WELCOME TO MR. ʼBONDʼ | ಮೋದಿಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ ಸ್ವಾಗತ
ಪ್ರಧಾನಿ ನರೇಂದ್ರ ಮೋದಿ ಇಂದು ಕಲಬುರಗಿಗೆ ಆಗಮಿಸಲಿದ್ದು, ಬೃಹತ್ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ʼʼWELCOME TO MR. BONDʼʼ ಎಂದು ವ್ಯಂಗ್ಯವಾಗಿ ಸ್ವಾಗತಿಸಿದ್ದಾರೆ ಮತ್ತು ಕೆಲವು ಪ್ರಶ್ನೆಗಳನ್ನು ʼಎಕ್ಸ್ʼ ಪೋಸ್ಟ್ ಮೂಲಕ ಕೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಿಸ್ಟರ್ ಬಾಂಡ್ ನರೇಂದ್ರ ಮೋದಿ ಅವರಿಗೆ ಕಲಬುರಗಿಗೆ ಆತ್ಮೀಯ ಸ್ವಾಗತ. ಕಲಬುರಗಿ ಜನತೆಯ ಕೆಲವು ಪ್ರಶ್ನೆಗಳಿಗೆ ನೀವು ಉತ್ತರಿಸುವ ನಿರೀಕ್ಷೆಯಿದೆ ಎಂದ ಪ್ರಿಯಾಂಕ್ ಖರ್ಗೆ ʼಎಕ್ಸ್ʼನಲ್ಲಿ ಪೋಸ್ಟ್ ಮಾಡಿದ್ದಾರೆ.
#ModiMosa ಎಂಬ ಹ್ಯಾಷ್ ಟ್ಯಾಗ್‌ನಡಿ ಕಲಬುರಗಿಯ ಜನರು ನಾಳೆ ನಿಮ್ಮಿಂದ ಕೆಲವು ಪ್ರಶ್ನೆಗಳಿಗೆ ಉತ್ತರ ಬಯಸುತ್ತಿದ್ದಾರೆ, ಉತ್ತರಿಸಿ ಎಂದು ಆಗ್ರಹಿಸಿದ್ದಾರೆ.
ಪ್ರಶ್ನೆಗಳು
1 ಕೇಂದ್ರ ಸರ್ಕಾರ ನರೇಗಾ ಕಾರ್ಮಿಕರ ವೇತನ ಯಾಕೆ ಬಿಡುಗಡೆ ಮಾಡುತ್ತಿಲ್ಲ? ಏನು ಮೋದಿ ಸರ್ಕಾರ ದಿವಾಳಿಯಾಗಿದೆಯೇ?
2 ಬರದಿಂದ ತತ್ತರಿಸುತ್ತಿರುವ ಕರ್ನಾಟಕಕ್ಕೆ ಮೋದಿ ಸರ್ಕಾರ ಯಾಕೆ ಎನ್‌ಡಿಆರ್‌ಎಫ್ ಫಂಡ್ ಬಿಡುಗಡೆ ಮಾಡುತ್ತಿಲ್ಲ?
3 ನೀವು ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೋಲಿ ಮತ್ತು ಗೊಂಡ ಕುರುಬ ಸಮುದಾಯಗಳನ್ನು ಪರಿಶಿಷ್ಟ ಪಂಗಡ(ಎಸ್‌ಟಿ)ಕ್ಕೆ ಸೇರಿಸುವುದಾಗಿ ಭರವಸೆ ನೀಡಿದ್ದೀರಿ. ಯಾವಾಗ ಸೇರಿಸುತ್ತೀರಿ?
4 ಮಲ್ಲಿಕಾರ್ಜುನ ಖರ್ಗೆ ಅವರ ಕಾಲದಲ್ಲಿ ಅನುಮೋದಿತವಾಗಿದ್ದ ಕಲಬುರಗಿ ರೈಲ್ವೆ ವಿಭಾಗವನ್ನು ನಿಮ್ಮ ಸರ್ಕಾರ ಯಾಕೆ ಕೈಬಿಟ್ಟಿದೆ?
5 ಕಲಬುರಗಿಯಲ್ಲಿ ಸ್ಥಾಪನೆಯಾಗಬೇಕಾಗಿದ್ದ ರಾಷ್ಟ್ರೀಯ ಹೂಡಿಕೆ ಉತ್ಪಾದನಾ ವಲಯವನ್ನು ನಿಮ್ಮ ಸರ್ಕಾರ ರದ್ದು ಮಾಡಿದ್ದು ಯಾಕೆ?
6 ಕಲಬುರಗಿಯ ಔಟರ್ ರಿಂಗ್ ರೋಡ್ ಯೋಜನೆಗೆ ಯಾಕೆ ನಿಮ್ಮ ಸರ್ಕಾರ ಹಣ ನೀಡಿಲ್ಲ?
ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಲಬುರಗಿ ನಗರದ ಡಿ.ಆರ್. ಗ್ರೌಂಡ್‌ನಿಂದ ಎನ್.ವಿ ಕಾಲೇಜು ಮೈದಾನದವರೆಗೆ ಪ್ರಧಾನಿ ರೋಡ್ ಶೋ ನಡೆಸಲಿದ್ದಾರೆ. ಆ ಬಳಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.