ಕೇಸರಿ v/s ಕಾವಿ | ಜೋಶಿ ಸೋಲಿಸಲು ಪಣ ತೊಟ್ಟ ದಿಂಗಾಲೇಶ್ವರ ಸ್ವಾಮೀಜಿ

ʻʻಈಗಾಗಲೇ ನಮ್ಮ ಹೋರಾಟ ರಾಜ್ಯ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ಸಂಚಲನ ಉಂಟುಮಾಡೇದ. ಅದರಿಂದ ಅವರ (ಜೋಶಿ) ಆತ್ಮವಿಶ್ವಾಸ ಕುಗ್ಗೇದ ಅನ್ನೋದನ್ನ ಜನರು ನೋಡಿದಾರ. ಇನ್ನು ಸ್ಪರ್ಧೆ ಮಾಡ್ತೀವಿ ಅಂದ್ರ ಅವರ ಗತಿ ಏನಾಗಾಬಾರದು? ಅವರಿಗೆ ಭಯ ಶುರು ಆಗೇದʼʼ ಎಂದು ಸ್ವಾಮೀಜಿ ಹೇಳಿದರು

Update: 2024-04-04 12:02 GMT

ಹುಬ್ಬಳ್ಳಿ-ಧಾರವಾಡ ಲೋಕಸಭಾ ಕಣಕ್ಕೆ ಶಿರಹಟ್ಟಿಯ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಎಂಟ್ರಿ ಕೊಟ್ಟ ಬಳಿಕ ಚುನಾವಣಾ ಅಖಾಡ ರಂಗೇರಿದೆ.

ನಾಲ್ಕು ಬಾರಿ ಕ್ಷೇತ್ರದಲ್ಲಿ ವಿಜಯಮಾಲೆ ಧರಿಸಿದ ಪ್ರಲ್ಹಾದ್‌ ಜೋಶಿಗೆ ಸೋಲಿನ ರುಚಿ ಉಣಬಡಿಸಲು ಲಿಂಗಾಯತ ಸ್ವಾಮೀಜಿ ಪಣ ತೊಟ್ಟಿದ್ದಾರೆ. ಇದು ಈಗ ʻಕೇಸರಿ V/s ಕಾವಿ ಯುದ್ಧʼ ಎನ್ನುವಂತಹ ಸ್ಥಿತಿ ನಿರ್ಮಾಣ ಮಾಡಿದೆ.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ಹೆಚ್ಚಿದ್ದು, ಇದೀಗ ಸ್ವಾಮೀಜಿಗೆ ಕ್ಷೇತ್ರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಹಾಗಾಗಿ ಸೋಲಿಲ್ಲದ ಸರದಾರನಂತಿದ್ದ ಪ್ರಲ್ಹಾದ್‌ ಜೋಶಿ ಅವರಿಗೆ ಎದೆಯಲ್ಲಿ ಸ್ವಾಮೀಜಿ ನಡುಕ ಹುಟ್ಟಿಸಿರುವುದು ಸುಳ್ಳಲ್ಲ.

ಲಿಂಗಾಯತರ ನೆಲದಲ್ಲಿ ಲಿಂಗಾಯತ ನಾಯಕ ಗೆಲುವು ಕಂಡಿರುವುದು ವಿರಳಾತಿ ವಿರಳ, ಪ್ರತಿಬಾರಿ ಬಿಜೆಪಿ ನಾಯಕ ಜೋಶಿ ವಿರುದ್ಧ ಕಾಂಗ್ರೆಸ್‌ ಪಕ್ಷ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್‌ ನೀಡುತ್ತಿತ್ತು. ಆದರೆ ಮತದಾರರು ಮಾತ್ರ ಸಮುದಾಯಕ್ಕಿಂತ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಹಾಗಾಗಿಯೇ ಸತತ ನಾಲ್ಕು ಬಾರಿ ಜೋಶಿ ಈ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ.

ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಪ್ರಲ್ಹಾದ್ ಜೋಶಿ, 2004 ರಿಂದ 2019ರವರೆಗೆ ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಸತತವಾಗಿ ಗೆಲುವಿನ ದಾಖಲೆ ಬರೆದಿದ್ದಾರೆ. 2004ರಲ್ಲಿ ಬಿಎಸ್ ಪಾಟೀಲ್ ವಿರುದ್ಧ, 2009ರಲ್ಲಿ ಮಂಜುನಾಥ್ ಕುನ್ನೂರು ವಿರುದ್ಧ, 2014 ಹಾಗೂ 2019ರಲ್ಲಿ ವಿನಯ್ ಕುಲಕರ್ಣಿ ವಿರುದ್ಧ ಜೋಶಿ ಗೆಲುವು ಸಾಧಿಸಿದ್ದರು. ಜೋಶಿಯವರ ಪ್ರತಿಸ್ಪರ್ಧಿಗಳೆಲ್ಲರೂ ಲಿಂಗಾಯತ ಸಮುದಾಯಕ್ಕೆ ಸೇರಿದವರೇ. ಆದರೆ ಈ ಬಾರಿ ಅದೇ ಲಿಂಗಾಯತ ಸಮುದಾಯದ ಪ್ರಭಾವಿ ಸ್ವಾಮೀಜಿಯೊಬ್ಬರು ಜೋಶಿ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ. ಜೋಶಿ ಗೆಲುವಿಗೆ ತೊಂದರೆಯಾಗದು ಎಂದು ಮೇಲ್ನೋಟಕ್ಕೆ ಕಾಣಬಹುದು. ಆದರೆ ಸ್ವಾಮೀಜಿ ಅಸಂಖ್ಯಾತ ಶಿಷ್ಯಬಳಗ ಹೊಂದಿದ್ದಾರೆ ಎನ್ನುವುದು ಪ್ರಮುಖವಾದ ವಿಚಾರವಾಗಿದೆ. ಜೊತೆಗೆ ಜೋಶಿಯಿಂದಾಗಿ ತಮ್ಮ ಸಮುದಾಯ ಸೇರಿದಂತೆ ಹಲವು ಬಹುಸಂಖ್ಯಾತ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂಬುದನ್ನೇ ಸ್ವಾಮೀಜಿ ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದಾರೆ.

ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಬಹುತೇಕ ಖಚಿತ

"ಚುನಾವಣೆಗೆ ಸ್ಪರ್ಧೆ ಮಾಡುವಂತೆ ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಆಗಬೇಕೆಂದು ಹೇಳಿದ್ದಾರೆ. ಉತ್ತರ ಭಾರತದ ರೀತಿಯಲ್ಲಿ ದಕ್ಷಿಣ ಭಾರತದಲ್ಲಿ ಸ್ವಾಮೀಜಿಗಳು ರಾಜಕಾರಣಕ್ಕೆ ಬರಬೇಕೆಂದು ಭಕ್ತರು ಸಲಹೆ ನೀಡಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ನೀವೇ ಬರಬೇಕು ಎಂಬುದು ಒಕ್ಕೊರಲಿನ ಅಭಿಪ್ರಾಯವಾಗಿದೆ" ಎಂದು ಹೇಳುವ ಮೂಲಕ ದಿಂಗಾಲೇಶ್ವರ ಸ್ವಾಮೀಜಿ ಪಕ್ಷೇತರ ಅಭ್ಯರ್ಥಿಯಾಗಿ ಧಾರವಾಡದಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತ ಎಂಬ ಸಂದೇಶ ನೀಡಿದ್ದಾರೆ.

ʻʻನಮ್ಮ ಹಿರಿಯ ಗುರುಗಳು ಮತ್ತು ಮಠದ ಭಕ್ತರ ಅಭಿಪ್ರಾಯ ಕೇಳಬೇಕಿದೆ. ಅತಿ ಶೀಘ್ರದಲ್ಲಿ ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಅಂತಿಮ ನಿರ್ಧಾರವನ್ನು ಪ್ರಕಟಿಸುತ್ತೇನೆ. ನಾನು ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ, ಯಾವ ಕಾರಣಕ್ಕೂ ನಾನು ಹೋರಾಟದಿಂದ ಹಿಂದೆ ಸರಿಯಲ್ಲʼʼ ಎಂದು ಈಗಾಗಲೇ ದಿಂಗಾಲೇಶ್ವರ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಜೋಶಿ ವಿರುದ್ಧ ಹೋರಾಟ ನಡೆಸಿರುವ ದಿಂಗಾಲೇಶ್ವರ ಸ್ವಾಮೀಜಿ ಅವರು ʻದ ಫೆಡೆರಲ್-ಕರ್ನಾಟಕʼದೊಂದಿಗೆ ಮಾತನಾಡಿ, ʻʻನಮ್ಮ ಹೋರಾಟದ ರೂಪರೇಷಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಚುನಾವಣೆ ಸ್ಪರ್ಧೆ ಮಾಡುವ ನಿರ್ಧಾರದ ಬಗ್ಗೆ ತೀರ್ಮಾನ ತಗೆದುಕೊಳ್ಳಲು ನಾವು ಸ್ವತಂತ್ರರಲ್ಲ. ಅದಕ್ಕೆ ಇನ್ನೂ ಕೆಲವು ಚಿಂತನ-ಮಂಥನ ಸಭೆಗಳು ನಡೆಯಬೇಕಿದೆ" ಎಂದರು.

ʻʻಕ್ಷೇತ್ರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾವು ಜನರಲ್ಲಿ ಮೂಡಿಸುತ್ತಿರುವ ಜಾಗೃತಿ ಕೆಲಸ ಕೈಗೂಡಿದೆ. ನಾನು ಸ್ಪರ್ಧೆ ಮಾಡ್ಬೇಕು ಅನ್ನೋದು ಬಹುಸಂಖ್ಯಾತರ ಅಭಿಪ್ರಾಯ ಅದ. ರೈತ ಸಂಘಟನೆಯವರು ನಮಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಎಸ್ಸಿ-ಎಸ್ಟಿ ಸಮುದಾಯದ ನಾಯಕರೊಬ್ಬರು ಈ ಚುನಾವಣೆದಾಗ ಸ್ಪರ್ಧೆ ಮಾಡಬೇಕು ಅನ್ಕೊಂಡಿದ್ದರು, ಆದ್ರ ಅವರೂ ಈಗ ಸ್ಪರ್ಧೆಯಿಂದ ಹಿಂದೆ ಸರಿದು ನಮ್ಮ ಬೆಂಬಲಕ್ಕೆ ನಿಂತಿದಾರ, ಅದೇ ರೀತಿ ಕುನ್ನೂರ ಅವರು ಕೂಡ ನಾವು ಎಲೆಕ್ಷನ್‌ಗೆ ನಿಲ್ಲೋದಾದ್ರ ಅವರು ನಿಲ್ಲುದಿಲ್ಲ ಅಂತ ಹೇಳಿದಾರ. ಇಷ್ಟೆಲ್ಲ ಜನರು ಬದಲಾವಣೆ ಬಯಸಿದಾರ, ಹಂಗಂತ ನಾವು ಸ್ಪರ್ಧೆ ಮಾಡ್ತೀವಿ ಅಂತ ಈಗಲೇ ಹೇಳಾಕಾಗಲ್ಲʼʼ ಎಂದರು.

ʻʻನಾವು ಚುನಾವಣೆ ಸ್ಪರ್ಧೆಗೆ ಇಳಿದ್ರ ಅದರ ಸಾಧಕ-ಬಾಧಕಗಳ ಬಗ್ಗೆನೂ ಯೋಚನೆ ಮಾಡಕಲಾ.. ಹಂಗಾಗಿ ಆ ಬಗ್ಗೆ ಎಲ್ಲ ಕಡೆಗಳಲ್ಲಿ ಸಭೆಗಳು ನಡಿತಿದಾವ. ಆದಷ್ಟು ಬೇಗ ನಿರ್ಧಾರ ತಿಳಸ್ತೀವಿʼʼ ಎಂದು ಹೇಳಿದರು.

ʻʻಈಗಾಗಲೇ ನಮ್ಮ ಹೋರಾಟ ರಾಜ್ಯ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ಸಂಚಲನ ಉಂಟುಮಾಡೇದ. ಅದರಿಂದ ಅವರ (ಜೋಶಿ) ಆತ್ಮವಿಶ್ವಾಸ ಕುಗ್ಗೇದ ಅನ್ನೋದನ್ನ ಜನರು ನೋಡಿದಾರ. ಇನ್ನು ಸ್ಪರ್ಧೆ ಮಾಡ್ತೀವಿ ಅಂದ್ರ ಅವರ ಗತಿ ಏನಾಗಾಬಾರದು? ಅವರಿಗೆ ಭಯ ಶುರು ಆಗೇದʼʼ ಎಂದರು.

ʼಜೋಶಿ ವಿರುದ್ಧ ಗೆಲವು ಸಾಧಿಸುವವರೆಗೂ ಮಾಲೆ ಹಾಕಲ್ಲʼ ಎನ್ನುವ ತಮ್ಮ ಹೇಳಿಕೆಗೆ ಪ್ರತಿಕ್ರಿಸಿದ ಸ್ವಾಮೀಜಿ, ʻʻಮಾಲೆ ಹಾಕೋದು ಸಂತೋಷಕ್ಕಾಗಿ ಅದು ಶಿಷ್ಟಾಚಾರ ಆಗಬಾರದು. ಜನರು ದುಃಖದಲ್ಲಿದ್ದಾಗ ನಾವು ಮಾಲೆ ಹಾಕ್ಕೋಂಡ ಮಾಡೋದ ಏನದ? ಮಾಲೆ ಹಾಕೋದು ಗೆದ್ದಮ್ಯಾಗ ಹೌದಲ್ರೀ? ಹಂಗಾಗಿ ನಾವು ಅವರ ವಿರುದ್ಧ ಗೆದ್ದಮ್ಯಾಲೆನ ಹಾರ ಹಾಕಸ್ಕೋತಿವಿʼʼ ಎಂದು ದಿಂಗಾಲೇಶ್ವರ ಸ್ವಾಮೀಜಿ ಸ್ಪಷ್ಟಪಡಿಸಿದರು.

ಈ ವಿಚಾರವಾಗಿ ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ ಅವರು ʻದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ್ದು, ʻʻಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಹೆಚ್ಚ ಅದಾವ, ಅವು ಇಲ್ಲಿಯ ತನಕ ಬಿಜೆಪಿಯ ಸಾಂಪ್ರದಾಯಕ ಮತಗಳಾಗಿದ್ದವು. ಆದ್ರ, ಈಗ ಆ ಸಮುದಾಯದ ಮತಗಳು ವಿಂಗಡನೆಯಾಗುವ ಸಾಧ್ಯತೆ ಹೆಚ್ಚಿಗೆ ಐತಿ. ಲಿಂಗಾಯತ ಸಮುದಾಯದವರಾದ ಜಗದೀಶ್ ಶೆಟ್ಟರ್ ಅವರನ್ನ ಬೆಳಗಾವಿಗೆ ಸ್ಥಳಾಂತರ ಮಾಡಿರುವುದರಿಂದ ಹುಬ್ಬಳ್ಳಿ-ಧಾರವಾಡ ಕ್ಷೇತ್ರದ ಲಿಂಗಾಯತ ಸಮುದಾಯ ಅಸಮಧಾನಗೊಂಡಾರ. ಅವರೆಲ್ಲರ ಧ್ವನಿಯಾಗಿ ಈಗ ದಿಂಗಾಲೇಶ್ವರ ಸ್ವಾಮೀಜಿ ಎದ್ದು ನಿಂತಿದಾರ.." ಎಂದು ಹೇಳಿದರು.

"ಜೋಶಿಯವರು ದಿವಂಗತ ಅನಂತಕುಮಾರ್ ಅವರಂತೆ ಅಲ್ಲ. ಅನಂತಕುಮಾರ್ ಅವರು ಹಿಂದುತ್ವಾದಿಯಾಗಿದ್ರೂ ಕೂಡ ದ್ವೇಷ ಕಾರುವ ಮನುಷ್ಯ ಆಗಿರ್ಲಿಲ್ಲ. ಆದರೆ ಜೋಶಿ ಪ್ರಖರ ಹಿಂದುತ್ವವಾದಿಯಾಗಿ ಮುಸ್ಲಿಂ ವಿರೋಧಿ ನಡೆ ಅನುಸರಿಸ್ತಿದಾರ. ಹಂಗಾಗಿ ಜನರು ಜೋಶಿ ವಿರುದ್ಧ ಅಸಮಧಾನಗೊಂಡಾರ, ಅಷ್ಟ ಅಲ್ಲದೇ ಅವರು ಕೇಂದ್ರ ಮಂತ್ರಿ ಆದ್ಮ್ಯಾಲೆ ಅವರ ಆಸ್ತಿ-ಪಾಸ್ತಿ ವಿಪರೀತ ಹೆಚ್ಚಾಗದ. ಇದು ಕೂಡ ಪಕ್ಷದೊಳಗ ಅಸಮಾಧಾನ ಹೆಚ್ಚಾಗಾಕ ಕಾರಣ ಆಗೇದ" ಎಂದು ಅವರು ವಿಶ್ಲೇಷಿಸಿದರು.

"ಯಡಿಯೂರಪ್ಪ ಮತ್ತ ಜೋಶಿಗೆ ಮೊದಲಿನಿಂದ ಹಾವು-ಮುಂಗೂಸಿಯಂಗ ಅದ. ಸಿಎಂ ಸ್ಥಾನಕ್ಕ ಬಿಎಸ್‌ವೈ ರಾಜೀನಾಮೆ ಕೊಡಾಕ ಕಾರಣಾನೇ ಈ ಜೋಶಿ... ಬಿಜೆಪಿಯ ಹೈಕಮಾಂಡ್ ನಿರ್ಧಾರಗಳ ಬದಲಾವಣೆಯಿಂದ ಯಡಿಯೂರಪ್ಪನ ಮಗ ಪಕ್ಷದ ಅಧ್ಯಕ್ಷ ಆದ, ಹಂಗಾಗಿ ಅವರ ಆಟ ಶುರು ಆಗೇದ ಈಗ. ಶಿವಮೊಗ್ಗದಾಗ ಯಡಿಯೂರಪ್ಪನವರ ಮಗನ ವಿರುದ್ಧ ಈಶ್ವರಪ್ಪ ಬಂಡಾಯ ಏಳಾಕ ಜೋಶಿ ಕುಮ್ಮಕ್ಕು ಕೊಟ್ಟಾರ. ಅದೇ ರೀತಿ, ಜೋಶಿ ವಿರುದ್ಧ ಸ್ವಾಮೀಜಿ ಬಂಡಾಯ ಸಾರಿರುವದರ ಹಿಂದ ಯಡಿಯೂರಪ್ಪ ಇರುವ ಸಾಧ್ಯತೆಗಳನ್ನೂ ತಳ್ಳಿಹಾಕುವಂಗಿಲ್ಲ. ಇಷ್ಟೆಲ್ಲಾ ವಿರೋಧಗಳ ನಡುವೆ ಜೋಶಿ ಗೆಲ್ಲೋದು ಕಷ್ಟ ಅದ, ಇದರ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳೋಕೆ ಚಾನ್ಸ್ ಐತಿ. ಯಾಕಂದ್ರ ಕಾಂಗ್ರೆಸ್ ಕೂಡ ಪ್ಲ್ಯಾನ್ ಮಾಡಿಯೇ ಈ ಬಾರಿ ಲಿಂಗಾಯತ ಪ್ರಾಬಲ್ಯವಿರುವ ಧಾರವಾಡದಲ್ಲಿ ಲಿಂಗಾಯತ ಬದಲಿ ‌ಒಬಿಸಿಯವರಿಗೆ ಟಿಕೆಟ್ ಕೊಟ್ಟಾರ. ಇದರಿಂದ ಒಬಿಸಿ ಓಟು ಬಿಜೆಪಿಗೆ ಹಂಚಿಹೋಗದಂಗ ಪ್ಲ್ಯಾನ್ ಮಾಡ್ಯಾರ. ಲಿಂಗಾಯತರನ್ನ ಬಿಟ್ರ ಅಲ್ಲಿ ಕುರುಬ ಮತ್ತು ಮುಸ್ಲಿಂ ಮತಗಳು ಹೆಚ್ಚಿಗೆ ಅದಾವ, ಇವೆಲ್ಲಾ ಕಾಂಗ್ರೆಸ್ ಬುಟ್ಟಿಗೆ ಬಿದ್ರ ಜೋಶಿಗೆ ಸೋಲು ನಿಶ್ಚಿತ ಆಗೋದ್ರಾಗ ಡೌಟ್ ಇಲ್ಲʼʼ ಎಂದು ಸನತ್ ಕುಮಾರ್ ಬೆಳಗಲಿ ವಿವರಿಸಿದರು.

Tags:    

Similar News