Loksabha Election 2024: ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಸ್ಪರ್ಧೆ: ಬಿಎಸ್‌ವೈ ಘೋಷಣೆ

Update: 2024-03-15 13:55 GMT

ಲೋಕಸಭಾ ಚುನಾವಣೆಯ ಹಿನ್ನೆಲೆ ಬಿಜೆಪಿ ಘೋಷಿಸಿದ ಎರಡನೇ ಪಟ್ಟಿಯಲ್ಲಿ ಹಿರಿಯ ರಾಜಕಾರಣಿ ಜಗದೀಶ್ ಶೆಟ್ಟರ್‌ ಹೆಸರು ಪ್ರಕಟಗೊಳ್ಳದ ಕಾರಣ ಅವರು ನಿರಾಸೆಗೊಂಡಿದ್ದರು. ಈ ಬಗ್ಗೆ ಸಾಕಷ್ಟು ಅಸಮಾಧಾನ ಕೂಡ ಭುಗಿಲೆದ್ದೆವು. ಶೆಟ್ಟರ್‌ಗೆ ಟಿಕೆಟ್‌ ಸಿಗುವುದು ಬಹುತೇಕ ಡೌಟ್, ಅವರ ರಾಜಕೀಯ ಭವಿಷ್ಯವೇ ಅಂತ್ಯವಾಯಿತು ಎನ್ನುವ ಚರ್ಚೆಗಳು ಶುರುವಾಗಿದ್ದವು.‌ ಆದರೆ ಶೆಟ್ಟರ್ ಬೆಳಗಾವಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಧಾರವಾಡ ಅಥವಾ ಹಾವೇರಿ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದ ಶೆಟ್ಟರ್‌ಗೆ ಎರಡೂ ಕಡೆಗಳಲ್ಲೂ ಟಿಕೆಟ್‌ ಕೈ ತಪ್ಪಿತ್ತು. ಇದರಿಂದ ಬೇಸರಗೊಂಡಿದ್ದ ಶೆಟ್ಟರ್‌ಗೆ ಬೆಳಗಾವಿ ಟಿಕೆಟ್‌ ಸಿಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಅವರಿಗೆ ಅಲ್ಲಿಂದ ಸ್ಪರ್ಧಿಸಲು ಒಪ್ಪಿಗೆ ಇರಲಿಲ್ಲ. ಹಾಗಾಗಿ ಅಸಮಾಧಾನಗೊಂಡಿದ್ದರು.

ʼʼಇದೀಗ ನನ್ನ ಮನವರಿಕೆಯ ಬಳಿಕ ಜಗದೀಶ್ ಶೆಟ್ಟರ್ ಬೆಳಗಾವಿಯಿಂದ ಸ್ಪರ್ಧಿಸಲು ಒಪ್ಪಿಕೊಂಡಿದ್ದಾರೆ. ಶೆಟ್ಟರ್ ಭಾರಿ ಅಂತರದಿಂದ ಗೆಲ್ಲುವ ವಿಶ್ವಾಸವಿದೆʼʼ ಎಂದು ಬಿಎಸ್‌ವೈ ಹೇಳಿದ್ದಾರೆ.

ಮೇ 2023ರ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದ ಶೆಟ್ಟರ್, ಹುಬ್ಬಳ್ಳಿ- ಧಾರವಾಡ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಆನಂತರ ಅವರನ್ನು ಕಾಂಗ್ರೆಸ್‌, ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತ್ತು. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಶೆಟ್ಟರ್, ಸದ್ದಿಲ್ಲದೆ ಕಾಂಗ್ರೆಸ್‌ ಗೆ ಗುಡ್‌ ಬೈ ಹೇಳಿ, ಮತ್ತೆ ಬಿಜೆಪಿ ಸೇರಿದ್ದರು. ಈ ಮೂಲಕ ಅವರು ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿ ಘರ್ ವಾಪ್ಸಿ ಆಗಿದ್ದರು.

ಮೂಲಗಳ ಪ್ರಕಾರ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಘರ್ ವಾಪ್ಸಿ ಆಗುವ ವೇಳೆ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಬೇಕು ಎನ್ನುವ ಬೇಡಿಕೆ ಇಟ್ಟಿದ್ದರು. ಅದರಲ್ಲೂ ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಶಿಯವರ ಧಾರವಾಡ ಲೋಕಸಭಾ ಕ್ಷೇತ್ರದ ಮೇಲೆ ಶೆಟ್ಟರ್ ಕಣ್ಣಿಟ್ಟಿದ್ದರು. ಅದಾಗದಿದ್ದರೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟನ್ನಾದರೂ ನೀಡಬೇಕು ಎಂದು ಷರತ್ತು ಒಡ್ಡಿದ್ದರು. ಆರಂಭದಲ್ಲಿ ಶೆಟ್ಟರ್ ಮಾತಿಗೆ ಒಪ್ಪಿದ್ದ ಬಿಜೆಪಿ ನಾಯಕರು, ಇದೀಗ ಎರಡೂ ಕ್ಷೇತ್ರಗಳಲ್ಲಿ ಶೆಟ್ಟರ್‌ಗೆ ಟಿಕೆಟ್ ನೀಡದೆ ನಿರಾಸೆಗೊಳಿಸಿದ್ದರು. ಇದರಿಂದ ಅಸಮಾಧಾನ ಸ್ಪೋಟಗೊಂಡಿತ್ತು.

ರಾಜ್ಯದಿಂದ 20 ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಬಿಜೆಪಿ ಶೆಟ್ಟರ್ ಸೇರಿದಂತೆ ಮಾಜಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಹಾಗೂ ಒಂಬತ್ತು ಹಾಲಿ ಸಂಸದರನ್ನು ಆಶ್ಚರ್ಯಕರ ರೀತಿಯಲ್ಲಿ ಕೈಬಿಟ್ಟಿದೆ. ಸದ್ಯ ಉಳಿದ ಎಂಟು ಸ್ಥಾನಗಳಿಗೆ ಇನ್ನಷ್ಟೇ ಅಭ್ಯರ್ಥಿಗಳು ಘೋಷಣೆಯಾಗಬೇಕಿದೆ.

Tags:    

Similar News