ಶಿಬರೂರು ಕ್ಷೇತ್ರಕ್ಕೆ ಹಿಂಗಾರ ಹರಕೆ ಅರ್ಪಿಸಿದ ಶಿಲ್ಪಾ ಶೆಟ್ಟಿ
ನಾನು ಎಲ್ಲಿದ್ದರೂ ಮೊದಲು ತುಳುನಾಡಿನವಳು ಅನ್ನೋದು ನನಗೆ ಹೆಮ್ಮೆ. ಮುಂದೆ ಕ್ಷೇತ್ರದಲ್ಲಿ ನಡೆಯಲಿರುವ ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸುತ್ತೇನೆ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಮಂಗಳೂರು ಮೂಲದವರು. ಇಂದಿಗೂ ಶಿಲ್ಪ ಶುದ್ಧ ತುಳು ಮಾತನಾಡುತ್ತಾರೆ. ಇದರೊಂದಿಗೆ ಅಲ್ಲಿನ ಸಂಸ್ಕೃತಿಗಳನ್ನು ಶಿಲ್ಪಾ ಫಾಲೋ ಮಾಡುತ್ತಾರೆ. ಇತ್ತೀಚೆಗೆ ನಟಿ ಶ಼ಿಲ್ಪಾ ಶೆಟ್ಟಿ ತಾಯಿ ಹಾಗೂ ಮಕ್ಕಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೆ ಭೇಟಿ ನೀಡಿ ನಾಗಮಂಡಲಕ್ಕೆ ಪಿಂಗಾರ ಪರಕೆ (ಹಿಂಗಾರದ ಹರಕೆ) ಅರ್ಪಿಸಿದ್ದಾರೆ.
'ಶ್ರೀ ಕ್ಷೇತ್ರದ ದೈವ ಕೊಡಮಣಿತ್ತಾಯನ ಅನುಗ್ರಹದಂತೆ ನಾನಿಲ್ಲಿ ಬಂದಿದ್ದೇನೆ. ನಾನು ಎಲ್ಲಿದ್ದರೂ ಮೊದಲು ತುಳುನಾಡಿನವಳು ಅನ್ನೋದು ನನಗೆ ಹೆಮ್ಮೆ. ಮುಂದೆ ಕ್ಷೇತ್ರದಲ್ಲಿ ನಡೆಯಲಿರುವ ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸುತ್ತೇನೆ. ದೈವದ ಅನುಗ್ರಹ ನಮ್ಮೆಲ್ಲರ ಮೇಲಿರಲಿ. ನಾನು ಮತ್ತೆ ಕ್ಷೇತ್ರಕ್ಕೆ ಬರುತ್ತೇನೆ" ಎಂದು ಶಿಲ್ಪಾ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುಳುನಾಡಿನ ಹೆಣ್ಣು. ನನ್ನ ಮೂಲಕ್ಕೆ ಮರಳಿದ್ದೇನೆ. ನನ್ನ ಮಕ್ಕಳಿಗೆ ನನ್ನ ಸಂಸ್ಕೃತಿಯನ್ನು ಪರಿಚಯಿಸುತ್ತಿದ್ದೇನೆ. ಮಂಗಳೂರಿನಲ್ಲಿ ನಾಗಮಂಡಲ ಹಾಗೂ ಕೊಡಮಣಿತ್ತಾಯ ದೈವ ಕೋಲವನ್ನು ವೀಕ್ಷಿಸಿದೆ. ಇದನ್ನು ನೋಡಿ ನನ್ನ ಮಕ್ಕಳು ವಿಸ್ಮಯಗೊಂಡರು. ಭಕ್ತಿಯಿಂದ ಅನುಸರಿಸುವ ಶಕ್ತಿ ಮತ್ತು ನಂಬಿಕೆಯನ್ನು ಯಾವಾಗಲೂ ನನ್ನನ್ನು ಆಕರ್ಷಿಸುತ್ತದೆ’ ಎಂದು ಶಿಲ್ಪಾ ತಮ್ಮ ಇನ್ಟಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾಗೆ ಇತ್ತೀಚೆಗೆ ಸಂಕಷ್ಟ ಎದುರಾಗಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು 90 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದರು. ಇದರಲ್ಲಿ ಶಿಲ್ಪಾ ಶೆಟ್ಟಿಗೆ ಸೇರಿದ ಮುಂಬೈ ಮನೆ ಕೂಡ ಇತ್ತು. ಇದಾದ ಬಳಿಕ ಅವರು ದೈವ ಕೋಲ ನೋಡಲು ಬಂದಿದ್ದಾರೆ.