ಇದೇ ದೇಶದ ಕೊನೆಯ ಚುನಾವಣೆ ಆಗಬಾರದು: ಸಚಿವ ಪ್ರಿಯಾಂಕ್ ಖರ್ಗೆ
ದೇಶದಲ್ಲಿ ಮುಂದಿನ ಐದು ವರ್ಷದ ನಂತರವೂ ಚುನಾವಣೆ ನಡೆಯಬೇಕು. ಇದು ಕೊನೆಯ ಚುನಾವಣೆಯಾಗಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.;
ದೇಶದಲ್ಲಿ ಮುಂದಿನ ಐದು ವರ್ಷದ ನಂತರವೂ ಚುನಾವಣೆ ನಡೆಯಬೇಕು. ಇದು ಕೊನೆಯ ಚುನಾವಣೆಯಾಗಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವರದಿಗಾರರಿಂದ ಪ್ರಜಾಪ್ರಭುತ್ವ ಉಳಿದಿದೆ, ಮಾಧ್ಯಮಗಳ ಮಾಲೀಕರಿಂದ ಅಲ್ಲ. ಮಾಲೀಕರನ್ನು ಇಡಿ, ಐಟಿ, ಸಿಬಿಐ ಮೂಲಕ ನಿಯಂತ್ರಿಸಲಾಗುತ್ತಿದೆ. ವರದಿಗಾರರು ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡುತ್ತಿದ್ದಾರೆ. ವರದಿಗಾರರಿಗೆ ಯಾವುದೇ ತನಿಖಾ ಸಂಸ್ಥೆಗಳ ಭಯವಿಲ್ಲ. ಈ ಬಾರಿ ಎಲ್ಲಾ ಬದಲಾವಣೆಯಾಗುವ ಕಾರಣ ನೀವು ನಿಶ್ಚಿಂತೆಯಿಂದ ಇರಬಹುದು ಎಂದರು.
ದೇಶದಲ್ಲಿ ಮುಂದಿನ ಐದು ವರ್ಷಗಳ ನಂತರವೂ ಮತ್ತೊಮ್ಮೆ ಚುನಾವಣೆ ನಡೆಯಬೇಕು. ಇದೇ ಕೊನೆಯ ಚುನಾವಣೆ ಆಗಬಾರದು. ಲಕ್ಷಾಂತರ ಜನ ಕಾಂಗ್ರೆಸ್ ಕಾರ್ಯಕರ್ತರು, ಜನಸಾಮಾನ್ಯರು ಹೋರಾಟದ ಫಲವಾಗಿ ಸ್ವಾತಂತ್ರ್ಯ ಬಂದಿದೆ. ಅಂಬೇಡ್ಕರ್ ಅವರ ಸಂವಿಧಾನ, ಜಾತ್ಯಾತೀತ ತತ್ವ ಸೇರಿದಂತೆ ನಮ್ಮ ದೇಶದ ಮೌಲ್ಯಗಳನ್ನು ಉಳಿಸಿಕೊಳ್ಳಬೇಕಿದೆ. ಮಾಧ್ಯಮ ವಿಭಾಗ ಕಾಂಗ್ರೆಸ್ ಪಕ್ಷದ ಕನ್ನಡಿ. ಹೊಸದಾಗಿ ಜವಾಬ್ದಾರಿ ವಹಿಸಿಕೊಂಡವರು ಕಾಂಗ್ರೆಸ್ ಪಕ್ಷದ ನಿಲುವುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಬೇಕು ಎಂದರು.
ನನ್ನನ್ನು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ಅಧ್ಯಕ್ಷನ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ನೇಮಿಸಿದ್ದರು. ಮಾಧ್ಯಮಸ್ನೇಹಿ ಅಲ್ಲದ ನಾನು ಅನೇಕ ವಿಚಾರಗಳನ್ನು ಈ ಹುದ್ದೆಯಿಂದ ಕಲಿತೆ. ಮಾಧ್ಯಮದ ಅನೇಕ ಸ್ನೇಹಿತರು ಅನೇಕ ಬಾರಿ ನಾವು ಎಡವಿದಾಗ ಮಾರ್ಗದರ್ಶನ ನೀಡಿದ್ದಾರೆ ಎಂದರು.
ಸಾಮಾಜಿಕ ಜಾಲತಾಣ ವಿಭಾಗ ಮತ್ತು ಮಾಧ್ಯಮ ವಿಭಾಗ ಜನಾಭಿಪ್ರಾಯ ರೂಪಿಸುತ್ತಿಲ್ಲ ಎನ್ನುವ ಆರೋಪವಿತ್ತು. ಇದನ್ನು ಮೀರಿ ನಾವು ಯಶಸ್ವಿಯಾಗಿದ್ದೇವೆ. ಕಾಂಗ್ರೆಸ್ ಪಕ್ಷದ ಬಗ್ಗೆ ವಿಶ್ವಾಸ ಮೂಡುವಂತೆ ಮಾಡಿದ್ದೇವೆ. 136 ಸ್ಥಾನಗಳನ್ನು ಗೆದ್ದು ಉತ್ತಮವಾಗಿ ಆಡಳಿತ ನಡೆಸುತ್ತಿದ್ದೇವೆ ಎಂದು ಹೇಳಿದರು.
ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ನೂತನ ಅಧ್ಯಕ್ಷರಾಗಿ ರಮೇಶ್ ಬಾಬು, ಸಹ ಅಧ್ಯಕ್ಷರಾಗಿ ಐಶ್ವರ್ಯ ಮಂಚನಹಳ್ಳಿ ಮಹದೇವ್, ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಸಹ ಅಧ್ಯಕ್ಷರಾಗಿ ವಿಜಯ ಮತ್ತಿಕಟ್ಟಿ, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಉಪಾಧ್ಯಕ್ಷರಾಗಿ ಸತ್ಯಪ್ರಕಾಶ್ ಅವರನ್ನು ನೇಮಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್, ಸಾಮಾಜಿಕ ಜಾಲತಾಣ ವಿಭಾಗ ಎಐಸಿಸಿ ಉಸ್ತುವಾರಿ ಪವನ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.