ಲೋಕಸಭಾ ಚುನಾವಣೆ | ಮೊದಲ ಹಂತದಲ್ಲಿ ಮಹಿಳಾ ಕಥನ- ಮಂಗಲಸೂತ್ರವೇ ಪ್ರಾಧಾನ್ಯ
ಮೈಸೂರು- ಮಂಗಳೂರಿಗೆ ಬಂದ ಮೋದಿ ಅವರು ಬಿಜೆಪಿಯ ಮುಖ್ಯ ಅಸ್ತ್ರವಾದ ಹಿಂದುತ್ವ ಮತ್ತು ರಾಮಮಂದಿರವನ್ನು ಮುಂದಿಟ್ಟು ಮತದಾರರನ್ನು ಓಲೈಸಲು ಪ್ರಯತ್ನಿಸಿದ್ದರು.;
ಕರ್ನಾಟಕದ ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಗೆ ಇನ್ನು ಕೇವಲ 48 ಗಂಟೆಗಳಷ್ಟೇ ಉಳಿದಿದೆ. ಕಳೆದ ಒಂದು ತಿಂಗಳ ಪ್ರಚಾರದಲ್ಲಿ, ಮತದಾರರ ಮನವೊಲಿಸಿಕೊಳ್ಳಲು ಎಲ್ಲ ರಾಜಕೀಯ ಪಕ್ಷಗಳು ತಮ್ಮ ಕೈಲಾದ ಎಲ್ಲ ಪ್ರಯತ್ನಗಳನ್ನೂ ಮಾಡಿವೆ. ವೈಯಕ್ತಿಕ ವಿಷಯಗಳಿಂದ, ಸಾರ್ವಜನಿಕ ಸಮಸ್ಯೆಗಳವರೆಗೂ, ರಾಜಕೀಯ ಪಕ್ಷಗಳು ಬಳಸಿಕೊಳ್ಳದ ಭಾವನಾತ್ಮಕ ಸಂಗತಿಗಳು ಇಲ್ಲವೇ ಇಲ್ಲ ಎನ್ನುವುದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಢಾಳಾಗಿ ಕಂಡು ಬಂದಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಕಾಂಗ್ರೆಸ್ ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನ ಮುಖ್ಯ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ….. ಕರ್ನಾಟಕದ ದಕ್ಷಿಣ ಭಾಗದಲ್ಲಿ ಠಿಕಾಣಿ ಹೂಡಿ, ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು. ಇವರೊಂದಿಗೆ ಸ್ಥಳೀಯ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ರಣತಂತ್ರಗಳನ್ನು ಹೆಣೆದು ಚುನಾವಣೆಯ ಸಮರಾಂಗಣದಲ್ಲಿ ಹಣಾಹಣಿ ಮಾತಿನ ಕಾಳಗ ನಡೆಸಿದರು. ಒಬ್ಬರನ್ನೊಬ್ಬರು ಗೇಲಿ ಮಾಡಿದರು, ಟೀಕಿಸಿದರು. ತಾವು ಹೇಳುತ್ತಿರುವುದೇ ಅಂತಿಮ ಸತ್ಯ ಎಂದು ಮತದಾರರಿಗೆ ಮನವರಿಕೆ ಮಾಡಿಕೊಡುವ ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದರು. ಕರ್ನಾಟಕ ದಕ್ಷಿಣ ಭಾಗದ ೧೪ ಕ್ಷೇತ್ರಗಳ ಮತದಾರರು ಯಾರ ಮಾತನ್ನು ನಂಬಿದರು, ಯಾರ ನಿಲುವನ್ನು ಸಮರ್ಥಿಸಿದರು ಎನ್ನುವುದು ಏಪ್ರಿಲ್ ೨೬ ರಂದು ಮತಪೆಟ್ಟಿಗೆಯಲ್ಲಿ ದಾಖಲಾದರೂ, ಅಂತಿಮವಾಗಿ ಯಾರಿಗೆ ಒಲಿದರು ಎನ್ನುವದು ತಿಳಿಯಲು ಜೂನ್ ೪ ರ ವರೆಗೆ ಕಾಯುವುದು, ರಾಜಕೀಯ ಪಕ್ಷಗಳಿಗೆ, ಆ ಪಕ್ಷದ ಅಭ್ಯರ್ಥಿಗಳಿಗೆ ಅನಿವಾರ್ಯ.
ಮೋದಿ ವರ್ಚಸ್ಸು ಮತ್ತು ಕಾಂಗ್ರೆಸ್ ಗ್ಯಾರಂಟಿ
ಈ ಒಂದು ತಿಂಗಳ ಕಾಲಾವಧಿಯಲ್ಲಿ ಕಾಂಗ್ರೆಸ್ ತನ್ನ ಗ್ಯಾರಂಟಿಗಳು, ಕೇಂದ್ರದಿಂದ ಕರ್ನಾಟಕಕ್ಕೆ ಆಗುತ್ತಿರುವ ಆರೋಪಿತ ಅನ್ಯಾಯ, ಕನ್ನಡತನ, ಕನ್ನಡದ ನೆಲ, ಜಲ ಸಮಸ್ಯೆಗಳನ್ನು ಮುಂದುಮಾಡಿ, ಬಿಜೆಪಿ ಯ ಮೋದಿ ವರ್ಚಸ್ಸು, ಹಿಂದುತ್ವದಂಥ ಚುನಾವಣಾ ಸೂಚಿಗಳನ್ನು ಎದುರಿಸಿತು. ರಾಜ್ಯಕ್ಕೆ ಬರಬೇಕಿದ್ದ ೧೮,೦೦೦ ಕೋಟಿ ಹಣಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ ಕಾಂಗ್ರೆಸ್, ಕರ್ನಾಟಕಕ್ಕೆ ಕೇಂದ್ರದಿಂದ ಬರಬೇಕಿರುವ ಬರಪರಿಹಾರ ಹಣ ರಾಜಕೀಯ ಕಾರಣಗಳಿಗಾಗಿ ಬಂದಿಲ್ಲ ಎಂಬ ಕಥನ (Narrative) ಸೃಷ್ಟಿಸಿ, ಕೇಂದ್ರ ಸರ್ಕಾರ ಹಾಗೂ ಬಿಜೆಪಿಯನ್ನು ಕಟ್ಟಿಹಾಕಿತು. ಅಷ್ಟೇ ಅಲ್ಲ, ಕರ್ನಾಟಕದ ನ್ಯಾಯಯುತವಾದ ಪಾಲನ್ನು ಪಡೆಯುವಲ್ಲಿ ರಾಜ್ಯದ ೨೫ ಬಿಜೆಪಿ ಲೋಕಸಭಾ ಸದಸ್ಯರು ಸಂಪೂರ್ಣವಾಗಿ ವಿಫಲರಾಗಿ ಕರ್ನಾಟಕದ ಜನತೆಗೆ, ಕನ್ನಡಿಗರಿಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿತು. ಇದನ್ನು ಸಮರ್ಥಿಸಿಕೊಳ್ಳಲು ವಿಫಲವಾಗಿ ಬಿಜೆಪಿ ಪ್ರಧಾನಿ ಮೋದಿ ಅವರ ಮೊರೆ ಹೊಕ್ಕಿತು. ಏಕೆಂದರೆ, ಮೋದಿ ವರ್ಚಸ್ಸು ಮೋದಿ ಹೆಸರಿನ ಹೊರತಾಗಿ ಬಿಜೆಪಿಯ ಬಳಿ ಯಾವ ಅಸ್ತ್ರವೂ ಇರಲಿಲ್ಲ.
ಹಿಂದುತ್ವದ ಎದುರು ಪ್ರಾದೇಶಿಕ ಅಸ್ಮಿತೆ
ಮೈಸೂರು-ಮಂಗಳೂರಿಗೆ ಬಂದ ಮೋದಿ ಅವರು ಬಿಜೆಪಿಯ ಮುಖ್ಯ ಅಸ್ತ್ರವಾದ ಹಿಂದುತ್ವ ಮತ್ತು ರಾಮಮಂದಿರವನ್ನು ಮುಂದಿಟ್ಟು ಮತದಾರರನ್ನು ಓಲೈಸಲು ಪ್ರಯತ್ನಿಸಿತು. ಆದರೆ, ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಯಾವ ರೀತಿಯ ಸಮಝಾಯಿಷಿಯನ್ನೂ ನೀಡಲು ಸಾಧ್ಯವಾಗದೇ ಬಿಜೆಪಿಯ ನಾಯಕರು ಚಡಪಡಿಸುವಂತಾಯಿತು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು, ಕರ್ನಾಟಕ ಮತ್ತು ತಮಿಳುನಾಡುಗಳ ನಡುವಿನ ʼಮೇಕೆದಾಟುʼ ವಿವಾದವನ್ನು ಮುಂದಿಟ್ಟು, ನೆರೆಯ ತಮಿಳು ನಾಡಿನ ಡಿಎಂಕೆ ಪಕ್ಷ ಇಂಡಿಯಾ ಬ್ಲಾಕ್ ನ ಭಾಗವಾಗಿರುವ ಕಾರಣ ಕಾಂಗ್ರೆಸ್ ಅನ್ನು ಹಣಿಯಲು ಯತ್ತಿಸಿತು. ಆದರೆ ಅದೂ ಕೂಡ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ. ಈ ನಡುವೆ ಚೊಂಬು-ಚಿಪ್ಪುಗಳ ಕಥನವೂ ರೂಪಗೊಂಡು, ʼ ನೀ ಕೊಡೆ, ನಾ ಬಿಡೆʼ ಎಂಬಲ್ಲಿಗೆ ಚೊಂಬು ಚಿಪ್ಪುಗಳ ಹೇಳಿಕೊಳ್ಳುವಂಥ ಪರಿಣಾವನ್ನೇನೂ ಉಂಟು ಮಾಡಲಿಲ್ಲ.
ಇಲ್ಲದ, ಮಾಡದ ಸಂಗತಿಗಳನ್ನು ಇದೆ, ಅಥವ ಇದು ಮಾತ್ರವೇ ಎಂದು ಪ್ರತಿಪಾದಿಸುತ್ತಿದ್ದಾರೆಂದು ಅರಿವಾದ ಲೇಖಕರು ಪ್ರಧಾನಿಗೆ ಪ್ರಶ್ನೆಗಳನ್ನು ಕೇಳಿದರು. “ದೇಶದ ಚುಕ್ಕಾಣಿ ಹಿಡಿದವರು, ವಾಸ್ತವದ ಅರಿವಿಲ್ಲದೆ ಭ್ರಮಾಧೀನರಾಗಬಾರದು. ದೇಶದ ಪ್ರಧಾನಿಯೇ ಭ್ರಮಾಧೀನರಾದರೆ, ಅದು ವ್ಯಕ್ತಿಯ ದುರಂತವಲ್ಲ, ಭಾರತದ ದುರಂತ” ಎಂದು ಖ್ಯಾತ ಲೇಖಕ ದೇವನೂರು ಮಹದೇವ ಹೇಳಿದ್ದು ರೈತ ಬೆಳೆದ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಕುರಿತಾಗಿ. ಈ ಮಾತುಗಳು ರಾಜಕೀಯ ಪಕ್ಷಗಳ, ವಿಶೇಷವಾಗಿ ಬಿಜೆಪಿಯ ಆತ್ಮವಿಮರ್ಶೆಗೆ ದಾರಿಮಾಡಿಕೊಟ್ಟಿತು.
ಮಂಗಲಸೂತ್ರವೆಂಬ ಭಾವುಕ ಸಂಗತಿ
ಆದರೆ ಅಂತಿಮ ಹಂತದಲ್ಲಿ ಬಿಜೆಪಿ ಮಹಿಳೆಯ ಸೌಭಾಗ್ಯದ ಸಂಕೇತವಾದ ಮಂಗಲಸೂತ್ರವನ್ನು ಬಿಡದೆ ರಾಜಕೀಯ ಅಸ್ತ್ರವಾಗಿಸಿತು. ತೀರಾ ಭಾವುಕವಾದ ಸೂಕ್ಷ್ಮವಾದ ಸಂಗತಿಯೊಂದನ್ನು ಪ್ರಧಾನಿ ಮೋದಿ ಅವರು ಸಾರ್ವಜನಿಕ ಜಗಳದ ವಸ್ತುವಾಗಿ ಪರಿಗಣಿಸಿದ್ದು ಸರಿಯೋ ತಪ್ಪೋ ಎಂಬ ಚರ್ಚೆ ಈಗ ರಾಜಕೀಯ ರಂಗದಲ್ಲಿ ಚುನಾವಣಾ ಕಣದಲ್ಲಿ ನಡೆದಿದೆ. ಚುನಾವಣಾ ಪ್ರಚಾರದ ಭಾಷಣದಲ್ಲಿ ಮೋದೀಜಿ ಅವರು ಕಾಂಗ್ರೆಸ್ ಗೆ ಮತ ನೀಡಿದರೆ, ದೇಶದ ಅತ್ಯಂತ ಪುರಾತನ ಪಕ್ಷವಾದ ಕಾಂಗ್ರೆಸ್ ಹೆಣ್ಣು ಮಕ್ಕಳ ಮಂಗಲಸೂತ್ರವನ್ನು ಕಿತ್ತುಕೊಳ್ಳುತ್ತದೆ. ಅದರಿಂದ ದೊರಕುವ ಹಣವನ್ನು ಮುಸ್ಲೀಮರಿಗೆ ನೀಡುತ್ತದೆ ಎಂದರು. ಮೋದಿ ಅವರು ಹೀಗೆ ಹೇಳಲು ಆಕರವಾಗಿ ಬಳಸಿಕೊಂಡದ್ದು,, 2006ರಲ್ಲಿ ಅಂದಿನ ಪ್ರಧಾನಿ ಮನಮೊಹನ ಸಿಂಗ್ ಅವರ ಮಾತಿನ ತುಣುಕು.
ಹೆಗಡೆ ಅವರ ತಾಳಿ ಭಾಗ್ಯ ಯೋಜನೆ
ಈ ಮಂಗಲಸೂತ್ರ ಅಥವಾ ದೇಸಿ ಭಾಷೆಯಲ್ಲಿ ʼತಾಳಿʼ ನಿಜಕ್ಕೂ ಒಂದು ಭಾವನಾತ್ಮಕ ವಿಷಯ. ಈ ಬಗ್ಗೆ ಮೋದಲು ಯೋಚಿಸಿದ ಕೀರ್ತಿ ಸಲ್ಲಬೇಕಾದ್ದು, ಕರ್ನಾಟಕ ಕಂಡ ಮುತ್ಸದಿ ಮುಖ್ಯಮಂತ್ರಿ, ಪ್ರಧಾನಿ ಯಾಗುವ ಎಲ್ಲ ಅರ್ಹತೆಹೊಂದಿದ್ದವರು ಎಂದೇ ಭಾವಿಸಲಾದ ರಾಮಕೃಷ್ಣ ಹೆಗಡೆ ಅವರಿಗೆ. ಹೆಗಡೆ ಅವರು ಎಂಭತ್ತರ ದಶಕದಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಆರ್ಥಿಕವಾಗಿ ದುರ್ಬಲರಾದ ಗರ್ಭಿಣಿಯರಿಗೆ ಆರು ತಿಂಗಳ ಮಾಸಾಶನ ಮತ್ತು ಹುಟ್ಟುವ ಮಗುವಿಗೆ ಬೇಕಾದ ಎಲ್ಲ ಸಲಕರಣೆಗಳನ್ನು ಸರ್ಕಾರದಿಂದ ಕೊಡುವ ಯೋಜನೆ ರೂಪಿಸಿದರು. ಈ ಯೋಜನೆ ʼವಿಶ್ವ ಆರೋಗ್ಯ ಸಂಸ್ಥೆಯ ಮೆಚ್ಚಿಗೆಗೆ ಪಾತ್ರವಾಯಿತು. ವಿಧವಾ ಮಾಸಾಶನ ಯೋಜನೆ, ಬಡಕುಟುಂಬದ ಹೆಣ್ಣು ಮಕ್ಕಳ ಮದುವೆ ಒಂದು ಸಾಮಾಜಿಕ ಸಮಸ್ಯೆಯಾಗಿದ್ದ ಸಂದರ್ಭದಲ್ಲಿ ಹೆಗಡೆ ಜಾರಿಗೆ ತಂದದ್ದು ತಾಳಿ ಭಾಗ್ಯ ಯೋಜನೆ ಜಾರಿಗೆ ತಂದರು.
ಶಾದಿ ಭಾಗ್ಯ v/s ತಾಳಿ ಭಾಗ್ಯ
ಈ ಯೋಜನೆಯನ್ನು ಕೊಂಚ ಬದಲಾಯಿಸಿ, ಬಿಜೆಪಿ ಆರೋಪಿಸುತ್ತಿರುವಂತೆ 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಒಲೈಸಲು ʼಶಾದಿ ಭಾಗ್ಯʼ ಯೋಜನೆಯನ್ನು ಜಾರಿಗೆ ತಂದು ವಿವಾದಕ್ಕೊಳಗಾಯಿತು. 2019ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಮತ್ತೆ ತಾಳಿ ಭಾಗ್ಯವನ್ನು ಜಾರಿಗೆ ತಂದಿತು. ಕರ್ನಾಟಕದ ತಾಳಿ ಭಾಗ್ಯ ಯೋಜನೆಯು ಕರ್ನಾಟಕ ಸರ್ಕಾರವು ಹಿಂದೂಗಳಿಗೆ ನೀಡುವ ಸಮಾಜ ಕಲ್ಯಾಣ ಇಲಾಖೆಯ ಯೋಜನೆಳಲ್ಲಿ ಒಂದು. ಇದರಲ್ಲಿ ದೇವಾಲಯಗಳಲ್ಲಿ ನಡೆಯುವ ವಿವಾಹಗಳಿಗೆ ಆರ್ಥಿಕ ನೆರವು ನೀಡುವುದು ಎಂದು ಬಿಜೆಪಿ ಸರ್ಕಾರ ಸಮರ್ಥಿಸಿಕೊಂಡಿತು. ಆದರೆ ಈ ಯೋಜನೆಗೆ ಬಿಜೆಪಿಯ ʼಆಂತರಿಕ ಟೀಕಾಕಾರ (Critical insider) ಎಂದೇ ಖ್ಯಾತರಾಗಿರುವ ರಾಜಕಾರಣಿ ಬಸನಗೌಡಪಾಟೀಲ್ ಯತ್ನಾಳ್ ಅವರು; “ಜನರನ್ನು ದರಿದ್ರರನ್ನಾಗಿ ಮಾಡುವ ಯೋಜನೆಗಳಾದ ಅನ್ನಭಾಗ್ಯ, ತಾಳಿ ಭಾಗ್ಯಗಳಂಥ ಯೋಜನೆಗಳನ್ನುಕೂಡಲೇ ನಿಲ್ಲಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದು, ಬಿಜೆಪಿಗೆ ಮುಖಭಂಗವಾದಂತಾಗಿತ್ತು.
ಇದೇ ಮಂಗಲಸೂತ್ರವೆಂಬ ಭಾವುಕ ವಿಷಯವನ್ನು ಮೋದಿ ಅವರು ರಾಜಕೀಕರಣಗೊಳಿಸಿದರೆಂದು ಆರೋಪಿಸಿದ ಕಾಂಗ್ರೆಸ್‌ನ ನಾಯಕಿ ಪ್ರಿಯಾಂಕಾ ಗಾಂಧಿ, ಈ ಮಂಗಲಸೂತ್ರ ಕಥನ (narrative) ಸಮರ್ಥವಾಗಿ ಪ್ರತಿಕ್ರಿಯಿಸಿ, ತಮ್ಮ ತಂದೆ ರಾಜೀವ್ ಗಾಂಧಿ ಅವರು ಭಯೋತ್ಪಾದಕ ಕೃತ್ಯಕ್ಕೆ ಬಲಿಯಾಗಿ, ದೇಶಕ್ಕಾಗಿ ತ್ಯಾಗ ಮಾಡಿದರೆಂದು ಹೇಳಿ, “ನನ್ನ ತಾಯಿ (ಸೋನಿಯಾ ಗಾಂಧಿ) ದೇಶಕ್ಕಾಗಿ ತಮ್ಮ ಮಂಗಳಸೂತ್ರವನ್ನೇ ತ್ಯಾಗ ಮಾಡಿದ್ದನ್ನು ಮರೆತಿರೇ?” ಎಂದು ಮೋದಿ ಮತ್ತು ಬಿಜೆಪಿಯವರನ್ನು ಪ್ರಶ್ನಿಸಿ ಇಕ್ಕಟ್ಟಿಗೆ ಸಿಲುಕಿಸಿದರು. ತಮ್ಮ ಅಜ್ಜಿ ಇಂದಿರಾ ಗಾಂಧಿ ಅವರು 1962ರ ಚೀನಾ ಯುದ್ಧದ ಸಂದರ್ಭದಲ್ಲಿ ತಮ್ಮ ಎಲ್ಲ ಒಡವೆಗಳನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ನೀಡಿದ್ದನ್ನು ನೆನಪಿಸಿ, ಈ ಸಂದರ್ಭವನ್ನು ನೆನಪಿಸಲು, ಆ ಕಾಲದ ಛಾಯಾಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದರು.
ಹಾಗಾಗಿ ಕರ್ನಾಟಕ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿ ಅವರ ಮಂಗಲಸೂತ್ರ ಟೀಕೆ ಬಿಜೆಪಿಗೆ ದುಬಾರಿಯಾಗಬಹುದೇ, ಈಗಾಗಲೇ ಗ್ಯಾರಂಟಿಗಳ ಮೂಲಕ ಮಹಿಳೆಯರ ಮನಸ್ಸನ್ನು ತಲುಪಿರುವ ಕಾಂಗ್ರೆಸ್ ಗೆ ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿಯ ದೇಶ ಪ್ರೇಮ ವರವಾಗಿ ಪರಿಣಮಿಸುವುದೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.