ಮೈಸೂರು-ಚಾಮರಾಜನಗರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಿದ್ದರಾಮಯ್ಯ ʼರಣತಂತ್ರʼ

ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ʼತಾಯ್ನಾಡುʼ. ಅಲ್ಲಿಯೇ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸದಿದ್ದರೆ, ಉಳಿದ ಕಡೆ ಗೆದ್ದರೂ ಸೋತಂತೆ ಎಂದು ಕಾಂಗ್ರೆಸ್ಸಿಗರೇ ಹೇಳುತ್ತಿದ್ದಾರೆ. ಹಾಗಾಗಿ ಮೈಸೂರಿನಲ್ಲಿ ಪಕ್ಷದ ಅಭ್ಯರ್ಥಿ ಕಾಂಗ್ರೆಸ್‌ ವಾಕ್ತಾರ ಹಾಗೂ ಸಿದ್ದರಾಮಯ್ಯನವರ ಬಲಗೈ ಬಂಟರೆನ್ನಿಸಿಕೊಂಡಿರುವ ಎಂ. ಲಕ್ಷ್ಮಣ ಅವರನ್ನು ಹೇಗಾದರೂ ಮಾಡಿ ಗೆಲ್ಲಿಸಿಕೊಂಡೇ ಬರಬೇಕೆಂಬ ಛಲಹೊತ್ತು ಸಿದ್ದರಾಮಯ್ಯ ಟೊಂಕಕಟ್ಟಿ ನಿಂತಿದ್ದಾರೆ

Update: 2024-03-29 02:00 GMT

ರಾಜ್ಯದ ೨೮ ಕ್ಷೇತ್ರಗಳ ಪೈಕಿ ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ ಚಿತ್ರದುರ್ಗ ಕ್ಷೇತ್ರಗಳನ್ನು ಹೊರತು ಪಡಿಸಿ, ಉಳಿದ 24ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ಪ್ರಚಾರವನ್ನೂ ಆರಂಭಿಸಿದ್ದಾರೆ. ಇಪ್ಪತ್ತೆಂಟು ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದರೂ, ಇಡೀ ಕಾಂಗ್ರೆಸ್ ತನ್ನ ಗಮನವನ್ನು ಮೈಸೂರು ಕ್ಷೇತ್ರದ ಮೇಲೆ ಕೇಂದ್ರೀಕರಿಸಿದಂತೆ ಕಾಣುತ್ತಿದೆ.

ಕಾರಣವಿಷ್ಟೇ. ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ʼತಾಯ್ನಾಡುʼ. ಅಲ್ಲಿಯೇ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸದಿದ್ದರೆ, ಉಳಿದ ಕಡೆ ಗೆದ್ದರೂ ಸೋತಂತೆ ಎಂದು ಕಾಂಗ್ರೆಸ್ಸಿಗರೇ ಹೇಳುತ್ತಿದ್ದಾರೆ. ಹಾಗಾಗಿ ಮೈಸೂರಿನಲ್ಲಿ ಪಕ್ಷದ ಅಭ್ಯರ್ಥಿ ಕಾಂಗ್ರೆಸ್‌ ವಾಕ್ತಾರ ಹಾಗೂ ಸಿದ್ದರಾಮಯ್ಯನವರ ಬಲಗೈ ಬಂಟರೆನ್ನಿಸಿಕೊಂಡಿರುವ ಎಂ. ಲಕ್ಷ್ಮಣ ಅವರನ್ನು ಹೇಗಾದರೂ ಮಾಡಿ ಗೆಲ್ಲಿಸಿಕೊಂಡೇ ಬರಬೇಕೆಂಬ ಛಲಹೊತ್ತು ಸಿದ್ದರಾಮಯ್ಯ ಟೊಂಕಕಟ್ಟಿ ನಿಂತಿದ್ದಾರೆ.

ಅಷ್ಟೇ ಅಲ್ಲ. ಚಾಮರಾಜನಗರದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆ ಕೂಡ ಸಿದ್ದರಾಮಯ್ಯನವರ ಮೇಲಿದೆ. ಚಾಮರಾಜನಗರದಿಂದ, ಸಿದ್ದರಾಮಯ್ಯನವರ ಗೆಳೆಯ, ಬಹುಕಾಲದ ಸಂಗಾತಿ ಹಾಗೂ ಸಚಿವ ಎಚ್‌ ಸಿ ಮಹದೇವಪ್ಪ ಅವರ ಪುತ್ರ ಸುನಿಲ್‌ ಬೋಸ್‌ ಕಣಕ್ಕಿಳಿಯುವುದು ಹೆಚ್ಚುಕಡಿಮೆ ಖಚಿತವಾಗಿದ್ದು, ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ʼಜವಾಬ್ದಾರಿಯುತ ಸಚಿವʼರ ಮೇಲಿದ್ದರೂ, ಗೆಲ್ಲಿಸಲೇಬೇಕಿರುವ ನೈತಿಕ ಹೊಣೆಗಾರಿಕೆ ಸಿದ್ದರಾಮಯ್ಯನವರ ಮೇಲಿದೆ.

ಹಾಗಾಗಿ ಮೈಸೂರು ಮತ್ತು ಚಾಮರಾಜನಗರ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಸಿದ್ದರಾಮಯ್ಯ ತಮ್ಮ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ವಿಶ್ರಾಂತಿ ನೆಪದಲ್ಲಿ ಅವರು ಹೆಗ್ಗಡದೇವನ ಕೋಟೆ ತಾಲ್ಲೂಕಿನ ಕಬಿಜಿ ಹಿನ್ನೀರು ಪ್ರದೇಶದಲ್ಲಿರುವ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರೂ, ಮೂರು ರಾತ್ರಿ ಹಾಗೂ ಎರಡು ಹಗಲು ಸಿದ್ದರಾಮಯ್ಯ ಎರಡೂ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗಾಗಿ ರಾಜಕೀಯ ತಂತ್ರಗಳನ್ನು ಹೆಣೆದಿದ್ದು ಇಂದು ರಹಸ್ಯವಾಗೇನೂ ಉಳಿದಿಲ್ಲ.

ಸಿದ್ದರಾಮಯ್ಯನವರ ಸಮೀಪವರ್ತಿಗಳ ಪ್ರಕಾರ ಕಾಂಗ್ರೆಸ್‌ ಮೈಸೂರು ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ಸ್ವೀಕರಿಸಿದೆ. ಇದು ಸಿದ್ದರಾಮಯ್ಯನವರ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ತವರು ಕ್ಷೇತ್ರದಲ್ಲೇನಾದರೂ ಸೋತರೆ ಸಿದ್ದರಾಮಯ್ಯನವರಿಗೆ ತೀವ್ರತರ ಮುಖಭಂಗವಾಗಲಿದೆ. ಹಾಗಾಗಿ ವಿಶ್ರಾಂತಿ ನೆಪದಲ್ಲಿ ಅವಿಶ್ರಾಂತ ರಾಜಕೀಯ ಚಟುವಟಿಕೆಯಲ್ಲಿ ಸಿದ್ದರಾಮಯ್ಯ ತೊಡಗಿದ್ದು ಆಶ್ಚರ್ಯವನ್ನೇನೂ ಹುಟ್ಟಿಸುವುದಿಲ್ಲ.

ಮೈಸೂರಿನಲ್ಲಿ ರಾಜಕೀಯ ತಂತ್ರಗಾರಿಕೆ

ಈ ಮೂರು ದಿನಗಳಲ್ಲಿ ಸಿದ್ದರಾಮಯ್ಯ ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಯ ೧೬ ವಿಧಾನಸಭಾ ಕ್ಷೇತ್ರಗಳ ಇಂಚಿಂಚೂ ಮಾಹಿತಿ ಸಂಗ್ರಹ ಮಾಡಿದ್ದಾರೆ. ಶಾಸಕರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು, ಜಿಲ್ಲಾ ಅಧ್ಯಕ್ಷರೊಂದಿಗೆ ಖಾಸಗಿ ಹೊಟೆಲ್ ನಲ್ಲಿ ಸಭೆಯನ್ನು ನಡೆಸಿದ್ದಾರೆ. ಬಿಜೆಪಿಯ ಅಭ್ಯರ್ಥಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಬಗ್ಗೆ ಯಾರೊಬ್ಬರೂ, ಲಘುವಾಗಿ ಮಾತನಾಡಕೂಡದೆಂದು ಎಚ್ಚರಿಕೆ ನೀಡಿದ್ದಾರೆ. ಆ ಮೂಲಕ ಬಿಜೆಪಿಯವರಿಗೆ ಅನುಕಂಪ, ಭಾವುಕ ಮತಗಳ ಲಾಭವಾಗದಂತೆ ತಂತ್ರಗಾರಿಕೆ ಮಾಡಿದ್ದಾರೆ. ಶಾಸಕರಿಗೆ ಆಯಾ ವಿಧಾನ ಸಭೆ ಕ್ಷೇತ್ರದಲ್ಲಿ ಹೆಚ್ಚಿನ ಮತಗಳಿಸಿಕೊಡುವ ಜಬಾಬ್ದಾರಿಯನ್ನು ಹೊರಿಸಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡರನ್ನು ಚುನಾವಣಾ ಉಸ್ತುವಾರಿಯಾಗಿ ನೇಮಿಸಲು ಸಮ್ಮತಿ ಸೂಚಿಸಿದ್ದಾರೆ. ಬಿಜೆಪಿ ತನ್ನ ಪ್ರಭಾವಿ ಒಕ್ಕಲಿಗ ನಾಯಕ ಪ್ರತಾಪ ಸಿಂಹ ಅವರನ್ನು ಕೈಬಿಟ್ಟು ರಾಜವಂಶಕ್ಕೆ ಮಣೆಹಾಕಿರುವ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯಕ್ಕಾಗಿರುವ ಅಸಮಾಧಾನದ ಲಾಭ ಪಡೆದುಕೊಳ್ಳಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಸಿದ್ದರಾಮಯ್ಯ ನವರ ನಂತರ ಇಂದು (ಮಾರ್ಚಿ ೨೮) ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ಡಿ. ಕೆ ಶಿವಕುಮಾರ್‌ ಅವರು ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಟಿಕಾಣಿ ಹೂಡಿ ಒಕ್ಕಲಿಗ ಮತಗಳನ್ನು ಕ್ರೂಢೀಕರಿಸುವ ತೀವ್ರ ಪ್ರಯತ್ನ ನಡೆಸಿದ್ದಾರೆ.

ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಲು ವಿಶೇಷ ಎಚ್ಚರ ವಹಿಸಬೇಕೆಂದು ಸೂಚಿಸಿದ್ದಾರೆ. ಈ ಮೂಲಕ ಪಕ್ಷಕ್ಕೆ ಬರುವ ಇತರ ಪಕ್ಷಗಳ ಮುಖಂಡರನ್ನು ಗೌರವದಿಂದ ಘನತೆಯಿಂದ ನಡೆಸಿಕೊಳ್ಳಬೇಕೆಂದು ಸೂಚಿಸಿದ್ದಾರೆ. ಗೆಲುವಿಗೆ ಸಾಧ್ಯವಿರುವ ಯಾವುದೇ ಸಣ್ಣ ಪ್ರಯತ್ನವನ್ನೂ ಬಿಡದಂತೆ ಯೋಜಿಸಿರುವ ಸಿದ್ದರಾಮಯ್ಯ, ಈ ಪ್ರಯತ್ನದ ಮುಂದುವರಿದ ಭಾಗವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ತೆರೆಯ ಹಿಂದಿನ ಪ್ರಯತ್ನ ನಡೆಸಿದ್ದಾರೆ ಎನ್ನುವುದು ಕೂಡ ಇಂದು ಗುಟ್ಟಾಗಿ ಉಳಿದಿಲ್ಲ.

ಮೈಸೂರು ಲೋಕಸಭಾ ಕ್ಷೇತ್ರ ಒಂದು ಕಾಲಕ್ಕೆ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಆದರೆ ೧೯೯೮ರಿಂದೀಚೆಗೆ ಆ ಭದ್ರಕೋಟೆ ಛಿದ್ರವಾಗಿದೆ. ೨೦೧೪ ಹಾಗೂ ೨೦೧೯ರಲ್ಲಿ ಬಿಜೆಪಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಿತ್ತು. ಆದರೆ ಬಿಜೆಪಿ ಪ್ರತಾಪ ಸಿಂಹ ಅವರನ್ನು ಕಡೆಗಣಿಸಿ, ಯದುವೀರ ಒಡೆಯರ್‌ ಅವರಿಗೆ ಅವಕಾಶ ನೀಡಿರುವುದರಿಂದ ಈ ಬಾರಿ ಒಕ್ಕಲಿಗರ ವಿರೋಧವನ್ನು ಕಟ್ಟಿಕೊಂಡಿದೆ ಎಂದು ಕಾಂಗ್ರೆಸ್ಸಿಗರ ಸಮರ್ಥನೆ.

ಒಟ್ಟು ೨೭ ಲಕ್ಷ ಮತದಾರರಿರುವ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರ ಸಂಖ್ಯೆ ನಾಲ್ಕು ಲಕ್ಷ ಎಂದು ಅಂದಾಜಿಸಲಾಗಿದೆ. ಈ ಸಂಖ್ಯೆ ಸಣ್ಣದಾದರೂ, ಮತದಾನದ ತೂಗುಯ್ಯಾಲೆಯಲ್ಲಿ ಭಾರ ಯಾವ ಕಡೆ ಬೀಳಬಹುದೆಂಬುದನ್ನು ಒಕ್ಕಲಿಗರು ನಿರ್ಧರಿಸುತ್ತಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ ನ ಅಭ್ಯರ್ಥಿ ಎಂ ಲಕ್ಷ್ಮಣ್‌ ಸಿವಿಲ್‌ ಎಂಜಿನೀಯರ್‌, ಘನ ತ್ಯಾಜ್ಯ ನಿರ್ವಹಣೆಯ ಅಧ್ಯಯನ ಮಾಡಿರುವ ಅವರು ಅದರಲ್ಲಿ ಪಿಎಚ್ ಡಿ ಗಳಿಸಿದ್ದಾರೆ. ಹಾಗಾಗಿ ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗುತ್ತಾರೆಂದು ಕಾಂಗ್ರೆಸ್‌ ಪ್ರಚಾರ ಮಾಡುತ್ತಿದೆ. ಮೈಸೂರಿನ ಎಂಟು ವಿಧಾನ ಸಭಾ ಕ್ಷೇತ್ರಗಳ ಪೈಕಿ ಐದು ಕಾಂಗ್ರೆಸ್ ನವರ ಕೈಯಲ್ಲಿದೆ. ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಐದು ಪ್ರಮುಖ ಗ್ಯಾರಂಟಿಗಳ ಆಧಾರದ ನೆರವಿನಿಂದ ಬಹುಮತಗಳಿಸಿದ ಕಾಂಗ್ರೆಸ್‌ ಗ್ಯಾರಂಟಿಗಳ ಬಲ ಪ್ರದರ್ಶನಕ್ಕೆ ಮೈಸೂರಿನಲ್ಲಿಯೂ ಸಜ್ಜಾಗಿದೆ.

ಸಿದ್ದರಾಮಯ್ಯ ಮೈಸೂರು ಮತ್ತು ಚಾಮರಾಜನಗರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹೆಣೆದಿರುವ ರಣತಂತ್ರ ಫಲ ನೀಡುವುದೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಜೂನ್‌ ೪ ರವರಗೆ ಕಾಯುವುದು ಮತದಾರರಿಗೆ ಹಾಗೂ ಕಾತುರದಿಂದ ಕಾಯುತ್ತಿರುವ ರಾಜಕೀಯ ಪಕ್ಷಗಳಿಗೆ ಅನಿವಾರ್ಯ.

Tags:    

Similar News