ಮುಸ್ಲಿಂ ಮೀಸಲಾತಿ ರದ್ದು: ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ಮುಸ್ಲೀಮರ ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಅದರಲ್ಲೂ ಕೋರ್ಟ್ ಕಾರ್ಯಕಲಾಪದ ಬಗ್ಗೆ ಸುಳ್ಳು ಹೇಳುವುದು ಬಹಳ ತಪ್ಪು ಎಂದು ಬೊಮ್ಮಾಯಿ ಹೇಳಿದ್ದಾರೆ;
ಹುಬ್ಬಳ್ಳಿ: ಮುಸ್ಲೀಮರಿಗೆ ನೀಡಿರುವ ಮೀಸಲಾತಿ ರದ್ದು ಮಾಡಿರುವ ವಿಚಾರದಲ್ಲಿ ನಾವು ತೆಗೆದುಕೊಂಡ ನಿರ್ಧಾರಕ್ಕೆ ಬದ್ದರಾಗಿದ್ದೇವೆ. ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ಏನು ಮಾಡುತ್ತದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಶುಕ್ರವಾರ (ಏ.26) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸ್ಲೀಮರ ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಅದರಲ್ಲೂ ಕೋರ್ಟ್ ಕಾರ್ಯಕಲಾಪದ ಬಗ್ಗೆ ಸುಳ್ಳು ಹೇಳುವುದು ಬಹಳ ತಪ್ಪು ಎಂದು ಹೇಳಿದರು.
ನಾವು ಕೋರ್ಟ್ ನಲ್ಲಿ ಮುಸ್ಲಿಂ ಮೀಸಲಾತಿ ರದ್ದು ಮಾಡುತ್ತೇವೆ ಅಥವಾ ಮುಂದುವರೆಸುತ್ತೇವೆ ಅಂತಾ ಹೇಳಿಲ್ಲ. ನಾವೇನು ಆಜ್ಞೆ ಮಾಡಿದ್ದೇವೆ ಅದನ್ನು ಸಿದ್ದರಾಮಯ್ಯ ಅವರ ಶಿಷ್ಯ ರವಿವರ್ಮ ಕುಮಾರ್ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದರು. ಇದರ ಹಿಂದೆ ಸಿದ್ದರಾಮಯ್ಯ ಇದ್ದಾರೆ. ಅದಾದ ಮೇಲೆ ಕೋರ್ಟ್ ಪ್ರೊಸೆಡಿಂಗ್ ನಲ್ಲಿ ಸಮಯ ಬೇಕು ಅಂತ ಸಮಯ ಕೇಳಿತು. ಅದಕ್ಕೆ ನಾವು ಒಪ್ಪಿಕೊಂಡಿದ್ದೇವೆ. ನಾವು ನಮ್ಮ ಕೇಸ್ ವಾದ ಮಾಡುತ್ತೇವೆ ಅಂತಾ ಹೇಳಿದ್ದೆವು. ನಾವು ಕೇಸ್ ಹಿಂಪಡೆದಿಲ್ಲ. ಮುಂದಿನ ವಿಚಾರಣೆ ಆಗುವವರೆಗೂ ನಾವು ಜಾರಿ ಮಾಡುವುದಿಲ್ಲ ಅಂತಾ ಹೇಳಿದ್ದೆವು. ನಮ್ಮ ನಿಲುವು ಅದೇ ಇದೆ. ಇವತ್ತಿನ ಸರ್ಕಾರ ಅದನ್ನು ಮುಂದುವತಿಸುತ್ತದೆಯೇ? ಎನ್ನುವ ಯಕ್ಷ ಪ್ರಶ್ನೆ ಇದೆ. ಅವತ್ತೆ ಕಾಂಗ್ರೆಸ್ ಅದನ್ನು ವಿರೋಧ ಮಾಡಿತ್ತು ಎಂದರು.