ಕೋಲಾರ ಕಾಂಗ್ರೆಸ್ ಅಸಮಾಧಾನ | ಪ್ರತ್ಯೇಕ ಬಣಗಳಲ್ಲಿ ನಾಮಪತ್ರ ಸಲ್ಲಿಕೆ !
ಕೆ.ವಿ.ಗೌತಮ್ ಅವರು ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ, ಅವರು ನಾಮಪತ್ರ ಸಲ್ಲಿಕೆ ಮಾಡುವಾಗ ಪಕ್ಷದ ಮುಖಂಡರು ಪ್ರತ್ಯೇಕವಾಗಿ ಆಗಮಿಸಿರುವುದು ವಿಶೇಷ.;
ಕೋಲಾರ ಕಾಂಗ್ರೆಸ್ ಮುಖಂಡರಲ್ಲಿ ವೈಮನಸ್ಸು ಮುಂದುವರಿದಿದೆ. ಮೇಲ್ನೋಟಕ್ಕೆ ಎಲ್ಲವೂ ಸರಿ ಇರುವಂತೆ ಕಾಣುತ್ತಿದ್ದು, ಕಾಂಗ್ರೆಸ್‌ನ ಹಿರಿಯ ಮುಖಂಡರು ಸಹ ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಅವರನ್ನು ಗೆಲ್ಲಿಸುವುದೇ ನಮ್ಮ ಗುರಿ ಎಂದು ಹೇಳುತ್ತಿದ್ದಾರೆ. ಆದರೆ, ಕೋಲಾರ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಕ್ಷೇತ್ರದ ಅಭ್ಯರ್ಥಿ ಕೆ.ವಿ.ಗೌತಮ್ ಅವರ ನಾಮಪತ್ರ ಸಲ್ಲಿಕೆಯ ವೇಳೆ ಬಹಿರಂಗವಾಗಿದೆ.
ಕೆ.ವಿ.ಗೌತಮ್ ಅವರು ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ, ಅವರು ನಾಮಪತ್ರ ಸಲ್ಲಿಕೆ ಮಾಡುವಾಗ ಪಕ್ಷದ ಮುಖಂಡರು ಪ್ರತ್ಯೇಕವಾಗಿ ಆಗಮಿಸಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಕೋಲಾರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಅವರು ಗುರುವಾರ ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಬೆಳಿಗ್ಗೆ ನಗರದ ಕೋಲಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದಾದ ನಂತರ ಮೆಥೋಡಿಸ್ಟ್ ಚರ್ಚ್‌ಗೆ ಭೇಟಿ ನೀಡಿದರು. ಅಲ್ಲದೇ ಕ್ಲಾಕ್ ಟವರ್ ದರ್ಗಾದಲ್ಲಿಯೂ ಪ್ರಾರ್ಥನೆ ಸಲ್ಲಿಸಿದರು.
ಇನ್ನು ಸಚಿವ ಕೆ.ಎಚ್ ಮುನಿಯಪ್ಪ ಅವರು ಕೋಲಾರ ಮೀಸಲು ಕ್ಷೇತ್ರದಿಂದ ತಮ್ಮ ಅಳಿಯ ಕೆ.ಜಿ.ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಕೊಡಬೇಕು ಎಂದು ಭಾರೀ ಪ್ರಯತ್ನ ನಡೆಸಿದ್ದರು. ಆದರೆ, ಟಿಕೆಟ್ ಕೈತಪ್ಪಿದ ನಿರಾಸೆಯಲ್ಲಿ ಕೆ.ಎಚ್ ಮುನಿಯಪ್ಪ ಇದ್ದಾರೆ. ಟಿಕೆಟ್ ಸಿಗಲಿಲ್ಲ ಎಂದು ಅಸಮಾಧಾನಗೊಂಡಿದ್ದ ಮುನಿಯಪ್ಪ ಅವರು ಮತ್ತು ಅವರ ಪುತ್ರಿ, ಶಾಸಕಿ ರೂಪಕಲಾ ಎಂ.ಶಶಿಧರ್ ಅವರು ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಅವರ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿದ್ದರು. ಆದರೆ, ನಾಯಕರು ಪ್ರತ್ಯೇಕವಾಗಿ ಭಾಗವಹಿಸಿದ್ದು ಹಾಗೂ ಸಹಜವಾಗಿ ಭಾಗವಹಿಸದೆ ಇರುವುದು ಢಾಳಾಗಿ ಕಾಣಿಸುತ್ತಿತ್ತು.
ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಕೆ
ಕೆ.ವಿ.ಗೌತಮ್ ಜಿಲ್ಲಾಧಿಕಾರಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು. ಮೊದಲ ಬಾರಿ ನಾಮಪತ್ರ (ಸೆಟ್) ಸಲ್ಲಿಸುವ ಸಂದರ್ಭದಲ್ಲಿ ಸಚಿವರಾದ ಬೈರತಿ ಸುರೇಶ್, ಡಾ.ಎಂ.ಸಿ.ಸುಧಾಕರ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಹಾಗೂ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಜರಿದ್ದರು.
ಎರಡನೇಯ ಬಾರಿ ನಾಮಪತ್ರ ಸಲ್ಲಿಸುವಾಗ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕಿ ರೂಪಕಲಾ ಶಶಿಧರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ಸೇರಿದಂತೆ ಹಲವರು ಇದ್ದರು. ಮೂರನೇ ಸೆಟ್ ನಾಮಪತ್ರ ಸಲ್ಲಿಸುವಾಗ ಶಾಸಕರಾದ ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಭಾಗವಹಿಸಿದ್ದರು.
ಮೂರು ಹಂತದಲ್ಲಿ ಪ್ರತ್ಯೇಕವಾಗಿ ನಾಯಕರು ಕಾಣಿಸಿಕೊಂಡರು. ಎಲ್ಲ ನಾಯಕರು ಪೋಟೊ ತೆಗೆಸಿಕೊಳ್ಳುವಾಗ ಗುಂಪಾಗಿ ಕಾಣಿಸಿಕೊಂಡರಾದರೂ ಅದಾದ ಮೇಲೆ ಒಂದೇ ಕಡೆ ಕಾಣಿಸಲಿಲ್ಲ. ಪ್ರತ್ಯೇಕ ಬಣಗಳಲ್ಲಿ ಕಾಂಗ್ರೆಸ್ ನಾಯಕರು ಕಾಣಿಸಿಕೊಂಡಿರುವುದು ನಾಯಕರಲ್ಲಿ ಇನ್ನೂ ಅಸಮಾಧಾನ ಹೋಗಿಲ್ಲ ಎನ್ನುವಂತಿದೆ ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.