Loksabha Election 2024 | ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದಾರೆ ಆರು ಮಹಿಳೆಯರು
ಕಾಂಗ್ರೆಸ್ ಪಕ್ಷದ ಹುರಿಯಾಳುಗಳ ಎರಡನೇ ಪಟ್ಟಿ ಪ್ರಕಟವಾಗಿದ್ದು, ಕರ್ನಾಟಕದ ಎಲ್ಲಾ 28 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ. ವಿಶೇಷವೆಂದರೆ ಈ ಬಾರಿ ಪಕ್ಷದ ಆರು ಮಹಿಳಾ ನಾಯಕಿಯರು ಲೋಕಸಭಾ ಕಣಕ್ಕೆ ಧುಮುಕಿದ್ದಾರೆ!;
ಆರು ಮಂದಿ ಮಹಿಳೆಯರನ್ನು ಲೋಕಸಭಾ ಚುನಾವಣಾ ಕಣಕ್ಕೆ ಇಳಿಸುವ ಮೂಲಕ ಕಾಂಗ್ರೆಸ್ ಹೊಸ ದಾಖಲೆ ನಿರ್ಮಿಸಿದೆ.
ಈ ಪೈಕಿ ಪ್ರಿಯಾಂಕ ಜಾರಕಿಹೊಳಿ, ಪ್ರಭಾ ಮಲ್ಲಿಕಾರ್ಜುನ್, ಸಂಯುಕ್ತ ಪಾಟೀಲ್ ಹೊಸ ಮುಖಗಳಾದರೆ, ಸೌಮ್ಯರೆಡ್ಡಿ ವಿಧಾನ ಸಭಾ ಸದಸ್ಯರಾಗಿದ್ದವರು, 2023 ರ ವಿಧಾನ ಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಅಂತರ ಮತಗಳಿಂದ ಸೋಲನ್ನಪ್ಪಿದವರು. ಇದೇ ರೀತಿ ಗೀತಾ ಶಿವರಾಜ್ ಕುಮಾರ್ ಅವರು 2024 ರಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲನ್ನಪ್ಪಿದವರು. ಈಗ ಮತ್ತೆ ಗೆದ್ದು ಬರುವ ಛಲದಿಂದ ಕಣಕ್ಕಿಳಿದಿರುವವರು.
ಕರ್ನಾಟಕ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಐದು ಮಹಿಳೆಯರನ್ನು ಕಣಕ್ಕಿಳಿಸಿ ದಾಖಲೆ ನಿರ್ಮಿಸಿದೆ. ಈ ಐದು ಮಂದಿಯೂ ಹಿರಿಯ ನಾಯಕರ ಮತ್ತು ಸಂಪುಟ ಸಚಿವರ ಹತ್ತಿರದ ರಕ್ತ ಸಂಬಂಧಿಗಳಾಗಿದ್ದಾರೆ ಎನ್ನುವುದು ಗಮನಿಸಬೇಕಾದ ಅಂಶ.
ಪ್ರಕಟವಾಗಿರುವ ಪಟ್ಟಿಯ ಪ್ರಕಾರ ಸೌಮ್ಯ ರೆಡ್ಡಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದರೆ, ಡಾ. ಪ್ರಭಾ ಮಲ್ಲಿಕಾರ್ಜುನ್ ದಾವಣಗೆರೆ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಚಿಕ್ಕೋಡಿ ಕ್ಷೇತ್ರದಿಂದ ಪ್ರಿಯಾಂಕ ಜಾರಕಿಹೊಳಿ ಸ್ಪರ್ಧಿಸಿದರೆ, ಸಂಯುಕ್ತ ಪಾಟೀಲ್ ಬಾಗಲಕೋಟೆಯಿಂದ ಚುನಾವಣಾ ಕಣ ಪ್ರವೇಶಿಸುತ್ತಿದ್ದಾರೆ. ಮೊದಲ ಪಟ್ಟಿಯಲ್ಲಿಯೇ ಗೀತಾ ಶಿವರಾಜ್‌ಕುಮಾರ್ ಅವರ ಹೆಸರು ಪ್ರಕಟವಾಗಿದ್ದು ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಪ್ರಬಲ ಬಿಜೆಪಿ ಅಭ್ಯರ್ಥಿ ಬಿ. ವೈ ರಾಘವೇಂದ್ರ ಅವರನ್ನು ಎದುರಿಸಲಿದ್ದಾರೆ.
ವಿಧಾನ ಸಭೆಯ ಮಾಜಿ ಸದಸ್ಯೆ
ಸೌಮ್ಯ ರೆಡ್ಡಿ ಅವರು ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿಯಾಗಿದ್ದು, ಅವರು ಪ್ರಸಕ್ತ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದು, ನ್ಯೂಯಾರ್ಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಲಿತವರು.
2018 ರಿಂದ 2023 ರವರೆಗೆ ವಿಧಾನ ಸಭೆಯಲ್ಲಿ ಜಯನಗರ ವಿಧಾನ ಕ್ಷೇತ್ರವನ್ನು ಪ್ರತಿನಿಧಿಸಿದವರು. 2023 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ತೀರಾ ಅಲ್ಪ ಮತಗಳ ಅಂತರದಿಂದ ಸೋಲನ್ನಪ್ಪಿದವರು. ಜಯನಗರ ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವಶಾಲಿ ರಾಜಕಾರಣಿಯಾಗಿರುವ ಇವರು ಬಿಜೆಪಿಯ ತೇಜಸ್ವಿ ಸೂರ್ಯ ಅವರನ್ನು ಎದುರಿಸಲಿದ್ದಾರೆ.
ವೃತ್ತಿಯಿಂದ ವೈದ್ಯೆ, ಪ್ರವೃತ್ತಿಯಿಂದ ರಾಜಕಾರಣಿ
ದಾವಣಗೆರೆ ವಿಧಾನ ಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯುತ್ತಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ವೃತ್ತಿಯಿಂದ ವೈದ್ಯರಾದರೂ, ರಾಜಕಾರಣವನ್ನೇ ಹಾಸು ಹೊದ್ದುಕೊಂಡಿರುವ ಪ್ರಸಿದ್ಧ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಸೊಸೆಯಾದಂದಿನಿಂದ ರಾಜಕಾರಣದಲ್ಲಿ ಆಸಕ್ತಿ ಬೆಳೆಸಿಕೊಂಡವರು. ಪತಿ ಮಲ್ಲಿಕಾರ್ಜುನ್ ಹಾಗೂ ಮಾವ ಶಿವಶಂಕರಪ್ಪ ಅವರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ, ರಾಜಕಾರಣದ ಅನುಭವ ಪಡೆದವರು. ಅವರೇ ಈಗ ಚುನಾವಣೆಗೆ ಇಳಿದಿರುವುದರಿಂದ ದಾವಣಗೆರೆ ಚುನಾವಣಾ ಕಣ ರಂಗೇರಿದೆ. ಅವರು ಬಿಜೆಪಿಯ ಗಾಯಿತ್ರಿ ಸಿದ್ದೇಶ್ವರ್ ಅವರನ್ನು ಎದುರಿಸಿ ಕಣಕ್ಕಿಳಿದಿದ್ದಾರೆ. ಗಾಯಿತ್ರಿ ಸಿದ್ಧೇಶ್ವರ್ ಅವರು ನಾಲ್ಕು ಬಾರಿ ಸಂಸದ್ ಸದಸ್ಯರಾಗಿ, ಕೇಂದ್ರದ ಸಚಿವರೂ ಆಗಿದ್ದ ಜಿ ಎಸ್ ಸಿದ್ದೇಶ್ವರ್ ಅವರ ಪತ್ನಿ.
ಅಪ್ಪ ಎಂದರೆ ರಕ್ಷಣೆ: ಪ್ರಿಯಾಂಕ
ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಪ್ರಿಯಾಂಕ ಜಾರಕಿಹೊಳಿ ರಾಜ್ಯ ಸಂಪುಟ ಸಚಿವ ಹಾಗೂ ಮುಂಬೈ ಕರ್ನಾಟಕ ಭಾಗದ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಪುತ್ರಿ. ಈಗಾಗಲೇ ಅವರು ಚಿಕ್ಕೋಡಿ ಕ್ಷೇತ್ರದಿಂದ ಪ್ರಚಾರ ಆರಂಭಿಸಿದ್ದಾರೆ. ಪ್ರಿಯಾಂಕ ಪರವಾಗಿ ಆಕೆಯ ತಮ್ಮ ಕೂಡ ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಅವರ ತಂದೆಯ ಕ್ಷೇತ್ರವಾದ ಯಮಕನಮರಡಿ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಿಯಾಂಕ ಪ್ರಚಾರ ಆರಂಭ ಮಾಡಿದ್ದಾರೆ. ತಂದೆಯ ಬಗ್ಗೆ ಪ್ರಿಯಾಂಕಾಗೆ ಅಪಾರ ಪ್ರೀತಿ ಇದೆ. ಅಪ್ಪಂದಿರ ದಿನಾಚರಣೆ ನಿಮಿತ್ತ ಫೇಸ್ ಬುಕ್ ನಲ್ಲಿ ಅವರು ಹಂಚಿಕೊಂಡ ಮಾತುಗಳು ಇಲ್ಲಿ ಪ್ರಸ್ತುತ ಎನ್ನಿಸುತ್ತದೆ.
“ಅಪ್ಪ ಎಂದರೆ ರಕ್ಷಣೆ, ಅಮ್ಮ ಎಂದರೆ ವ್ಯಾತ್ಸಲ್ಯ ಎಂದೇ ವ್ಯಾಖ್ಯಾನಿಸಲಾಗುವ ಈ ಸಂಬಂಧದ ಬಗ್ಗೆ ಹೇಳುವುದು ಕಷ್ಟವಾದರೂ ಪ್ರತಿ ಮಗು ಅಪ್ಪನೊಂದಿಗೆ ಹೊಂದಿರುವ ಬಾಂಧವ್ಯವನ್ನು ಅನುಭವಕ್ಕೆ ಮಾತ್ರ ನಿಲುಕುವಂತದ್ದು. ಅಮ್ಮ ಎಂಬ ಪದಕ್ಕಿರುವಷ್ಟೇ ಅನಂತ ವಿಸ್ತಾರ ಅಪ್ಪನೆಂಬ ಪದಕ್ಕೂ ಇದೆ. ಅಪ್ಪನೆಂದರೆ ವಿಶ್ವಾಸ, ಭರವಸೆ. ಜೀವ ಕೊಟ್ಟು, ಜೀವನ ರೂಪಿಸಿದ ಅಪ್ಪ - ಅಮ್ಮಂದಿರ ದಿನ ಒಂದು ದಿನಕ್ಕೆ ಸೀಮಿತವಲ್ಲ. ಈ ಜಗತ್ತು ನಡೆಯುತ್ತಿರುವುದೇ ಅವರಿಂದ. ಎಲ್ಲ ಅಪ್ಪಂದಿರು ತಮ್ಮ ಮಕ್ಕಳು ಡಾಕ್ಟರ್, ಇಂಜೀನಿಯರ್ ಆಗಬೇಕೆಂಬ ಹಂಬಲ ಇಟ್ಟುಕೊಂಡಿರುವಾಗ ನಮ್ಮ ತಂದೆ ಸಮಾಜ ಸೇವಕರು ಮತ್ತು ರಾಜಕಾರಣಿಯೂ ಹೌದು, ಆದರೆ ಅವರಂತೆ ನಾನು ಕೂಡ ಸಮಾಜ ಸೇವಕನಾಗಬೇಕೆಂಬ ಅವರ ಆಸೆ. ಅವರ ಆಸೆಯಂತೆ ನಾನು ಅದೇ ಸನ್ಮಾರ್ಗದಲ್ಲಿ ನಡೆಯುತ್ತಿದ್ದು ನನಗೂ ಖುಷಿ ನೀಡಿದೆ. ಒಟ್ಟಾರೇ ಬದುಕು ರೂಪಿಸಿದ, ಜೀವನದ ಪಾಠ ಕಲಿಸಿ ಕಿರು ಬೆರಳ ಹಿಡಿದು ಮುನ್ನಡೆಸಿದ ಅಕ್ಕರೆಯ ಅಪ್ಪನಿಗೊಂದು ನನ್ನ ಕೃತಜ್ಞತೆ ಹಾಗೂ ವಿಶ್ವ ಅಪ್ಪಂದಿರ ದಿನಾಚರಣೆ ಶುಭಾಶಯಗಳು....
ಮಗಳನ್ನು ಗೆಲ್ಲಿಸಲೇಬೇಕೆಂಬ ಛಲದಲ್ಲಿ ಸತೀಶ್ ಜಾರಕಿಹೊಳಿ ಟೊಂಕಕಟ್ಟಿ ನಿಂತಿದ್ದಾರೆ.
ಸಂಯುಕ್ತ ಪಾಟೀಲ್ ಕಣದಲ್ಲಿ
ಇದೇ ರೀತಿ ಬಾಗಲಕೋಟೆಯಿಂದ ಸ್ಪರ್ಧಿಸುತ್ತಿರುವವರು ಸಂಯುಕ್ತ ಶಿವಾನಂದ ಪಾಟೀಲ್. ಸದ್ಯಕ್ಕೆ ಕರ್ನಾಟಕ ಪ್ರದೇಶ ಯೂಥ್ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿರುವ ಸಂಯುಕ್ತ ಪಾಟೀಲ್ ವಿಜಯಪುರ ಜಿಲ್ಲಾ ಕೇಂದ್ರ ಬ್ಯಾಂಕ್‌ನ ನಿರ್ದೇಶಕರೂ ಕೂಡ. ಅಪ್ಪನಿಂದ ರಾಜಕೀಯದ ಪಟ್ಟುಗಳನ್ನು ಕಲಿತಿರುವ ಸಂಯುಕ್ತ ತಮ್ಮ ಎದುರಾಳಿ ಬಿಜೆಪಿಯ ಗದ್ದಿಗೌಡರ್ ವಿರುದ್ಧ ಕಣಕ್ಕಿಳಿದಿದ್ದಾರೆ.
ಮಲೆನಾಡಿನಲ್ಲಿ ಬಂಗಾರಪ್ಪ ಪುತ್ರಿ
ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿದಿರುವ ಗೀತಾ ಶಿವರಾಜ್ ಕುಮಾರ್ ಕನ್ನಡದ ಖ್ಯಾತ ಚಿತ್ರ ನಟ, ತಾರಾ ನಟ ಶಿವರಾಜ್ ಕುಮಾರ್ ಅವರ ಪತ್ನಿ. ಈಕೆಯ ಸೋದರ ರಾಜ್ಯ ಸಚಿವ ಸಂಪುಟದ ಮಧು ಬಂಗಾರಪ್ಪ. ತಂದೆ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ನಾಯಕ ಸಾರೆಕೊಪ್ಪ ಬಂಗಾರಪ್ಪ.
ರಾಜಕಾರಣದಿಂದ ದೂರವಿದ್ದರೂ, ರಾಜಕಾರಣದ ಮೌಲ್ಯಗಳನ್ನು ಪ್ರೀತಿಸುವ ಎಲ್ಲ ಪಕ್ಷಗಳ ನಾಯಕರೊಂದಿಗೆ ಮಧುರ ಬಾಂಧವ್ಯವನ್ನಿಟ್ಟುಕೊಂಡಿದ್ದ, ಕನ್ನಡದ ದಂತಕತೆಯಂಥಾ ನಾಯಕ ಡಾ. ರಾಜ್ ಕುಮಾರ್ ಅವರ ಸೊಸೆ ಈಕೆ. 2014ರಲ್ಲಿ ಬಿಎಸ್ ಯಡಿಯೂರಪ್ಪ ವಿರುದ್ಧ ಜನತಾ ದಳದಿಂದ (ಜಾತ್ಯತೀತ) ಸ್ಪರ್ಧಿಸಿದ್ದ ಗೀತಾ ಶಿವರಾಜಕುಮಾರ್ ಅವರು 3,65,580 ಮತಗಳ ಅಂತರದಿಂದ ಸೋತಿದ್ದರು. ಆದರೆ ಈ ಬಾರಿ ಗೀತಾ ಶಿವರಾಜಕುಮಾರ್ ಅವರಿಗೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಬೆಂಬಲದ ಜೊತೆಗೆ ಕನ್ನಡ ಚಿತ್ರರಂಗದ ನೆರವೂ ದಕ್ಕಿದೆ.
ಉತ್ತರಕರ್ನಾಟಕದಿಂದ ಅಂಜಲಿ ನಿಂಬಾಳ್ಕರ್
ಉತ್ತರಕನ್ನಡ ಕ್ಷೇತ್ರದಿಂದ ಕಣಕ್ಕಿಳಿದಿರುವ ಅಂಜಲಿ ನಿಂಬಾಳ್ಕರ್ ಅವರು ಕಾಂಗ್ರೆಸ್ ನ ಅಧಿಕೃತ ವಾಕ್ತಾರರು. 2018 ರಿಂದ 2023 ರವರೆಗೆ ವಿಧಾನಸಭಾ ಸದಸ್ಯರಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ಕ್ಷೇತ್ರವನ್ನು ಪ್ರತಿನಿಧಿಸಿದವರು. ವೃತ್ತಿಯಿಂದ ವೈದ್ಯೆಯಾಗಿರುವ ಅಂಜಲಿ ನಿಂಬಾಳ್ಕರ್ ಇತ್ತೀಚೆಗೆ ರಾಜಕೀಯವನ್ನು ವೃತ್ತಿಯಾಗಿ ಸ್ವೀಕರಿಸಿದವರು. ಅವರು ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ಪತ್ನಿ.
ಅವರು ಸುದ್ದಿ ಮಾಡಿದ್ದು, The Karnataka Ministers Salaries and Allowances (Amendment) Bill, ರಡಿಯಲ್ಲಿ 2022 ರಲ್ಲಿ ಕರ್ನಾಟಕ ಸರ್ಕಾರ ಜನಪ್ರತಿನಿಧಿಗಳ ಸಂಬಳ ಸಾರಿಗೆ ಹೆಚ್ಚು ಮಾಡಿದ ಸಂದರ್ಭದಲ್ಲಿ. ಈ ಹಣವನ್ನು ರಾಜ್ಯದ ಜನರ ಬದುಕನ್ನು ಹಸನುಗೊಳಿಸಲು ಬಳಸಬೇಕೆಂದು ಒತ್ತಾಯಿಸಿ ಅವರು ಹೋರಾಟ ಕೂಡ ಮಾಡಿದ್ದರು. ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ವಿಧಾನ ಸೌಧಕ್ಕೆ ತಲುಪಿಸಲು ಪಾದಯಾತ್ರೆ ಮಾಡಿದ್ದ ಅಂಜಲಿ ಜನಾನುರಾಗಿಯೂ ಆಗಿದ್ದಾರೆ.