ಮೆಕಾನಿಕ್ ವೃತ್ತಿಗೆ ಅವಮಾನ | ರಮೇಶ್ ಅರವಿಂದ್, ಪ್ರೇಮಾ, ಅನುಶ್ರೀ, ಗಗನ ವಿರುದ್ಧ ದೂರು ದಾಖಲು
ಮೆಕಾನಿಕ್ ಕೆಲಸ ಮಾಡುವ ಶ್ರಮಿಕ ವರ್ಗದವನ್ನು ರಿಯಾಲಿಟಿ ಶೋನಲ್ಲಿ ಕೀಳಾಗಿ ನಿಂದಿಸಿದ್ದಾರೆ, ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವಾರಾಂತ್ಯದ ʼಮಹಾನಟಿʼ ರಿಯಾಲಿಟಿ ಶೋನಲ್ಲಿ ಇತ್ತೀಚೆಗೆ ಶ್ರಮಿಕ ವರ್ಗಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ, ಮಹಾನಟಿ ಶೋ, ನಿರ್ದೇಶಕ, ತೀರ್ಪುಗಾರರು ಮತ್ತು ನಿರೂಪಕರ ವಿರುದ್ಧ ತುಮಕೂರಿನ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಗಗನಾ ಸ್ಕಿಟ್ ವೇಳೆ ಹೇಳಿದ್ದ ಡೈಲಾಗ್ ಬಗ್ಗೆ ಫ್ರೆಂಡ್ಸ್ ದ್ವಿಚಕ್ರ ವಾಹನ ವರ್ಕ್‌ಶಾಪ್ ಮಾಲೀಕರು ಹಾಗೂ ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೆಕಾನಿಕ್ ಕೆಲಸ ಮಾಡುವ ಶ್ರಮಿಕ ವರ್ಗದವನ್ನು ಶೋನಲ್ಲಿ ಕೀಳಾಗಿ ನಿಂದಿಸಿದ್ದಾರೆ, ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೂಡಲೇ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.
ಮಹಾನಟಿ ಶೋನಲ್ಲಿ ಸ್ಪರ್ಧಿ ಗಗನ ಅವರಿಗೆ ತೀರ್ಪುಗಾರರಾದ ರಮೇಶ್ ಅರವಿಂದ್, ತಕ್ಷಣ ತಲೆಯಲ್ಲಿ ಹೊಳೆಯುವ ಕಾನ್ಸೆಪ್ಟ್ ನೀಡಿ, ಅದನ್ನು ನಟನೆ ಮೂಲಕ ತೋರಿಸುವಂತೆ ಹೇಳಿದ್ದಾರೆ. ಗಗನಗೆ ನಿಮ್ಮ ತಂಗಿ ಮೆಕ್ಯಾನಿಕ್‌ವೊಬ್ಬನನ್ನು ಲವ್ ಮಾಡುತ್ತಿದ್ದರೆ ನಿನ್ನ ಥಾಟ್ ಏನು? ಎಂಬ ಕಾನ್ಸೆಪ್ಟ್ ಸಿಕ್ಕಿದೆ. ಕೂಡಲೇ ಡೈಲಾಗ್ ಹೊಂದಿಸಿಕೊಂಡು, "ಕೊಚ್ಚೆ ಗುಂಡಿಗೆ ಬೀಳಬೇಡ. ದುಡ್ಡು ಮುಖ್ಯ. ನೀನು ಮೆಕ್ಯಾನಿಕ್‌ನ ಪ್ರೀತಿಸಿದರೆ ಗ್ರೀಸು ತಿಂದ್ಕೊಂಡು ಬದುಕಬೇಕಾಗುತ್ತೆ" ಎಂಬ ಡೈಲಾಗ್ ಮೂಲಕ ನಟನೆ ಮಾಡಿ ತೋರಿಸಿದ್ದಾರೆ ಗಗನ. ಈಗ ಇದೇ ಸಂಭಾಷಣೆ ವಿವಾದಕ್ಕೆ ಕಾರಣವಾಗಿದೆ.
ಈ ಸಂಭಾಷಣೆ ವೈರಲ್ ಆಗುತ್ತಿದ್ದಂತೆ, ದ್ವಿಚಕ್ರ ವಾಹನ ಮೆಕ್ಯಾನಿಕಲ್ ಸಂಘ ಒಟ್ಟಾಗಿದೆ. ಚಿಕ್ಕನಾಯಕನಹಳ್ಳಿಯಲ್ಲಿ ದೂರು ದಾಖಲಿಸಿ ಈ ಕೂಡಲೇ ಕ್ಷಮೆಗೆ ಆಗ್ರಹಿಸಿದೆ. ಶ್ರಮಿಕ ವರ್ಗದ ವೃತ್ತಿಯನ್ನು ಹಾಸ್ಯಾಸ್ಪದವಾಗಿ ತೋರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಒಂದು ವೃತ್ತಿಯನ್ನು ಎಲ್ಲರ ಸಮ್ಮುಖದಲ್ಲಿ ಕೆಟ್ಟದ್ದು ಎಂದು ಬಿಂಬಿಸಲಾಗಿದೆ. ಹಾಗಾಗಿ ಈ ಕೂಡಲೇ ಇಡೀ ಮಹಾನಟಿ ತಂಡ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲೂ ದೂರು ದಾಖಲಿಸುವುದಾಗಿ ಎಚ್ಚರಿಕೆ ರವಾನಿಸಿದೆ.