರದ ನಾಗಠಾಣಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದ ಜೆಡಿಎಸ್‌ನ ದೇವಾನಂದ್ ಪುಲ್ ಸಿಂಗ್ ಚವ್ಹಾಣ್ ಹಣ ಕಳೆದುಕೊಂಡು ಮೋಸ ಹೋದವರು. 2023 ರ ಚುನಾವಣೆಯಲ್ಲಿ ಇವರು ಸೋತಿದ್ದರು.
2024 ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿದ್ದವು. ಈ ವೇಳೆ ಚವ್ಹಾಣ್ ಅವರ ಪರಿಚಯಸ್ಥ ಶೇಖರ್ ನಾಯಕ್ ಎಂಬಾತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರ ನನಗೆ ಪರಿಚಿತರು. ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರು. ಅಂತೆಯೇ ಮಾರ್ಚ್ ತಿಂಗಳಲ್ಲಿ ದೇವಾನಂದ್ ಚವ್ಹಾಣ್ ಅವರನ್ನು ಹುಬ್ಬಳ್ಳಿಯ ಗೋಪಾಲ ಜೋಶಿ ಅವರ ಮನೆಗೆ ಕರೆದೋಯ್ದು ಮಾತನಾಡಿಸಿದ್ದರು. ಟಿಕೆಟ್ ವಿಚಾರ ಇಲ್ಲಿ ಮಾತನಾಡುವುದು ಬೇಡ ಎಂದು ಹೇಳಿ ಪ್ರಹ್ಲಾದ್ ಜೋಶಿ ಅವರ ಅಧಿಕೃತ ಕಚೇರಿಗೆ ಕರೆದುಕೊಂಡು ಹೋಗಿ ವ್ಯವಹಾರ ಮಾತನಾಡಿದ್ದರು.
ಕೇಂದ್ರ ಸರ್ಕಾರದಲ್ಲಿ ನನ್ನ ತಮ್ಮ ಪ್ರಹ್ಲಾದ ಜೋಶಿಗೆ ಒಳ್ಳೆಯ ವರ್ಚಸ್ಸಿದೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಕೂಡ ನನ್ನ ತಮ್ಮನ ಮಾತು ಕೇಳುತ್ತಾರೆ. ಟಿಕೆಟ್ ಬಗ್ಗೆ ಯೋಚನೆ ಮಾಡಬೇಡಿ, ತಕ್ಷಣವೇ 5 ಕೋಟಿ ರೂ.ವ್ಯವಸ್ಥೆ ಮಾಡಿ ಎಂದು ಗೋಪಾಲ್ ಜೋಶಿ ಕೇಳಿದ್ದಾರೆ, ಆದರೆ, ಅಷ್ಟೊಂದು ಹಣ ನಮ್ಮಿಂದ ಕೊಡಲಾಗುವುದಿಲ್ಲ. ಟಿಕೆಟ್ ಬೇಡ ಎಂದು ಹೇಳಿ ದೇವಾನಂದ್ ಚವ್ಹಾಣ್ ವಾಪಸ್ ಬಂದಿದ್ದರು.
ಮರುದಿನ ಕರೆ ಮಾಡಿದ ಗೋಪಾಲ್ ಜೋಶಿ, ನೀವು ತಕ್ಷಣವೇ 5ಕೋಟಿ ಕೊಡುವುದು ಬೇಡ, ಈಗ 25 ಲಕ್ಷ ರೂ. ಹಣ ನೀಡಿ, ಉಳಿದ ಹಣದ ಭದ್ರತೆಗಾಗಿ ಚೆಕ್ ಕೊಡಿ ಎಂದು ಹೇಳಿದ್ದರು. ಅಷ್ಟೂ ಕೂಡ ಆಗುವುದಿಲ್ಲ ಎಂದಾಗ ಶೇಖರ್ ನಾಯಕ್ ಮೂಲಕ ಕರೆ ಮಾಡಿಸಿ ಒತ್ತಡ ಹೇರಿದ್ದರು.
ಒಂದು ದಿನ ಕಾಲಾವಕಾಶ ಪಡೆದು, ತಮ್ಮ ಸಂಬಂಧಿಕರಿಂದ 25 ಲಕ್ಷ ರೂ. ಹಣ ಹೊಂದಿಸಿ, ಗೋಪಾಲ ಜೋಶಿ ಸೂಚನೆ ಮೇರೆಗೆ ಬೆಂಗಳೂರಿನ ಬಸವೇಶ್ವರ ನಗರದ ತಂಗಿ ವಿಜಯಲಕ್ಷ್ಮಿ ಮನೆಗೆ ತಲುಪಿಸಿದ್ದರು. ಆಗ ಅಲ್ಲಿಗೆ ಬಂದಿದ್ದ ಗೋಪಾಲ್ ಜೋಶಿ ಅವರು ಈ ಹಣ ಗೃಹ ಸಚಿವ ಅಮಿತ್ ಶಾ ಅವರ ಆಪ್ತ ಕಾರ್ಯದರ್ಶಿಗೆ ಕೊಡಬೇಕು. ಟಿಕೆಟ್ ಬಗ್ಗೆ ನೀವು ತಲೆ ಕೊಡಿಕೊಳ್ಳಬೇಡಿ ಎಂದು ಹೇಳಿದ್ದರು. ಆದರೆ, ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿರಲಿಲ್ಲ. ಟಿಕೆಟ್ ವಂಚಿತರಾದ ದೇವಾನಂದ್ ಚವ್ಹಾಣ್ ಅವರು ಗೋಪಾಲ್ ಜೋಶಿಗೆ ಕರೆ ಮಾಡಿ 25 ಲಕ್ಷ ಹಣ ಹಾಗೂ ಚೆಕ್ ವಾಪಸ್ ನೀಡುವಂತೆ ಕೇಳಿದ್ದಾರೆ.
ಇದರ ಬಗ್ಗೆ ಮಾತಾಡೋಣ ಬಸವೇಶ್ವರ ನಗರದ ಸಹೋದರಿ ಮನೆಗೆ ಬನ್ನಿ ಎಂದು ಗೋಪಾಲ್ ಜೋಶಿ ಕರೆಸಿಕೊಂಡಿದ್ದಾರೆ. ಸರ್ಕಾರಿ ಕಾಮಗಾರಿ ಮುಗಿಸಿರುವ 200 ಕೋಟಿ ರೂ. ಮೊತ್ತದ ಬಿಲ್ ಬಾಕಿ ಇದೆ. ಇನ್ನೊಂದು ತಿಂಗಳಲ್ಲಿ ಬಿಲ್ ಬಿಡುಗಡೆಯಾದ ಕೂಡಲೇ ಮುಂದೆ ನೀವು ಯಾವ ಚುನಾವಣೆಗೆ ನಿಂತರೂ ನಾನೇ 5 ಕೋಟಿ ರೂ. ಕೊಡುತ್ತೇನೆ. ತುರ್ತಾಗಿ ನನಗೆ 1.75 ಕೋಟಿ ಹಣ ಬೇಕು ಎಂದು ಗೋಪಾಲ್ ಜೋಶಿ ಕೇಳಿದ್ದಾರೆ. ಇದನ್ನು ನಂಬಿದ ದೇವಾನಂದ್ ಚವ್ಹಾಣ್ ಪರಿಚಯಸ್ಥರು, ಲೇವಾದೇವಿದಾರರಿಂದ 1.25 ಕೋಟಿ ಹಣವನ್ನು ಜೋಶಿ ಸಹೋದರಿ ವಿಜಯಲಕ್ಷ್ಮಿ ಖಾತೆಗೆ ಹಾಕಿದ್ದಾರೆ. ಉಳಿದ 50 ಲಕ್ಷ ಹಣವನ್ನು ನೇರವಾಗಿ ಮನೆಗೆ ತಂದುಕೊಟ್ಟಿದ್ದಾರೆ.
ಒಂದು ತಿಂಗಳ ನಂತರ ಹಣ ಕೇಳಿದಾಗ ಸಬೂಬು ಹೇಳಿದ್ದಲ್ಲದೇ ಕರೆ ಸ್ವೀಕರಿಸುತ್ತಿರಲಿಲ್ಲ. ಬಸವೇಶವರ ನಗರದ ಮನೆಗೆ ಬಂದು ವಿಚಾರಿಸಿದಾಗ, ಗೋಪಾಲ ಜೋಶಿ ಅವರ ಮಗ ಅಜಯ್ ಜೋಶಿ ಅವರು, ನಿಮಗೆ ನಾನೇ ಹಣ ತಲುಪಿಸುತ್ತೇನೆ ಎಂದು ಹೇಳಿ ಸಾಗಹಾಕಿದ್ದಾರೆ. ಕೆಲ ದಿನ ಕಾದ ಬಳಿಕ ಮತ್ತೆ ಬಂದು ಹಣ ಕೇಳಿದಾಗ ವಿಜಯಲಕ್ಷ್ಮಿ ಅವರು ಮನೆಯಿಂದ ಆಚೆ ದೂಡಿ, ಹಲ್ಲೆ ಮಾಡಿದ್ದಾರೆ. ಹಣ ಕೊಡುವವರೆಗೂ ಇಲ್ಲಿಂದ ಹೋಗುವುದಿಲ್ಲ ಎಂದು ರೌಡಿಗಳನ್ನು ಕರೆದು ಬೆದರಿಸಿದ್ದಾರೆ ಎಂದು ದೇವಾನಂದ್ ಚೌವ್ಹಾಣ್ ಅವರ ಪತ್ನಿ ಸುನಿತಾ ಚವ್ಹಾಣ್ ಅವರು ನೀಡಿರುವ ದೂರಿನಲ್ಲಿಆರೋಪಿಸಿದ್ದಾರೆ. ಈ ಸಂಬಂಧ ಬಸವೇಶ್ವರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸೋದರ ಗೋಪಾಲ್ ಜೋಶಿ ಬ್ಯಾಂಕ್ ಅಧಿಕಾರಿಯಾಗಿದ್ದ ವೇಳೆ ಸರ್ಕಾರಿ ಸ್ವಾಮ್ಯದ ರಾಜೀವ್ ಗಾಂಧಿ ಆರೋಗ್ಯ ವಿವಿ, ಕರ್ನಾಟಕ ಪಾನೀಯ ನಿಗಮ, ಹಟ್ಟಿ ಚಿನ್ನದ ಗಣಿ, ಭಾರತೀಯ ಜೀವ ವಿಮಾ ನಿಗಮದ ಭಾರಿ ಪ್ರಮಾಣದ ಠೇವಣಿಯನ್ನು ಖಾಸಗಿ ವ್ಯಕ್ತಿಗಳ ಖಾತೆಗಳ ಮೂಲಕ ವಹಿವಾಟು ನಡೆಸಿ, ಬ್ಯಾಂಕ್ಗೆ 1.08 ಕೋಟಿ ರೂ. ನಷ್ಟ ಉಂಟು ಮಾಡಿದ್ದ ಆರೋಪವಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಸಿಬಿಐ, ಪ್ರಕರಣದಲ್ಲಿ ಪ್ರಮುಖ ಆರೋಪಿ ಗೋಪಾಲ್ ಜೋಶಿ ಹಾಗೂ ಮತ್ತಿತರರ ವಿರುದ್ಧ ಕ್ರಿಮಿನಲ್ ಆರೋಪ ಸಾಬೀತುಪಡಿಸಲು ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಹೇಳಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿತ್ತು.