ಪುತ್ತೂರು ವಿದ್ಯಾರ್ಥಿನಿ ಕೈಗೆ ಗೀರಿದ್ದು ಕಟ್ಟುಕಥೆ!?
ಪುತ್ತೂರಿನಲ್ಲಿ ವಿದ್ಯಾರ್ಥಿನಿ ಕೈಗೆ ಬ್ಲೇಡ್‌ನಿಂದ ಗೀರಿದ ಪ್ರಕರಣ ಹೊಸ ತಿರುವು ಪಡೆದಿದ್ದು, ವಿದ್ಯಾರ್ಥಿನಿ ಹೇಳಿಕೆಗೂ ಘಟನೆಗೂ ಸಾಮ್ಯತೆ ಇಲ್ಲದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.;
ಪುತ್ತೂರಿನಲ್ಲಿ ವಿದ್ಯಾರ್ಥಿನಿ ಕೈಗೆ ಬ್ಲೇಡ್‌ನಿಂದ ಗೀರಿದ ಪ್ರಕರಣ ಹೊಸ ತಿರುವು ಪಡೆದಿದ್ದು, ವಿದ್ಯಾರ್ಥಿನಿ ಹೇಳಿಕೆಗೂ ಘಟನೆಗೂ ಸಾಮ್ಯತೆ ಇಲ್ಲದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ವಿದ್ಯಾರ್ಥಿನಿಯ ಕೈಗೆ ಗೀರಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಆಕೆ ಸಂಚರಿಸಿದ ದಾರಿಯುದ್ದಕ್ಕೂ ಇರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಕ್ಯಾಮೆರಾ ದೃಶ್ಯಗಳ ಪ್ರಕಾರ ಆಕೆ ಬೋಳುವಾರಿನಲ್ಲಿ ಬಸ್ಸಿನಿಂದ ಇಳಿದು ಆಟೋರಿಕ್ಷಾ ಮೂಲಕ ಕೊಂಬೆಟ್ಟು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಹೋಗಿರುವುದು ಕಂಡುಬಂದಿದೆ. ಆರೋಪಿ ವಿದ್ಯಾರ್ಥಿಯು ಸ್ಥಳದಲ್ಲೇ ಇರಲಿಲ್ಲ ಎಂಬುದನ್ನು ಪೊಲೀಸರು ದೃಢಪಡಿಸಿಕೊಂಡರು. ವಿದ್ಯಾರ್ಥಿನಿ ಮಾಡಿದ ಆರೋಪ ಸಾಬೀತಾಗದ ಕಾರಣ ವಿದ್ಯಾರ್ಥಿಯನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ವಿದ್ಯಾರ್ಥಿನಿಯನ್ನು ವಿಚಾರಿಸಿರುವ ಪೊಲೀಸರು ಪ್ರಕರಣದ ತನಿಖೆ ಮುಗಿಯುವವರೆಗೆ ಅಗತ್ಯ ಸಂದರ್ಭಗಳಲ್ಲಿ ಠಾಣೆಗೆ ಹಾಜರಾಗಬೇಕು ಎಂದು ಹೇಳಿ ಆಕೆಯನ್ನು ಹೆತ್ತವರ ಜೊತೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಷ್ಟೂ ಸಿಸಿ ಕ್ಯಾಮೆರಾಗಳ ದಾಖಲೆಯನ್ನು ಪರಿಶೀಲಿಸಿದ್ದರೂ ವಿದ್ಯಾರ್ಥಿನಿ ಮಾತ್ರ ಪೊಲೀಸರನ್ನೇ ದೂರಿದ್ದಾಳೆ. ಪೊಲೀಸರು ತೋರಿಸಿರುವುದು ʼಎಡಿಟೆಡ್ ವಿಡಿಯೋʼ ಎಂದು ಹೇಳಿದ್ದಾಳೆ.
ಬೆಳಗ್ಗಿನಿಂದ ಸಂಜೆಯವರೆಗಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ಪೊಲೀಸರಿಗೆ ಆಗಲೇ ಅನುಮಾನ ಮೂಡಿತ್ತು. ಕಾಲೇಜಿನ ಮೂಲಗಳು ಹೇಳುವ ಪ್ರಕಾರ ಆಕೆ ಕಾಲೇಜಿಗೆ ಬರುವಾಗ ಸರಿಯಾಗಿಯೇ ಇದ್ದಳು. ಯಾವುದೇ ಗೀರು, ಗಾಯವಾಗಲಿ ಆಗಿರಲಿಲ್ಲ. ಆದರೆ, ಬೆಳಗ್ಗೆ ಪೊಲೀಸರು ಕಾಲೇಜಿಗೆ ಬಂದಾಗಲೇ ನಮಗೆ ಘಟನೆಯ ಬಗ್ಗೆ ಗೊತ್ತಾಗಿದೆ ಎಂದಿದ್ದಾರೆ. ಆದರೆ, ಅದಾಗಲೇ ಕೆಲವು ಸಂಘಟನೆಗಳ ಮುಖಂಡರು ಕಾಲೇಜು ಶಿಕ್ಷಕರು ಮತ್ತು ಪ್ರಾಂಶುಪಾಲರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದರು ಎಂಬುದು ಶಿಕ್ಷಕ ವಲಯದ ಅಭಿಪ್ರಾಯ.
ವಿದ್ಯಾರ್ಥಿ ಮತ್ತು ವಿದ್ಯಾರ್ಥಿ ನಡುವೆ ತರಗತಿ ಕೊಠಡಿಯಲ್ಲಿ ಮಾತಿಗೆ ಮಾತು ಬೆಳೆದದ್ದು ನಿಜ. ಆದರೆ ಆತ ಆಕೆಯ ಕೈಗೆ ಗೀರಿಲ್ಲ. ಆದರೆ, ಇದ್ದಕ್ಕಿದ್ದಂತೆಯೇ ಕೈಗೆ ಗಾಯವಾಗಿದ್ದು ಹೇಗೆ ಎಂಬುದು ನಮಗೂ ಗೊತ್ತಿಲ್ಲ ಎನ್ನುತ್ತಾರೆ ಸಹಪಾಠಿಗಳು.