ಮೇಕೆದಾಟು ಯೋಜನೆಗೆ ಏಕೆ ಅನುಮತಿ ಕೊಡುತ್ತಿಲ್ಲ ಮೋದಿಯವರೇ?: ಸಿಎಂ ಸಿದ್ದರಾಮಯ್ಯ ಪ್ರಶ್ನೆ

ʻʻಮೋದಿಯವರಿಂದ ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯವನ್ನು, ನಿಮ್ಮ ತೆರಿಗೆ ಹಣಕ್ಕೆ ಆಗುತ್ತಿರುವ ದ್ರೋಹವನ್ನು ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಿ ಪ್ರಶ್ನಿಸಿದವರು ಡಿ.ಕೆ.ಸುರೇಶ್ ಮಾತ್ರ. ಇವರು ಗೆದ್ದರೆ ನಮ್ಮ-ನಿಮ್ಮೆಲ್ಲರ ಧ್ವನಿಯಾಗಿ ಹೋರಾಟ ಮಾಡ್ತಾರೆ. ಇವರಿಗೆ ಆಶೀರ್ವದಿಸಿ ಪಾರ್ಲಿಮೆಂಟಿಗೆ ಕಳುಹಿಸಿʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.;

Update: 2024-04-22 07:37 GMT

ʻʻಬೆಂಗಳೂರಿನ ಜನತೆಗೆ ಕುಡಿಯುವ ನೀರು ಪೂರೈಸಲು ಅನುಕೂಲವಾಗುವ ಮೇಕೆದಾಟು ಯೋಜನೆಗೆ ಅನುಮತಿ ಏಕೆ ಕೊಡುತ್ತಿಲ್ಲ ಮೋದಿಯವರೇ?ʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಮಂತ್ರಿಗಳನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ ಕೆ ಸುರೇಶ್‌ ಪರವಾಗಿ ರಾಮನಗರದಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ಮಾತನಾಡಿದ ಅವರು, ʻʻಬೆಲೆ ಏರಿಕೆ ತಡೆಯುವುದಾಗಿ ಭಾರತೀಯರನ್ನು ನಂಬಿಸಿ ಅಧಿಕಾರಕ್ಕೆ ಬಂದ ಮೋದಿಯವರೇ ವಿಪರೀತ ಬೆಲೆ ಏರಿಕೆ ಮಾಡಿದ್ದರಿಂದ ಮಧ್ಯಮ ವರ್ಗದ ಬದುಕು ಹೈರಾಣಾಗಿತ್ತು. ನಾವು ಗ್ಯಾರಂಟಿಗಳ ಮೂಲಕ ಬಡವರ ಕಷ್ಟಕ್ಕೆ ಸ್ಪಂದಿಸಿದ್ದೇವೆʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ʻʻಬೆಲೆ ಏರಿಕೆ ಭಾರತೀಯರ ಶತ್ರು. ನಾನು ಪ್ರಧಾನಿಯಾದರೆ ಬೆಲೆ ಏರಿಕೆ ತಡೆಯುವುದಾಗಿ ಇಡಿ ಭಾರತೀಯರನ್ನು ಮೋದಿ ನಂಬಿಸಿದ್ದರು. ಆದರೆ ಇದೇ ಮೋದಿ ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ ಸೇರಿ ಎಲ್ಲದರ ಬೆಲೆಯನ್ನೂ ಗಗನಕ್ಕೆ ಏರಿಸಿದರುʼʼ ಎಂದು ಬೆಲೆ ಏರಿಕೆಯ ಪಟ್ಟಿ ನೀಡಿದರು.

ʻʻಮೋದಿಯವರ ಬೆಲೆ ಏರಿಕೆಯಿಂದ ಹೈರಾಣಾಗಿದ್ದ ಮಧ್ಯಮ ವರ್ಗದ ಜನ ಮತ್ತು ದುಡಿಯುವ ವರ್ಗಗಳು ಹಾಗೂ ಬಡ ಜನರ ಬದುಕಿಗೆ ಸ್ಪಂದಿಸುವ ಉದ್ದೇಶದಿಂದ ನಾನು ಐದು ಗ್ಯಾರಂಟಿಗಳನ್ನು ರೂಪಿಸಿ ಐದನ್ನೂ ಜಾರಿ ಮಾಡಿದ್ದೇವೆ. ನಾವು ನುಡಿದಂತೆ ನಡೆದು ನಿಮ್ಮ ಮತಕ್ಕೆ ಗೌರವ ತಂದು ಘನತೆ ಹೆಚ್ಚಿಸಿದ್ದೇವೆ‌. ಈ ಅರ್ಹತೆಯಿಂದ ನಿಮ್ಮ ಎದುರಿಗೆ ನಿಂತು ಮತ ಕೇಳುತ್ತಿದ್ದೇವೆ ʼʼಎಂದರು.

ʻʻಮೋದಿಯವರಿಂದ ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯವನ್ನು, ನಿಮ್ಮ ತೆರಿಗೆ ಹಣಕ್ಕೆ ಆಗುತ್ತಿರುವ ದ್ರೋಹವನ್ನು ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಿ ಪ್ರಶ್ನಿಸಿದವರು ಡಿ.ಕೆ.ಸುರೇಶ್ ಮಾತ್ರ. ಇವರು ಗೆದ್ದರೆ ನಮ್ಮ-ನಿಮ್ಮೆಲ್ಲರ ಧ್ವನಿಯಾಗಿ ಹೋರಾಟ ಮಾಡ್ತಾರೆ. ಇವರಿಗೆ ಆಶೀರ್ವದಿಸಿ ಪಾರ್ಲಿಮೆಂಟಿಗೆ ಕಳುಹಿಸಿʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

Tags:    

Similar News