ಶಿವಮೊಗ್ಗ ಲೋಕಸಭಾ ಕ್ಷೇತ್ರ | ಈಶ್ವರಪ್ಪಗೆ ಎಲ್ಲಿಂದ ಬಂತು ಇಷ್ಟೊಂದು ಧೈರ್ಯ?

ಈಶ್ವರಪ್ಪ ಅವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಬಿಜೆಪಿಯ ಕೆಲವು ನಾಯಕರ ಪರೋಕ್ಷ ಬೆಂಬಲ, ಆಶೀರ್ವಾದವೂ ಇದೆ. ಹಾಗಿಲ್ಲದೇ ಹೋಗಿದ್ದರೆ, ಅವರ ಬಂಡಾಯವನ್ನು ಬಗ್ಗುಬಡಿಯುವುದು ಬಿಜೆಪಿ ಹೈಕಮಾಂಡಿಗೆ ದೊಡ್ಡ ಸಂಗತಿಯೇ ಆಗಿರಲಿಲ್ಲ. ಆದರೆ, ಹೈಕಮಾಂಡಿನ ಆ ನಿರ್ಲಕ್ಷ್ಯ ಕೂಡ ಮತ್ತೊಂದು ತಂತ್ರಗಾರಿಕೆ ಇರಬಹುದೆ?;

Update: 2024-04-12 13:24 GMT

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಎದುರಾಗಿರುವ ಪ್ರಬಲ ಬಂಡಾಯ ಶಮನದ ಎಲ್ಲಾ ಪ್ರಯತ್ನಗಳೂ ವಿಫಲವಾಗಿದ್ದು, ಬಿಜೆಪಿ ಪಕ್ಷ ಉಳಿಸುವ ಶಪಥದೊಂದಿಗೆ ಕಣಕ್ಕಿಳಿದಿರುವ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ  ʼಶಕ್ತಿ ಪ್ರದರ್ಶನʼದ ಮೂಲಕ ಶುಕ್ರವಾರ ಬೆಳಿಗ್ಗೆ ನಾಮಪತ್ರ ಸಲ್ಲಿಸಿದ್ದಾರೆ.

“ಬಿಜೆಪಿ ಸಂಸದೀಯ ಸಮಿತಿ ಸದಸ್ಯ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರರು ಭಾರತೀಯ ಜನತಾ ಪಾರ್ಟಿಯನ್ನು ತಮ್ಮ ಸ್ವಂತ ಆಸ್ತಿ ಮಾಡಿಕೊಂಡಿದ್ದಾರೆ. ಅವರ ಕಪಿಮುಷ್ಟಿಯಿಂದ ತಾವು ಕಟ್ಟಿ ಬೆಳೆಸಿದ ಪಕ್ಷವನ್ನು ಉಳಿಸುವ ಏಕೈಕ ಉದ್ದೇಶದಿಂದ ಅವರ ಪುತ್ರ ಬಿ ವೈ ರಾಘವೇಂದ್ರ ವಿರುದ್ಧ ಕಣಕ್ಕಿಳಿಯುತ್ತಿದ್ದೇನೆ. ಹಿಂದುತ್ವ ರಕ್ಷಣೆ ಮತ್ತು ಪ್ರಧಾನಿ ಮೋದಿಯವರ ಕೈ ಬಲಪಡಿಸಲು ನನಗೆ ಬೆಂಬಲಿಸಿ” ಎಂಬ ಮಾತನ್ನು ಬಂಡಾಯ ಘೋಷಿಸಿದ ದಿನದಿಂದಲೂ ಈಶ್ವರಪ್ಪ ಹೇಳುತ್ತಲೇ ಬಂದಿದ್ದಾರೆ.

ಶಿವಮೊಗ್ಗದಲ್ಲಿ ಶುಕ್ರವಾರ ಏಳೆಂಟು ಸಾವಿರ ಜನರನ್ನು ಸೇರಿಸಿ ಭಾರೀ ಮೆರವಣಿಗೆ ನಡೆಸಿದ ಈಶ್ವರಪ್ಪ, “ನಾನು ನಾಮಪತ್ರ ಸಲ್ಲಿಸುವುದಿಲ್ಲ ಎಂದು ಹೇಳುತ್ತಿದ್ದವರಿಗೆ ಇಂದು ಸೇರಿರುವ ಜನರೇ ಪ್ರತ್ಯುತ್ತರ” ಎಂದು ಯಡಿಯೂರಪ್ಪ ಮತ್ತು ಅವರ ಮಕ್ಕಳಿಗೆ ತಿರುಗೇಟು ನೀಡಿದ್ದಾರೆ.

ಬಂಡಾಯದ ಆರಂಭದಲ್ಲಿ ಈಶ್ವರಪ್ಪ ಅವರನ್ನು ಗಂಭೀರವಾಗಿ ಪರಿಗಣಿಸದ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹೈಕಮಾಂಡ್, ಕಳೆದ ವಾರ ಈಶ್ವರಪ್ಪ ದೆಹಲಿ ಭೇಟಿಯವರೆಗೂ ಅವರ ಮನವೊಲಿಸುವ ಯತ್ನ ನಡೆಸಿದ್ದರು. ಆದರೆ, ಅಮಿತ್ ಶಾ ಭೇಟಿಗೆ ಹೋಗಿ, ಭೇಟಿಯಾಗದೆ ಬರಿಗೈಲಿ ಬಂದ ಬಳಿಕ ಈಶ್ವರಪ್ಪ ತಮ್ಮ ವರಸೆ ಬದಲಿಸಿದರು. ಆವರೆಗೆ ಬಂಡಾಯದ ಹೇಳಿಕೆ ನೀಡುತ್ತಾ, ಹೈಕಮಾಂಡ್ ಕರೆಸಿ ಮಾತನಾಡಬಹುದು, ರಾಜಕೀಯವಾಗಿ ಏನಾದರೂ ಚೌಕಾಸಿ ನಡೆಯಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಅವರು, ಯಾವಾಗ ದೆಹಲಿಗೆ ಕರೆಸಿಕೊಂಡು ಅಮಿತ್ ಶಾ, ಭೇಟಿಯನ್ನೂ ಮಾಡದೆ ವಾಪಸ್ ಕಳಿಸಿದರೋ ಆಗಿನಿಂದ ಸಿಡಿದೆದ್ದರು. ಅಕ್ಷರಶಃ ಕ್ಷೇತ್ರದ ಮೂಲೆಮೂಲೆ ಸುತ್ತಿ ಬೆಂಬಲಿಗರು, ಸಂಘಪರಿವಾರದ ಕಾರ್ಯಕರ್ತರ ಬೆಂಬಲ ಕ್ರೋಡೀಕರಣದ ಗಂಭೀರ ಯತ್ನ ನಡೆಸಿದರು. ಆ ಬಳಿಕ ಹೈಕಮಾಂಡ್ ಮತ್ತು ಯಡಿಯೂರಪ್ಪ ಕೂಡ ಬಂಡಾಯ ಶಮನದ ಪ್ರಯತ್ನಗಳನ್ನು ಕೈಚೆಲ್ಲಿದರು.

ಹಾಗಾಗಿಯೇ ಗುರುವಾರ ಆ ಬಗ್ಗೆ ಪ್ರತಿಕ್ರಿಯಿಸಿದ್ದ ಬಿ ಎಸ್ ಯಡಿಯೂರಪ್ಪ, "ಈಶ್ವರಪ್ಪ ವಿಷಯದಲ್ಲಿ ಏನನ್ನೂ ಕೇಳಬೇಡಿ, ಅವರ ಬಗ್ಗೆ ಏನೂ ಮಾತನಾಡಲಾರೆ" ಎಂದಿದ್ದರು. ಮತ್ತೊಂದು ಕಡೆ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾಗುವ ನಿರೀಕ್ಷೆಯಲ್ಲಿ ಕಣಕ್ಕಿಳಿದಿರುವ ಅವರ ಪುತ್ರ ಬಿ ವೈ ರಾಘವೇಂದ್ರ ಕೂಡ, ಈಶ್ವರಪ್ಪ ವಿಷಯದಲ್ಲಿ ಮೌನಕ್ಕೆ ಜಾರಿದ್ದಾರೆ.

ಈ ನಡುವೆ ಈಶ್ವರಪ್ಪ ಅವರಿಗೆ ಪಕ್ಷದ ಹೈಕಮಾಂಡ್, ಏ.12ರವರೆಗೆ ಗಡುವು ನೀಡಿತ್ತು. ಆ ಮುನ್ನ ಅವರು ಕಣದಿಂದ ಹಿಂದೆ ಸರಿದು ಅಧಿಕೃತ ಅಭ್ಯರ್ಥಿಯ ಪರ ಪ್ರಚಾರ ಆರಂಭಿಸದೇ ಹೋದಲ್ಲಿ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಿದ್ದಾರೆ ಎಂಬ ಮಾತೂ ಬಿಜೆಪಿ ವಲಯದಲ್ಲಿತ್ತು. ಆದರೆ, ಈಶ್ವರಪ್ಪ, "ನನ್ನನ್ನು ಪಕ್ಷದಿಂದ ಇನ್ನೂ ಯಾಕೆ ಉಚ್ಛಾಟನೆ ಮಾಡಿಲ್ಲ ಎಂದೇ ಅರ್ಥವಾಗುತ್ತಿಲ್ಲ. ಉಚ್ಛಾಟನೆ ಮಾಡಿದ್ದರೆ ನಾನು ಇನ್ನಷ್ಟು ಗಟ್ಟಿಯಾಗಿ ಮಾತನಾಡಲು ಅನುಕೂಲವಾಗುತ್ತಿತ್ತು" ಎಂದು, ಹೈಕಮಾಂಡ್ ಗಡುವಿಗೆ ತಿರುಗೇಟು ನೀಡಿದ್ದರು. ಜೊತೆಗೆ ಹೈಕಮಾಂಡ್ ಗಡುವು ನೀಡಿತ್ತು ಎನ್ನಲಾಗುತ್ತಿರುವ ಏ.12ರಂದೇ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಹೋರಾಟದ ಕಹಳೆ ಮೊಳಗಿಸಿದ್ದಾರೆ.

ಈಶ್ವರಪ್ಪನವರ ಅಪರೂಪದ ವಿಶ್ವಾಸಕ್ಕೆ ಕಾರಣವೇನು?

ಸಾಮಾನ್ಯವಾಗಿ ಈಶ್ವರಪ್ಪ ನಾಲ್ಕು ದಶಕದ ತಮ್ಮ ರಾಜಕೀಯ ಜೀವನದುದ್ದಕ್ಕೂ ಪಕ್ಷ ಮತ್ತು ಅದರ ವರಿಷ್ಠರ ವಿರುದ್ಧ ಬಂಡಾಯ ಸಾರಿದವರಲ್ಲ. ಅದರಲ್ಲೂ ಸಂಘಪರಿವಾರದ ಆಣತಿಯನ್ನು ಮೀರಿದ ಉದಾಹರಣೆಗಳೇ ಇಲ್ಲ. ಅವರು 2010-12ರ ಅವಧಿಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ಅಧ್ಯಕ್ಷರಾಗಿ ಹೊಣೆ ವಹಿಸಿಕೊಂಡ ಸಂದರ್ಭವಿರಬಹುದು, ಬಳಿಕ ರಾಯಣ್ಣ ಬ್ರಿಗೇಡನ್ನು ಅರ್ಧಕ್ಕೇ ಬಿಟ್ಟು ಪಕ್ಷದ ಆಣತಿ ಪಾಲಿಸಿದ್ದಿರಬಹುದು, ಎರಡು ವರ್ಷದ ಹಿಂದೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಿರಬಹುದು, ಕೊನೆಗೆ ಕಳೆದ ವಿಧಾನಸಭಾ ಚುನಾವಣೆಯ ಟಿಕೆಟ್ ಬಿಟ್ಟುಕೊಟ್ಟು ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಿರಬಹದು,.. ಎಲ್ಲವೂ ಅವರು ತಮ್ಮ ಸ್ವಇಚ್ಛೆಯನ್ನು ಬದಿಗೊತ್ತಿ ಪಕ್ಷ ಮತ್ತು ಪರಿವಾರದ ಆಣತಿಯನ್ನು ರಾಮನ ಬಂಟನಂತೆ ಪಾಲಿಸಿದ ಘಟನೆಗಳೇ.

ಇಂತಹ ಆಜ್ಞಾನುಪಾಲಕ ಈಶ್ವರಪ್ಪ ಇದೀಗ ಪಕ್ಷದ ಹೈಕಮಾಂಡಿಗೇ ಸೆಡ್ಡು ಹೊಡೆದು ಬಂಡಾಯದ ಬಾವುಟ ಹಾರಿಸಿರುವುದು ಮತ್ತು ಚುನಾವಣಾ ಕಣಕ್ಕಿಳಿದ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವ ಪಣ ತೊಡುವ ಮಟ್ಟಿನ ಕೆಚ್ಚು ತೋರಿಸಲು ಏನು ಕಾರಣ? ಅವರ ಆ ಎದೆಗಾರಿಕೆಯ ಹಿಂದೆ ಏನಿದೆ? ಎಂಬುದು ಸದ್ಯ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ಸಂಗತಿ.

ತಮ್ಮ ಪುತ್ರನಿಗೆ ಟಿಕೆಟ್ ನಿರಾಕರಿಸಿದ್ದು ಅವರನ್ನು ರೊಚ್ಚಿಗೆಬ್ಬಿಸಿದ ಮೂಲ ಕಾರಣ ಎಂಬುದು ಗೊತ್ತಿರುವ ಸಂಗತಿ. ಆದರೆ, ಕಳೆದ ಎರಡು ವಾರಗಳಿಂದ ಈಶ್ವರಪ್ಪ ಅವರ ಹೇಳಿಕೆ, ಅವರ ಸಭೆಗಳಿಗೆ ಸಿಗುತ್ತಿರುವ ಬೆಂಬಲವನ್ನು ಗಮನಿಸಿದರೆ, ಅವರು ತಮ್ಮ ಪುತ್ರನಿಗೆ ಆದ ʼಅನ್ಯಾಯʼವನ್ನು ಮೀರಿ ಬೇರೆಯದೇ ಆದ ವ್ಯಾಪಕ ಸಂಗತಿಗಳತ್ತ ದೃಷ್ಟಿ ಹರಿಸಿದ್ದಾರೆ ಎಂಬುದು ಎದ್ದು ಕಾಣುವ ಸಂಗತಿ.

ಸ್ವತಃ ಈಶ್ವರಪ್ಪ ಅವರೇ ಹೇಳಿಕೊಂಡಿರುವಂತೆ, ಆರಂಭದಲ್ಲಿ ಅವರಿಗೆ ಜನ ತಮ್ಮ ಬಂಡಾಯವನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಅಳುಕು ಇತ್ತು. ಆದರೆ, ಕ್ರಮೇಣ, “ಕ್ಷೇತ್ರದ ಉದ್ದಗಲಕ್ಕೆ ತಮಗೆ ಸಂಘಪರಿವಾರದ ಭಜರಂಗ ದಳ, ವಿಎಚ್ಪಿ, ಶ್ರೀರಾಮಸೇನೆ ಮತ್ತು ಆರ್ ಎಸ್ ಎಸ್ ವಲಯದಲ್ಲಿ ಕೂಡ ಬೆಂಬಲ ಸಿಗುತ್ತಿದೆ. ಬಿಜೆಪಿಯೊಂದಿಗೆ ಸದಾ ಗುರುತಿಸಿಕೊಂಡಿರುವ ಬ್ರಾಹ್ಮಣ, ಲಿಂಗಾಯತ ಮತ್ತು ಒಕ್ಕಲಿಗರು ಕೂಡ ತಮಗೆ ಬೆಂಬಲ ಸೂಚಿಸುತ್ತಿದ್ದಾರೆ. ಜೊತೆಗೆ ಯಡಿಯೂರಪ್ಪ ಮತ್ತು ಅವರ ಮಕ್ಕಳ ರಾಜಕಾರಣದಿಂದ ಬೇಸತ್ತಿರುವ ಹಿಂದುಳಿದ ವರ್ಗಗಳು ಹಾಗೂ ರಾಷ್ಟ್ರಭಕ್ತ ಮುಸ್ಲಿಮರು ಕೂಡ ತಮ್ಮ ಬೆಂಬಲಕ್ಕೆ ನಿಂತಿದ್ದಾರೆ”.

ಈಶ್ವರಪ್ಪ ಅವರ ಈ ಮಾತು ಅವರ ನಾಮಪತ್ರ ಸಲ್ಲಿಕೆಯ ರೋಡ್‌ಶೋ ಮತ್ತು ವಿವಿಧ ಪ್ರಚಾರ ಸಭೆಗಳಲ್ಲಿ ನಿಜವೆನಿಸಿದೆ ಕೂಡ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು ಎಂಬುದರ ಹೊರತಾಗಿಯೂ ಸಾಗರ, ತೀರ್ಥಹಳ್ಳಿ, ಶಿವಮೊಗ್ಗ ನಗರ ಮುಂತಾದ ಕಡೆ ಅವರ ಪ್ರಚಾರ ಸಭೆಗಳಲ್ಲಿ ನಿರೀಕ್ಷೆಗೂ ಮೀರಿ ಜನ ಸೇರುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಹಿಂದುಳಿದ ಮತ್ತು ದಲಿತ ಸಮುದಾಯದ ಸ್ಥಳೀಯ ಮುಖಂಡರು ಆ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸಂಘಪರಿವಾರದ ಕಡೆಯಿಂದಲೂ ತಮಗೆ ಬೆಂಬಲವಿದೆ ಎಂದು ಅವರು ಹೇಳುತ್ತಿದ್ದಾರೆ. ಅವರ ಸಭೆಗಳಲ್ಲಿ ಪರಿವಾರದ ಕೆಲವರು ಕಾಣಿಸಿಕೊಳ್ಳುತ್ತಿರುವುದು ಕೂಡ ಸುಳ್ಳಲ್ಲ.

ಸಹಜವಾಗೇ ಈ ಜನಬೆಂಬಲ ಈಶ್ವರಪ್ಪ ಅವರಲ್ಲಿ ಈಗ ಹೆಚ್ಚಿನ ವಿಶ್ವಾಸ ಮೂಡಿಸಿದೆ.

ಪರೋಕ್ಷ ಆಶೀರ್ವಾದವೂ ಮತ್ತೊಂದು ಕಾರಣ?

ಜೊತೆಗೆ, ಈಶ್ವರಪ್ಪ ಅವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಬಿಜೆಪಿಯ ಕೆಲವು ನಾಯಕರ ಪರೋಕ್ಷ ಬೆಂಬಲ, ಆಶೀರ್ವಾದವೂ ಇದೆ. ಹಾಗಿಲ್ಲದೇ ಹೋಗಿದ್ದರೆ, ಅವರ ಬಂಡಾಯವನ್ನು ಬಗ್ಗುಬಡಿಯುವುದು ಬಿಜೆಪಿ ಹೈಕಮಾಂಡಿಗೆ ದೊಡ್ಡ ಸಂಗತಿಯೇ ಆಗಿರಲಿಲ್ಲ. ನೀರಾವರಿ, ಇಂಧನ, ಗ್ರಾಮೀಣಾಭಿವೃದ್ಧಿ ಖಾತೆಗಳ ಸಚಿವರಾಗಿದ್ದಾಗ ಅವರ ವಿರುದ್ಧ ಕೇಳಿಬಂದಿದ್ದ ಆರೋಪಗಳು, ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಪ್ರಕರಣದಂತಹ ಹಲವು ಅಸ್ತ್ರಗಳು ಇದ್ದವು. ಆದರೆ, ಅವು ಯಾವುದನ್ನೂ ಬಳಸದೆ ಹೈಕಮಾಂಡ್‌ ನಾಯಕರು ತೋರುತ್ತಿರುವ ನಿರ್ಲಕ್ಷ್ಯ ಕೂಡ ಒಂದು ತಂತ್ರಗಾರಿಕೆಯ ಭಾಗವಿರಬಹುದು. ಆ ಮೂಲಕ ಯಡಿಯೂರಪ್ಪ ಮತ್ತು ಅವರ ಕುಟುಂಬದ ಹಿಡಿತದಿಂದ ಪಕ್ಷವನ್ನು ಪಾರು ಮಾಡುವ ಈಶ್ವರಪ್ಪ ಅವರ ಘೋಷಣೆಗೆ ಹೈಕಮಾಂಡ್‌ ಕೂಡ ಪರೋಕ್ಷ ಸಮ್ಮತಿ ಸೂಚಿಸುತ್ತಿರಬಹುದು ಎಂಬುದು ಶಿವಮೊಗ್ಗ ಬಿಜೆಪಿಯ ಹಿರಿಯ ನಾಯಕರೊಬ್ಬರ ಅಭಿಪ್ರಾಯ.

ಅಲ್ಲದೆ, ರಾಜ್ಯ ಬಿಜೆಪಿಯಲ್ಲಿ ಕೂಡ ಈಶ್ವರಪ್ಪ ಅವರ ಬಂಡಾಯದ ಕುರಿತು ಯಡಿಯೂರಪ್ಪ, ವಿಜಯೇಂದ್ರ ಮತ್ತು ರಾಘವೇಂದ್ರ ಸೇರಿದಂತೆ ಅವರ ಕುಟುಂಬದವರು ಮಾತ್ರ ಪ್ರತಿಕ್ರಿಯಿಸುತ್ತಿದ್ದಾರೆ ವಿನಃ ಪ್ರತಿಪಕ್ಷ ನಾಯಕ ಆರ್ ಅಶೋಕ್, ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ಪ್ರಲ್ಹಾದ್ ಜೋಶಿ. ಸಿ ಟಿ ರವಿ, ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಯಾವ ನಾಯಕರೂ ಆ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ನೀಡದೆ ಮೌನ ವಹಿಸಿದ್ದಾರೆ. ಈ ಮೌನದಲ್ಲೇ ಮತ್ತೇನೋ ಸಂದೇಶ ಅಡಗಿದೆ ಎಂಬುದು ಶಿವಮೊಗ್ಗದ ಹಿರಿಯ ಪತ್ರಕರ್ತ ಎನ್ ರವಿಕುಮಾರ್ ಅವರ ಅಭಿಪ್ರಾಯ.

“ಒಂದು ಕಡೆ, ಧಾರವಾಡದಲ್ಲಿ ಪ್ರಲ್ಹಾದ್ ಜೋಷಿ ವಿರುದ್ಧ ಬಂಡಾಯ ಸಾರಿರುವ ದಿಂಗಾಲೇಶ್ವರ ಸ್ವಾಮೀಜಿಯವರನ್ನು ಮನವೊಲಿಸುವ ವಿಷಯದಲ್ಲಿ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾದ ಯಡಿಯೂರಪ್ಪ ಅವರು ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ ಎಂಬ ಅಸಮಾಧಾನ ಜೋಶಿ ಅವರಿಗಿದೆ. ಆ ಜಿಗುಟಿನ ಮತ್ತೊಂದು ತುದಿ ಶಿವಮೊಗ್ಗದ ಈಶ್ವರಪ್ಪ ಬಂಡಾಯದ ಹಿಂದಿರಬಹುದು. ಜೊತೆಗೆ, ಸಂಘ ಪರಿವಾರದ ಕಟ್ಟಾಳು ಆಗಿರುವ ಈಶ್ವರಪ್ಪ ಅವರಿಗೆ ಇಷ್ಟೊಂದು ಧೈರ್ಯ ಬರಲು ಆ ಪರಿವಾರದ ಪರೋಕ್ಷ ಆಶೀರ್ವಾದವೂ ಕಾರಣವಿರಬಹುದು. ಅದರಲ್ಲೂ ಯಡಿಯೂರಪ್ಪ ಅವರ ಸಾಂಪ್ರದಾಯಿಕ ವಿರೋಧಿ ಬಣದ ನೇತೃತ್ವ ವಹಿಸಿರುವ ದೆಹಲಿಯ ಪ್ರಭಾವಿ ನಾಯಕರೊಬ್ಬರ ಬಣದಲ್ಲಿ ಈಶ್ವರಪ್ಪ ಗುರುತಿಸಿಕೊಂಡಿದ್ದರು ಎಂಬ ಅಂಶವನ್ನು ಪರಿಗಣಿಸಿದರೆ, ಬಿಡಿ ಬಿಡಿ ರೇಖೆಗಳಿಗೆ ಒಂದು ರೂಪ ಬರಲಿದೆ” ಎನ್ನುವುದು ʼದ್ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ರವಿಕುಮಾರ್ ಅವರ ವಿಶ್ಲೇಷಣೆ.

ಆರ್ ಎಸ್ ಎಸ್ ಆಂತರಿಕ ಸಮೀಕ್ಷೆ ಕೂಡ ಈಶ್ವರಪ್ಪ ಪರ?

ಈ ನಡುವೆ, ರಾಜ್ಯದಲ್ಲಿ ಇತ್ತೀಚೆಗೆ ಆರ್ ಎಸ್ ಎಸ್ ಖಾಸಗಿ ಸಂಸ್ಥೆಯ ಮೂಲಕ ನಡೆಸಿದೆ ಎನ್ನಲಾಗಿರುವ ಸಮೀಕ್ಷೆಯಲ್ಲಿ ಶಿವಮೊಗ್ಗದಲ್ಲಿ ಪಕ್ಷ ಮತ್ತು ಪರಿವಾರದ ತಳಮಟ್ಟದ ಕಾರ್ಯಕರ್ತರಲ್ಲಿ ಗಣನೀಯ ಪ್ರಮಾಣದಲ್ಲಿ ಈಶ್ವರಪ್ಪ ಪರ ಬೆಂಬಲವಿದೆ ಎಂಬ ಸಂಗತಿ ಹೊರಬಿದ್ದಿದೆ. ಅದರಲ್ಲೂ ಮುಖ್ಯವಾಗಿ ಈಶ್ವರಪ್ಪ ಹಿಂದುತ್ವದ ಪ್ರಬಲ ದನಿ ಮತ್ತು ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ವಿಷಯದಲ್ಲಿ ಅವರು ಎತ್ತಿರುವ ಪ್ರಶ್ನೆಗಳು ಇಡೀ ಪರಿವಾರದ ದನಿ ಎಂಬುದನ್ನು ಆ ಸಮೀಕ್ಷೆ ಕೂಡ ಧ್ವನಿಸಿದೆ ಎನ್ನಲಾಗುತ್ತಿದೆ.

ಆದರೆ, ಮೋದಿ ಎಂಬ ನಿರ್ಣಾಯಕ ಅಂಶ ಈ ಸಹಮತವನ್ನು ಮೀರಿ ಬಿಜೆಪಿಯತ್ತ ಮತ ಸೆಳೆಯಲೂಬಹುದು. ಆ ಗುಟ್ಟನ್ನು ಬಲ್ಲವರಂತೆ ಈಶ್ವರಪ್ಪ ಮೋದಿ ಫೋಟೋ ಮತ್ತು ಅವರ ಹೆಸರನ್ನು ಬಳಸಿಕೊಂಡೇ ಮತ ಯಾಚನೆ ಮಾಡುತ್ತಿದ್ದಾರೆ. ಅಲ್ಲದೆ, ಮೋದಿಗಾಗಿಯೇ ತಾವು ಚುನಾವಣಾ ಕಣಕ್ಕಿಳಿದಿರುವುದಾಗಿ ಪುನರುಚ್ಛರಿಸುತ್ತಲೇ ಇದ್ದಾರೆ.

ಒಟ್ಟಾರೆ, ಶಿವಮೊಗ್ಗದಲ್ಲಿ ಕಣಕ್ಕಿಳಿದಿರುವ ಈಶ್ವರಪ್ಪ ಸದ್ಯಕ್ಕಂತೂ ಅಪರೂಪದ ದಿಟ್ಟತನ ತೋರುತ್ತಿದ್ದಾರೆ. ಅದರ ಹಿಂದಿನ ಪ್ರೇರಕ ಶಕ್ತಿಗಳು ಹಲವು ಎಂಬುದನ್ನು ಬಲ್ಲ ಶಿವಮೊಗ್ಗದ ಮತದಾರ, ಅವರ ಈ ಬಂಡಾಯ ಎಷ್ಟು ಗಟ್ಟಿ ಎಂಬುದನ್ನು ಈಗಲೇ ನಿರ್ಧರಿಸಲಾಗದು ಎಂಬ ಕಾದುನೋಡುವ ಎಚ್ಚರವನ್ನೂ ಮರೆತಿಲ್ಲ!

Tags:    

Similar News