‌Loksabha Election 2024 | ಎರಡನೇ ಹಂತದ ಪ್ರಚಾರ: ಬಿಜೆಪಿ ವೇಗಕ್ಕೆ ಮಿತ್ರಪಕ್ಷದ ಪೆನ್‌ಡ್ರೈವ್ ಬ್ರೇಕ್

ಪೆನ್‌ ಡ್ರೈವ್‌ ಲೈಂಗಿಕ ಹಗರಣ ಬಿಜೆಪಿಯ ಪ್ರಚಾರದ ಉಮೇದಿಗೆ ಬ್ರೇಕ್‌ ಹಾಕಿದೆ. ಅಲ್ಲದೆ ಹಗರಣ ಹೊರಬಿದ್ದ ಬಳಿಕ ಬಿಜೆಪಿಯ ಮಿತ್ರ ಪಕ್ಷ ಜೆಡಿಎಸ್‌ನ ರಾಜ್ಯಾಧ್ಯಕ್ಷ ಎಚ್‌ ಡಿ ಕುಮಾರಸ್ವಾಮಿ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಮುಖಂಡರೂ ಪ್ರಚಾರ ಸಭೆಗಳಿಂದ ಸಂಪೂರ್ಣ ದೂರವೇ ಉಳಿದಿದ್ದಾರೆ.

Update: 2024-05-05 08:29 GMT

ರಾಜ್ಯದ ಉತ್ತರಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗದ ಹದಿನಾಲ್ಕು ಲೋಕಸಭಾ ಕ್ಷೇತ್ರಗಳ ಚುನಾವಣೆಯ ಮತದಾನಕ್ಕೆ ಇನ್ನು ಕೆಲವೇ ತಾಸು ಬಾಕಿ ಇವೆ. ಬಹಿರಂಗ ಪ್ರಚಾರ ಭಾನುವಾರ ಸಂಜೆ ಅಂತ್ಯವಾಗಲಿದ್ದು, ಬಿರುಬಿಸಿಲಿನ ನಡುವೆ ಕಾವೇರಿದ್ದ ಚುನಾವಣಾ ಪ್ರಚಾರ ಇನ್ನು ತಣ್ಣಗಾಗಲಿದೆ. ಆದರೆ, ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಭಾಗದ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನಡೆದ ಚುನಾವಣೆಯ ವೇಳೆ ಕಂಡುಬಂದಿದ್ದ ಬಿಜೆಪಿಯ ಪ್ರಚಾರದ ಅಬ್ಬರ, ಜೋಷ್‌ ಈ ಎರಡನೇ ಹಂತದಲ್ಲಿ ಮಂಕಾಗಿದೆ ಎಂಬುದು ವಾಸ್ತವ. 

ಅದರಲ್ಲೂ ಮುಖ್ಯವಾಗಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಹಾಸನ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಪೆನ್‌ ಡ್ರೈವ್‌ ಲೈಂಗಿಕ ಹಗರಣ ಬಹಿರಂಗವಾದ ಬಳಿಕ ಕಳೆದ ಒಂದು ವಾರದಿಂದ ರಾಜ್ಯದ ಎರಡನೇ ಹಂತದ ಚುನಾವಣಾ ಪ್ರಚಾರ ಬಹುತೇಕ ನೀರಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರು ಒಂದೆರಡು ಪ್ರಚಾರ ರ್ಯಾಲಿಗಳನ್ನು ನಡೆಸಿದರೂ ಬಿಜೆಪಿಯ ಪ್ರಚಾರ ಸಭೆಗಳಲ್ಲಿ, ರೋಡ್‌ ಶೋಗಳಲ್ಲಿ ಹಿಂದಿನ ಜೋಷ್‌ ಕಾಣಿಸುತ್ತಿಲ್ಲ. ಮುಖ್ಯವಾಗಿ ಪೆನ್‌ ಡ್ರೈವ್‌ ಲೈಂಗಿಕ ಹಗರಣ ಬಿಜೆಪಿಯ ಪ್ರಚಾರದ ಉಮೇದಿಗೆ ಬ್ರೇಕ್‌ ಹಾಕಿದೆ. ಅಲ್ಲದೆ ಹಗರಣ ಹೊರಬಿದ್ದ ಬಳಿಕ ಬಿಜೆಪಿಯ ಮಿತ್ರ ಪಕ್ಷ ಜೆಡಿಎಸ್‌ನ ರಾಜ್ಯಾಧ್ಯಕ್ಷ ಎಚ್‌ ಡಿ ಕುಮಾರಸ್ವಾಮಿ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಮುಖಂಡರೂ ಪ್ರಚಾರ ಸಭೆಗಳಿಂದ ಸಂಪೂರ್ಣ ದೂರವೇ ಉಳಿದಿದ್ದಾರೆ.

ಬಿಜೆಪಿಯ ಪ್ರಭಾವಿ ಸ್ಟಾರ್‌ ಪ್ರಚಾರಕರಾದ ಪ್ರಧಾನಿ ಮೋದಿ ಕಳೆದ ಐದಾರು ದಿನಗಳಿಂದ ರಾಜ್ಯದ ಕಡೆ ಮುಖ ಮಾಡಿಲ್ಲ. ಅಮಿತ್‌ ಶಾ ಅವರು ಚುನಾವಣಾ ಪ್ರಚಾರಕ್ಕೆ ಬಂದರೂ ಪೆನ್‌ಡ್ರೈವ್‌ ಪ್ರಕರಣದಿಂದ ಬಹುತೇಕ ಅಂತರ ಕಾಯ್ದುಕೊಂಡಿದ್ದಾರೆ. ಅಷ್ಟೇ ಅಲ್ಲ, ಶನಿವಾರ(ಏ.4) ರಂದು ತೆಲಂಗಾಣ ಪ್ರವಾಸದ ವೇಳೆ ಬೆಂಗಳೂರಿಗೆ ಭೇಟಿ ನೀಡಿದಾಗ, ಎಚ್‌ ಡಿ ಕುಮಾರಸ್ವಾಮಿ ತಂಗಿದ್ದ ತಾಜ್‌ ವೆಸ್ಟ್‌ ಎಂಡ್‌ ಹೋಟೆಲಿನಲ್ಲಿಯೇ ತಂಗಿದ್ದರೂ, ಅವರನ್ನು ಭೇಟಿಯಾಗದೇ ಸಂಪೂರ್ಣ ಅಂತರ ಕಾಯ್ದುಕೊಂಡಿದ್ದಾರೆ.

ಅಂತರ ಕಾಯ್ದುಕೊಳ್ಳಲು ಸೂಚನೆ

ಅಷ್ಟೇ ಅಲ್ಲದೆ, ರಾಜ್ಯ ಮುಖಂಡರಿಗೂ ಜೆಡಿಎಸ್‌ ನಾಯಕರು ಮತ್ತು ಪೆನ್‌ ಡ್ರೈವ್‌ ಪ್ರಕರಣದಿಂದ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ, ಬಿಜೆಪಿ ನಾಯಕರೇ ಹೇಳಿಕೊಂಡಿರುವಂತೆ ಪೆನ್‌ ಡ್ರೈವ್‌ ಪ್ರಕರಣ ಸದ್ಯ ನಡೆಯುತ್ತಿರುವ ಎರಡನೇ ಹಂತದ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ಮುಜುಗರದ ಸಂಗತಿಯಾಗಿದೆ. ಹಾಗಾಗಿಯೇ ಹಿರಿಯ ನಾಯಕ ಅರವಿಂದ್‌ ಲಿಂಬಾವಳಿ ಅವರು ಬಹಿರಂಗ ಹೇಳಿಕೆ ನೀಡಿದಂತೆ ಪಕ್ಷದ ಚುನಾವಣಾ ಪ್ರಚಾರದ ಮೇಲೂ ಪ್ರಕರಣ ಪರಿಣಾಮ ಬೀರಿದ್ದು, ನಾಯಕರು ಜನರ ಮುಂದೆ ಹೋಗುವುದಕ್ಕೇ ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ.

ಆ ಹಿನ್ನೆಲೆಯಲ್ಲಿಯೇ ಲಿಂಬಾವಳಿ ಅವರು ವಿಜಯಪುರ ಲೋಕಸಭಾ ಕ್ಷೇತ್ರದ ಪ್ರಚಾರ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಪ್ರಜ್ವಲ್‌ ರೇವಣ್ಣ ಪೆನ್‌ ಡ್ರೈವ್‌ ಹಗರಣದಿಂದಾಗಿ ಮೈತ್ರಿ ಪಕ್ಷ ಬಿಜೆಪಿಯೂ ತೀವ್ರ ಮುಜಗರವಾಗಿದೆ ಎಂದು ಹೇಳಿದ್ದರು.

ಅವರ ಆ ಮಾತಿಗೆ ದನಿಗೂಡಿಸಿರುವ ‘ದ ಫೆಡರಲ್ ಕರ್ನಾಟಕ’ದೊಂದಿಗೆ ಮಾತನಾಡಿದ ಹೆಸರು ಹೇಳಲಿಚ್ಛಿಸದ ಬಿಜೆಪಿಯ ಉತ್ತರಕರ್ನಾಟಕ ಹಿರಿಯ ನಾಯಕರೊಬ್ಬರು, ಮೊದಲನೆಯದಾಗಿ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದು ನಮ್ಮ ಭಾಗದಲ್ಲಿ ಯಾವ ಲಾಭವನ್ನೂ ತರುವುದಿಲ್ಲ ಎಂಬುದು ಗೊತ್ತಿತ್ತು. ಅದರ ಮೇಲೆ ಈ ಪೆನ್ ಡ್ರೈವ್ ಹಗರಣ ಬೇರೆ ಮುರುಕ್ಕೊಂದು ಬಿತ್ತು. ಜನರಿಗಿರಲಿ ಪಕ್ಷದ ಕಾರ್ಯಕರ್ತರಿಗೆ ಉತ್ತರ ಕೊಡಲಾಗದ ಹೀನಾಯ ಸ್ಥಿತಿ ನಮ್ಮದು. ಅಂತಹ ಗೋಟಾಳ ಇರುವಾಗ ಹೆಂಗೆ ಮಂದಿಗೆ ಮುಖ ತೋರ್ಸೋದು,, ಅದೂ ಎಲೆಕ್ಷನ್ ಟೈಮಲ್ಲಿ ವಿರೋಧಿಗಳು ಅದನ್ನೇ ಎತ್ತಿ ಆಡಿಸುತ್ತಿರುವಾಗ, ಕಷ್ಟ ಅಲ್ರೀ.. ಅದರ ಮ್ಯಾಲೆ ಅಂವ ದೇಶ ಬಿಟ್ಟು ಹೋಗಾಕೆ ಬಿಟ್ಟಾರೆ.. ಅವನಿಗೆ ಡಿಪ್ಲೊಮ್ಯಾಟಿಕ್ ಪಾರ್ಸ್ ಪೋರ್ಟ್ ಬ್ಯಾರೇ ಕೊಟ್ಟು ಕಳಿಸ್ಯಾರೆ ಅಂತ ಅವರು ಪ್ರಚಾರ ಮಾಡ್ತಾರೆ.. ಒಟ್ಟಾರೆ ಪ್ರಚಾರಕ್ಕೆ ಮುಖಂಡರು, ಕಾರ್ಯಕರ್ತರ ಜೋಷ್ ಮೊದಲಿನಂಗ ಇಲ್ರೀ.. ಪಕ್ಷಕ್ಕೆ ಭಾಳ ಹಿನ್ನಡೆ ಆಗೋಹಂಗ ಕಾಣ್ತದಾ,. “ ಎಂದು ನಿಟ್ಟುಸಿರು ಬಿಟ್ಟರು.

ಪ್ರಭಾವ ಇರುವ ಕ್ಷೇತ್ರಗಳಲ್ಲೂ ಸೈಲೆಂಟ್

ವಿಜಯಪುರ, ರಾಯಚೂರು, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಸಾಕಷ್ಟು ಪ್ರಭಾವ ಹೊಂದಿದೆ. ಆದರೆ, ಈ ಪ್ರಕರಣದ ಬಳಿಕ ಆ ಕ್ಷೇತ್ರಗಳಲ್ಲಿ ಕೂಡ ಜೆಡಿಎಸ್ ಮುಖಂಡರು ಬಿಜೆಪಿಯ ಪ್ರಚಾರ ಸಭೆಗಳಿಂದ ಬಹುತೇಕ ದೂರವೇ ಉಳಿದಿದ್ದಾರೆ ಎಂಬುದು ಗಮನಾರ್ಹ.‌ ಸಭೆಗಳಲ್ಲಿ ಕಾಣಿಸಿಕೊಂಡವರೂ ಮತದಾರರನ್ನುದ್ದೇಶಿಸಿ ಮಾತನಾಡದೆ ಸೈಲೆಂಟ್‌ ಆಗಿದ್ದಾರೆ. ಇನ್ನು ಉಳಿದ ಬೆಳಗಾವಿ, ಚಿಕ್ಕೋಡಿ, ಧಾರವಾಡ, ಹಾವೇರಿ-ಗದಗ, ಕೊಪ್ಪಳ, ಬಳ್ಳಾರಿ, ಬೀದರ್, ಕಲಬುರಗಿ ಕ್ಷೇತ್ರಗಳಲ್ಲಿ ಕೂಡ ಜೆಡಿಎಸ್ ಬೆಂಬಲಿಗರು ಮತ್ತು ಕಾರ್ಯಕರ್ತರು ಚುನಾವಣಾ ಪ್ರಚಾರದಿಂದ ಹಿಂದೆ ಸರಿದಿದ್ದಾರೆ ಎಂಬುದನ್ನು ಸ್ವತಃ ಆ ಪಕ್ಷದ ನಾಯಕರೇ ಹೇಳುತ್ತಾರೆ.

ಈ ಕುರಿತು ‘ದ ಫೆಡರಲ್ ಕರ್ನಾಟಕ’ ಉತ್ತರಕರ್ನಾಟಕದ ಹಿರಿಯ ಪತ್ರಕರ್ತರ ಹಾಗೂ ರಾಜಕೀಯ ವಿಶ್ಲೇಷಕರ ಅಶೋಕ್ ಚಂದರಗಿ ಅವರನ್ನು ಮಾತನಾಡಿಸಿದಾಗ, “ಈ ಭಾಗದಲ್ಲಿ ಪೆನ್ಡ್ರೈವ್ ಪ್ರಕರಣ ಹೊರಬರುವ ಮುನ್ನ ಕೂಡ ಜೆಡಿಎಸ್ ಮತ್ತು ಬಿಜೆಪಿ ನಡುವೆ ಸಾಕಷ್ಟು ಗೊಂದಲಗಳು ಇದ್ದವು. ಮೇಲ್ಮಟ್ಟದಲ್ಲಿ ನಡೆದ ಹೊಂದಾಣಿಕೆಯ ಬಗ್ಗೆ ತಳಮಟ್ಟದ ಮುಖಂಡರು ಮತ್ತು ಕಾರ್ಯಕರ್ತರಿಗೆ ಅಸಮಾಧಾನವಿತ್ತು. ಪ್ರತಿ ಚುನಾವಣೆಯಲ್ಲಿ ಯಾರ ವಿರುದ್ಧ ಸೆಣಸಾಡಿದ್ದರೋ ಅವರ ಜೊತೆಗೇ ಕೈಜೋಡಿಸಿ ಮತದಾರನ ಮುಂದೆ ನಿಲ್ಲುವುದು ಸ್ಥಳೀಯ ಮುಖಂಡರಿಗೆ ಮುಜಗರದ ಸಂಗತಿಯಾಗಿತ್ತು. ಈ ನಡುವೆ, ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಆ ಕಂದಕವನ್ನು ಇನ್ನಷ್ಟು ಹಿಗ್ಗಿಸಿದೆ” ಎಂದು ವಿವರಿಸಿದರು.

“ಅದರಲ್ಲಿ ಈ ಹಗರಣ, ಒಂದು ಕಡೆ, ಪ್ರಚಾರ ಕಣದಿಂದ ಜೆಡಿಎಸ್ ದೂರ ಸರಿಯುವಂತೆ ಮಾಡಿದ್ದರೆ, ಮತ್ತೊಂದು ಕಡೆ ಬಿಜೆಪಿಗೆ ತೀವ್ರ ಮುಜಗರ ತಂದಿದೆ. ನಾಯಕರು ಮತ್ತು ಕಾರ್ಯಕರ್ತರು ಜನರ ಮುಂದೆ ಹೋಗಿ ಮತ ಯಾಚಿಸಲು ಇರಿಸುಮುರಿಸು ಉಂಟು ಮಾಡಿದೆ. ಅಲ್ಲದೆ, ಪ್ರಕರಣ ಹೊರಬಿದ್ದ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಯಾವೊಬ್ಬ ರಾಜ್ಯ ಮಟ್ಟದ ಜೆಡಿಎಸ್ ನಾಯಕರೂ ಈ ಉತ್ತರಕರ್ನಾಟಕದತ್ತ ಮುಖ ಹಾಕಿಲ್ಲ. ಬಿಜೆಪಿ ನಾಯಕರ ಸಭೆಗಳಲ್ಲೂ ಕೆಲವು ನಾಯಕರು ಪ್ರಚಾರದಿಂದ ಹಿಂದೆ ಸರಿದಿರುವುದು ಎದ್ದು ಕಾಣಿಸುತ್ತಿದೆ. ಇದು ಪ್ರಚಾರ ಕಣದಲ್ಲಿ ಬಿಜೆಪಿಗೆ ಎದ್ದು ಕಾಣುವ ಹಿನ್ನಡೆ ತಂದಿದೆ. ಹಿಂದಿನ ಅದರ ಜೋಷ್, ಸಂಭ್ರಮ ಕಾಣಿಸುತ್ತಿಲ್ಲ. ಆದರೆ, ಪ್ರಚಾರದಲ್ಲಿನ ಈ ಹಿನ್ನಡೆ ಬಿಜೆಪಿಯ ಮತ ಗಳಿಕೆಯ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ” ಎಂದೂ ಚಂದರಗಿ ವಿಶ್ಲೇಷಿಸಿದರು.

ಒಟ್ಟಾರೆ, ಪ್ರಜ್ವಲ್ ಪೆನ್ಡ್ರೈವ್ ಪ್ರಕರಣ ಕೇವಲ ಜೆಡಿಎಸ್ ಪಕ್ಷದ ಮಟ್ಟಿಗೆ ಮಾತ್ರವಲ್ಲದೆ, ಮಿತ್ರ ಪಕ್ಷ ಬಿಜೆಪಿಗೆ ಅದರ ಪ್ರಬಲ ನೆಲೆ ಉತ್ತರಕರ್ನಾಟಕದಲ್ಲೂ ದೊಡ್ಡ ಮಟ್ಟದ ಹಿನ್ನಡೆ ತಂದಿದೆ. ಪ್ರಚಾರದ ಜೋಷ್‌ ಗೆ ಬಿದ್ದಿರುವ ಈ 'ಪೆನ್‌ ಡ್ರೈವ್‌ ಬ್ರೇಕ್‌',  ಅದರ ಮತ ಗಳಿಕೆಯ ಮೇಲೂ ಪರಿಣಾಮ ಬೀರುವುದೇ? ಎಂಬುದು ಖಾತರಿಯಾಗಲು ಜೂನ್ 4ರ ಮತ ಎಣಿಕೆಯ ವರೆಗೆ ಕಾಯಬೇಕಿದೆ.

Tags:    

Similar News