Cafe Blast: ಬಾಂಬರ್‌ಗಾಗಿ ಸಮುದ್ರದಲ್ಲೂ ಹುಡುಕಾಟ!
ಕರ್ನಾಟಕದ ಕರಾವಳಿಯಲ್ಲಿ ಹೈ ಅಲರ್ಟ್: ಮೀನುಗಾರರಿಗೆ ಎಚ್ಚರಿಕೆ;
ಬೆಂಗಳೂರಿನ ರಾಮೇಶ್ವರಂ ಕೆಫೆಯ ಬಾಂಬ್ ಸ್ಫೋಟ ಮಾಡಿದ ಬಾಂಬರ್‌ಗಾಗಿ ಹುಡುಕಾಟ ತೀವ್ರವಾಗಿದ್ದು, ಸಮುದ್ರದಲ್ಲೂ ಹುಡುಕಾಟ ನಡೆದಿದೆ. ಮಾರ್ಚ್ 1ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿತ್ತು. ಇದೀಗ ಬಾಂಬ್ ಸ್ಫೋಟವಾಗಿ 10 ದಿನಗಳ ಸಮೀಪಿಸುತ್ತಿದ್ದು, ಬಾಂಬರ್‌ಗಾಗಿ ಹುಡುಕಾಟ ತೀವ್ರವಾಗಿದೆ.
ಬಾಂಬರ್‌ಗಾಗಿ ಕಾರ್ಯಚಾರಣೆ ಚುರುಕುಗೊಳಿಸಿರುವ ಕರ್ನಾಟಕ ಪೊಲೀಸರು ಹಾಗೂ ಎನ್‌ಐಎ ಅಧಿಕಾರಿಗಳು ಸಮುದ್ರದಲ್ಲೂ ಬಾಂಬರ್‌ಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶಂಕಿತ ಉಗ್ರ ಸಮುದ್ರದ ಮೂಲಕ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ, ಕರ್ನಾಟಕದ ಕರಾವಳಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಕರಾವಳಿಯ ಸಮುದ್ರ ತೀರದಲ್ಲಿ ಕರಾವಳಿ ಕಾವಲು ಪೊಲೀಸ್ ಪಡೆ ಅಲರ್ಟ್ ಆಗಿದ್ದಾರೆ.
ಸಮುದ್ರದಲ್ಲಿ ಶೋಧ ಕಾರ್ಯಾಚರಣೆ
ಶಂಕಿತ ಉಗ್ರನಿಗಾಗಿ ಕರ್ನಾಟಕದ ಸಮುದ್ರದಲ್ಲಿ ಶೋಧ ಕಾರ್ಯಾಚರಣೆ ಚುರುಕಾಗಿದೆ. ಸಿಎಸ್‌ಪಿ ಪಡೆಯು ಕರ್ನಾಟಕದ ಕರಾವಳಿಯ ಮಂಗಳೂರು, ಉಡುಪಿ, ಕುಂದಾಪುರದ ವರೆಗೆ ಹಾಗೂ ಭಟ್ಕಳದಿಂದ ಕಾರವಾರದ ವರೆಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮೀನುಗಾರರಿಗೆ ಎಚ್ಚರಿಕೆ
ಶಂಕಿತ ಉಗ್ರ ಸಮುದ್ರ ಮೂಲಕ ಸಂಚಾರ ನಡೆಸಿದ್ದಾನೆ ಎನ್ನುವ ಅನುಮಾನ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯ ಸಮುದ್ರ ಭಾಗದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಇದೇ ಸಂದರ್ಭದಲ್ಲಿ ಸಂಶಯಾಸ್ಪದವಾಗಿ ಯಾರಾದರೂ ಕಂಡು ಬಂದರೆ, ಮಾಹಿತಿ ನೀಡುವಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಅದೇ ರೀತಿ ಸಮುದ್ರ ಭಾಗದಲ್ಲಿ ಸಂಶಯಾಸ್ಪದ ಬೋಟ್‌ಗಳು ಕಾಣಿಸಿಕೊಂಡರೂ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಕೋಸ್ಟ್ ಗಾರ್ಡ್ ನೆರವು ಕೋರಿದ ಐಎನ್ಎ
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಆರೋಪಿಗಳ ಪತ್ತೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಭಾರತೀಯ ಕೋಸ್ಟ್ ಗಾರ್ಡ್‌ನ ನೆರವು ಕೋರಿದೆ. ಬಾಂಬರ್‌ಗಳು ಕರಾವಳಿ ಪ್ರದೇಶಗಳ ಮೂಲಕ ದೇಶದಿಂದ ಪರಾರಿಯಾಗುವ ಸಾಧ್ಯತೆ ಇದೆ. ಇಲ್ಲವೇ ತನಿಖಾಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಭೂತರಾಗುವ ಸಾಧ್ಯತೆಯೂ ಇದೆ ಎನ್ನುವ ಅನುಮಾನ ಮೂಡಿರುವುದರಿಂದ ತನಿಖಾ ಅಧಿಕಾರಿಗಳು ಎಲ್ಲಾ ಕೇಂದ್ರ ಏಜೆನ್ಸಿಗಳ ಸಹಾಯವನ್ನು ಪಡೆದಿದ್ದಾರೆ.
ಘಟನೆಯು ಮಾರ್ಚ್ 1 ರಂದು ಸಂಭವಿಸಿದೆ ಮತ್ತು ಸುಮಾರು 8 ದಿನಗಳು ಕಳೆದರೂ, ತನಿಖಾಧಿಕಾರಿಗಳು ಬಾಂಬರ್ ಅನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಆರೋಪಿಗಳು ತಪ್ಪಿಸಿಕೊಳ್ಳಲು ಅರಬ್ಬಿ ಸಮುದ್ರದಲ್ಲಿ ಯಾವುದಾದರು ಮೀನುಗಾರಿಕೆ ದೋಣಿ ಅಥವಾ ಬೋಟ್‌ಗಳನ್ನು ಬಳಸಿದ್ದಾರೆಯೇ ಎನ್ನುವುದನ್ನು ಪತ್ತೆ ಹಚ್ಚುವ ಉದ್ದೇಶದಿಂದ ಕೋಸ್ಟ್ ಗಾರ್ಡ್ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಕೋಸ್ಟ್ ಗಾರ್ಡ್ ಕೇರಳದಿಂದ ಕಾರವಾರದವರೆಗಿನ ಕರಾವಳಿ ಪ್ರದೇಶಗಳಲ್ಲಿ ಸಕ್ರಿಯವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಹೈ ಅಲರ್ಟ್ ನೀಡಲಾಗಿದ್ದು, ಕರಾವಳಿ ಪ್ರದೇಶದ ಸ್ಥಳೀಯ ಪೊಲೀಸ್ ಠಾಣೆಗಳು ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ.
ಕೇರಳದ ಕರಾವಳಿ ಪ್ರದೇಶಗಳಾದ ಬೈಪುರ,ಅಝೀಕಲ್,ಉಳ್ಳಾಲ, ಮಂಗಳೂರು,ಉಡುಪಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಕೋಸ್ಟ್ ಗಾರ್ಡ್ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಸಣ್ಣ ಮೀನುಗಾರಿಕಾ ಬಂದರುಗಳನ್ನು ಸಹ ಪರಿಶೀಲನೆ ನಡೆಸಲಾಗುತ್ತಿದೆ. ಶಂಕಿತ ಉಗ್ರ ಈಗಾಗಲೇ ದೇಶದಿಂದ ಪಲಾಯನ ಮಾಡಿರುವ ಸಾಧ್ಯತೆಯಿದೆ. ಇದರ ಹೊರತಾಗಿಯೂ ಭೂಗತವಾಗಿರುವ ಅಥವಾ ಮೀನುಗಾರಿಕೆ ದೋಣಿಗಳ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿರುವ ಸಾಧ್ಯತೆ ಇದೆ.
ನಾವು ಮಂಗಳೂರು ಸೇರಿದಂತೆ ಪ್ರಮುಖ ಬಂದರುಗಳಿಂದ ಸಾಗಿರುವ ಕ್ರೂಸ್‌ಗಳ ವಿವರಗಳ ಬಗ್ಗೆ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಅಲ್ಲಿಂದ ಸಿಸಿಟಿವಿ ದೃಶ್ಯಗಳನ್ನು ಪಡೆಯುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದ ಫೆಡರಲ್ ಕರ್ನಾಟಕದಲ್ಲಿ ಈ ಬಗ್ಗೆ ವಿಶೇಷ ವರದಿ ಪ್ರಕಟವಾಗಿತ್ತು. ಶಂಕಿತ ಉಗ್ರ ದೇಶದಿಂದ ಪರಾರಿಯಾಗಿರುವ ಅನುಮಾನದ ಬಗ್ಗೆ ಬರೆಯಲಾಗಿತ್ತು.
ಹಿನ್ನೆಲೆ ಏನು ?
ರಾಮೇಶ್ವರಂ ಕೆಫೆ ಸ್ಫೋಟದ ಬಾಂಬರ್ ಎಲ್ಲಿದ್ದಾನೆ ಎನ್ನುವುದರ ಬಗ್ಗೆ ತೀವ್ರ ಶೋಧ ಮುಂದುವರಿದಿದೆ. ತನಿಖಾಧಿಕಾರಿಗಳು ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಿರುವ ಎಲ್ಲಾ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಪೊಲೀಸರ ಬಳಿ ಸಿಸಿಟಿವಿಗಳಿಂದ ಲಭ್ಯವಾಗಿರುವ ಫೋಟೋಗಳು ಮತ್ತು ವಿಡಿಯೋಗಳು ಮಾತ್ರ ಇವೆ. ಶಂಕಿತ ಉಗ್ರ ಕರ್ನಾಟಕ ಮಾತ್ರವಲ್ಲ ದೇಶದ ಗಡಿಯನ್ನೇ ದಾಟುತ್ತಿದ್ದಾನೆಯೇ ಎನ್ನುವ ಅನುಮಾನ ಮೂಡುತ್ತಿದೆ. ಹೀಗಾಗಿ, ಸಮುದ್ರದಾಳದಲ್ಲೂ ಬಾಂಬರ್‌ಗಾಗಿ ಹುಡುಕಾಟ ಮುಂದುವರಿದಿದೆ.
ಆತನ ಪತ್ತೆಗೆ ಭಾರೀ ಮೊತ್ತದ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಆರೋಪಿ ರಾಜ್ಯದ ಗಡಿಯನ್ನು ದಾಟಿದ್ದಲ್ಲದೆ ದೇಶವನ್ನು ತೊರೆದಿರಬಹುದು. ಆತ ಬೆಂಗಳೂರು-ಬಳ್ಳಾರಿ- ಭಟ್ಕಳದ ಮೂಲಕ ಕೇರಳ ಗಡಿ ದಾಟಿರಬಹುದು. ಇಲ್ಲವೇ ಬೆಂಗಳೂರು- ಬಳ್ಳಾರಿ, ಬೀದರ್‌ನ ಹುಮ್ನಾಬಾದ್, ಹೈದರಾಬಾದ್‌ಗೆ ತೆರಳಿ ಅಲ್ಲಿಂದ ಕೇರಳಕ್ಕೆ ತೆರಳಿರಬಹುದು. ಅಲ್ಲಿಂದ ದೇಶವನ್ನೇ ಬಿಟ್ಟು ಹೋಗಿರುವ ಅಥವಾ ಭೂಗತನಾಗಿರುವ ಸಾಧ್ಯತೆ ಇದೆ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ಆರೋಪಿ ಭಟ್ಕಳ (ಕರಾವಳಿ ನಗರ) ಕಡೆಗೆ ಪ್ರಯಾಣಿಸಿ ಕರಾವಳಿ ರಾಷ್ಟ್ರೀಯ ಹೆದ್ದಾರಿ ಮೂಲಕ ಕೇರಳಕ್ಕೆ ತೆರಳಿರುವ ಸಾಧ್ಯತೆಯಿದೆ. ಹೀಗಾಗಿ, ಸಮುದ್ರದಲ್ಲೂ ಬಾಂಬರ್‌ಗಾಗಿ ತೀವ್ರ ಹುಡುಕಾಟ ಶುರುವಾಗಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆಯ ಬಾಂಬ್ ಸ್ಫೋಟ ಮಾಡಿದ ಬಾಂಬರ್ ಗಾಗಿ ಹುಡುಕಾಟ ತೀವ್ರವಾಗಿದ್ದು, ಸಮುದ್ರದಲ್ಲೂ ಹುಡುಕಾಟ ನಡೆದಿದೆ.