CAFE BLAST | ರಾಮೇಶ್ವರಂ ಕೆಫೆ ಸ್ಪೋಟಕ್ಕೆ ಕಾರಣಗಳ ಹುಡುಕಾಟ

ಒಬ್ಬನೇ ವ್ಯಕ್ತಿ ಕೃತ್ಯದ ಶಂಕೆ. ವ್ಯಾಪಾರ ಪೈಪೋಟಿ, ಚುನಾವಣೆ, ಹೂಡಿಕೆದಾರರ ಬೆದರಿಕೆ ಕಾರಣವೇ?;

Update: 2024-03-03 13:36 GMT
ರಾಮೇಶ್ವರಂ ಕೆಫೆಯಲ್ಲಿ ಸ್ಫೋಟದ ನಂತರ ಡಿವೈಸಿಎಂ ಡಿ.ಕೆ. ಶಿವಕುಮಾರ್ , ಗೃಹ ಸಚಿವ ಜಿ ಪರಮೇಶ್ವರ ಮತ್ತು ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ

ಬೆಂಗಳೂರು, ಮಾ.3- ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣವನ್ನು ಭೇದಿಸಲು ಹಲವು ತನಿಖಾ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಗೃಹ ಸಚಿವ ಜಿ. ಪರಮೇಶ್ವರ ಅವರು ಹಲವಾರು ಕೋನಗಳಿಂದ ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಇವುಗಳಲ್ಲಿ ವ್ಯಾಪಾರ ಪೈಪೋಟಿ, ಮುಂಬ ರುವ ಲೋಕಸಭೆ ಚುನಾವಣೆ ಮತ್ತು ಐಟಿ ನಗರದಲ್ಲಿ ಹೂಡಿಕೆ ಮಾಡುವವರನ್ನು ಬೆದರಿಸುವುದೂ ಸೇರಿದೆ. 

ಸಚಿವರ ಪ್ರಕಾರ, ರಾಷ್ಟ್ರೀಯ ತನಿಖಾ ಸಂಸ್ಥೆ, ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ), ಮತ್ತು ಇಂಟೆಲಿಜೆನ್ಸ್ ಬ್ಯೂರೋ (ಐಬಿ) ನೆರವಿ ನೊಂದಿಗೆ ಎಂಟು ತಂಡಗಳು ಕಾರ್ಯನಿರ್ವಹಿಸುತ್ತಿವೆ. 

ಪೂರ್ವ ಬೆಂಗಳೂರಿನ ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ (ಮಾರ್ಚ್ 1) ಸಂಭವಿಸಿದ ಕಡಿಮೆ ತೀವ್ರತೆಯ ಸ್ಫೋಟ ದಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ಶಂಕಿತ ವ್ಯಕ್ತಿ ಟೋಪಿ, ಮುಖಗವಸು ಮತ್ತು ಕನ್ನಡಕ ಧರಿಸಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಟ್ಟಿದ್ದಾನೆ. ಆದರೆ, ಇನ್ನೂ ಪತ್ತೆಯಾಗಿಲ್ಲ. 

ಒಂಟಿ ವ್ಯಕ್ತಿ ಕಾರ್ಯಾಚರಣೆ?: ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ನಗರ ಪೊಲೀಸರು ಇದು ಒಂಟಿ ವ್ಯಕ್ತಿಯ ಕಾರ್ಯಾಚರಣೆ ಎಂದು ನಂಬಲು ಹಲವು ಕಾರಣ ಗಳಿವೆ. ಶಂಕಿತ ವ್ಯಕ್ತಿ ಬಾಂಬ್ ನ್ನು ಇರಿಸುವ ಮುನ್ನ ಹಲವು ಬಾರಿ ಸ್ಥಳಕ್ಕೆ ಭೇಟಿ ನೀಡಿದ್ದಾನೆ. ಸ್ಫೋಟಕವನ್ನು ಕಂಟೇನರ್‌ನಲ್ಲಿ ಇರಿಸಿಲ್ಲ. ಇದು ಸ್ಫೋಟದ ಪರಿಣಾಮವನ್ನು ಹೆಚ್ಚಿಸುತ್ತದೆ. ಬದಲಾಗಿ, ಕೆಫೆಯಲ್ಲಿ ಬಿಟ್ಟುಹೋದ ಬೆನ್ನುಚೀಲದಲ್ಲಿ ಸಡಿಲವಾಗಿ ಇರಿಸಿದ್ದಾನೆ. ಸ್ಫೋಟಕವನ್ನು ಟೇಪ್‌ಗಳಲ್ಲಿ ಸುತ್ತಿದ್ದು, ಹೆಚ್ಚು ಹಾನಿಯನ್ನುಂಟುಮಾಡಲು ಅಮೋನಿಯಂ ನೈಟ್ರೇಟ್ ಜೊತೆಗೆ ನಟ್‌-ಬೋಲ್ಟ್‌ ಸೇರಿಸಲಾಗಿದೆ.

ವರದಿ ಪ್ರಕಾರ, ವ್ಯಕ್ತಿ ಕುಂದಲಹಳ್ಳಿಯಲ್ಲಿ ವೋಲ್ವೋ ಕೆಎ 57 ಎಫ್‌ 186 ಸಂಖ್ಯೆಯ ಬಸ್‌ನಲ್ಲಿ ಬಂದಿದ್ದಾನೆ. ಸಿಎಂಟಿಆರ್‌ಐ ನಿಲ್ದಾಣದಲ್ಲಿ ಇಳಿದು ರೆಸ್ಟೋರೆಂಟ್‌ಗೆ ನಡೆದು ಬಂದಿದ್ದಾನೆ. ಆನಂತರ, ಕೆಲವೇ ನಿಮಿಷಗಳಲ್ಲಿ ಕೆಫೆಯಿಂದ ಹೋಗಿದ್ದಾನೆ. 

ಚುನಾವಣೆ-ವ್ಯಾಪಾರ ಪೈಪೋಟಿ: ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿಗರನ್ನು ಭಯಭೀತಗೊಳಿಸುವ ಉದ್ದೇಶದಿಂದ ಸ್ಫೋಟ ಮಾಡ ಲಾಗಿದೆಯೇ ಎಂಬುದು ತನಿಖೆ ನಡೆಸುತ್ತಿರುವ ಕೋನಗಳಲ್ಲಿ ಒಂದು ಎಂದು ಸಚಿವರು ಹೇಳಿದರು. ʻಚುನಾವಣೆ ಸಮೀಪಿಸುತ್ತಿದೆ. ಆದ್ದ ರಿಂದ, ಸ್ಪೋಟದ ಹಿಂದೆ ಯಾವುದೇ ಸಂಘಟನೆ ಇದೆಯೇ ಅಥವಾ ಬೆಂಗಳೂರನ್ನು ಅಸುರಕ್ಷಿತ ಎಂದು ಬಿಂಬಿಸಿ, ಜನರನ್ನು ಭಯ ಭೀತರಾಗಿಸುವ ಉದ್ದೇಶವಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ ʼ ಎಂದು ಹೇಳಿದರು. 

ʻಸ್ಥಿರ ಸರ್ಕಾರವಿರುವುದರಿಂದ ಅನೇಕ ಹೂಡಿಕೆದಾರರು ಬರುತ್ತಿದ್ದಾರೆ. ಅವರನ್ನು ತಡೆಯಲು ಅಥವಾ ಇನ್ನಿತರ ಕಾರಣಗಳಿಂದ ಮಾಡಿರಬಹುದು. ವ್ಯಾಪಾರ ಪ್ರತಿಸ್ಪರ್ಧಿಗಳು ಅಸೂಯೆಯಿಂದ ಇದನ್ನು ಮಾಡಿರಬಹುದುʼ ಎಂದು ಸಚಿವರು ಹೇಳಿದರು. ಚರ್ಚೆಯಾಗುತ್ತಿರುವ ಕೋನಗಳಲ್ಲಿ ಇದು ಕೂಡ ಒಂದು. ರಾಮೇಶ್ವರಂ ಕೆಫೆ 11 ಘಟಕಗಳನ್ನು ಹೊಂದಿದೆ ಮತ್ತು ಮಾಲೀಕರು ತಮ್ಮ 12 ನೇ ಘಟಕವನ್ನು ಸ್ಥಾಪಿಸಲು ಯೋಜಿಸುತ್ತಿದ್ದರು; ಮುಂಗಡ ಠೇವಣಿ ಕೂಡ ಪಾವತಿಸಿದ್ದರು ಎಂದು ಸಚಿವರು ತಿಳಿಸಿದರು. 

ಹೇರಳ ಊಹಾಪೋಹ: ʻನಾವು ಪ್ರಕರಣವನ್ನು ಭೇದಿಸುತ್ತೇವೆ. ಎಷ್ಟೇ ಕಠಿಣವಾಗಿದ್ದರೂ ಇಲಾಖೆ ಇದನ್ನು ಭೇದಿಸಲಿದೆ. ತಾವು, ಪೊಲೀಸರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ನಂಬಬೇಕೇ ಹೊರತು ಊಹಾಪೋಹಗಳನ್ನಲ್ಲʼ ಎಂದು ಜನರಲ್ಲಿ ಮನವಿ ಮಾಡಿದರು.

ನವೆಂಬರ್ 19, 2022 ರಂದು ಮಂಗಳೂರಿನಲ್ಲಿ ಸಂಭವಿಸಿದ ಪ್ರೆಶರ್ ಕುಕ್ಕರ್ ಸ್ಫೋಟ ಕುರಿತ ಪ್ರಶ್ನೆಗೆ, ಸ್ಪೋಟಕ ಮತ್ತು ಇತರ ಉಪಕರಣ ಗಳ ಜೋಡಣೆ ಮಂಗಳೂರಿನಂತೆಯೇ ಇದೆ. ಇದರರ್ಥ, ರಾಮೇಶ್ವರಂ ಕೆಫೆ ಸ್ಫೋಟದ ಹಿಂದೆ ಅದೇ ಗ್ಯಾಂಗ್ ಇದೆ ಎಂದಲ್ಲʼ ಎಂದು ಹೇಳಿದರು.

ʻಬ್ಯಾಟರಿ ಮತ್ತು ಟೈಮರ್ ಬಳಸಿದ ರೀತಿಯಲ್ಲಿ ಹೋಲಿಕೆಯಿದೆ. ಅದೇ ಸಂಘಟನೆ ಅಥವಾ ಅದೇ ವ್ಯಕ್ತಿ ಮಾಡಿದ್ದಾರಾ ಗೊತ್ತಿಲ್ಲʼ ಎಂದು ಸಚಿವರು ಹೇಳಿದರು.

ಕಡಿಮೆ ತೀವ್ರತೆಯ ಸ್ಫೋಟ: ಇದು ಕಡಿಮೆ ತೀವ್ರತೆಯ ಬಾಂಬ್. ಸ್ಫೋಟಕದ ತೀವ್ರತೆ ಮತ್ತು ಪ್ರಮಾಣ ಕಡಿಮೆ ಇರಬಹುದು. ಪ್ರಮಾಣ ಹೆಚ್ಚಿದ್ದರೆ, ತೀವ್ರತೆ ಹೆಚ್ಚಿರು ತ್ತಿತ್ತು ಎಂದು ಹೇಳಿದರು.

ಅವರ ಪ್ರಕಾರ, ಬಾಂಬ್ ಲಂಬವಾಗಿ ಅಲ್ಲದೆ ಅಡ್ಡಲಾಗಿ ಸ್ಫೋಟಗೊಂಡಿದ್ದರೆ, ಸಾವುನೋವು ಸಂಭವಿಸಬಹುದಿತ್ತು. ನಾನು ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಅಲ್ಲಿ ಬೋಲ್ಟ್‌ ಮತ್ತು ಉಗುರುಗಳನ್ನು ನೋಡಿದೆ. ಸ್ಫೋಟ ಮೇಲ್ಮುಖವಾಗಿತ್ತು. ಅಡ್ಡವಾಗಿ ಹೋಗಿದ್ದರೆ, ಹೆಚ್ಚು ಜನ ಗಾಯ ಗೊಳ್ಳುವ, ಸಾವಿನ ಸಾಧ್ಯತೆಯಿತ್ತು. ಅದೃಷ್ಟವಶಾತ್ ಸ್ಫೋಟ ಮೇಲ್ಮುಖವಾಗಿತ್ತುʼ ಎಂದು ಪರಮೇಶ್ವರ ವಿವರಿಸಿದರು.

ಸ್ಪಷ್ಟತೆಯ ಕೊರತೆ: ಶಂಕಿತ ವ್ಯಕ್ತಿ ಬಗ್ಗೆ ಮಾತನಾಡಿ, ʻಪೊಲೀಸರು 40 ರಿಂದ 50 ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪರಿಶೀಲಿಸಿದ್ದಾರೆ. ವ್ಯಕ್ತಿ ಬಸ್ಸಿನಲ್ಲಿ ಬಂದಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಆ ಸಮಯದಲ್ಲಿ ಹಾದು ಹೋದ 26 ಬಸ್ಸುಗಳನ್ನು ಪರಿಶೀಲಿಸಿದೆವು. ವ್ಯಕ್ತಿ ಪ್ರಯಾಣಿಸಿದ ಬಸ್ ವಿವರ ಸಿಕ್ಕಿದೆ. ಆತ ಟೋಪಿ, ಮುಖಗವಸು ಮತ್ತು ಕನ್ನಡಕ ಧರಿಸಿದ್ದ. ಚಹರೆ ಸ್ಪಷ್ಟವಾಗಿಲ್ಲ,ʼ ಎಂದರು.

Tags:    

Similar News