ಬೆಂಗಳೂರು ಚಲನಚಿತ್ರೊತ್ಸವ ಪ್ರಮುಖ ಆಕರ್ಷಣೆ ಮೃಣಾಲ್ ಸೇನ್
ಹದಿನೈದನೇ ಆವೃತ್ತಿ ಯಲ್ಲಿ ಮೃಣಾಲ್ ಸೇನ್, ಅಬ್ಬಾಸ್ ಕಿರಿಸ್ತೋಮಿ ಹಾಗೂ ಸಂಗೀತ ಸಂಯೋಜಕ ವಿಜಯಭಾಸ್ಕರ್ ಅವರ ಚಿತ್ರಗಳ ಪುನರಾವಲೋಕನ ಹಮ್ಮಿಕೊಳ್ಳಲಾಗಿದೆ.;
ಕನ್ನಡದ ಚಲನಚಿತ್ರ ವೀಕ್ಷಕರಿಗೊಂದು ಸಿಹಿ ಸುದ್ದಿ ಇದೆ. ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೊತ್ಸವ (ಬಿಫೆಸ್)ದಲ್ಲಿ ಸಿನಿಪ್ರಿಯರು ದೇಶ ಕಂಡ ಮಹಾನ್ ಚಿತ್ರ ನಿರ್ದೇಶಕ ಮೃಣಾಲ್ ಸೇನ್ ಅವರ ಚಿತ್ರಗಳನ್ನು ನೋಡಬಹುದು. ಈ ಬಾರಿಯ ಬಿಫೆಸ್‌ನಲ್ಲಿ ಮೃಣಾಲ್ ಸೇನ್, ಅಬ್ಬಾಸ್ ಕಿರಸ್ತೋಮಿ ಹಾಗೂ ಖ್ಯಾತ ಸಂಗೀತ ಸಂಯೋಜಕ ವಿಜಯ್ ಭಾಸ್ಕರ್ ಅವರ ಚಿತ್ರಗಳು ಪುನರಾವಲೋಕನ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ.
ಕಳೆದ ನವೆಂಬರ್‌ನಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೊತ್ಸವದಲ್ಲಿ ಮೃಣಾಲ್ ಸೇನ್ ಅವರ ಚಿತ್ರಗಳು ಪುನರಾವಲೋಕನ ವಿಭಾಗದಲ್ಲಿ ಪ್ರದರ್ಶನಗೊಳ್ಳ ಬಹುದು ಎಂಬ ಭಾವನೆ ಸದಭಿರುಚಿಯ ಚಿತ್ರ ಪ್ರೇಕ್ಷಕರಲ್ಲಿ ಇತ್ತು. ಏಕೆಂದರೆ 2023 ಮೃಣಾಲ್ ಸೇನ್ ಅವರ ಜನ್ಮ ಶತಮಾನೋತ್ಸವ ವರ್ಷ. ಆದರೆ ಮೃಣಾಲ್ ಸೇನ್ ಎಡಪಂಥೀಯ ಚಿತ್ರ ನಿರ್ದೇಶಕ ಎಂದು ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರ ಅವರ ಚಿತ್ರಗಳನ್ನು ತಿರಸ್ಕರಿಸಿತು ಎಂಬ ಆರೋಪ ದಟ್ಟವಾಗಿ ಕೇಳಿ ಬಂದಿತ್ತು. ಆ ಪ್ರೇಕ್ಷಕರು ಈಗ ಸಂತೋಷಗೊಂಡಿದ್ದಾರೆ ಎನ್ನಬಹುದು.
ಇದೇ ರೀತಿ ಇರಾನಿಯನ್ ಹೊಸ ಅಲೆಯ ಚಿತ್ರಗಳ ನಿರ್ದೇಶಕ ಎಂದು ಖ್ಯಾತಿ ಗಳಿಸಿರುವ ಅಬ್ಬಾಸ್ ಕಿರಿಸ್ತೋಮಿ ಅವರ ಚಿತ್ರಗಳು ಕೂಡ ಬಿಫೆಸ್‌ನ ಪ್ರಮುಖ ಆಕರ್ಷಣೆಯಾಗಲಿದೆ.
ಭಾರತದ ಹೊಸ ಅಲೆ ಚಿತ್ರಗಳ ಹರಿಕಾರ ಎನ್ನಿಸಿಕೊಂಡ ಸತ್ಯಜಿತ್ ರೇ, ರಿತ್ವಿಕ್ ಘಟಕ್ ಹಾಗೂ ಮೃಣಾಲ್ ಸೇನ್ ವಿಶ್ವದ ಚಿತ್ರರಂಗದಲ್ಲಿ ತಮ್ಮ ಚಿತ್ರಗಳ ಮೂಲಕ ಹೊಸ ಶಕೆಯನ್ನು ಹುಟ್ಟುಹಾಕಿದವರು. ಇವರ ಏಕ್ ದಿನ್ ಪ್ರತಿದಿನ್, ಭುವನ್ ಶೋಮ್, ಖಂದಹಾರ್ ಚಿತ್ರಗಳನ್ನು ವೀಕ್ಷಿಸಲು ಪ್ರೇಕ್ಷಕರು ಕಾತುರರಾಗಿದ್ದಾರೆ.
ದೃಶ್ಯಗಳನ್ನು ವಿಭಜಿಸುವ ಅವರ ವಿಧಾನ, ವರ್ಗ ವ್ಶೆರುಧ್ಯಗಳನ್ನು ಸಾಮಾಜಿಕ ಪರಿಸ್ಥಿತಿಗಳು ಜನರ ಬದುಕನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ದೃಶ್ಯಗಳ ಮೂಲಕ ಕಟ್ಟಿಕೊಟ್ಟವರು ಮೃಣಾಲ್ ಸೇನ್. ಬರ್ತೋಲ್ಟ್ ಬ್ರೆಕ್ಟ್ ರೀತಿಯಲ್ಲಿ ಪ್ರೇಕ್ಷಕರನ್ನು ಪ್ರಭಾವಿಸಿದವರು ಅವರು. ರಾಜಕೀಯ ಸಂಗತಿಗಳನ್ನು ಅವರಂತೆ ದೃಶ್ಯ ರೂಪದಲ್ಲಿ ಕಟ್ಟಿಕೊಟ್ಟವರು. ಮೃಣಾಲ್ ಸೇನ್ ಅವರ ಕೋಕರ್ ತ್ರಿವಳಿ ಚಿತ್ರಗಳು ಬಿಫೆಸ್‌ನ ಹದಿನಾಲ್ಕನೇಯ ಆವೃತ್ತಿಯಲ್ಲಿ ಪ್ರದರ್ಶನಗೊಳ್ಳಲಿದೆ.
ಅಬ್ಬಾಸ್ ಕಿರಸ್ತೋಮಿ ಅವರ ಚಿತ್ರಗಳು ಈ ಬಿಫೆಸ್‌ನ ಪ್ರಮುಖ ಆಕರ್ಷಣೆಯೆಂದರೂ ತಪ್ಪಾಗಲಾರದು. ಮಕ್ಕಳನ್ನು ಪ್ರಮುಖ ಪಾತ್ರವಾಗಿಸಿ, ಹಳ್ಳಿಗಳಲ್ಲಿನ ಅವರ ಬದುಕಿನ ಮೂಲಕ ಸ್ಥಳೀಯತೆ ಇಂದ ಜಾಗತಿಕ ಕಥನಗಳನ್ನು ದೃಶ್ಯಗಳ ಮೂಲಕ ಕಟ್ಟಿ ಕೊಡುವ ಅವರು ಚಿತ್ರ ವಿಶ್ವವನ್ನು ಬೆಚ್ಚಿಬೀಳಿಸಿದ್ದಾರೆ. ತಮ್ಮ ಕಥನವನ್ನು ಸಾಕ್ಷಾಚಿತ್ರ ಮಾದರಿಯಲ್ಲಿ ಕಟ್ಟಿಕೊಡುವ ಅವರ ದೃಶ್ಯ ಕಲ್ಪನೆ ವಿಶ್ವದಾದ್ಯಂತ ಮೆಚ್ಚಿಗೆ ಗಳಿಸಿದೆ. ಅವರ ಚಿತ್ರಗಳನ್ನು ವೀಕ್ಷಿಸಿ ಅವುಗಳನ್ನು ಕುರಿತು ಸಂವಾದಿಸಲು ಸಹೃದಯಪ್ರೇಕ್ಷಕರು ಕಾತುರರಾಗಿದ್ದಾರೆ.
ಈ ವರ್ಷ ಖ್ಯಾತ ಸಂಗೀತ ಸಂಯೋಜಕ ವಿಜಯಭಾಸ್ಕರ್ ಅವರ ಜನ್ಮ ಶತಮಾನೋತ್ಸವ ವರ್ಷ. ಬಿಫೆಸ್‌ಗೆ ವಿಜಯಭಾಸ್ಕರ್ ಅವರನ್ನು ಸಂಭ್ರಮಿಸಲು ಸಕಾಲ. ಹಾಗಾಗಿ ಅವರ ಚಿತ್ರಗಳು ಕೂಡ ಈ ವರ್ಷದ ಬಿಫೆಸ್‌ನ ಪ್ರಮುಖ ಆಕರ್ಷಣೆಯಾಗಲಿದೆ.
ಗಾನಕೆ ನಲಿಯದ ಮನಸೇ ಇಲ್ಲ/ ಗಾನಕೆ ಮಣಿಯದ ಜೀವವೇ ಇಲ್ಲ/ ಗಾನವೇ ತುಂಬಿದೆ ಈ ಜಗವೆಲ್ಲ...
ವಿಜಯಭಾಸ್ಕರ್ ಅವರ ಸಂಗೀತ ಸಂಯೋಜನೆಯ ಈ ಗೀತೆ ಅವರ ಸಂಗೀತ ಸಾಧನೆಗೂ ಅನ್ವಯವಾಗುತ್ತದೆ. ಅವರ ರಾಗ ಸಂಯೋಜನೆ ಅಷ್ಟೊಂದು ಮಧುರ. ಅಷ್ಟು ಮೋಹಕ ಹಾಗೂ ಸತ್ವಪೂರ್ಣ. ಇಷ್ಟು ವರ್ಷಗಳ ನಂತರವೂ ಅವರ ಜನರ ಹೃನ್ಮನಗಳಲ್ಲಿ ಪ್ರತಿಧ್ವನಿಸುತ್ತಿರುವುದು ಅವರ ಸಂಗೀತ ಸಾಧನೆಗೆ ಸಾಕ್ಷಿ. ಪ್ರಶಸ್ತಿ ಪುರಸ್ಕಾರಗಳು ವಿಜಯಭಾಸ್ಕರ್ ಅವರ ವಿಜಯಕ್ಕೆ ಸಾಕ್ಷಿಯಾಗಿ ಸಾಕಷ್ಟು ಸಂಖ್ಯೆಯಲ್ಲಿ ಇರುವುದೇ ಅವರ ಸತ್ವಪೂರ್ಣ ಸಂಗೀತದ ಹೆಗ್ಗುರುತುಗಳು.
ಅರವತ್ತರ ದಶಕದಲ್ಲಿ ವಿಜಯಭಾಸ್ಕರ್ ಸಂಗೀತ ಸಂಯೋಜನೆ ಮಾಡಿದ ಬೆಳ್ಳಿ ಮೋಡ, ಯಾವ ಜನ್ಮದ ಮೈತ್ರಿ, ಮುಂತಾದ ಚಿತ್ರಗಳು ಅವರ ಅತ್ಯುತ್ತಮ ಸಂಗೀತದ ದ್ಯೋತಕ. ತಮಿಳು, ತೆಲುಗು, ಮಲೆಯಾಳಂ, ಮರಾಠಿ, ತುಳೂ, ಕೊಂಕಣಿ ಭಾಷೆಗಳೂ ಸೇರಿದಂತೆ ತಮ್ಮ ಜೀವಿತಾವಧಿಯಲ್ಲಿ 600ಕ್ಕೂ ಹೆಚ್ಚು ಚಿತ್ರಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರು ಸಂಗೀತ ಸಂಯೋಜನೆ ಮಾಡಿರುವ ಚಿತ್ರಗಳನ್ನು ಪ್ರದರ್ಶಿಸುವುದು ಬಿಫೆಸ್ ನ ಹೆಮ್ಮೆ ಎನ್ನಬಹುದು.