Loksabha Election 2024 | ಮಲೆನಾಡಿನ ಸಾಂಪ್ರದಾಯಿಕ ಕುಟುಂಬ ಕದನಕ್ಕೆ ಟ್ವಿಸ್ಟ್‌ ಕೊಟ್ಟ ʼಕಣ್ಣಿಹರಿದʼ ಒಂಟೆತ್ತು!

ಕ್ಷೇತ್ರ ಕಳೆದ ಮೂರು ದಶಕಗಳಿಂದ ಮಾಜಿ ಮುಖ್ಯಮಂತ್ರಿ ದಿ.ಎಸ್ ಬಂಗಾರಪ್ಪ ಮತ್ತು ಬಿ ಎಸ್ ಯಡಿಯೂರಪ್ಪ ಕುಟುಂಬಗಳ ನಡುವಿನ ಹಣಾಹಣಿಯ ಕಣ. ಇದೀಗ ಐದನೇ ಬಾರಿ ಆ ಕುಟುಂಬಗಳು ಎದುರಾಳಿಗಳಾಗಿವೆ. ಆದರೆ, ಈ ಕುಟುಂಬ ಕದನಕ್ಕೆ ಈ ಬಾರಿ ಟ್ವಿಸ್ಟ್‌ ಕೊಟ್ಟಿರುವುದು ಯಡಿಯೂರಪ್ಪ ಅವರ ಒಂದು ಕಾಲದ ದೋಸ್ತಿ, ಮತ್ತು ಸದ್ಯದ ರಾಜಕೀಯ ದುಷ್ಮನಿ ಕೆ ಎಸ್‌ ಈಶ್ವರಪ್ಪ!;

Update: 2024-05-02 02:20 GMT

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ತ್ರಿಕೋನ ಸ್ಪರ್ಧೆಗೆ ಕಣವಾಗಿರುವ ಏಕೈಕ ಕ್ಷೇತ್ರ ಶಿವಮೊಗ್ಗ. ಅದರಲ್ಲೂ ಬಿಜೆಪಿಯ ʼಜೋಡೆತ್ತುʼಗಳು ಪರಸ್ಪರ ಗುದುಮುರಗಿಗೆ ಬಿದ್ದಿವೆ ಮತ್ತು ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳ ನಡುವೆ ಹಣಾಹಣಿ ಬಿರುಸಾಗಿದೆ ಎಂಬ ಕಾರಣಕ್ಕೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿದೆ.

ಮಲೆನಾಡು, ಅರೆ ಮಲೆನಾಡು ಮತ್ತು ಕರಾವಳಿಯ ಭೌಗೋಳಿಕ ಕ್ಷೇತ್ರಗಳನ್ನು ಒಳಗೊಂಡಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ಕಳೆದ ಮೂರು ದಶಕಗಳಿಂದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್ ಬಂಗಾರಪ್ಪ ಮತ್ತು ಬಿ ಎಸ್ ಯಡಿಯೂರಪ್ಪ ಕುಟುಂಬದ ನಡುವಿನ ಹಣಾಹಣಿಯ ಕಣವಾಗಿದೆ. ಆದರೆ, 2009ರ ಬಳಿಕ ನಡೆದ ಮೂರು ಸಾರ್ವತ್ರಿಕ ಮತ್ತು ಒಂದು ಉಪ ಚುನಾವಣೆ ಸೇರಿ ಎಲ್ಲಾ ನಾಲ್ಕು ಲೋಕಸಭಾ ಚುನಾವಣೆಗಳಲ್ಲೂ ಯಡಿಯೂರಪ್ಪ ಮತ್ತು ಅವರ ಪುತ್ರ, ಹಾಲಿ ಸಂಸದ ಬಿ ವೈ ರಾಘವೇಂದ್ರ ಗೆಲುವು ಪಡೆದಿದ್ದರೆ; ಒಮ್ಮೆ ಎಸ್ ಬಂಗಾರಪ್ಪ(ಬಿ ವೈ ರಾಘವೇಂದ್ರ ಎದುರು), ಒಮ್ಮೆ ಗೀತಾ ಶಿವರಾಜ್‌ಕುಮಾರ್(ಬಿ ಎಸ್ ಯಡಿಯೂರಪ್ಪ ಎದುರು) ಮತ್ತು ಮಧುಬಂಗಾರಪ್ಪ ಎರಡು ಬಾರಿ(ಬಿ ವೈ ರಾಘವೇಂದ್ರ ಎದುರು) ಸೋಲು ಕಂಡಿದ್ದಾರೆ.

ಇದೀಗ ಐದನೇ ಬಾರಿ ಬಂಗಾರಪ್ಪ ಮತ್ತು ಯಡಿಯೂರಪ್ಪ ಕುಟುಂಬಗಳು ಎದುರಾಳಿಗಳಾಗಿ ಪರಸ್ಪರ ಹಣಾಹಣಿಗೆ ಇಳಿದಿವೆ.

ಈ ಬಾರಿಯ ಕಣದ ಚಿತ್ರಣ

ಈ ಬಾರಿಯೂ ಸಾಂಪ್ರದಾಯಿಕ ಎದುರಾಳಿಗಳಾದ ಯಡಿಯೂರಪ್ಪ ಮತ್ತು ಬಂಗಾರಪ್ಪ ಕುಟುಂಬಗಳ ನಡುವಿನ ಕದನ ಕುತೂಹಲ ಮೂಡಿಸಿದೆ. 2014ರಲ್ಲಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಪೈಪೋಟಿ ನೀಡಿದ್ದ ಬಂಗಾರಪ್ಪ ಪುತ್ರಿ ಹಾಗೂ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಈ ಬಾರಿ ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿದಿದ್ದು ಹಾಲಿ ಬಿಜೆಪಿ ಸಂಸದ ಬಿ ವೈ ರಾಘವೇಂದ್ರ ಅವರಿಗೆ ಸವಾಲೊಡ್ಡಿದ್ದಾರೆ.

2009, 2018(ಉಪಚುನಾವಣೆ) ಮತ್ತು 2019ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕ್ಷೇತ್ರವನ್ನು ಪ್ರತಿನಿಧಿಸಿರುವ ರಾಘವೇಂದ್ರ ಈ ಬಾರಿ ನಾಲ್ಕನೇ ಬಾರಿಗೆ ಸಂಸತ್ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದಾರೆ. ಅದೇ ಹೊತ್ತಿಗೆ, 2009ರಲ್ಲಿ ತಮ್ಮ ತಂದೆ, ಸೋಲಿಲ್ಲದ ಸರದಾರ ಎಂದೇ ಹೆಸರಾಗಿದ್ದ ಎಸ್ ಬಂಗಾರಪ್ಪ ಅವರಿಗೆ ಸೋಲುಣಿಸಿದ ರಾಘವೇಂದ್ರ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳುವ ಹವಣಿಕೆಯಲ್ಲಿ ಗೀತಾ ಇದ್ದಾರೆ. ಸಹೋದರ ಹಾಗೂ ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಬೆನ್ನಿಗೆ ನಿಂತಿದ್ದಾರೆ.

ಆದರೆ, ಇದಿಷ್ಟೇ ಆಗಿದ್ದರೆ, ಬಹುಶಃ ಶಿವಮೊಗ್ಗ ರಾಜ್ಯದ 28 ಕ್ಷೇತ್ರಗಳಂತೆ ಕಾಂಗ್ರೆಸ್ ಮತ್ತು ಬಿಜೆಪಿ ಅಥವಾ ಅದರ ಮಿತ್ರಪಕ್ಷ ಜೆಡಿಎಸ್ ನಡುವಿನ ನೇರ ಹಣಾಹಣಿಯ ಕ್ಷೇತ್ರವಾಗಿ ಸೀಮಿತವಾಗುತ್ತಿತ್ತು. ನೀರಸವೆನಿಸಬಹುದಾದ ಕ್ಷೇತ್ರ ಕದನಕ್ಕೆ ಕುತೂಹಲಕಾರಿ ಟ್ವಿಸ್ಟ್ ಕೊಟ್ಟಿರುವುದು ಕೆ ಎಸ್ ಈಶ್ವರಪ್ಪ. ರಾಜ್ಯ ಬಿಜೆಪಿಯನ್ನು ಕಟ್ಟಿಬೆಳೆಸುವಲ್ಲಿ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ ಐದು ದಶಕದಿಂದ ಕೆಲಸ ಮಾಡಿರುವ ಈಶ್ವರಪ್ಪ, "ಪಕ್ಷ ನನ್ನ ತಾಯಿ" ಎನ್ನುತ್ತಿದ್ದವರು. ಪಕ್ಷ ಮತ್ತು ಪಕ್ಷದ ಮಾತೃಸಂಸ್ಥೆ ಸಂಘ ಪರಿವಾರದ ಆಣತಿಯನ್ನು ಎಂದೂ ಮೀರದ ಈಶ್ವರಪ್ಪ, ಈ ಬಾರಿ ಪಕ್ಷದ ಉಳಿವಿಗಾಗಿ ಹೋರಾಟ ಎಂಬ ಘೋಷಣೆಯೊಂದಿಗೇ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧವೇ ಚುನಾವಣಾ ಕಣಕ್ಕಿಳಿದಿದ್ದಾರೆ. ಕಹಾನಿಗೆ ಟ್ವಿಸ್ಟ್ ಕೊಟ್ಟಿರುವುದೇ ಈಶ್ವರಪ್ಪ ಅವರ ಈ ಎಂಟ್ರಿ. ಬಿಜೆಪಿ ಕಟ್ಟುವಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ʼಜೋಡೆತ್ತುʼಗಳಾಗಿ ದುಡಿದವರು ಎಂಬ ಮಾತಿದೆ. ಆದರೆ, ಈಗ ಈಶ್ವರಪ್ಪ ಜೋಡೆತ್ತಿನ ʼಕಣ್ಣಿಹರಿದುಕೊಂಡುʼ ಒಂಟೆತ್ತಾಗಿ ಗುಟುರು ಹಾಕುತ್ತಿದ್ದಾರೆ!

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ಎಂಟ್ರಿಯಿಂದಾಗಿ ತ್ರಿಕೋನ ಸ್ಪರ್ಧಾ ಕಣವಾಗಿ ಶಿವಮೊಗ್ಗ ಹೊರಹೊಮ್ಮಿದ್ದು, ಅವರ ʼಪಕ್ಷದ ಶುದ್ಧೀಕರಣʼದ ಈ ರಂಗ ಪ್ರವೇಶ ಅವರನ್ನು ದೆಹಲಿಯ ಸಂಸತ್ತಿನೊಳಗೆ ಕೂರಿಸಲಿದೆಯೇ? ಎಂಬುದಕ್ಕಿಂತ ಉಳಿದ ಇಬ್ಬರು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಲ್ಲಿ ಯಾರು ಎಂಟ್ರಿ ಪಡೆಯಬಹುದು ಎಂಬುದನ್ನಂತೂ ಖಂಡಿತಾ ನಿರ್ಧರಿಸಲಿದೆ ಎಂಬುದು ಶಿವಮೊಗ್ಗದ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಭವಿಷ್ಯ.

ನಾಲ್ಕನೇ ಬಾರಿಗೆ ನಿರೀಕ್ಷೆಯಲ್ಲಿ ರಾಘವೇಂದ್ರ

ಸಂಸದರಾಗಿ ತಮ್ಮ ಕಳೆದ ಹದಿನೈದು ವರ್ಷಗಳ ಅವಧಿಯಲ್ಲಿ(ತಂದೆ ಯಡಿಯೂರಪ್ಪ ನಾಲ್ಕು ವರ್ಷ ಅವಧಿ ಸೇರಿ) ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಯೋಜನೆಗಳನ್ನೇ ಪ್ರಮುಖವಾಗಿ ನೆಚ್ಚಿಕೊಂಡಿರುವ ಬಿ ವೈ ರಾಘವೇಂದ್ರ, ನಾಲ್ಕನೇ ಬಾರಿಗೆ ಜನರ ಆಶೀರ್ವಾದ ಪಡೆದು ದೆಹಲಿಗೆ ಹೋಗುವ ನಿರೀಕ್ಷೆಯಲ್ಲಿದ್ದಾರೆ. ಮುಖ್ಯಮಂತ್ರಿಯಾಗಿ ತಮ್ಮ ತಂದೆ ಬಿ ಎಸ್ ಯಡಿಯೂರಪ್ಪ ಜಿಲ್ಲೆಗೆ ತಂದಿರುವ ಅಭಿವೃದ್ಧಿ ಯೋಜನೆಗಳು, ತಮ್ಮ ಸಜ್ಜನಿಕೆ ಮತ್ತು ಮುಖ್ಯವಾಗಿ ಕ್ಷೇತ್ರದಾದ್ಯಂತ ವಿಸ್ತರಿಸಿರುವ ತಮ್ಮದೇ ಆದ ನೆಟ್ವರ್ಕನ್ನೇ ಅವರು ನೆಚ್ಚಿಕೊಂಡಿದ್ದಾರೆ.

ಅದರಲ್ಲೂ ಬಿಜೆಪಿಯ ಹಿರಿಯ ನಾಯಕ ಈಶ್ವರಪ್ಪ ಅವರು ತಮ್ಮ ಕುಟುಂಬದ ವಿರುದ್ಧವೇ ತೊಡೆತಟ್ಟಿ ಪಕ್ಷ ಮತ್ತು ಹಿಂದುತ್ವದ ಹೆಸರಿನಲ್ಲಿ ಕಣಕ್ಕಿಳಿದಿರುವುದರಿಂದ ರಾಘವೇಂದ್ರ ಅವರಿಗೆ ಅನಿರೀಕ್ಷಿತ ಸವಾಲು ಎದುರಾಗಿದೆ. ಕಳೆದ ಒಂದು ವಾರದ ಈಚೆಗೆ ಕಣದಲ್ಲಿ ಹೊಸ ಗಾಳಿ ಬೀಸತೊಡಗಿದ್ದು, ಅದು ರಾಘವೇಂದ್ರ ಅವರಿಗೆ ಸವಾಲಾಗಿದೆ. ಹಾಗಾಗಿ ಇದೀಗ ಅವರು ಹಿಂದೂ ಮತಗಳ ಜೊತೆಗೆ ಸೆಕ್ಯುಲರ್ ಮತಗಳನ್ನೂ ಬಾಚುವ ಸರ್ಕಸ್ ಆರಂಭಿಸಿದ್ದಾರೆ.

ಪ್ರಧಾನಿ ಮೋದಿಯವರ ಅಲೆ ಈ ಬಾರಿ ತಳಮಟ್ಟದಲ್ಲಿ ಇಲ್ಲ ಎಂಬ ಸಂಗತಿ ಒಂದು ಕಡೆಯಾದರೆ, ಯಡಿಯೂರಪ್ಪ ಮತ್ತು ಅವರ ಮಕ್ಕಳು ಅಧಿಕಾರಕ್ಕಾಗಿ ಮಾತ್ರ ಹಿಂದುತ್ವ ಬಳಸಿಕೊಳ್ಳುವವರು ಎಂಬ ವಾಗ್ದಾಳಿಯನ್ನು ಈಶ್ವರಪ್ಪ ಬಿರುಸುಗೊಳಿಸಿದ್ದಾರೆ. ಅಸಲಿ ಹಿಂದುತ್ವವಾದಿ ವರ್ಸಸ್ ನಕಲಿ ಹಿಂದುತ್ವವಾದಿ ಎಂಬ ನರೇಟಿವ್ ಕಟ್ಟುತ್ತಿರುವ ಈಶ್ವರಪ್ಪ ಅವರ ಈ ದಾಳ, ಎಷ್ಟರಮಟ್ಟಿಗೆ ಕೆಲಸ ಮಾಡುತ್ತದೆ ಎಂದು ಹೇಳಲಾಗದು. ಆದರೆ, ಸದ್ಯಕ್ಕೆ ಆ ದಾಳ ಆತಂಕ ಮೂಡಿಸಿರುವುದಂತೂ ಹೌದು.

ಸೋಲಿನ ಸೇಡು ತೀರಿಸಿಕೊಳ್ಳುವ ಹಠದಲ್ಲಿ ಗೀತಾ

ತಮ್ಮ ತಂದೆ ಎಸ್ ಬಂಗಾರಪ್ಪ ಅವರನ್ನು ಜರ್ಜರಿತಗೊಳಿಸಿದ, ರಾಜಕೀಯ ಬದುಕನ್ನು ಕಹಿ ನೆನಪಿನೊಂದಿಗೆ ಮುಕ್ತಾಯಗೊಳಿಸುವಂತೆ ಮಾಡಿದ 2009ರ ಲೋಕಸಭಾ ಚುನಾವಣಾ ಸೋಲು(ಬಿ ವೈ ರಾಘವೇಂದ್ರ ಎದುರು) ಹಾಗೂ 2014ರ ತಮ್ಮ ಸೋಲು(ಯಡಿಯೂರಪ್ಪ ವಿರುದ್ಧ)ಗಳ ಹಿನ್ನೆಲೆಯಲ್ಲಿ ಯಡಿಯೂರಪ್ಪ ಕುಟುಂಬದ ವಿರುದ್ಧದ ರಾಜಕೀಯ ಸೇಡು ತೀರಿಸಿಕೊಳ್ಳುವ ಹಠದಲ್ಲಿ ಗೀತಾ ಶಿವರಾಜ್ ಕುಮಾರ್ ಈ ಬಾರಿ ಕಣಕ್ಕಿಳಿದಿದ್ದಾರೆ. ಆಡಳಿತರೂಢ ಕಾಂಗ್ರೆಸ್ಸಿನ ಗ್ಯಾರಂಟಿ ಬಲ ಮತ್ತು ಕ್ಷೇತ್ರದಲ್ಲಿ ಅತಿದೊಡ್ಡ ಸಂಖ್ಯೆಯಲ್ಲಿರುವ ತಮ್ಮ ಸ್ವಜಾತಿ ಈಡಿಗ ಮತಗಳೊಂದಿಗೆ, ಮುಸ್ಲಿಂ ಮತಗಳ ಬಲದ ಮೇಲೆ ಗೀತಾ ವಿಶ್ವಾಸವಿಟ್ಟಿದ್ದಾರೆ. ಅವರ ಆ ವಿಶ್ವಾಸವನ್ನು ಬಿಜೆಪಿ ಬಂಡಾಯ ಅಭ್ಯರ್ಥಿ ಈಶ್ವರಪ್ಪ ಇನ್ನಷ್ಟು ಗಟ್ಟಿಗೊಳಿಸುತ್ತಿದ್ದಾರೆ.

ಆದರೆ ಕಳೆದ ಎರಡು ದಶಕದಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಚದುರಿ ಹೋಗಿರುವ ಈಡಿಗ ಸಮುದಾಯದ ಮತಗಳನ್ನು ಗೀತಾ ಕ್ರೋಡೀಕರಿಸಬಲ್ಲರೆ? ಆ ಮತಗಳ ಕ್ರೋಡೀಕರಣಕ್ಕೆ ಬಿಜೆಪಿ ಉರುಳಿಸಿರುವ ತಮ್ಮ ಸಹೋದರ ಮತ್ತು ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ದಾಳವನ್ನು ಹೇಗೆ ಎದುರಿಸಿ ಸಮುದಾಯದ ಒಗ್ಗಟ್ಟು ಕುದುರಿಸುತ್ತಾರೆ? ಎಂಬುದು ಅವರ ಸೋಲು- ಗೆಲುವನ್ನು ನಿರ್ಧರಿಸಲಿದೆ. ಜೊತೆಗೆ ಕೆ ಎಸ್ ಈಶ್ವರಪ್ಪ ಅವರ ʼರಾಷ್ಟ್ರಭಕ್ತರ ಬಳಗʼ ಎಷ್ಟು ಹಿಂದೂ ಮತಗಳನ್ನು ಪಡೆಯಲಿದೆ ಎಂಬುದು ಕೂಡ ಈ ವಿಷಯದಲ್ಲಿ ನಿರ್ಣಾಯಕ.

ಎರಡು ಕಣ್ಣು ತೆಗೆಯಲು ಒಂದು ಕಣ್ಣು ಪಣಕ್ಕಿಟ್ಟ ಈಶ್ವರಪ್ಪ

ತಮ್ಮ ಪುತ್ರನಿಗೆ ಹಾವೇರಿ ಲೋಕಸಭಾ ಟಿಕೆಟ್ ನಿರಾಕರಿಸಿದ್ದರ ಹಿಂದೆ ಯಡಿಯೂರಪ್ಪ ಮತ್ತು ಅವರ ಮಕ್ಕಳ ಪಿತೂರಿಯೇ ಇದೆ ಎಂದು ಘಂಟಾಘೋಷವಾಗಿ ಹೇಳಿರುವ ಕೆ ಎಸ್ ಈಶ್ವರಪ್ಪ, ಆ ಸೇಡಿಗಾಗಿ ʼರಾಷ್ಟ್ರಭಕ್ತರ ಬಳಗʼದ ಹೆಸರಿನಲ್ಲಿ ʼಬಿಜೆಪಿ ಶುದ್ಧೀಕರಣʼ ಮತ್ತು ʼಹಿಂದುತ್ವ ರಕ್ಷಣೆಗಾಗಿʼ ಕಣಕ್ಕಿಳಿದಿರುವುದಾಗಿ ಘೋಷಿಸಿದ್ದಾರೆ.

ಕಳೆದ ಒಂದು ವಾರದಿಂದ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿರುವ ಅವರು, ಬಿಎಸ್ ವೈ ಕುಟುಂಬವನ್ನೇ ಟಾರ್ಗೆಟ್ ಮಾಡಿ ಪ್ರಚಾರ ನಡೆಸುತ್ತಿದ್ದು, ತಮ್ಮ ಗೆಲುವಿಗಿಂತ ಬಿ ವೈ ರಾಘವೇಂದ್ರ ಅವರ ಸೋಲಿನ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದಾರೆ. “ಸಂಘ ನನ್ನ ಬೆನ್ನಿಗಿದೆ. ನಾನು ಪಕ್ಷದ ಒಳಿತಿಗಾಗಿ ರಾಜಕೀಯ ಬಲಿಪಶುವಾಗಲೂ ಸಿದ್ಧ” ಎಂಬ ಈಶ್ವರಪ್ಪ ಅವರ ಹೇಳಿಕೆಯಲ್ಲೇ ಸಾಕಷ್ಟು ಮರ್ಮ ಅಡಗಿದೆ. ಸಂಘಪರಿವಾರದ ಪ್ರಭಾವ ಮತ್ತು ಗಣನೀಯ ಸಂಖ್ಯೆಯ ಬ್ರಾಹ್ಮಣ ಮತಗಳು ನಿಜವಾಗಿಯೂ ʼರಾಷ್ಟ್ರಭಕ್ತ ಬಳಗʼದ ಈಶ್ವರಪ್ಪ ಕೈಹಿಡಿಯಲಿವೆಯೇ? ಎಂಬುದು ಕೂಡ ಚುನಾವಣಾ ಫಲಿತಾಂಶವನ್ನು ನಿರ್ಧರಿಸುವ ನಿರ್ಣಾಯಕ ಅಂಶ.

ಇದಿಷ್ಟು ಮೇಲ್ನೋಟದ ಚಿತ್ರಣ. ಆದರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರ ಈ ಬಾರಿ ಮೇಲಾಟಕ್ಕಿಂತ, ಒಳ ಆಟಗಳ ಅಂಕಣ. ಇಲ್ಲಿ ಯಾರ ಕೈ ಯಾರ ಮತ ಬುಟ್ಟಿಯಲ್ಲಿದೆ? ಯಾರು ಯಾರ ಹಿಂದಿನ ಸೂತ್ರಧಾರರು? ಎಂಬುದನ್ನು ಊಹಿಸಲಾಗದ ಸ್ಥಿತಿ ಇದೆ. ಹೊಂದಾಣಿಕೆ ರಾಜಕಾರಣ, ಕಾಲೆಳೆಯುವ ಆಟ, ಬಾಕಿ ಚುಕ್ತಾ, ಸೇರಿಗೆ ಸವ್ವಾಸೇರು, ಕಣದಲ್ಲಿರುವವರು ಮತ್ತು ಅವರ ಹಿಂದಿರುವವರ ಪ್ರತಿಷ್ಠೆ, ʼಸಂಘಿʼಕ ಯತ್ನಗಳೇ ನಿಜವಾದ ನಿರ್ಣಾಯಕ ಅಂಶಗಳು. ಹಾಗಾಗಿ ಈ ಬಾರಿಯ ಹಣಾಹಣಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಡುವೆಯೇ ಇದ್ದರೂ, ಫಲಿತಾಂಶವನ್ನು ನಿರ್ಧರಿಸುವುದು ಈಶ್ವರಪ್ಪ ಪಡೆಯುವ ಮತಗಳೇ ಎಂಬುದು ವಿಪರ್ಯಾಸ!

ಕ್ಷೇತ್ರದ ವಿಧಾನಸಭಾ ಬಲಾಬಲ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಬೈಂದೂರು ಸೇರಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಆ ಪೈಕಿ ನಾಲ್ಕು ಕಡೆ ಬಿಜೆಪಿ, ಮೂರು ಕಡೆ ಕಾಂಗ್ರೆಸ್ ಹಾಗೂ ಒಂದು ಕಡೆ ಜೆಡಿಎಸ್ ಶಾಸಕರಿದ್ದಾರೆ.

ಜಾತಿವಾರು ಲೆಕ್ಕಾಚಾರದಲ್ಲಿ ಕ್ಷೇತ್ರದ ಒಟ್ಟು 17 ಲಕ್ಷ ಮತದಾರರ ಪೈಕಿ ಮೂರೂವರೆ ಲಕ್ಷ ಈಡಿಗ (ದೀವರು ಮತ್ತು ಬಿಲ್ಲವ) ಮತಗಳಿವೆ. ಎರಡೂವರೆ ಲಕ್ಷ ಮುಸ್ಲಿಂ ಮತಗಳು, ಎರಡೂವರೆ ಲಕ್ಷ ಲಿಂಗಾಯತರು ಹಾಗೂ ಒಂದೂವರೆ ಲಕ್ಷ ಬ್ರಾಹ್ಮಣ ಮತಗಳು ಇವೆ. ಇನ್ನುಳಿದಂತೆ ಒಕ್ಕಲಿಗ, ಕುರುಬ, ಬಂಜಾರ, ತಮಿಳು ಮತಗಳೂ ಇವೆ. ಆದರೆ, ಕಳೆದ ಎರಡು ದಶಕದಿಂದ ಕ್ಷೇತ್ರದಲ್ಲಿ ಜಾತಿ ಆಧಾರದಲ್ಲಿ ಮತಗಳು ಕ್ರೋಡೀಕರಣಗೊಂಡಿದ್ದು ವಿರಳ.

Tags:    

Similar News