ಬಿಜೆಪಿ ಒಂದು ವಾಷಿಂಗ್ ಮಷಿನ್‌: ಶರದ್ ಪವಾರ್

ಭ್ರಷ್ಟಾಚಾರ ಆರೋಪಿಗಳು ಬಿಜೆಪಿ ಸೇರಿದರೆ ಶುದ್ಧವಾಗುತ್ತಾರೆ- ಪವಾರ್‌ ವ್ಯಂಗ್ಯ

Update: 2024-03-07 10:48 GMT

ಪುಣೆ, ಮಾ. 7- ಬಿಜೆಪಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರು ʻಶುದ್ಧರಾಗಲು ಸೇರಿಕೊಳ್ಳಬಹುದಾದ ʻವಾಷಿಂಗ್ ಮಷಿನ್ʼ ಆಗಿ ಮಾರ್ಪಟ್ಟಿದೆ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಗುರುವಾರ ವಾಗ್ದಾಳಿ ನಡೆಸಿದ್ದಾರೆ. .

ಜಾರ್ಖಂಡ್‌ನ ಹೇಮಂತ್ ಸೊರೆನ್ ಮತ್ತು ದೆಹಲಿಯ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕೇಂದ್ರ ಗುರಿಯಾಗಿಸಿಕೊಂಡಿದೆ ಎಂದು ಟೀಕಿಸಿದರು.

ಪುಣೆ ಜಿಲ್ಲೆಯ ಲೋನಾವಾಲಾದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ (ಶರದ್ಚಂದ್ರ ಪವಾರ್) ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ʻಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವಾಗ ಅವಿಭಜಿತ ಎನ್‌ಸಿಪಿಯನ್ನು ಟೀಕಿಸುತ್ತಿದ್ದರು. ಸಂಸತ್ತಿನಲ್ಲಿ ಎಲ್ಲರಿಗೂ ಹಂಚಿದ್ದ ಕಿರುಪುಸ್ತಕದಲ್ಲಿ ಆದರ್ಶ್ ಹಗರಣ ಮತ್ತು ಅಶೋಕ್ ಚವಾಣ್ ಅದರಲ್ಲಿ ಭಾಗಿಯಾಗಿದ್ದರೆಂದು ಉಲ್ಲೇಖಿಸಲಾಗಿತ್ತು. ಆದರೆ, ಏಳೇ ದಿನದಲ್ಲಿ ಚವಾಣ್ ಬಿಜೆಪಿಗೆ ಸೇರಿ, ರಾಜ್ಯಸಭೆ ಸದಸ್ಯರಾದರು. ಆರೋಪ ಮಾಡುವವರೂ ನೀವೇ. ಅಂಥ ವ್ಯಕ್ತಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುವವರೂ ನೀವೇʼ ಎಂದು ಹೇಳಿದರು.

ʻಪ್ರಧಾನಿ ಮಹಾರಾಷ್ಟ್ರದಲ್ಲಿ 70,000 ಕೋಟಿ ರೂ.ಗಳ ನೀರಾವರಿ ಹಗರಣ, ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್‌ನಲ್ಲಿನ ಅಕ್ರಮಗಳ ಬಗ್ಗೆ ಮಾತನಾಡಿದ್ದರು. ಎಂಎಸ್‌ಸಿ ಬ್ಯಾಂಕ್‌ ಅಕ್ರಮದಲ್ಲಿ ಎನ್‌ಸಿಪಿ ಭಾಗಿಯಾಗಿಲ್ಲ. ಧೈರ್ಯವಿದ್ದರೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಿ ಎಂದು ಹೇಳಿದ್ದೆ. ಈ ಹಗರಣದ ಆರೋಪಿ ಇಂದು ಎಲ್ಲಿದ್ದಾರೆ ನೋಡಿ?ʼ ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಹೆಸರು ಉಲ್ಲೇಖಿಸದೆ ಹೇಳಿದರು.

ʻಬಿಜೆಪಿ ವಾಷಿಂಗ್ ಮಷಿನ್ ಆಗಿ ಮಾರ್ಪಟ್ಟಿದೆ ಎಂಬುದನ್ನು ಇದು ತೋರಿಸುತ್ತದೆ. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರು ಆ ಪಕ್ಷಕ್ಕೆ ಸೇರಿಕೊಂಡು ಶುದ್ಧವಾಗಬಹುದು ʼ ಎಂದು ವ್ಯಂಗ್ಯವಾಡಿದರು.

ಅಜಿತ್ ಪವಾರ್ ಬಂಡಾಯವೆದ್ದು, ಹಲವು ಶಾಸಕರೊಂದಿಗೆ ಕಳೆದ ಜುಲೈನಲ್ಲಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಸೇರಿದ್ದಾರೆ. ಇದರಿಂದ 1999ರಲ್ಲಿಆರಂಭಗೊಂಡ ಎನ್‌ ಸಿಪಿ  ವಿಭಜನೆಯಾಯಿತು. ಚುನಾವಣಾ ಆಯೋಗ ಅಜಿತ್ ಪವಾರ್ ಬಣಕ್ಕೆ ಗಡಿಯಾರ ಚಿಹ್ನೆ ನೀಡಿದೆ.

ʻನಾವು ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರ ಸಿದ್ಧಾಂತಗಳಿಗೆ ಅಂಟಿಕೊಂಡಿದ್ದೇವೆ. ಇಂದು ಅಧಿಕಾರದಲ್ಲಿರುವವರು ಮಹಾತ್ಮ ಗಾಂಧಿಯನ್ನು ಪ್ರಶಂಶಿಸುತ್ತಾರೆ. ಆದರೆ, ನೆಹರು ಅವರನ್ನು ಅವಮಾನಿಸುತ್ತಾರೆ. ಪತ್ರಿಕೆಗಳಲ್ಲಿ ‘ಮೋದಿ ಕಿ ಗ್ಯಾರಂಟಿ’ ಎಂಬ ಪೂರ್ಣ ಪುಟದ ಜಾಹೀರಾತುಗಳು ಕಂಡುಬರುತ್ತವೆ. ಇವನ್ನು ಪ್ರಕಟಿಸಲು ಬಳಕೆಯಾಗುತ್ತಿರುವುದು ಜನರ ಹಣʼ ಎಂದರು.

ಪುಣೆಯ ಮಾವಲ್ ವಿಧಾನಸಭಾ ಕ್ಷೇತ್ರದ ಎನ್‌ಸಿಪಿ ಶಾಸಕ ಸುನೀಲ್ ಶೆಲ್ಕೆ ಪಕ್ಷದ ಕೆಲವು ನಾಯಕರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯಿಸಿ,ʻ ನೀವು ಯಾರ ಪ್ರಯತ್ನದಿಂದ ಶಾಸಕರಾದಿರಿ ಎಂದು ಕೇಳುತ್ತೇನೆ? ಪಕ್ಷದ ಕಾರ್ಯಕರ್ತರಿಗೆ ಬೆದರಿಕೆ ಹಾಕಿದರೆ, ನನ್ನನ್ನು ಎದುರಿಸಬೇಕಾಗುತ್ತದೆʼ ಎಂದು ಎಚ್ಚರಿಸಿದರು.

Tags:    

Similar News