ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಹತ್ಯೆ: ಎಸ್‌ಐಟಿ ರಚನೆ
ಇಬ್ಬರ ಬಂಧನ;
ಪುದುಚೇರಿ: ಒಂಬತ್ತು ವರ್ಷದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ನಡೆಸಿ, ಕೊಲೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ತಪ್ಪಿತಸ್ಥರಿಗೆ ಒಂದು ವಾರದಲ್ಲಿ ಶಿಕ್ಷೆ ವಿಧಿಸಲು ಸರ್ಕಾರವು ವಿಶೇಷ ತ್ವರಿತ ನ್ಯಾಯಾಲಯವನ್ನು ರಚಿಸಲಿದೆ ಎಂದು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರು ಮಾ.7ರಂದು ಹೇಳಿದ್ದಾರೆ.
ಬಾಲಕಿ ಮಾರ್ಚ್ 2 ರಂದು ನಾಪತ್ತೆಯಾಗಿದ್ದಳು. ಮುತ್ಯಾಲ್‌ಪೇಟೆ ಬ್ಲಾಕ್‌ನಲ್ಲಿರುವ ಆಕೆಯ ಮನೆಯ ಸಮೀಪವಿರುವ ಚರಂಡಿಯಲ್ಲಿ ಶವ ಬುಧವಾರ ಪತ್ತೆಯಾಗಿದೆ. ಆಕೆಯನ್ನು ಅಪಹರಿಸಿ ಹತ್ಯೆಗೈದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇಬ್ಬರ ಬಂಧನ: ಈ ಸಂಬಂಧ ಜಿ. ವಿವೇಕಾನಂದನ್ (52) ಮತ್ತು ಎಂ ಕಾಕ್ಕಾ ಅಲಿಯಾಸ್ ಕರುಣಸ್ (19) ಎಂಬ ಇಬ್ಬರನ್ನು ಬಂಧಿಸಲಾಗಿದೆ. 302 (ಕೊಲೆಗೆ ಶಿಕ್ಷೆ), ಪೋಕ್ಸೊ ಮತ್ತು ಐಪಿಸಿಯ ಸೆಕ್ಷನ್ 34 ರೊಂದಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ಆರ್.ಕಲೈವಾನನ್ ಎಸ್‌ಐಟಿ ನೇತೃತ್ವ ವಹಿಸಿದ್ದು, ವರಿಷ್ಠಾಧಿ ಕಾರಿ (ಪೂರ್ವ) ಲಕ್ಷ್ಮಿ ಸುಜನ್ಯ ಅವರು ತನಿಖಾಧಿಕಾರಿ, ಇನ್ಸ್‌ಪೆಕ್ಟರ್ ಗಣೇಶ್ ಮತ್ತು ಉಪ ನಿರೀಕ್ಷಕ ಶಿವಪ್ರಕಾಶ್ ತಂಡದಲ್ಲಿದ್ದಾರೆ. ತಂಡವು ಉಪ ಪೊಲೀಸ್ ಮಹಾನಿರೀಕ್ಷಕ ಬ್ರಿಜೇಂದ್ರ ಕುಮಾರ್ ಯಾದವ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಮಾದಕ ವಸ್ತು ವ್ಯಸನ: ಬಾಲಕಿಯ ಪಾರ್ಥಿವ ಶರೀರದ ಮೇಲೆ ಪುಷ್ಪಾರ್ಚನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಮಿಳಿಸೈ, ʻಮಗುವನ್ನು ಕಳೆದುಕೊಂಡ ಪೋಷಕರ ದುಃಖ ಮತ್ತು ಶೋಕವನ್ನುಕಂಡು ಭಾವುಕಳಾಗಿದ್ದೇನೆ. ಡ್ರಗ್ಸ್ ಮತ್ತು ಮಾದಕ ವಸ್ತು ಹಾವಳಿ ಸಂಪೂರ್ಣವಾಗಿ ನಿರ್ಮೂಲ ಮಾಡಬೇಕು ಎಂದು ದೃಢ ಅಭಿಪ್ರಾಯ ಹೊಂದಿದ್ದೇನೆʼ ಎಂದರು.
ಪುದುಚೇರಿಯ ಕೆಲವರು ನೆರೆಯ ತಮಿಳುನಾಡಿನ ಡ್ರಗ್ ಡೀಲರ್‌ಗಳೊಂದಿಗೆ ನಂಟು ಹೊಂದಿದ್ದಾರೆ ಎಂಬ ಮಾಹಿತಿಯಿದೆ. ʻಡ್ರಗ್ಸ್ ದಂಧೆಯಲ್ಲಿರುವವರ ಬಗ್ಗೆ ಮಾಹಿತಿ ಇದೆ ಮತ್ತು ಅವರಿಗೆ ರಾಜಕೀಯ ಹಿನ್ನೆಲೆ ಇದೆ. ಪುದುಚೇರಿಯಲ್ಲಿ ಡ್ರಗ್ ದಂಧೆಕೋರರನ್ನು ಬೆಂಬಲಿಸುವ ಎಲ್ಲರನ್ನೂ ಮುಲಾಜಿಲ್ಲದೆ ಬಂಧಿಸಲಾಗುವುದು. ಅಂತಾರಾಜ್ಯ ಗಡಿಗಳಲ್ಲಿ ಬಿಗಿ ನಿಗಾ ಇರಿಸಲಾಗುವುದುʼ ಎಂದು ಅವರು ಹೇಳಿದ್ದಾರೆ.
ವ್ಯರ್ಥ ಹುಡುಕಾಟ: ಮಾರ್ಚ್ 2 ರಂದು ಬಾಲಕಿ ನಾಪತ್ತೆಯಾದ ತಕ್ಷಣ ಪೋಷಕರು ಪೊಲೀಸರಿಗೆ ದೂರು ನೀಡಿ, ವಿವಿಧೆಡೆ ಹುಡುಕಾಡಿದ್ದರು. ಪೊಲೀಸರು ವ್ಯಾಪಕ ಹುಡುಕಾಟ ನಡೆಸಿದ್ದರೂ, ಫಲ ನೀಡಿರ ಲಿಲ್ಲ. ಪೋಷಕರು ಮುತ್ಯಾಲ್‌ಪೇಟೆಯ ಸೊಲೈ ನಗರ ಪ್ರದೇಶದ ನಿವಾಸಿಗಳೊಂದಿಗೆ ಮಂಗಳವಾರ ರಸ್ತೆ ರೋಕೋ ನಡೆಸಿ, ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.
ಪೊಲೀಸರು ಬುಧವಾರ ಬಾಲಕಿಯ ಮನೆ ಸಮೀಪದ ಚರಂಡಿಯಲ್ಲಿ ತೇಲುತ್ತಿದ್ದ ಗೋಣಿ ಚೀಲವನ್ನು ಹೊರತೆಗೆದು ನೋಡಿದಾಗ, ಶವ ಪತ್ತೆಯಾಗಿದೆ. ಆಕೆಯ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿತ್ತು.
ಬಾಲಕಿ ಹತ್ಯೆ ಮಾಡಿದವರನ್ನು ಬಂಧಿಸಬೇಖೆಂದು ಪಕ್ಷೇತರ ಶಾಸಕ ಪ್ರಕಾಶ್ ಕುಮಾರ್ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಮುತ್ಯಾಲಪೇಟೆಯ ವಿವಿಧೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಒತ್ತಾಯಿಸಿದರು.
ರಾಹುಲ್ ಗಾಂಧಿ ಪೋಸ್ಟ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘಟನೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಘಾತ ವ್ಯಕ್ತಪಡಿಸಿದ್ದಾರೆ. ಮಹಿಳೆಯಋ ಸುರಕ್ಷತೆ ಮತ್ತು ಗೌರವವು ಅಭಿವೃದ್ಧಿ ಹೊಂದಿದ ರಾಷ್ಟ್ರದ ಗುರುತು ಎಂದು ಹೇಳಿದರು.ʻ ದೇಶದಲ್ಲಿ ಹೆಣ್ಣು ಮಕ್ಕಳ ಮೇಲಿನ ಅಪರಾಧಗಳು ನಿರಂತರವಾಗಿ ಏಕೆ ಹೆಚ್ಚುತ್ತಿವೆ? 2022 ರಲ್ಲೇ ಮಹಿಳೆಯರ ವಿರುದ್ಧ 4.5 ಲಕ್ಷ ಅಪರಾಧ ಪ್ರಕರಣಗಳು ನಡೆದಿದ್ದು, ಈ ಪೈಕಿ 31,000 ಅತ್ಯಾಚಾರ ಪ್ರಕರಣ. ಇಂಥ ಘಟನೆಗಳು ಸಂವೇದನಾರಹಿತ ವ್ಯವಸ್ಥೆ ಮತ್ತು ಕ್ರೂರ ಸಮಾಜದ ಪ್ರತಿಬಿಂಬವಾಗಿವೆ. ಒಂದು ರಾಷ್ಟ್ರವಾಗಿ ಆತ್ಮಾವಲೋಕನದ ವಿಷಯʼ ಎಂದು ರಾಹುಲ್ ಪೋಸ್ಟ್ ಮಾಡಿದ್ದಾರೆ.
ಪ್ರತಿಪಕ್ಷಗಳಿಂದ ಖಂಡನೆ: ಪ್ರತಿಪಕ್ಷ ಡಿಎಂಕೆ ನಾಯಕ ಮತ್ತು ಪುದುಚೇರಿಯ ಪಕ್ಷದ ಸಂಚಾಲಕ ಆರ್. ಶಿವ ಮಾತನಾ ಡಿ, ʻಬಾಲಕಿಯನ್ನು ರಕ್ಷಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಗೃಹ ಸಚಿವರು ರಾಜೀನಾಮೆ ನೀಡಬೇಕುʼ ಎಂದು ಆಗ್ರಹಿಸಿದರು.
ʻಪ್ರವಾಸೋದ್ಯಮದ ಹೆಸರಿನಲ್ಲಿ ಸಾಂಸ್ಕೃತಿಕ ವೈಶಿಷ್ಟ್ಯಗಳು ಹಾಳಾಗುತ್ತಿವೆ. ರಾತ್ರಿ ವೇಳೆ ನೃತ್ಯಕ್ಕೆ ಅವಕಾಶ ನೀಡುವ ರೆಸ್ಟೊ ಬಾರ್‌ಗಳಿಂದ ಪುದುಚೇರಿಯ ಶಾಂತಿಯುತ ಪರಿಸರಕ್ಕೆ ಧಕ್ಕೆಯಾಗುತ್ತಿದೆʼ ಎಂದು ದೂರಿದರು.
ಪಿಸಿಸಿ ಅಧ್ಯಕ್ಷ ಮತ್ತು ಪುದುಚೇರಿ ಸಂಸದ ವಿ. ವೈತಿಲಿಂಗಂ ಸುದ್ದಿಗಾರರೊಂದಿಗೆ ಮಾತನಾಡಿ, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದರು. ಪುದುಚೇರಿಯ ಸಿಪಿಐ(ಎಂ) ಕಾರ್ಯದರ್ಶಿ ಆರ್ ರಾಜಾಂಗಂ, ಎಐಎನ್‌ಆರ್‌ಸಿ-ಬಿಜೆಪಿ ಸರ್ಕಾರ ಮಾದಕ ವಸ್ತುಗಳ ಹಾವಳಿಯನ್ನು ತಡೆದಿಲ್ಲ ಎಂದು ದೂರಿದ್ದಾರೆ.