Delhi Chalo ದೆಹಲಿ ಚಲೋ ಚಳವಳಿ: ಪಂಜಾಬ್‌ - ಹರಿಯಾಣ ಗಡಿಯಲ್ಲಿ 14,000 ಜನ, 1,200 ಟ್ರಾಕ್ಟರ್‌ !

ರೈತರಿಂದ ಉಗ್ರ ಹೋರಾಟದ ಎಚ್ಚರಿಕೆ, ಭಾರೀ ಸಂಖ್ಯೆಯಲ್ಲಿ ಸೇರಿದ ರೈತರು;

Update: 2024-02-21 08:07 GMT
ದೆಹಲಿಯಲ್ಲಿ ತೀವ್ರಗೊಂಡ ರೈತರ ಚಳವಳಿ

ರೈತರ ದೆಹಲಿ ಚಲೋ ಚಳವಳಿ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ಪಂಜಾಬ್-ಹರಿಯಾಣ ಗಡಿಯಲ್ಲಿ ಸುಮಾರು 14,000 ಜನ 1,200 ಟ್ರ್ಯಾಕ್ಟರ್-ಟ್ರಾಲಿಗಳು, 300 ಕಾರುಗಳು, 10 ಮಿನಿ ಬಸ್‌ಗಳು ಮತ್ತು ಸಣ್ಣ ವಾಹನಗಳೊಂದಿಗೆ ಜನ ಸೇರುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ.

ಈ ಬೆಳವಣಿಗೆಗೆ ಪಂಜಾಬ್‌ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ರೈತರ “ದೆಹಲಿ ಚಲೋ” ಮೆರವಣಿಗೆಯನ್ನು ಪುನರಾರಂಭಿಸುವ ಒಂದು ದಿನ ಮೊದಲು. ಪಂಜಾಬ್ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯವು ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವುದು ಕಳವಳಕಾರಿ ವಿಷಯವಾಗಿದೆ ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು.

ರೈತರ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಪಂಜಾಬ್‌ ಹಾಗೂ ಹರಿಯಾಣದ ಗಡಿ ಭಾಗವಾದ ಶಂಭು ಪ್ರದೇಶದ ಉದ್ದಕ್ಕೂ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಭಾರೀ ಟ್ರ್ಯಾಕ್ಟರ್‌ ಹಾಗೂ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿತ್ತು.

ಹರಿಯಾಣದ ಡಿಜಿಪಿ ಪತ್ರ

ಪ್ರತಿಭಟನೆ ನಿರತ ರೈತರು ಬ್ಯಾರಿಕೇಡ್‌ಗಳನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ, ಅಂತರರಾಜ್ಯ ಗಡಿಯಿಂದ ಬುಲ್ಡೋಜರ್‌ಗಳು ಹಾಗೂ ಇತರೆ ಭಾರೀ ವಾಹನಗಳನ್ನು ವಶಕ್ಕೆ ಪಡೆಯುವಂತೆ ಹರಿಯಾಣದ ಪೊಲೀಸರು ಪಂಜಾಬ್‌ನ ಪೊಲೀಸರಿಗೆ ಒತ್ತಾಯಿಸಿದ್ದಾರೆ. ಈ ಬೆಳವಣಿಗೆಯಿಂದ ಗಡಿಯಲ್ಲಿ ನಿಯೋಜಿಸಲಾಗಿರುವ ಭದ್ರತಾ ಪಡೆಗಳಿಗೆ ಅಪಾಯವಿದೆ ಎಂದು ಹರಿಯಾಣ ಪೊಲೀಸ್ ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಅವರು ತುರ್ತು ಸಂದೇಶ ನೀಡಿದ್ದರು. ಇದಾದ ನಂತರ ಪಂಜಾಬ್ ಡಿಜಿಪಿ ಅವರು, ಖನೌರಿ ಮತ್ತು ಶಂಬು ಗಡಿ ಭಾಗದಲ್ಲಿ ಯಾವುದೇ ಭಾರೀ ವಾಹನಗಳನ್ನು ಚಲಾಯಿಸಬಾರದು ಎಂದು ಸೂಚನೆ ನೀಡಿದ್ದರು.

ಇಂದಿನಿಂದ ದೆಹಲಿ ಚಲೋ ಪುನರಾರಂಭ

ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನಾತ್ಮಕ ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಕೇಂದ್ರವನ್ನು ಒತ್ತಾಯಿಸಲು ದೆಹಲಿ ಚಲೋ ನಡೆಸುತ್ತಿರುವ ರೈತರನ್ನು ಭದ್ರತಾ ಪಡೆಗಳು ತಡೆದಿವೆ. ಹೀಗಾಗಿ, ರೈತರು ಹರಿಯಾಣ ಮತ್ತು ಪಂಜಾಬ್‌ನ ಗಡಿ ಪ್ರದೇಶ ಶಂಭು ಮತ್ತು ಖಾನೌರಿ ಪ್ರದೇಶದಲ್ಲೇ ಉಳಿದಿದ್ದಾರೆ. ಸೋಮವಾರ ಆಂದೋಲನದಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರು ಕೇಂದ್ರದ ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಐದು ವರ್ಷಗಳವರೆಗೆ ಎಂಎಸ್‌ಪಿ ದರದಲ್ಲಿ ಖರೀದಿಸುವ ಕೇಂದ್ರದ ಪ್ರಸ್ತಾಪವನ್ನು ತಿರಸ್ಕರಿಸಿರುವುದಾಗಿ ಹೇಳಿದ್ದಾರೆ. ಕೇಂದ್ರಕ್ಕೆ ರೈತರ ಹಿತಾಸಕ್ತಿ ಇಲ್ಲ ಎಂದಿದ್ದು ಬುಧವಾರ ರಾಷ್ಟ್ರ ರಾಜಧಾನಿಯತ್ತ ಮೆರವಣಿಗೆ ನಡೆಸುವುದಾಗಿ ಘೋಷಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಈ ಮೆರವಣಿಗೆಯನ್ನು ಮುನ್ನಡೆಸುತ್ತಿವೆ. 

Tags:    

Similar News