Loksabha Election 2024 | ಮತದಾರರಿಗೆ ಮಾಂಸದೂಟ: ಎಚ್‌ಡಿಕೆ ತೋಟದ ಮನೆ ಮೇಲೆ ಇಸಿ ದಾಳಿ !

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹೊಸ್ತಡ್ಕು (ಮಾಂಸದೂಟ) ನಡೆಯುತ್ತಿದೆ. ಇದರ ನಡುವೆ ರಾಜಕೀಯವಾಗಿಯೂ ಬಾಡೂಟದ ನೆಪದಲ್ಲಿ ಮತದಾರರಿಗೆ ಆಮಿಷವೊಡ್ಡಲಾಗುತ್ತಿದೆ ಎಂಬ ದೂರಿನ ಮೇಲೆ ಚುನಾವಣಾಧಿಕಾರಿಗಳು ಜೆಡಿಎಸ್‌ ನಾಯಕ ಎಚ್‌ ಡಿಕೆ ಅವರ ಬಿಡದಿಯ ತೋಟದ ಮನೆಯ ಮೇಲೆ ಬುಧವಾರ ದಾಳಿ ನಡೆಸಿದ್ದಾರೆ.;

Update: 2024-04-10 10:28 GMT
ಮಾಂಸ, ಮದ್ಯ

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹೊಸ್ತಡ್ಕು (ಮಾಂಸದೂಟ) ನಡೆಯುತ್ತಿದೆ. ಇದರ ನಡುವೆ ರಾಜಕೀಯವಾಗಿಯೂ ಬಾಡೂಟದ ನೆಪದಲ್ಲಿ ಮತದಾರರಿಗೆ ಆಮಿಷವೊಡ್ಡಲಾಗುತ್ತಿದೆ ಎಂಬ ದೂರಿನ ಮೇಲೆ ಚುನಾವಣಾಧಿಕಾರಿಗಳು ಜೆಡಿಎಸ್‌ ನಾಯಕ ಎಚ್‌ ಡಿಕೆ ಅವರ ಬಿಡದಿಯ ತೋಟದ ಮನೆಯ ಮೇಲೆ ಬುಧವಾರ ದಾಳಿ ನಡೆಸಿದ್ದಾರೆ.

ಎಚ್‌.ಡಿ ಕುಮಾರಸ್ವಾಮಿ ಅವರಿಗೆ ಸೇರಿದ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಮತದಾರರಿಗೆ ಔತಣಕೂಟ (ಮಾಂಸ, ಮದ್ಯ) ಆಯೋಜಿಸಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದ್ದು, ಇದರ ಬೆನ್ನಲ್ಲೇ ಚುನಾವಣಾಧಿಕಾರಿಗಳು ಕುಮಾರಸ್ವಾಮಿ ಅವರ ಬಿಡದಿ ತೋಟದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಿಡದಿ ತೋಟದ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಬುಧವಾರ 250ಕ್ಕೂ ಹೆಚ್ಚು ಜನರಿಗೆ ಬಾಡೂಟ ಆಯೋಜಿಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಔತಣಕೂಟದಲ್ಲಿ ಕಾರ್ಯಕರ್ತರಿಗೆ ಮಾಂಸ, ಮದ್ಯ ನೀಡಲಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಇದಾದ ಕೆಲವೇ ನಿಮಿಷಕ್ಕೆ ಬಿಡದಿ ತೋಟದ ಮನೆಗೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದು, ಔತಣ ಕೂಟದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆಯೇ ಎನ್ನುವುದನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಚಿಕನ್, ಮಟನ್ ಹಾಗೂ ಬಿರಿಯಾನಿ ಸೇರಿದಂತೆ ಹಲವು ಆಹಾರವನ್ನು ವಶ ಪಡಿಸಿಕೊಂಡಿದ್ದು, ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಎಚ್.ಡಿ ಕುಮಾರಸ್ವಾಮಿ ಕಿಡಿ

ಚುನಾವಣಾಧಿಕಾರಿಗಳ ದಾಳಿಗೆ ಎಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ತಹಶೀಲ್ದಾರ್‌ಗೆ ಕರೆ ಮಾಡಿ ಒತ್ತಡ ಹಾಕಿದ್ದಾರೆ ಎಂದು ದೂರಿದ್ದಾರೆ.

ನಮ್ಮ ತೋಟದ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಅಲ್ಲಿ ಏನೂ ಸಿಕ್ಕಿಲ್ಲ. ನಮ್ಮ ತೋಟದ ಮನೆಯಲ್ಲಿ 120 ಜನ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಿದ್ದೇವೆ. ನಾವು ಪಕ್ಷದ ಕೆಲ ಮುಖಂಡರನ್ನು ಕರೆದು ಸಭೆ ನಡೆಸಲು ಉದ್ದೇಶಿಸಿದ್ದೆವು ಎಂದು ಎಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಕಾಂಗ್ರೆಸ್‌ನವರಿಗೆ ಕೆಪಿಸಿಸಿ ಕಚೇರಿ, ಬಿಜೆಪಿಗೆ ಕೇಶವ ಕೃಪ ಕೇಂದ್ರ ಕಚೇರಿ (ಹೆಡ್ ಆಫೀಸ್) ಇರುವ ರೀತಿಯಲ್ಲೇ ನಮಗೆ ನಮ್ಮ ತೋಟದ ಮನೆ ಹೆಡ್ ಆಫೀಸ್ ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ ಟ್ವೀಟ್‌

ಎಚ್.ಡಿ ಕುಮಾರಸ್ವಾಮಿ ಅವರ ಬಿಡದಿ ತೋಟದ ಮನೆಯಿಂದ ಮದ್ಯ ಹಾಗೂ ಬಾಡೂಟದ ಘಮಲು ಬರುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು,ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ ನಡುವೆ ವಾಗ್ವಾದಕ್ಕೆ ಕಾರಣವಾಯಿತು.  

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ʻಜೆಡಿಎಸ್ ಪಕ್ಷದ ಹೆಡ್ಡಾಫೀಸ್‌ನಂತಿರುವ ಬಿಡದಿ ತೋಟದ ಮನೆಯಿಂದ ಮದ್ಯ ಹಾಗೂ ಬಾಡೂಟದ ಘಮಲು ಹೊರಬರುತ್ತಿದೆಯಂತೆ? ಸೋಲಿನ ಭೀತಿಯಿಂದ ಹೊಸ್ತಡ್ಕಿನ ಹೆಸರಲ್ಲಿ ಮತದಾರರಿಗೆ, ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆ ಮಾಡಿರುವ ಕುರಿತು ಮಾಹಿತಿಗಳಿದ್ದರೂ ಕರ್ನಾಟಕ ಚುನಾವಣಾ ಆಯೋಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೂತಿರುವುದೇಕೆ ಎಂದು ಪ್ರಶ್ನಿಸಿತ್ತು.

ಸೋಲಿನ ಭಯದಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮದ್ಯ, ಮಾಂಸದ ರುಚಿ ತೋರಿಸಿ ಮತ ಕೇಳಲು ಮುಂದಾಗಿವೆಯೇ? ರಾಮನಗರ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳು ಬಾಡೂಟದ ಆಮಿಷವನ್ನು ತಡೆಯದೇ ವಾಮಮಾರ್ಗದ ಚುನಾವಣೆಗೆ ಬೆಂಬಲ ನೀಡುತ್ತಿದ್ದಾರೆಯೇ ಎಂದು ಟ್ವೀಟ್ ಮಾಡಿದೆ.


ಮಾಂಸದೂಟದ ಬಗ್ಗೆ ಮಾತನಾಡಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಅವರು (ಬಿಜೆಪಿ –ಜೆಡಿಎಸ್) ಮಾಂಸದೂಟವಾದರೂ ಹಾಕಿಸಲಿ, ಏನಾದರೂ ಮಾಡಿಕೊಳ್ಳಲಿ. ನಮಗೆ ಅದಕ್ಕೆಲ್ಲ ಬೇಸರವಿಲ್ಲ ಎಂದು ಹೇಳಿದ್ದಾರೆ.

ಕಾರ್ಯಕರ್ತರಿಗೆ ಸಿಗದ ಬಾಡೂಟ

ಚುನಾವಣಾಧಿಕಾರಿಗಳು ಭೇಟಿ ನೀಡಿ ಆಹಾರವನ್ನು ವಶಕ್ಕೆ ಪಡೆದಿದ್ದು, ಬಾಡೂಟದ ಆಸೆಯಲ್ಲಿ ಬಂದ ಕಾರ್ಯಕರ್ತರು ಸಪ್ಪೆ ಮುಖ ಮಾಡಿಕೊಂಡು ಹಿಂದಿರುಗಿದರು. ಬುಧವಾರ ಬಾಡೂಟ ಮಾಡಲು ಬಿಡದಿಯ ತೋಟದ ಮನೆಗೆ ಬಂದ ಕಾರ್ಯಕರ್ತರು ನಿರಾಸೆಯಿಂದ ಹಿಂದಿರುಗುತ್ತಿದುದು ಕಂಡುಬಂತು.

Tags:    

Similar News