ʼಮಹಿಳಾ ಮೀಸಲಾತಿʼ ಕಾರ್ಡ್ ಬಳಸಿ ಮಂಡ್ಯ ಟಿಕೆಟ್ ಪಡೆಯಲು ಸುಮಲತಾ ಯತ್ನ
2019 ರಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸುವ ಮೂಲಕ ನಟಿಯಾಗಿದ್ದ ಸುಮಲತಾ ಅಂಬರೀಶ್ ರಾಜಕಾರಣಿಯಾದರು. ಆನಂತರ ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ತಮ್ಮ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದಾರೆಯೇ?;
ಕರ್ನಾಟಕದ ‘ಸಕ್ಕರೆ ನಾಡು’ ಎಂದೇ ಜನಪ್ರಿಯವಾಗಿರುವ ಒಕ್ಕಲಿಗ ಭದ್ರಕೋಟೆಗಳಲ್ಲಿ ಒಂದಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತನ್ನ ಹಿಡಿತವನ್ನು ಉಳಿಸಿಕೊಳ್ಳುವುದು ಜೆಡಿಎಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಈ ಮಧ್ಯೆ, ಕುತೂಹಲಕಾರಿಯಾಗಿ, ಸುಮಲತಾ ಅವರು ಮಹಿಳಾ ಮೀಸಲಾತಿ ಕೋಟಾದ ಅಡಿಯಲ್ಲಿ ಬಿಜೆಪಿ ಟಿಕೆಟ್ ಪಡೆಯುವ ಭರವಸೆಯನ್ನು ಹೊಂದಿದ್ದಾರೆ.
28 ಲೋಕಸಭಾ ಕ್ಷೇತ್ರಗಳ ಫೈಕಿ ಮಂಡ್ಯ ಪ್ರಮುಖವಾದ ಕ್ಷೇತ್ರವಾಗಿದೆ. ಇದು ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟಕ್ಕೆ ‘ಕಬ್ಬಿನದ ಕಡಲೆಯಾಗಿದೆ.. ಬಿಜೆಪಿಯು ಜೆಡಿ (ಎಸ್) ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ, ವಿಷಯಗಳು ಇಷ್ಟೊಂದು ಜಟಿಲವಾಗುತ್ತಿರಲಿಲ್ಲ, ಏಕೆಂದರೆ ಕೇಂದ್ರದಲ್ಲಿ ಬಿಜೆಪಿ ಮತ್ತು ಎನ್‌ಡಿಎಯನ್ನು ಬೆಂಬಲಿಸುತ್ತಿರುವ ರಾಜಕಾರಣಿಯಾಗಿ ಪರಿವರ್ತನೆಗೊಂಡ ಸಿನಿತಾರೆ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸುತ್ತಾರೆ. ಆದರೆ, ಜೆಡಿಎಸ್ ಸೀಟು ಹಂಚಿಕೆಯಲ್ಲಿ ಮಂಡ್ಯ ಟಿಕೆಟ್ ತಮಗೇ ಕೊಡಬೇಕು ಎಂದು ಹೇಳಿಕೊಳ್ಳುತ್ತಿದೆ ಮತ್ತು ಸುಮಲತಾ ಯಾವುದೇ ರೀತಿಯ ಸೀಟು ವಿನಿಮಯದೊಂದಿಗೆ ರಾಜಿ ಮಾಡಿಕೊಳ್ಳಲು ನಿರಾಕರಿಸಿದ್ದಾರೆ.
2019ರ 25 ಸೀಟುಗಳನ್ನು ಉಳಿಸಿಕೊಳ್ಳುವ ಕನಸು ಕಾಣುತ್ತಿರುವ ಬಿಜೆಪಿಗೆ ಮಂಡ್ಯ ಲೋಕಸಭಾ ಕ್ಷೇತ್ರ ಸಮಸ್ಯಾತ್ಮಕವಾಗಿ ಪರಿಣಮಿಸಿದೆ. ಮಂಡ್ಯ ಲೋಕಸಭಾ ಕ್ಷೇತ್ರವು ಮೈತ್ರಿಕೂಟದ ಪಾಲುದಾರರಾದ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವುದು ಈಗ ಸ್ಪಷ್ಟವಾಗಿದೆ.
ಇತ್ತೀಚೆಗಷ್ಟೇ ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಕಾರ್ಯಕರ್ತರ ಸಭೆ ನಡೆಸಿದ್ದರು. ಆ ಸಭೆಯ ಬಳಿಕ ಜೆಡಿಎಸ್ ವಕ್ತಾರ ಡಿ ಸಿ ತಮ್ಮಣ್ಣ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಮಂಡ್ಯ ಜೆಡಿಎಸ್ ಭದ್ರಕೋಟೆ. ಅದನ್ನು ಯಾರಿಗೂ ತ್ಯಾಗ ಮಾಡುವ ಪ್ರಶ್ನೆ ಇಲ್ಲ ಎಂದು ಅವರೂ ಹೇಳಿದರು; ಜೆಡಿಎಸ್‌ನಲ್ಲಿ ಸಾಕಷ್ಟು ಅರ್ಹ ಅಭ್ಯರ್ಥಿಗಳಿದ್ದು, ಮಂಡ್ಯದಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುವ ಎಲ್ಲಾ ಸಾಧ್ಯತೆಗಳೂ ಇವೆ, ಏಕೆಂದರೆ ಅವರಿಗೆ ಈ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಡ ಹೆಚ್ಚಾಗುತ್ತಿದೆ.
ಕರ್ನಾಟಕದಲ್ಲಿ ಮೈತ್ರಿ ಪಕ್ಷಗಳಾದ ಬಿಜೆಪಿ-ಜೆಡಿ(ಎಸ್) ನಡುವಿನ ಮಾತುಕತೆ ಅಂತಿಮ ಹಂತಕ್ಕೆ ತಲುಪಿದ್ದು, ಕುಮಾರಸ್ವಾಮಿ ಚಿಕ್ಕಬಳ್ಳಾಪುರ ಅಥವಾ ಮಂಡ್ಯದಿಂದ ಸ್ಪರ್ಧಿಸಬಹುದು ಎಂದು ಬಿಜೆಪಿ ಮೂಲಗಳು ಫೆಡರಲ್‌ಗೆ ತಿಳಿಸಿವೆ.
2009ರಲ್ಲಿ ಬೆಂಗಳೂರು ಗ್ರಾಮಾಂತರದಿಂದ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಕುಮಾರಸ್ವಾಮಿ 2014ರಲ್ಲಿ ಚಿಕ್ಕಬಳ್ಳಾಪುರದಿಂದ ಕಾಂಗ್ರೆಸ್‌ನ ವೀರಪ್ಪ ಮೊಯ್ಲಿ ವಿರುದ್ಧ ಸೋತಿದ್ದರು. ಇದೀಗ ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಬಗ್ಗೆ ಒಮ್ಮತ ಮೂಡಿದೆ.
ಬಿಜೆಪಿಯು ಮೂಲಭೂತವಾಗಿ ಒಕ್ಕಲಿಗ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಅವಕಾಶ ಕಲ್ಪಿಸುವ ಅನಿವಾರ್ಯತೆಗೆ ಸಿಲುಕಿದೆ. ಸುಮಲತಾ ಅಂಬರೀಶ್ ಅವರನ್ನು ಬೇರೆಡೆ ಸ್ಪರ್ಧಿಸಲು ಅವಕಾಶ ನೀಡುವ ಸಾಧ್ಯತೆ ಇದೆ.
ಬೆಂಗಳೂರು ಉತ್ತರ ಅಥವಾ ಬೆಂಗಳೂರು ಗ್ರಾಮಾಂತರ?
ಬಿಜೆಪಿ ಮೂಲಗಳ ಪ್ರಕಾರ, ಸುಮಲತಾ ಅಂಬರೀಶ್ ಜನಪ್ರಿಯತೆ ಕಳೆದುಕೊಂಡಿದ್ದಾರೆ ಹಾಗಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷವು ಮರುಚಿಂತನೆ ಮಾಡಲು ಒಂದು ಕಾರಣವಾಗಿದೆ. ಬಿಜೆಪಿ ಹೈಕಮಾಂಡ್ ಸುಮಲತಾ ಅವರನ್ನು ಸಮಾಧಾನಪಡಿಸಲು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ತಳ್ಳಲು ಪ್ಲ್ಯಾನ್ ಮಾಡುತ್ತಿದೆ,. ಸುಮಲತಾ ಅವರಿಗೆ ಕಾಂಗ್ರೆಸ್ ಹಾಲಿ ಸಂಸದ ಡಿ ಕೆ ಸುರೇಶ್ ಅಥವಾ ಬಿಜೆಪಿಯ ಉನ್ನತ ನಾಯಕ ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಪ್ರತಿನಿಧಿಸುವ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಸ್ಪರ್ಧಿಸುವಂತೆ ಮನವೊಲಿಸುವ ಸಾಧ್ಯತೆ ಇದೆ.
ಸುಮಲತಾ ಅವರ ಆಪ್ತ ಮೂಲಗಳ ಪ್ರಕಾರ, ಬಿಜೆಪಿಯ ಈ ಪ್ಲ್ಯಾನ್ನ್ನು ಸುಮಲತಾ ಒಪ್ಪುವುದಿಲ್ಲ ಮತ್ತು ಅವರು ಮಂಡ್ಯದಿಂದ ಮಾತ್ರ ಸ್ಪರ್ಧಿಸುತ್ತಾರೆ ಎಂದು ವಾದಿಸುತ್ತಾರೆ. ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧಿಸುವಂತೆ ಬಿಜೆಪಿ ಹೇಳಿದರೆ, ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸುಮಲತಾ ಯೋಚಿಸಿದ್ದಾರೆ. ಇತ್ತೀಚೆಗೆ ಮಂಡ್ಯದ ಬದಲು ಬೆಂಗಳೂರಿನ ನಿವಾಸದಲ್ಲಿ ಸುಮಲತಾ ಅವರು ತಮ್ಮ ಆತ್ಮೀಯರೊಂದಿಗೆ ಸಭೆ ನಡೆಸಿದ್ದರು. ಇದು ಅವರ ಕ್ಷೇತ್ರ ಬದಲಾಯಿಸುವ ವದಂತಿಯನ್ನು ಹರಡಲು ಕಾರಣವಾಯಿತು.
ಆದರೆ, ಬೆಂಗಳೂರು ಉತ್ತರದಿಂದ ಅಥವಾ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸುವ ಊಹಾಪೋಹಗಳನ್ನು ಸುಮಲತಾ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಸುಮಲತಾ, “ಕನ್ನಡದ ಸ್ಟಾರ್ ನಟ ದರ್ಶನ್ ಅವರು ಮಂಡ್ಯ ಮೂಲದವರಾಗಿದ್ದಾರೆ, ಅವರ ಬೆಂಬಲದಿಂದ 2019ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದಂತೆ ಮತ್ತೆ ಮಂಡ್ಯದಲ್ಲಿ ದರ್ಶನ್ ಬೆಂಬಲದಿಂದ ಗೆಲುವು ಸಾಧಿಸುತ್ತೇನೆ ಎಂದು ಹೇಳಿದ್ದಾರೆ.
ʼʼಬೆಂಗಳೂರು ಉತ್ತರ ಸೇರಿದಂತೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲ್ಲುವ ವಿಶ್ವಾಸವಿದೆ. ಆದರೆ, ನನ್ನ ಹುಟ್ಟೂರು ಮಂಡ್ಯವನ್ನು ಕಳೆದುಕೊಳ್ಳಲು ನಾನು ಬಯಸುವುದಿಲ್ಲ, ಏಕೆಂದರೆ ಇದು ನನ್ನ ಪತಿ ಅಂಬರೀಶ್ ಅವರ ಹುಟ್ಟೂರುʼʼ ಎಂದು ಹೇಳಿದ್ದಾರೆ.
ಕ್ಷೇತ್ರ ಮರೆತ ಸುಮಲತಾ
ಈಗ ಮಿಲಿಯನ್ ಡಾಲರ್ ಪ್ರಶ್ನೆ; ಸುಮಲತಾ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದಾರೆಯೇ?
ಮಂಡ್ಯ ಕ್ಷೇತ್ರದ ಜನರ ಎದುರು ಅಂದು ‘ಸ್ವಾಭಿಮಾನ’ಕ್ಕೆ ಮತ ನೀಡಿ ಎಂದು ಸೆರಗೊಡ್ಡಿ ಬೇಡಿಕೊಂಡಿದ್ದರು, ಜನರು ಕೂಡ 1.25 ಲಕ್ಷ ಮತಗಳ ಅಂತರದಿಂದ ಸುಮಲತ್ ಅವರನ್ನು ಗೆಲ್ಲಿಸಿದ್ದರು, ಆದರೆ ನಿಧಾನವಾಗಿ ಕ್ಷೇತ್ರದಲ್ಲಿ ಜನಪ್ರಿಯತೆ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
2019ರಲ್ಲಿ ಸುಮಲತಾ ಅವರ ಗೆಲುವಿನ ಗುಟ್ಟು ಅಡಗಿರುವುದು ಕಾಂಗ್ರೆಸ್ ವಿವೇಚನೆಯಿಂದ ನೀಡಿದ ಬೆಂಬಲ ಮತ್ತು ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಬೆಂಬಲದಿಂದ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ.
ಆ ಬಳಿಕ ಸುಮಲತಾ ಅವರು ಬಿಜೆಪಿಗೆ ಬೆಂಬಲ ನೀಡಿದರು. ಇದೀಗ ಬಿಜೆಪಿಯಿಂದ ಸ್ಪರ್ಧಿಸುವ ಮೂಲಕ ಆ ಸ್ಥಾನವನ್ನು ಉಳಿಸಿಕೊಳ್ಳಲು ಬಯಸಿದ್ದರು. ಮಂಡ್ಯದ ಮತದಾರರು ಸುಮಲತಾ ಅವರು ಆಯ್ಕೆಯಾದ ನಂತರ ಕ್ಷೇತ್ರವನ್ನು ಮರೆತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಅವರು ಕೊಟ್ಟ ಮಾತಿನಂತೆ ಮಂಡ್ಯದಲ್ಲಿ ನೆಲೆಸಿಲ್ಲ ಎಂದು ಆರೋಪಿಸಿದ್ದಾರೆ. ಅದು ಸ್ವಾಭಿಮಾನಕ್ಕೆ ಮತ ನೀಡಿ ಎಂದು ಮಂಡ್ಯದ ಜನರದೆರು ಸೆರಗೊಡ್ಡಿ ಬೇಡಿಕೊಂಡಿದ್ದ ಸುಮಲತಾ ಇಂದು ಕ್ಷೇತ್ರದ ಟಿಕೆಟ್ಗಾಗಿ ಬಿಜೆಪಿ ಎದುರು ಸೆರಗೊಡ್ಡಿ ನಿಂತಿದ್ದಾರೆ.
ಸ್ವಾಭಿಮಾನದ ಕಾರ್ಡ್ ಮತ್ತೆ ಕೆಲಸ ಮಾಡುತ್ತದೆಯೇ?
ಸುಮಲತಾ ಅವರು ಗೆದ್ದ ನಂತರ ಮಂಡ್ಯದಲ್ಲಿ ‘ಥ್ಯಾಂಕ್ಸ್ ಗಿವಿಂಗ್ ಕನ್ವೆನ್ಷನ್’ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ತಮ್ಮ ಭರವಸೆಯನ್ನು ಉಳಿಸಿಕೊಳ್ಳಲಿಲ್ಲ” ಎಂದು ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದ ರಾಣಿ ರುದ್ರೇಶ್ ವಿಷಾದಿಸುತ್ತಾರೆ.
ʼʼಸ್ಥಳೀಯರು ಅವರು ಕಾರ್ಯಕರ್ತರ ಪಡೆಯನ್ನು ನಿರ್ಮಿಸದೆ ದೊಡ್ಡಣ್ಣ, ದರ್ಶನ್, ರಾಕ್‌ಲೈನ್ ವೆಂಕಟೇಶ್ ಮತ್ತು ಇತರರನ್ನು ಒಳಗೊಂಡಿರುವ ಅವರ ಕೂಟವನ್ನು ಅವಲಂಬಿಸಿದ್ದಾರೆ ಎಂದು ಟೀಕಿಸುತ್ತಿದ್ದಾರೆ.
ಅಂಬರೀಶ್ ಅಭಿಮಾನಿಗಳ ಸಂಘದ ಕೆಲ ಸದಸ್ಯರನ್ನು ಹೊರತುಪಡಿಸಿದರೆ, ಯಾರೂ ಟಿಕೆಟ್ ನೀಡುವಂತೆ ಬಿಜೆಪಿ ಮೇಲೆ ಒತ್ತಡ ಹೇರುತ್ತಿಲ್ಲ' ಎನ್ನುತ್ತಾರೆ ಅಂಬರೀಶ್ ಅವರ ಜನ್ಮಸ್ಥಳ ದೊಡ್ಡರಸಿನಕೆರೆ ಗ್ರಾಮದ ರಾಜೇಗೌಡ.
ʼʼಮಂಡ್ಯದಿಂದ ಸ್ಪರ್ಧಿಸುವಂತೆ ಅವರ ಬೆಂಬಲಿಗರಿಂದ ಅಪಾರ ಒತ್ತಡವಿದ್ದು, ಕ್ಷೇತ್ರಕ್ಕೆ ಭಾವನಾತ್ಮಕವಾಗಿ ಅಂಟಿಕೊಂಡಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದರೆ ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದು ಖಚಿತ ಎಂದು ಸುಮಲತಾ ಪುನರುಚ್ಚರಿಸಿದ್ದಾರೆ.
ಮಹಿಳಾ ಮೀಸಲಾತಿ ಕೋಟಾದಲ್ಲಿ ಟಿಕೆಟ್ ಕೇಳುತ್ತಿರುವ ಸುಮಲತಾ
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳಲ್ಲಿ ಮೀಸಲಾತಿ ನೀಡುವ ಲೋಕಸಭೆಯಲ್ಲಿ ಅಂಗೀಕರಿಸಿದ ಮಸೂದೆಯ ಅಡಿಯಲ್ಲಿ ಸುಮಲತಾ ಅವರು ಬಿಜೆಪಿ ಟಿಕೆಟ್‌ಗೆ ಹಕ್ಕು ಚಲಾಯಿಸುತ್ತಿದ್ದಾರೆ.
ಮಾಧ್ಯಮ ಸಂವಾದವೊಂದರಲ್ಲಿ ಸುಮಲತಾ ಅವರು, ʼʼಪ್ರಧಾನಿ ನರೇಂದ್ರ ಮೋದಿಯವರ ಸಂಪೂರ್ಣ ಪ್ರಯತ್ನದಿಂದಾಗಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರದ ಅಡಿಯಲ್ಲಿ ಬಿಜೆಪಿ ಟಿಕೆಟ್ ಪಡೆಯುವ ವಿಶ್ವಾಸವಿದೆʼʼ ಎಂದು ಹೇಳಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಸುಮಲತಾ ಮತ್ತೆ ‘ಸ್ವಾಭಿಮಾನ’ ಕಾರ್ಡ್ ಹಾಕುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಈ ಬಾರಿಯೂ ಅದು ಕಾರ್ಯರೂಪಕ್ಕೆ ಬರುತ್ತದೆಯೇ? ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ದಿನಾಂಕ ಪ್ರಕಟಿಸಲು ಚುನಾವಣಾ ಆಯೋಗ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಮಂಡ್ಯ ಟಿಕೆಟ್ ಸುದ್ದಿ ಸದ್ದು ಮಾಡುತ್ತಿದೆ.