ಕಾಂಗ್ರೆಸ್‌ ಸ್ಟಾರ್ ಪ್ರಚಾರಕ ಪಟ್ಟಿಯಲ್ಲಿ ರೆಬೆಲ್‌ ನಾಯಕ ಬಿಕೆ ಹರಿಪ್ರಸಾದ್‌ ಹೆಸರು

Update: 2024-04-01 08:14 GMT

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ 40 ನಾಯಕರ ಹೆಸರುಗಳನ್ನು ಸೇರಿಸಲಾಗಿದೆ. ಈ ಪಟ್ಟಿಯ ಗಮನ ಸೆಳೆಯುವ ಅಂಶವೆಂದರೆ, ಮುಖ್ಯಮಂತ್ರಿ ವಿರುದ್ದವೇ ಬಹಿರಂಗ ಟೀಕೆ ಮಾಡಿದ್ದ ಪಕ್ಷದ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರಿಗೂ ಅವಕಾಶ ಕಲ್ಪಿಸಲಾಗಿದೆ.

ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಬಿಕೆ ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿಗಾಗಿಯೇ ಸುದ್ದಿಯಲ್ಲಿದ್ದರು. ಈ ಅಸಮಾಧಾನಕ್ಕೆ ಕಾರಣ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿರುವುದು ಎನ್ನುವುದು ಗುಟ್ಟೇನಾಗಿರಲಿಲ್ಲ.

ಕಳೆದ ಸೆಪ್ಟಂಬರ್‌ನಲ್ಲಿ ಬಿಕೆ ಹರಿಪ್ರಸಾದ್ ಅವರು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ಆಯೋಜಿಸಿದ್ದರು.

ಈ ಸಮಾವೇಶದಲ್ಲಿ ಬಿಕೆ ಹರಿಪ್ರಸಾದ್ ಅವರು, ʼʼನನ್ನನ್ನು ಮಂತ್ರಿ ಮಾಡದಿದ್ದಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುತ್ತೇನೆʼʼ ಎಂದು ವ್ಯಂಗ್ಯವಾಗಿ ತಮ್ಮ ಅಸಮಾಧಾನ, ಬೇಸರ, ಸಿಟ್ಟನ್ನು ಹೊರಹಾಕಿದ್ದರು.

ಪಂಚೆ ಒಳಗೆ ಖಾಕಿ ಚೆಡ್ಡಿ ಹಾಕಿದ್ರೆ ಸಮಾಜವಾದಿ ಆಗಲ್ಲ

ಹಿಂದಿನ ಯಾವ ಮುಖ್ಯಮಂತ್ರಿಗಳೂ ಜಾತಿ ರಾಜಕಾರಣ ಮಾಡಲಿಲ್ಲ. ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಜಾತಿ ರಾಜಕಾರಣ ಮಾಡಲಿಲ್ಲ. ಪಂಚೆ ಹಾಕಿಕೊಂಡು ವಾಚ್ ಕಟ್ಟಿಕೊಂಡು ಖಾಕಿ ಚಡ್ಡಿ ಹಾಕೊಂಡು, ಸಮಾಜವಾದಿ ಅಂತಾ ಹೇಳಿದರೆ ಆಗುವುದಿಲ್ಲ ಎಂದು ಬಹಿರಂಗ ಸಭೆಯಲ್ಲಿಯೇ ಹರಿಪ್ರಸಾದ್‌, ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು.

ʼʼಸೈಟು ಕಳ್ಳತನ ಮಾಡಿ ಮಾರುವವನು ನನ್ನ ಬಗ್ಗೆ ಮಾತನಾಡುತ್ತಾನೆ. ಆದರೆ ಸ್ವಾಭಿಮಾನ ಬಿಟ್ಟು ಸಹನೆ ಕಳೆದುಕೊಂಡವನಲ್ಲ ನಾನು. ದೇವರಾಜ ಅರಸು ಕಾರಿನಲ್ಲಿ ಕುಳಿತರೆ ದೇವರಾಜ ಅರಸು ಆಗಲ್ಲ. ದೇವರಾಜ ಅರಸು ಚಿಂತನೆ ಇರಬೇಕುʼʼ ಎಂದು ಹರಿಪ್ರಸಾದ್‌ ಕಿಡಿಕಾರಿದ್ದರು.

"ಡಾ ಜಿ ಪರಮೇಶ್ವರ್ ಅವರನ್ನು ಸಿಎಂ ಇರಲಿ ಡಿಸಿಎಂ ಸ್ಥಾನದಿಂದಲೂ ಡಿಪ್ರಮೋಟ್ ಮಾಡಲಾಯಿತು. ಅತಿ ಹೆಚ್ಚು ಅವಧಿಗೆ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರಿಗೆ ಸಿಎಂ ಆಗಲು ಎಲ್ಲಾ ಅರ್ಹತೆಗಳಿದ್ದವು. ಆದರೆ ಅವರನ್ನು ಮಾಡಲಿಲ್ಲ. ಈಗಲೂ ಸರ್ಕಾರದಲ್ಲಿ ದಲಿತರನ್ನು ಉಪಮುಖ್ಯಮಂತ್ರಿ ಮಾಡಬಹುದಿತ್ತು. ಸತೀಶ್ ಜಾರಕಿಹೊಳಿಯನ್ನು ಮಾಡಬಹುದಿತ್ತು, ಆದರೆ ಮಾಡಿಲ್ಲʼʼ ಎಂದು ಹರಿಪ್ರಸಾದ್ ದಲಿತರು ಮತ್ತು ಹಿಂದುಳಿದ ಸಮುದಾಯಗಳಿಗೆ ಸಿದ್ದರಾಮಯ್ಯ ಅವರಿಂದ ಅನ್ಯಾಯವಾಗುತ್ತಿದೆ ಎಂದು ದನಿ ಎತ್ತಿದ್ದರು.


ಬಿ ಕೆ ಹರಿಪ್ರಸಾದ್ ಅವರ ಟೀಕೆಗೆ ಪ್ರತಿಕ್ರಿಯೆ ನೀಡಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದರು. "ಹರಿಪ್ರಸಾದ್ ನನ್ನ ಹೆಸರು ಹೇಳಿದ್ದಾರಾ? ಇಲ್ಲ ಅಲ್ವಾ, ಹೀಗಾಗಿ ನಾನು ಪ್ರತಿಕ್ರಿಯೆ ನೀಡಲ್ಲʼʼ ಎಂದು ಹೇಳಿದ್ದರು.

ಸಿದ್ದರಾಮಯ್ಯ ಹಾಗೂ ಹರಿಪ್ರಸಾದ್ ನಡುವಿನ ಸಂಘರ್ಷ ರಾಜ್ಯ ಕಾಂಗ್ರೆಸ್‌ಗೆ ತೀವ್ರ ಮುಜುಗರ ಉಂಟು ಮಾಡಿತ್ತು. ಬಳಿಕ ಇಬ್ಬರು ನಾಯಕರ ನಡುವಿನ ಸಂಧಾನಕ್ಕೆ ಮುಂದಾಗಿದ್ದ ಎಐಸಿಸಿ, ಹರಿಪ್ರಸಾದ್‌ ಅವರನ್ನು ದೆಹಲಿಗೆ ಕರೆಸಿಕೊಂಡು ಬಹಿರಂಗ ಹೇಳಿಕೆ ನೀಡದಂತೆ ಮತ್ತು ಸರ್ಕಾರಕ್ಕೆ ಮುಜಗರ ತರದಂತೆ ಸೂಚಿಸಿತ್ತು. ಆ ಬಳಿಕ ಹರಿಪ್ರಸಾದ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ತಮ್ಮ ವಾಗ್ದಾಳಿಗೆ ಬ್ರೇಕ್‌ ಹಾಕಿದ್ದರು.

Tags:    

Similar News