ಕಾಂಗ್ರೆಸ್- ಟಿಎಂಸಿ ಸೀಟು ಹಂಚಿಕೆ ಮಾತುಕತೆ ಪುನಾರಂಭಗೊಂಡಿದ್ದು,ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ 5 ಕ್ಷೇತ್ರಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಸೀಟು ಹಂಚಿಕೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದ ಕಾಂಗ್ರೆಸ್, ಈಗ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನೊಂದಿಗೆ ಮೈತ್ರಿಯ ಭರವಸೆಯಲ್ಲಿದೆ.
ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ ಕಾಂಗ್ರೆಸ್ ಗೆ ಕೇವಲ ಎರಡು ಸ್ಥಾನ ನೀಡುವುದಾಗಿ ಹೇಳಿದೆ ಬಳಿಕ ಮಾತುಕತೆ ಸ್ಥಗಿತಗೊಂಡಿತ್ತು. ಆದರೆ, ಮೂಲಗಳ ಪ್ರಕಾರ, ಮಮತಾ ಅವರು ಕಾಂಗ್ರೆಸ್ ಬಗೆಗಿನ ಧೋರಣೆಯನ್ನು ಮೃದುಗೊಳಿಸಿದ್ದಾರೆ ಮತ್ತು ರಾಜ್ಯದ 42 ಸ್ಥಾನಗಳಲ್ಲಿ ಐದು ಸ್ಥಾನಗಳನ್ನು ನೀಡಲು ಮುಂದಾಗಿದ್ದಾರೆ. ಪ್ರತಿಯಾಗಿ, ಮೇಘಾಲಯದಲ್ಲಿ ಒಂದು ಮತ್ತು ಅಸ್ಸಾಂನಲ್ಲಿ ಎರಡು ಸ್ಥಾನಗಳನ್ನು ಟಿಎಂಸಿಗೆ ನೀಡಲು ಕಾಂಗ್ರೆಸ್ ಒಪ್ಪಬೇಕಾಗಿ ಬರಬಹುದು. ರಾಜ್ಯಗಳಲ್ಲಿ ಪ್ರಬಲವಾಗಿರುವ ಪಕ್ಷಗಳೊಟ್ಟಿಗೆ ಕಡಿಮೆ ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕು ಎಂಬ ವಾಸ್ತವವನ್ನು ಕಾಂಗ್ರೆಸ್ ಅರ್ಥಮಾಡಿಕೊಂಡಂತಿದೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ಗೆ ಡಾರ್ಜಿಲಿಂಗ್, ಮಾಲ್ಡಾ ದಕ್ಷಿಣ ಮತ್ತು ಉತ್ತರ, ಬೆಹ್ರಾಂಪುರ ಮತ್ತು ರಾಯಗಂಜ್ ಸ್ಥಾನಗಳನ್ನು ನೀಡುವ ಸೂಚನೆಗಳಿವೆ.
ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರೊಂದಿಗೆ ಮಾತನಾಡಿ, ಉತ್ತರ ಪ್ರದೇಶದಲ್ಲಿ 17 ಸ್ಥಾನಗಳ ಪ್ರಸ್ತಾಪವನ್ನು ಸ್ವೀಕರಿಸಿದರು. ದೆಹಲಿಯಲ್ಲಿ ಕಾಂಗ್ರೆಸ್-ಎಎಪಿ ಮೈತ್ರಿ ಅಂತಿಮಗೊಂಡಿದ್ದು, ಎಎಪಿ 4 ಮತ್ತು ಕಾಂಗ್ರೆಸ್ 3 ಸ್ಥಾನಗಳನ್ನು ಹಂಚಿಕೊಂಡಿವೆ. ಕಾಂಗ್ರೆಸ್ ಪ್ರತಿಯಾಗಿ ಎಎಪಿಗೆ ಗುಜರಾತ್‌ನಲ್ಲಿ ಎರಡು ಮತ್ತು ಹರಿಯಾಣದಲ್ಲಿ ಒಂದು ಸ್ಥಾನ ನೀಡುತ್ತದೆ.