ಕರಾವಳಿ ಕದನ | ಯಾರು ಉತ್ತಮ ಹಿಂದೂ? ಬಿಜೆಪಿಗೆ ʼಧರ್ಮ ಸಂಕಟʼ ತಂದಿಟ್ಟ ಬಿಲ್ಲವರ ʼಜಾತಿ ಪ್ರಜ್ಞೆʼ

ಈ ಬಾರಿ ದಕ್ಷಿಣ ಕನ್ನಡದ ಲೋಕಸಭಾ ಕಣ ತೀವ್ರ ಕುತೂಹಲ ಹುಟ್ಟಿಸಿದೆ. ಬಿಜೆಪಿ ತನ್ನ ಎದುರಾಳಿಗೆ ಬಳಸುತ್ತಿದ್ದ ಸಾಂಪ್ರದಾಯಿಕ ಅಸ್ತ್ರಗಳನ್ನೇ ಕಾಂಗ್ರೆಸ್‌ ಈ ಬಾರಿ ಸಾಣೆ ಹಾಕಿ ಪ್ರತ್ಯಾಸ್ತ್ರವಾಗಿ ಬಳಸುತ್ತಿದೆ.

Update: 2024-04-17 10:35 GMT

ಸಂಘ-ಪರಿವಾರದ ಪ್ರಯೋಗ ಶಾಲೆ ಎಂದೇ ಗುರುತಿಸಿಕೊಂಡಿರುವ ದಕ್ಷಿಣಕನ್ನಡದಲ್ಲಿ ಸದ್ಯ, ಹಿಂದುತ್ವ ಕಸುವು ಕಳೆದುಕೊಳ್ಳುತ್ತಿರುವ ಲಕ್ಷಣಗಳು ಕಾಣಿಸಲಾರಂಭಿಸಿವೆ. ಬಿಲ್ಲವರಲ್ಲಿ ಮೂಡಿ ಬರುತ್ತಿರುವ ಜಾತಿ ಪ್ರಜ್ಞೆ ಮತ್ತು ಹಿಂದುತ್ವದ ಹೆಸರಿನಲ್ಲಿ ನಮ್ಮನ್ನು ತುಳಿಯಲಾಗಿದೆ ಎಂಬ ಮೋಸಹೋದ ಭಾವನೆಯನ್ನು ಹೇಗೆ ಹತ್ತಿಕ್ಕಬೇಕೆಂಬುದು ಸ್ವತಃ ಆರ್‌ಎಸ್‌ಎಸ್‌ ಧುರೀಣರಿಗೂ ತೋಚುತ್ತಿಲ್ಲ. ಬಿಲ್ಲವರ ಈ ಜಾಗೃತ ಪ್ರಜ್ಞೆಯನ್ನೇ ಬಂಡವಾಳ ಮಾಡಿಕೊಂಡು ಕಾಂಗ್ರೆಸ್‌ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ದಾಳ ಹೂಡಿದೆ. ಕಾಂಗ್ರೆಸ್‌ ತಂತ್ರಗಾರಿಕೆಗೆ ತತ್ತರಿಸಿರುವ ಬಿಜೆಪಿ, ಇದೀಗ ಬಿಲ್ಲವರಿಗೆ ತಾನು ಮಾಡಿದ ʼಉಪಕಾರʼಗಳನ್ನು ಪಟ್ಟಿ ಮಾಡುತ್ತಾ ಕೂತಿದೆ. 

ಬಿಲ್ಲವರಿಗೆ ಬಿಜೆಪಿ ನೀಡಿದ ಕೊಡುಗೆಗಳ ಪಟ್ಟಿ 

ʼಹಿಂದೂ ನಾವೆಲ್ಲಾ ಒಂದುʼ ಎಂಬ ಹಿಂದುತ್ವದ ಮಂತ್ರ ಈ ಬಾರಿ ಫಲ ನೀಡುವುದಿಲ್ಲ ಎಂದು ಅರಿತಿರುವ ಬಿಜೆಪಿ, ಬಿಲ್ಲವರ ಮನವೊಲಿಕೆಗೆ ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಹಾಗಾಗಿಯೇ, ಮಂಗಳೂರಿಗೆ 10 ಕ್ಕೂ ಅಧಿಕ ಬಾರಿ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಬಿಲ್ಲವರ ಐಕಾನ್‌ ಶ್ರೀ ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ. ಆದರೆ, ಅದು ಕೂಡಾ ನಕರಾತ್ಮಕ ಪರಿಣಾಮ ಬೀರಿದ್ದು, ಮಾಲಾರ್ಪಣೆ ಮಾಡುವಾಗ ಪ್ರಧಾನಿಯಿಂದ ನಾರಾಯಣ ಗುರು ಪ್ರತಿಮೆಗೆ ಅವಮಾನವಾಗಿದೆ ಎಂದು ವಿಡಿಯೋ ತುಣುಕುಗಳು ಹರಿದಾಡುತ್ತಿವೆ. ಅಲ್ಲದೆ, ಹಲವಾರು ಬಾರಿ ಮಂಗಳೂರಿಗೆ ಭೇಟಿ ನೀಡಿದ್ದರೂ, ನಾರಾಯಣ ಗುರುವಿನ ನೆನಪು ಮಾಡಿಕೊಳ್ಳದ ಮೋದಿ, ಕಾಂಗ್ರೆಸ್‌ ಬಿಲ್ಲವ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗ ಮಾತ್ರ ನಾರಾಯಣ ಗುರುಗಳ ನೆನಪು ಮಾಡಿಕೊಂಡಿದ್ದಾರೆ ಎಂದು ಬಿಲ್ಲವರು ಪ್ರಶ್ನಿಸುತ್ತಿದ್ದಾರೆ. ಇನ್ನೊಂದೆಡೆ, ಕಾಂಗ್ರೆಸ್‌ ಕೂಡಾ, ಬಿಜೆಪಿ ಅವಧಿಯಲ್ಲಿ ಬಿಲ್ಲವರಿಗೆ ಆದ ʼಅನ್ಯಾಯʼಗಳನ್ನು ಪಟ್ಟಿ ಮಾಡಿ ಬಿಜೆಪಿಗರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. 

ಪ್ರಧಾನಿ ಮೋದಿ ವಿರುದ್ಧ ವೈರಲ್‌ ಆಗುತ್ತಿರುವ ಸಂದೇಶ

ದಿಲ್ಲಿಯಲ್ಲಿ ಗಣರಾಜ್ಯೋತ್ಸವದಂದು ನಡೆಯುವ ಪರೇಡ್‌ ಶೋನಲ್ಲಿ ನಾರಾಯಣ ಗುರುಗಳ ಟ್ಯಾಬ್ಲೋ ಪ್ರದರ್ಶನಕ್ಕೆ ಅವಕಾಶ ನೀಡದಿರುವುದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪಠ್ಯ ಪರಿಷ್ಕರಣೆ ವೇಳೆ ನಾರಾಯಣ ಗುರುಗಳ ಪಠ್ಯಕ್ಕೆ ಕತ್ತರಿ ಹಾಕಿರುವುದು ಮೊದಲಾದ ವಿಚಾರಗಳನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್‌ ಬಿಜೆಪಿಯನ್ನು ಕಟ್ಟಿ ಹಾಕಲು ನೋಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಭೇಟಿ ನೀಡುವಾಗ, ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಈ ಅಂಶಗಳನ್ನೇ ಮುಂದಿಟ್ಟು ಪ್ರಧಾನಿಗೆ ಸರಳಿ ಪ್ರಶ್ನೆಗಳ ಸವಾಲೊಡ್ಡಿದ್ದರು.

ದೇಶಾದ್ಯಂತ ಕೇಂದ್ರ ಸರ್ಕಾರದ ʼಅಭಿವೃದ್ಧಿ ಮಂತ್ರʼವನ್ನು ಮುಂದಿಟ್ಟುಕೊಂಡು, ನಮೋ ವರ್ಚಸ್ಸು ಮತ್ತು ಹಿಂದುತ್ವವನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸಿದರೂ, ದಕ್ಷಿಣ ಕನ್ನಡದಲ್ಲಿ ಈ ಅಂಶಗಳನ್ನು ಮುಂದಿಟ್ಟು ಮತಯಾಚಿಸಲು ಸ್ವತಃ ಬಿಜೆಪಿಯ ಕಾರ್ಯಕರ್ತರಿಗೂ ಹುಮ್ಮಸ್ಸಿದ್ದಂತೆ ಕಾಣುತ್ತಿಲ್ಲ. ದ.ಕ ಲೋಕಸಭಾ ಕ್ಷೇತ್ರದಲ್ಲಿ ಕಳೆದ 33 ವರ್ಷಗಳಿಂದ ಬಿಜೆಪಿಯಿಂದಲೇ ಸಂಸದರು ಆಯ್ಕೆಯಾಗುತ್ತಿದ್ದರೂ, ಹೇಳಿಕೊಳ್ಳುವಂತಹ ಯಾವುದೇ ಯೋಜನೆಗಳು, ಉದ್ಯೋಗಾವಕಾಶಗಳು, ಅಭಿವೃದ್ಧಿ ಕಾರ್ಯಗಳು ಜಿಲ್ಲೆಯಲ್ಲಿ ನಡೆದಿಲ್ಲ. ಹಾಗಾಗಿ ಈ ಬಾರಿ ಬಿಜೆಪಿಯ ಅಭಿವೃದ್ಧಿ ಮಂತ್ರದ ಕುರಿತು ಜನರಲ್ಲೂ ಉತ್ಸಾಹ ಇದ್ದಂತೆ ಕಾಣುತ್ತಿಲ್ಲ. ಅಲ್ಲದೆ, ಜಿಲ್ಲೆಯಲ್ಲಿ ಹಿಂದುತ್ವದ ಕೋಮು ರಾಜಕಾರಣದ ನೊಗವನ್ನು ಬಿಲ್ಲವರೇ ಹೊತ್ತುಕೊಂಡು ಬಂದಿದ್ದರು. ಈ ಬಾರಿ ಬಿಲ್ಲವ ಯುವಕರು ಮೈ ಕೊಡವಿ ಎದ್ದು ನಿಂತಿರುವ ಲಕ್ಷಣಗಳು ಕಾಣಿಸಲಾರಂಭಿಸಿದ್ದು, ಹಿಂದಿನಂತೆ ಕೋಮು ವೈಷಮ್ಯ ಒಂದನ್ನೇ ಇಟ್ಟುಕೊಂಡು ಜನರ ಮುಂದೆ ಬರಲು ಬಿಜೆಪಿಗೂ ಧೈರ್ಯ ಸಾಲುತ್ತಿಲ್ಲ.

ಕಾಂಗ್ರೆಸ್‌ ತನ್ನ ಅಭ್ಯರ್ಥಿ ಆಯ್ಕೆಯಲ್ಲೂ ಜಾಣ್ಮೆಯ ಹೆಜ್ಜೆಯನ್ನಿಟ್ಟಿದ್ದು, ಕಾಂಗ್ರೆಸ್‌ ಅಭ್ಯರ್ಥಿಯ ವರ್ಚಸ್ಸು ಕುಂದಿಸುವ ಯಾವೊಂದು ಧೃಡವಾದ ಅಂಶವೂ ಬಿಜೆಪಿ ಬತ್ತಳಿಕೆಯಲ್ಲಿ ಇಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ರಾಮಯ್ಯ ಅವರು ಶ್ರದ್ಧಾವಂತ ಹಿಂದೂವಾಗಿಯೇ ಗುರುತಿಸಿಕೊಂಡಿರುವುದೂ ಬಿಜೆಪಿಗೆ ಇನ್ನೊಂದು ಸವಾಲಾಗಿದೆ. ಕಾಂಗ್ರೆಸ್‌ ಅನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಬಿಜೆಪಿ ಎಷ್ಟೇ ತಿಪ್ಪರಲಾಗ ಹಾಕಿದರೂ, ಜಿಲ್ಲೆಯ ಪ್ರಮುಖ ದೇವಸ್ಥಾನವಾದ ಗೋಕರ್ಣನಾಥ ದೇವಸ್ಥಾನದಲ್ಲಿ ಕಳೆದ 27 ವರ್ಷಗಳಿಂದ ಸೇವೆ ಸಲ್ಲಿಸಿರುವ ಪದ್ಮರಾಜ್‌ ರಿಗಿಂತ ಉತ್ತಮ ಹಿಂದೂ ಯಾರು ಎಂಬ ಪ್ರಶ್ನೆಗೆ ಬಿಜೆಪಿಗರಲ್ಲಿಯೇ ಉತ್ತರವಿಲ್ಲ. ಹಾಗಾಗಿಯೇ, ಖಾಸಗಿ ಮಾಧ್ಯಮವೊಂದರ ಚುನಾವಣಾ ಚರ್ಚೆಯಲ್ಲಿ ಬಿಜೆಪಿ ಅಭ್ಯರ್ಥಿ ಬೃಜೇಶ್‌ ಚೌಟ ಅವರು ಬಿಜೆಪಿಯ ಹಳೆ ವರಸೆಯಾದ ʼಹಿಂದೂ ವಿರೋಧಿ ಕಾಂಗ್ರೆಸ್‌ʼ ಎಂಬ ದಾಳವನ್ನು ಹೂಡಲು ಹೋಗಿ ಬೇಸ್ತು ಬಿದ್ದಿರುವುದು. ಸಾರ್ವಜನಿಕ ಕಾರ್ಯಕ್ರಮದಲ್ಲಿ ಪದ್ಮರಾಜ್‌ ಅವರು ತಾವು ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಮಾಡಿರುವ ಸೇವೆಗಳನ್ನು ಒಂದೊಂದಾಗಿ ಬಿಚ್ಚಿಡುವ ಮೂಲಕ ಬಂಟ ಅಭ್ಯರ್ಥಿಗೆ ʼನೀರು ಕುಡಿಸಿʼದ್ದಾರೆ.

ಸೇನೆಯಲ್ಲಿ ಕೆಲ ಕಾಲ ಸೇವೆ ಸಲ್ಲಿಸಿ, ಅರ್ಧದಿಂದ ನಿವೃತ್ತಿ ಪಡೆದು ಬಂದಿರುವ ಬೃಜೇಶ್‌ ಚೌಟ ಅವರಿಗಿಂತ ಪದ್ಮರಾಜ್‌ ರಾಮಯ್ಯ ಅವರೇ ʼಉತ್ತಮ ಹಿಂದೂʼ ಎಂದು ಕಾಂಗ್ರೆಸ್‌ ಬೆಂಬಲಿಗರು ಪ್ರಚಾರ ಮಾಡುತ್ತಿದ್ದು, ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ʼಮೃದು ಹಿಂದುತ್ವʼದ ಫಲ ಉಣ್ಣುವ ಲಕ್ಷಣಗಳು ಕಾಣಿಸಲಾರಂಭಿಸಿವೆ. ಹಾಗೊಂದು ವೇಳೆ ಕಾಂಗ್ರೆಸ್‌ ತಂತ್ರ ಫಲಿಸಿದ್ದಲ್ಲಿ, 33 ವರ್ಷಗಳ ಬಳಿಕ ಬಿಲ್ಲವ ಸಮುದಾಯಕ್ಕೆ ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶ ಸಿಗಲಿದೆ. ಮೂರು ದಶಕದ ಹಿಂದೆ ಜನಾರ್ದನ ಪೂಜಾರಿ ಅವರು ಸಮುದಾಯದ ನಾಯಕರಾಗಿ ಲೋಕಸಭೆಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಪದ್ಮರಾಜ್‌ ರಾಮಯ್ಯರಿಗೆ ಬೆಂಬಲಿಸುವ ಪೋಸ್ಟರ್‌ ಗಳು

ಈ ಹಿಂದೆ ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ನಾರಾಯಣ ಗುರುಗಳ ಪಠ್ಯವನ್ನು ಕೈ ಬಿಟ್ಟಿರುವುದು, ಗಣರಾಜ್ಯೋತ್ಸವ ಪರೇಡಿನಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಅವಕಾಶ ನೀಡದಿರುವುದು, ಇದುವರೆಗಿನ ಮಂಗಳೂರು ಭೇಟಿಯಲ್ಲಿ ನಾರಾಯಣ ಗುರುಗಳನ್ನು ಪ್ರಧಾನಿ ಅವಗಣಿಸಿದ್ದು ಮೊದಲಾದ ಅಂಶಗಳನ್ನೆಲ್ಲಾ ಇಟ್ಟುಕೊಂಡು ಕಾಂಗ್ರೆಸ್‌ ಬಿಜೆಪಿ ವಿರುದ್ಧ ಟೀಕಾಸ್ತ್ರ ಹೂಡುತ್ತಿದ್ದಂತೆಯೇ, ಬಿಜೆಪಿ ತಾನು ಬಿಲ್ಲವರಿಗೆ ಮಾಡಿರುವ ಉಪಕಾರಗಳನ್ನು ಪಟ್ಟಿ ಮಾಡಲು ಆರಂಭಿಸಿದೆ.

ಕರಾವಳಿಯಲ್ಲಿ, ಚುನಾವಣೆಯ ಚರ್ಚಾ ವಿಷಯ ಯಾವುದು ಎಂಬುದನ್ನು ಆಯ್ಕೆ ಮಾಡುವ ಅವಕಾಶ ಇದುವರೆಗೂ ಬಿಜೆಪಿ ಬಳಿ ಇದ್ದರೆ, ಇದೀಗ ಆ ಅವಕಾಶವನ್ನು ಕಾಂಗ್ರೆಸ್‌ ಸದುಪಯೋಗಪಡಿಸಿಕೊಂಡಿದೆ. ಬೆಂಗಳೂರು ಕೆಫೆ ಬಾಂಬ್‌ ಸ್ಪೋಟ, ಮಂಗಳೂರು ಕುಕ್ಕರ್‌ ಬಾಂಬ್‌ ಸ್ಪೋಟ ಮೊದಲಾದ ವಿಷಯಗಳನ್ನು ಚುನಾವಣಾ ಹೊಸ್ತಿಲಲ್ಲಿ ಚರ್ಚಾ ವಿಷಯ ಮಾಡಲು ಬಿಜೆಪಿ ಪ್ರಯತ್ನ ಪಡುತ್ತಿದೆಯಾದರೂ, ಬಿಲ್ಲವರ ʼಜಾಗೃತ ಪ್ರಜ್ಞೆʼ ಎದುರು ಬಿಜೆಪಿಯ ಈ ಯಾವ ತಂತ್ರಗಳೂ ಫಲ ನೀಡುತ್ತಿರುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ, ಬಿಜೆಪಿ ಕಾಂಗ್ರೆಸ್‌ ಗೆ ಕೌಂಟರ್‌ ಕೊಡುವುದರಲ್ಲೇ ತಲ್ಲೀನವಾಗಿದೆ. ಹಾಗಾಗಿಯೇ, ಬಿಲ್ಲವರಿಗೆ ತಾನು ನೀಡಿರುವ ಕೊಡುಗೆಗಳನ್ನು ಹೇಳಿಕೊಂಡು ಜನರ ಮುಂದೆ ಬಂದಿದೆ. ಇದುವರೆಗೂ ಇಂತಹ ವಾತಾವರಣ ಕರಾವಳಿಯಲ್ಲಿ ಸೃಷ್ಟಿಯಾಗದೆ ಇರುವುದರಿಂದ ತಕ್ಷಣಕ್ಕೆ ಸಾವರಿಸಿಕೊಂಡು, ತಮಗೆ ಪ್ರಯೋಜನವಾಗುವ ನರೇಟಿವ್‌ ಅನ್ನು ಕಟ್ಟಲು ಕೂಡಾ ಕರಾವಳಿ ಬಿಜೆಪಿ ತಡವರಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ತನ್ನ ಅಭ್ಯರ್ಥಿ ಸೇನೆಯಲ್ಲಿ ಸೇವೆ ಸಲ್ಲಿಸಿರುವುದನ್ನೇ ಬಂಡವಾಳ ಮಾಡಿಕೊಳ್ಳಲು ಬಿಜೆಪಿ ಒಂದು ಹಂತಕ್ಕೆ ಪ್ರಯತ್ನಪಟ್ಟಿತ್ತು. ಆದರೆ, ಕ್ಯಾ. ಬ್ರಿಜೇಶ್‌ ಚೌಟ ಅವರು ಸ್ವ-ನಿವೃತ್ತಿ ಪಡೆದು ಸೇನೆ ತೊರೆದು ಬಂದಿದ್ದಾರೆಂಬ ಅಂಶ, ಅಭ್ಯರ್ಥಿಯ ಸೇನಾ ಹಿನ್ನೆಲೆಯನ್ನು ಸಂಪೂರ್ಣ ಬಂಡವಾಳ ಮಾಡಿಕೊಳ್ಳದಂತೆ ತಡೆಯುತ್ತಿದೆ ಎಂದು ಬಿಜೆಪಿಯ ಮೂಲಗಳೇ ʼದಿ ಫೆಡೆರಲ್‌ ಕರ್ನಾಟಕʼಕ್ಕೆ ತಿಳಿಸಿವೆ.

ಒಂದೆಡೆ ಕಾಂಗ್ರೆಸ್‌ ಕಾರ್ಯಕರ್ತರು ಸೇನೆಯಿಂದ ಅರ್ಧಕ್ಕೆ ಬಂದವರ ದೇಶಪ್ರೇಮವನ್ನು ಪ್ರಶ್ನಿಸುತ್ತಿದ್ದರೆ, ಇನ್ನೊಂದೆಡೆ ಪದ್ಮರಾಜ್‌ ಹಿಂದೂ ಧರ್ಮ ಶ್ರದ್ಧೆಯನ್ನೇ ಪ್ರಚಾರಕ್ಕೆ ಬಳಸಲಾಗುತ್ತಿದೆ. ಇದುವರೆಗೂ ಇವೆರಡೂ ಬಿಜೆಪಿಗರ ಬತ್ತಳಿಕೆಯಲ್ಲಿದ್ದ ಬಾಣಗಳೇ ಆಗಿತ್ತು. ಆದರೆ, ತಮ್ಮ ತಂತ್ರಗಳು ತಿರುಗುಬಾಣವಾದಾಗ ಅದನ್ನು ಎದುರಿಸುವ ಅಸ್ತ್ರಗಳಿಲ್ಲದೆ ಬಿಜೆಪಿ ತಬ್ಬಿಬ್ಬಾಗಿರುವುದು ಈ ಬಾರಿಯ ಸ್ಪರ್ಧೆಯನ್ನು ಇನ್ನಷ್ಟು ಕುತೂಹಲಕಾರಿಯಾಗಿಸಿದೆ.!

Tags:    

Similar News