ಸಂಸದರ ವಿರುದ್ಧ ಸಿಡಿದೆದ್ದ ಸ್ವಪಕ್ಷ ಕಾರ್ಯಕರ್ತರು: ಪಿ.ಸಿ ಮೋಹನ್ ಪ್ರಚಾರಸಭೆ ಮೊಟಕು!
ಬಿಜೆಪಿ ಸಂಸದ ಪಿ.ಸಿ ಮೋಹನ್ ಅವರು ಲೋಕಸಭೆ ಚುನಾವಣಾ ಪ್ರಚಾರ ನಡೆಸುವಾಗ ಅವರ ಪಕ್ಷದ ಕಾರ್ಯಕರ್ತರೇ ಅವರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಇದರಿಂದ ತೀವ್ರ ಮುಖಭಂಗಕ್ಕೆ ಒಳಗಾದ ಪಿ.ಸಿ ಮೋಹನ್ ಅವರು ಪ್ರಚಾರವನ್ನು ಅರ್ಧಕ್ಕೆ ನಿಲ್ಲಿಸಿ ಹಿಂದಿರುಗಿದ ಘಟನೆ ಗುರವಾರ ನಡೆದಿದೆ.;
ಲೋಕಸಭೆ ಚುನಾವಣಾ ಪ್ರಚಾರದ ವೇಳೆ ತಮ್ಮ ಪಕ್ಷದ ಕಾರ್ಯಕರ್ತರೇ ಧಿಕ್ಕಾರ ಕೂಗಿದ ಹಿನ್ನೆಲೆಯಲ್ಲಿ ತೀವ್ರ ಮುಖಭಂಗಕ್ಕೆ ಒಳಗಾದ ಬಿಜೆಪಿ ಸಂಸದ ಪಿ.ಸಿ ಮೋಹನ್ ಪ್ರಚಾರವನ್ನೇ ಅರ್ಧಕ್ಕೆ ನಿಲ್ಲಿಸಿ ಹಿಂದಿರುಗಿದ ಘಟನೆ ಗುರವಾರ ನಡೆದಿದೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಆಯ್ಕೆ ಬಯಸಿರುವ ಮೋಹನ್, ಬೆಂಗಳೂರಿನ ಶಾಂತಿನಗರದಲ್ಲಿ ನಡೆಯುತ್ತಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮುಜಗರದ ಘಟನೆ ನಡೆದಿದೆ. ಸ್ಥಳೀಯ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಸಂಸದ ಪಿ.ಸಿ ಮೋಹನ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
“ನೀವು ಮೂರು ಬಾರಿ ಸಂಸದರಾಗಿ ಆಯ್ಕೆಯಾದರೂ ನಮಗೆ ಸಹಾಯ ಆಗಿಲ್ಲ, ಕ್ಷೇತ್ರದಲ್ಲಿ ನಮಗಾಗಿ ಕೆಲಸ ಮಾಡಿಲ್ಲ. ಜನರ ಬಳಿ ಹೋಗಿ ಮತ ಕೇಳಲು ನಮಗೆ ಆಗುತ್ತಿಲ್ಲ. ನೀವು ಮತ್ತೆ ಟಿಕೆಟ್ ತೆಗೆದುಕೊಂಡಿದ್ದೇಕೆ” ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ “ನೀವೂ ಸಹ ಸದಾನಂದಗೌಡ ಅವರ ರೀತಿ ನಿವೃತ್ತಿ ಪಡೆಯಬೇಕಿತ್ತು” ಎಂದು ಶಾಂತಿನಗರ ಮಾಜಿ ಪಾಲಿಕೆ ಸದಸ್ಯ ಶಿವಕುಮಾರ ಹಾಗೂ ಬಿಜೆಪಿ ಕಾರ್ಯಕರ್ತರು ಸಂಸದ ಪಿ.ಸಿ ಮೋಹನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರ ಆಕ್ರೋಶ ಹೆಚ್ಚಾಗುತ್ತಿದ್ದಂತೆಯೇ ಪಿ.ಸಿ ಮೋಹನ್ ಅವರು ಸ್ಥಳದಿಂದ ಹಿಂದಿರುಗಿದ್ದಾರೆ.
ಹಲವು ಭಾಗದಲ್ಲಿ ವಿರೋಧ
ಬಿಜೆಪಿ ಸಂಸದ ಪಿ.ಸಿ ಮೋಹನ್ ಅವರು ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ನಾಲ್ಕನೇ ಬಾರಿಯೂ ಅವರಿಗೆ ಟಿಕೆಟ್ ಸಿಕ್ಕಿದ್ದು, ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಹಾಲಿ ಸಂಸದರಿಗೆ ಬಿಜೆಪಿ ಕಾರ್ಯಕರ್ತರಿಂದಲೇ ವಿರೋಧ ವ್ಯಕ್ತವಾಗುತ್ತಿದ್ದು, ಮಹದೇವಪುರ, ರಾಜಾಜಿನಗರ, ಗಾಂಧಿನಗರದಲ್ಲೂ ಸ್ಥಳೀಯ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಶಾಂತಿನಗರದಲ್ಲೂ ವಿರೋಧ ವ್ಯಕ್ತವಾಗಿದೆ.