ಲೋಕ ಸ್ವಾರಸ್ಯ | ಮೋದಿ ಯಾರಪ್ಪನ ಮನೆ ಆಸ್ತಿ? ʼಕೇಸರಿ ಕಣʼದಲ್ಲಿ ಟಾಮ್‌ ಅಂಡ್‌ ಜೆರ್ರಿ ಕುಸ್ತಿ !‌

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವಾರಸ್ಯಕರ ಬೆಳವಣಿಗೆಗಳು ಬಿರುಬಿಸಿಲಿನ ನಡುವೆಯೂ ರಾಜ್ಯದ ಮತದಾರರ ಬಾಯಿಗೆ ರಸಗವಳವಾಗಿವೆ. ಸದ್ಯಕ್ಕಂತೂ ಈ ವಾರಸುದಾರಿಕೆ ವಾರ್‌, ಲೋಕಸಭಾ ಕಣದ ʼಟಾಮ್‌ ಅಂಡ್‌ ಜೆರ್ರಿʼ ಕಥೆಯಂತಾಗಿದೆ!;

Update: 2024-04-05 11:58 GMT

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದಿರೋದು ಶಿವಮೊಗ್ಗ ಲೋಕಸಭಾ ಕ್ಷೇತ್ರ. ರಾಜ್ಯದಲ್ಲಿ ಸದ್ಯದ ಮಟ್ಟಿಗೆ ತ್ರಿಕೋನ ಸ್ಪರ್ಧೆಯತ್ತ ಸಾಗುತ್ತಿರುವ ಕ್ಷೇತ್ರ ಎಂಬುದು ಒಂದು ಕಾರಣವಾದರೆ, ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿಬೆಳೆಸಿದ ನಾಯಕರಿಬ್ಬರ ನಡುವಿನ ಸಮರಕ್ಕೆ ಕ್ಷೇತ್ರ ಸಾಕ್ಷಿಯಾಗಿದೆ ಎಂಬುದು ಮತ್ತೊಂದು ಕಾರಣ. ಜೊತೆಗೆ ಡಾ ರಾಜ್‌ ಕುಮಾರ್‌ ಕುಟುಂಬದ ಸೊಸೆ, ಮಾಜಿ ಮುಖ್ಯಮಂತ್ರಿ ಎಸ್‌ ಬಂಗಾರಪ್ಪ ಪುತ್ರಿ ಕೂಡ ಬಿರುಸಿನ ಪೈಪೋಟಿ ಒಡ್ಡಿದ್ದಾರೆ ಎಂಬ ಕುತೂಹಲ ಕೂಡ ಇದೆ.

ಇದೆಲ್ಲಾ ರಾಜಕಾರಣದ ಗಂಭೀರ ಆಸಕ್ತಿಯ ಸಂಗತಿಗಳು. ಆದರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ, ರಾಜ್ಯದ ಜನಸಾಮಾನ್ಯರ ಬಾಯಲ್ಲಿ ಹರಿದಾಡುತ್ತಿರುವ ರೋಚಕ ಸಂಗತಿಗಳು ಬೇರೆಯೇ ಇವೆ.

ತಮ್ಮ ಹಿಡಿತವಿಲ್ಲದ ಮಾತು, ಅಸೂಕ್ಷ್ಮ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಬಿಜೆಪಿ ಹಿರಿಯ ನಾಯಕ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ ಎಸ್‌ ಈಶ್ವರಪ್ಪ ಈ ಬಾರಿ, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ, ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಪುತ್ರ ಹಾಗೂ ಹಾಲಿ ಸಂಸದ ಬಿ ವೈ ರಾಘವೇಂದ್ರ ವಿರುದ್ಧ ಬಂಡಾಯ ಸಾರಿ ಕಣಕ್ಕಿಳಿದಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಕೆ ಇ ಕಾಂತೇಶ್‌ಗೆ ಬಿಜೆಪಿ ಟಿಕೆಟ್‌ ಬಯಸಿದ್ದ ಈಶ್ವರಪ್ಪ, ತಮ್ಮ ಪುತ್ರನಿಗೆ ಅಲ್ಲಿ ಟಿಕೆಟ್‌ ಕೈತಪ್ಪುತ್ತಲೇ ಶಿವಮೊಗ್ಗದಲ್ಲಿ ಬಂಡಾಯದ ಬಾವುಟ ಹಾರಿಸಿದ್ದಾರೆ. ʼಜೈ ಭಜರಂಗಬಲಿʼ ಎಂದು ತಾವೇ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.

ಇಲ್ಲಿ ಸ್ವಾರಸ್ಯಕರ ಸಂಗತಿ ಎಂದರೆ, “ಯಡಿಯೂರಪ್ಪ ಅವರು ತಮ್ಮ ಒಬ್ಬ ಪುತ್ರನನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಮತ್ತೊಬ್ಬನನ್ನು ಇಷ್ಟು ವರ್ಷ ಸಂಸದನನ್ನಾಗಿ ಮಾಡಿ ಈಗ ಮತ್ತೆ ಕಣಕ್ಕಿಳಿಸಿದ್ಧಾರೆ. ಇವರ ಕುಟುಂಬ ರಾಜಕಾರಣದಿಂದಾಗಿ ಬಿಜೆಪಿ ಪಕ್ಷ ಸರ್ವನಾಶವಾಗುತ್ತಿದೆ. ನಾವು ರಾಜ್ಯದ ಉದ್ದಗಲ ಸುತ್ತಿ ಕಟ್ಟಿದ ಪಕ್ಷ ಹೀಗೆ ನಾಶವಾಗಲು ಬಿಡುವುದಿಲ್ಲ. ಅವರ ವಿರುದ್ಧ ಚುನಾವಣೆಯಲ್ಲಿ ಗೆದ್ದು ಪಕ್ಷವನ್ನು ಶುದ್ಧೀಕರಿಸುತ್ತೇನೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಾನು ಕೈಜೋಡಿಸುತ್ತೇನೆ. ಚುನಾವಣೆಯಲ್ಲಿ ಗೆದ್ದು ಹೋಗಿ ಮೋದಿಗಾಗಿ ಕೈ ಎತ್ತುತ್ತೇನೆ. ನನ್ನ ಸ್ಪರ್ಧೆಗೆ ಮೋದಿ- ಅಮಿತ್‌ ಶಾ ಆಶೀರ್ವಾದವೂ ಇದೆ” ಎಂದು ಈಶ್ವರಪ್ಪ ಚುನಾವಣಾ ಪ್ರಚಾರದುದ್ದಕ್ಕೂ ಹೇಳುತ್ತಿದ್ದಾರೆ! ಆದರೆ, ಸ್ವತಃ ಈಶ್ವರಪ್ಪ ಕಣಕ್ಕಿಳಿದಿರುವುದು ಕೂಡ ತಮ್ಮ ಪುತ್ರನಿಗೆ ಟಿಕೆಟ್‌ ಕೈತಪ್ಪಿದೆ ಎಂಬ ಕಾರಣಕ್ಕೆ!

ಈಶ್ವರಪ್ಪ ʼಹನುಮಭಕ್ತಿʼ ಕಂಡು ದಿಗಿಲಾದರು!

ಈ ನಡುವೆ, ಕಹಾನಿಯ ಟ್ವಿಸ್ಟ್‌ ಅಂದ್ರೆ; ಸಂಸದ ರಾಘವೇಂದ್ರ ಮತ್ತು ಈಶ್ವರಪ್ಪ ನಡುವೆ ಪ್ರಧಾನಿ ಮೋದಿಯವರ ವಾರಸುದಾರಿಕೆಯ ಕಲಹ. ಬಿಜೆಪಿಯ ಅಧಿಕೃತ ಹುರಿಯಾಳು ವಿರುದ್ಧವೇ ತೊಡೆತಟ್ಟಿ ಬಿರುಸಿನ ಪ್ರಚಾರ ನಡೆಸುತ್ತಿರುವ ಈಶ್ವರಪ್ಪ, ಹೋದಲ್ಲಿ ಬಂದಲ್ಲಿ ಹೇಳುತ್ತಿರುವುದು ಒಂದೇ… “ನಾನು ದೇಶಭಕ್ತ, ಮೋದಿ ಭಕ್ತ. ನನ್ನ ಎದೆ ಬಗೆದರೆ ಒಂದು ಕಡೆ ಶ್ರೀರಾಮ, ಮತ್ತೊಂದು ಕಡೆ ಮೋದಿ ಕಾಣ್ತಾರೆ. ನಾನು ಮೋದಿಗಾಗಿ, ದೇಶಕ್ಕಾಗಿ, ಪಕ್ಷಕ್ಕಾಗಿ ಚುನಾವಣೆಗೆ ನಿಂತಿದ್ದೇನೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ನನಗೆ ಬೆಂಬಲಿಸಿ. ಪಕ್ಷ ಉಳಿಸಲು ನನ್ನ ಹಾರೈಸಿ..” ಎಂದು!

ಈಶ್ವರಪ್ಪ ಅವರ ಈ ʼಭಕ್ತಿʼಯೇ ಎದುರಾಳಿ ರಾಘವೇಂದ್ರ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ, ಮೂರು ಬಾರಿ ಪಕ್ಷದ ಸಂಸದನಾಗಿ ತಾವು ಆಡಬೇಕಾದ ಮಾತುಗಳನ್ನು, ಹೇಳಬೇಕಾದ ಘೋಷಣೆಗಳನ್ನು ತಮ್ಮ ವಿರುದ್ಧ ಬಂಡಾಯ ಸಾರಿರುವ ವ್ಯಕ್ತಿಯೇ ಹೇಳಿದರೆ, ಮತದಾರರ ಮುಂದೆ ಹೇಳಲು ತಮಗೆ ಉಳಿಯುವುದೇನು? ಎಂಬುದು ರಾಘವೇಂದ್ರ ಅವರ ಎದುರಿರುವ ಆತಂಕ.


ಅಲ್ಲದೆ, ಈಶ್ವರಪ್ಪ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಪ್ರಚಾರ ಸಭೆಗಳಲ್ಲಿ ಮೋದಿಯವರ ಫೋಟೋ ಹಾಕಿ, ಅದರ ಕೆಳಗೆ “ದೇಶಕ್ಕಾಗಿ ನರೇಂದ್ರ ಮೋದಿ, ಶಿವಮೊಗ್ಗಕ್ಕಾಗಿ ಹಿಂದುತ್ವವಾದಿ” ಎಂದು ಸ್ಲೋಗಲ್‌ ಹಾಕಿ, ʼರಾಷ್ಟ್ರಭಕ್ತರ ಬಳಗʼ ಎಂಬ ಹೆಸರಿನಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಭಾರತೀಯ ಜನತಾ ಪಕ್ಷದ ಚಹರೆಯೇ ಪ್ರಧಾನಿ ಮೋದಿಯಾಗಿರುವಾಗ, ಪಕ್ಷದ ಚುನಾವಣಾ ಆಕರ್ಷಣೆಯೇ ಪ್ರಧಾನಿಯವರಾಗಿರುವಾಗ, ಅವರದೇ ಫೋಟೋ ಬಳಸಿ, ಅವರ ಹೆಸರಲ್ಲೇ, ಅವರದೇ ಪಕ್ಷದ ವಿರುದ್ಧ ಮತ ಚಲಾಯಿಸುವಂತೆ ಕೇಳುವ ಈಶ್ವರಪ್ಪ ಅವರ ತಂತ್ರಗಾರಿಕೆ ಪಕ್ಷದ ಅಭ್ಯರ್ಥಿ ರಾಘವೇಂದ್ರ ಅವರನ್ನು ದಿಗಿಲುಬೀಳಿಸಿದೆ. 

ಜೊತೆಗೆ, ʼತಮಗೆ ರಾಷ್ಟ್ರಭಕ್ತರೆಲ್ಲರ ಬೆಂಬಲವಿದೆ. ವಂಶಪಾರಂಪರ್ಯ ರಾಜಕಾರಣದ ವಿರುದ್ಧ ದೇಶಭಕ್ತರು, ಹಿಂದುತ್ವವಾದಿಗಳು ತಮ್ಮ ಪರ ನಿಂತಿದ್ದಾರೆʼ ಎಂದೂ ಈಶ್ವರಪ್ಪ ಹೇಳುತ್ತಿದ್ದಾರೆ. ʼಹಿಂದುತ್ವʼ ಮತ್ತು ʼದೇಶಭಕ್ತಿʼ ಎಂಬ ಎರಡು ಚಲಾವಣೆಯಲ್ಲಿರುವ ನಾಣ್ಯಗಳೇ ಬಿಜೆಪಿಯ ಮತ ಸೆಳೆಯುವ ಪ್ರಮುಖ ಅಸ್ತ್ರಗಳು. ಆ ಅಸ್ತ್ರಗಳನ್ನೇ ಬಳಸಿ ಈಶ್ವರಪ್ಪ ತಮ್ಮ ವಿರುದ್ಧ ಪ್ರತ್ಯಾಸ್ತ್ರ ಬಿಡುತ್ತಿರುವುದು ಬಿಜೆಪಿಯ ಅಭ್ಯರ್ಥಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ!

ಹಾಗಾಗಿಯೇ, ರಾಘವೇಂದ್ರ ಅವರು, “ಈಶ್ವರಪ್ಪನವರು ಪಕ್ಷದ ನಾಯಕರಾದ ಪ್ರಧಾನಿ ಮೋದಿಯವರ ಫೋಟೋ ಹಾಕಿಕೊಂಡು ಪ್ರಚಾರ ಮಾಡುವುದನ್ನು ನಿಲ್ಲಿಸಲಿ” ಎಂದು ಹುಕುಂ ಹೊರಡಿಸಿದ್ದರು. ಈ ಹುಕುಂ ಈಗಾಗಲೇ ಚುನಾವಣಾ ಗೆಲುವಿನ ಹುಕಿಯಲ್ಲಿರುವ ಈಶ್ವರಪ್ಪ ಅವರನ್ನು ಕೆರಳಿಸಿಬಿಟ್ಟಿದೆ. ಅದೇ ಕೋಪದಲ್ಲೇ ಪ್ರತಿಕ್ರಿಯಿಸಿರುವ ಅವರು, “ಮೋದಿ ಏನು ಇವರಪ್ಪನ ಮನೆ ಆಸ್ತಿನಾ? ಮೋದಿ ವಿಶ್ವನಾಯಕರು. ಮೋದಿ ಯಾರಪ್ಪನ ಮನೆ ಆಸ್ತಿಯಲ್ಲ. ನನ್ನ ಹೃದಯದಲ್ಲಿ ಇಟ್ಕೊಂಡಿದೀನಿ ಮೋದಿನಾ.. ಮೋದಿ ಹೆಸರಲ್ಲೇ ಓಟು ಕೇಳ್ತೀನಿ, ಗೆದ್ದು ಮೋದಿ ಪರ ಕೈ ಎತ್ತುತ್ತೀನಿ..” ಎಂದು ತಮ್ಮ ಪಾಲಿನ ʼರಾಮʼ ಮೋದಿಯವರ ಕುರಿತು ʼಹನುಮ ಭಕ್ತಿʼಯನ್ನು ಮೆರೆದಿದ್ದಾರೆ.

ಖುದ್ದು ಬರಲು ಹೇಳಿದವರು ಕುದ್ದುಹೋದರು!

ಈ ನಡುವೆ ಮತ್ತೊಂದು ಸ್ವಾರಸ್ಯಕರ ಸಂಗತಿಯೂ ನಡೆದಿದೆ. ಅಮಿತ್‌ ಶಾ ಅವರ ಸೂಚನೆ ಮೇರೆಗೆ ಅವರನ್ನು ಬೇಟಿ ಮಾಟಲು ದೆಹಲಿಗೆ ಹೋಗಿದ್ದ ಈಶ್ವರಪ್ಪ, ದೆಹಲಿ ವಿಮಾನ ಹತ್ತುವ ಮುನ್ನವೇ ಪತ್ರಿಕಾಗೋಷ್ಠಿ ನಡೆಸಿ ʼರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಮಾಡಲು ಒಪ್ಪಿದರೆ ಮಾತ್ರ ತಾವು ಕಣದಿಂದ ಹಿಂದೆ ಸರಿಯುವುದಾಗಿʼ ಷರತ್ತು ವಿಧಿಸಿದ್ದರು. ಶಾ ಖುದ್ದು ಬರಲು ಹೇಳಿದ್ದಾರೆಂದರೆ, ತಮ್ಮ ಬೇಡಿಕೆ ಈಡೇರುತ್ತೆ, ಕಣದಿಂದ ಹಿಂದೆ ಸರಿಸಲು ತಮ್ಮ ಷರತ್ತಿಗೆ ಒಪ್ಪಿಯೇ ಒಪ್ಪುತ್ತಾರೆ ಎಂಬ ವಿಶ್ವಾಸದಲ್ಲಿ ಹೋಗಿದ್ದ ಅವರಿಗೆ ದೆಹಲಿಯಲ್ಲಿ ಭರ್ಜರಿ ಶಾಕ್‌ ಕಾದಿತ್ತು.

ದೆಹಲಿಗೆ ಹೋಗಿ ಅಮಿತ್‌ ಶಾ ಮನೆ ಮುಂದೆ ಒಂದಿಡೀ ದಿನ ಕಾದರೂ, ಇವರ ಷರತ್ತಿನಿಂದ ಕುದ್ದುಹೋಗಿದ್ದ ಅಮಿತ್‌ ಶಾ, ಈಶ್ವರಪ್ಪಗೆ ದರ್ಶನ ಭಾಗ್ಯವನ್ನೇ ಕೊಡಲಿಲ್ಲ! ಯಾಕೆ ಎಂದು ಕೇಳಿದಾಗ, “ನನಗೇ ಷರತ್ತು ಹಾಕಿ ಮಾತುಕತೆಗೆ ಬರುವಷ್ಟು ದೊಡ್ಡವರಾಗಿದ್ದಾರೆ ಎಂದರೆ, ಅವರ ಜೊತೆ ಮಾತುಕತೆ ಇರಲಿ, ಭೇಟಿಯೂ ಬೇಡ. ವಾಸಪ್‌ ಹೋಗಲು ಹೇಳಿ..” ಎಂದು ʼಬಿಗ್‌ ಬಾಸ್ʼ ಹೇಳಿರುವುದು ಗೊತ್ತಾಗಿದೆ. ಅವರ ಈ ಪ್ರತಿಕ್ರಿಯೆ ಕೇಳಿ ಬಂದ ದಾರಿಗೆ ಸುಂಕವಿಲ್ಲದೆ ವಾಪಸ್‌ ಶಿವಮೊಗ್ಗ ವಿಮಾನ ಹತ್ತಿದ ಈಶ್ವರಪ್ಪ, ಈಗ ʼಮೋದಿ ಫೋಟೋʼ ಒಂದೇ ತಮ್ಮ ಆಪತ್ಬಾಂಧವ ಎಂದು ಪ್ರಚಾರಕ್ಕೆ ಮರಳಿದ್ದಾರೆ!

ಒಟ್ಟಾರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವಾರಸ್ಯಕರ ಬೆಳವಣಿಗೆಗಳು ದಿನವೂ ರಾಜ್ಯದ ಮತದಾರರ ಪಾಲಿಗೆ ಬಿರುಬಿಸಿಲಿನ ನಡುವೆಯೂ ಬಾಯಿಗೆ ರಸಗವಳವಾಗಿದೆ. ಸದ್ಯಕ್ಕಂತೂ ಈ ವಾರಸುದಾರಿಕೆ ವಾರ್‌, ಲೋಕಸಭಾ ಕಣದ ́ಟಾಮ್‌ ಅಂಡ್‌ ಜೆರ್ರಿʼ ಕಥೆಯಂತಾಗಿದೆ!

Tags:    

Similar News