ಲೋಕ ಸ್ವಾರಸ್ಯ | ಎರಡನೇ ಹಂತ: ಕಾಂಗ್ರೆಸ್ ಕಟ್ಟಾಳುಗಳಲ್ಲಿ ಮೊದಲ ಬಾರಿಗೆ ಕಣಕ್ಕಿಳಿದವರೇ ಹೆಚ್ಚು!
ಇಬ್ಬರು ಅಭ್ಯರ್ಥಿಗಳನ್ನು ಹೊರತುಪಡಿಸಿ ಕಾಂಗ್ರೆಸ್‌ನ ಉಳಿದ 12 ಅಭ್ಯರ್ಥಿಗಳು ಮೊದಲ ಬಾರಿಗೆ ಲೋಕಸಭಾ ಚುನಾವಣೆ ಎದುರಿಸುತ್ತಿದ್ದಾರೆ. ಆ ಪೈಕಿ ಏಳು ಮಂದಿ ಚುನಾವಣಾ ರಾಜಕಾರಣಕ್ಕೇ ಹೊಸಬರು. ಮೊದಲ ಬಾರಿಗೆ ಅವರು ಚುನಾವಣಾ ಕಣಕ್ಕೆ ಧುಮುಕಿದ್ದಾರೆ.;
ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯತ್ತಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರಂದು ಮತದಾನ ನಡೆಯಲಿದೆ. ಈ ಎರಡನೇ ಹಂತದಲ್ಲಿ ಚುನಾವಣೆ ಎದುರಿಸುತ್ತಿರುವ ರಾಜ್ಯದ ಮಧ್ಯ ಕರ್ನಾಟಕ ಮತ್ತು ಉತ್ತರಕರ್ನಾಟಕದ ಲೋಕಸಭಾ ಕ್ಷೇತ್ರಗಳ ಈ ಬಾರಿಯ ಪೈಪೋಟಿಯ ವಿಶೇಷತೆ ಏನೆಂದರೆ, ಇಬ್ಬರು ಅಭ್ಯರ್ಥಿಗಳನ್ನು ಹೊರತುಪಡಿಸಿ ಕಾಂಗ್ರೆಸ್‌ನ ಉಳಿದ 12 ಅಭ್ಯರ್ಥಿಗಳು ಮೊದಲ ಬಾರಿಗೆ ಲೋಕಸಭಾ ಚುನಾವಣೆ ಎದುರಿಸುತ್ತಿದ್ದಾರೆ. ಆ ಪೈಕಿ ಏಳು ಮಂದಿ ಚುನಾವಣಾ ರಾಜಕಾರಣಕ್ಕೇ ಹೊಸಬರು. ಮೊದಲ ಬಾರಿಗೆ ಅವರು ಚುನಾವಣಾ ಕಣಕ್ಕೆ ಧುಮುಕಿದ್ದಾರೆ.
ಮೊದಲ ಬಾರಿಗೆ ಚುನಾವಣಾ ರಾಜಕಾರಣಕ್ಕೆ ಇಳಿದವರು
ಪ್ರಿಯಾಂಕಾ ಜಾರಕಿಹೊಳಿ (ಚಿಕ್ಕೋಡಿ), ಮೃಣಾಲ್ ಹೆಬ್ಬಾಳ್ಕರ್ (ಬೆಳಗಾವಿ), ಸಂಯುಕ್ತಾ ಪಾಟೀಲ್ (ಬಾಗಲಕೋಟೆ), ರಾಧಾಕೃಷ್ಣ ದೊಡ್ಡಮನಿ (ಕಲಬುರಗಿ), ಸಾಗರ್ ಖಂಡ್ರೆ (ಬೀದರ್), ಜಿ. ಕುಮಾರ್ ನಾಯಕ (ರಾಯಚೂರು), ಡಾ. ಪ್ರಭಾ ಮಲ್ಲಿಕಾರ್ಜುನ (ದಾವಣಗೆರೆ). ಈ ಏಳು ಮಂದಿ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಅವರಿಗೆ ಈ ಮೊದಲು ಯಾವುದೇ ಚುನಾವಣೆ ಎದುರಿಸಿದ ಅನುಭವವಿಲ್ಲ.
ಮೊದಲ ಬಾರಿಗೆ ಲೋಕಸಭಾ ಚುನಾವಣೆ ಎದುರಿಸುತ್ತಿರುವವರು
ಕಾಂಗ್ರೆಸ್‌ನ ಐವರು ಅಭ್ಯರ್ಥಿಗಳು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಅನುಭವ ಹೊಂದಿದ್ದರೂ, ಇದೇ ಮಾದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ.
ರಾಜು ಅಲಗೂರ - 2014ರಲ್ಲಿ ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ಸಾಬೂನು ಮಾರ್ಜಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಪಡೆದಿದ್ದರು.
ಇ. ತುಕಾರಾಂ - 2023ರ ರಾಜ್ಯ ವಿಧಾಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು. ಸದ್ಯ ಹಾಲಿ ಶಾಸಕರಾಗಿದ್ದು ಈ ಬಾರಿಯ ಬಳ್ಳಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ.
ಆನಂದ ಗಡ್ಡದೇವರಮಠ - 2013ರಲ್ಲಿ ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯಬೇಕೆಂದಿದ್ದರು. ಆದರೆ, ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಟೀಕೆಟ್ ಸಿಕ್ಕಿದ್ದರಿಂದ ಆನಂದಸ್ವಾಮಿ ಗಡ್ಡದೇವರಮಠ ಅವರು ಬಂಡೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು, ಸೋಲು ಕಂಡಿದ್ದರು.
ವಿನೋದ್ ಅಸೂಟಿ - 2019ರ ವಿಧಾನಸಭಾ ಚುನಾವಣೆಯಲ್ಲಿ ಶಂಕರ್ ಪಾಟೀಲ್ ಮುನೇನಕೊಪ್ಪ ವಿರುದ್ಧ ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಕಂಡಿದ್ದರು.
ಡಾ. ಅಂಜಲಿ ನಿಂಬಾಳ್ಕರ್ - 2018ರ ವಿಧಾನಸಭಾ ಚುನಾವಣೆಯಲ್ಲಿ ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಣಕ್ಕಿಳಿದಿದ್ದ ಅಂಜಲಿ ನಿಂಬಾಳ್ಕರ್ ಅವರು ಬಿಜೆಪಿ ಅಭ್ಯರ್ಥಿ ವಿಠಲ ಹಲಗೇಕರ ವಿರುದ್ಧ ಸೋಲುಂಡಿದ್ದರು.
ಇಬ್ಬರು ಅನುಭವಿ ಉಮೇದುವಾರರು
ಈ ಬಾರಿ ಕಾಂಗ್ರೆಸ್‌ನಿಂದ ಕಣಕ್ಕಿಳಿದವರ ಪೈಕಿ ಇಬ್ಬರು ಈ ಹಿಂದೆ ಲೋಕಸಭಾ ಚುನಾವಣೆಯನ್ನು ಎದುರಿಸಿದ ಅನುಭವಿಗಳಿದ್ದಾರೆ.
ಗೀತಾ ಶಿವರಾಜಕುಮಾರ್ - ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅನುಭವ ಇದೆ. ಅವರು 2014ರ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಆಗ ಮಧು ಬಂಗಾರಪ್ಪ ಅವರು ಜೆಡಿಎಸ್‌ನಲ್ಲಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಗೀತಾ ಶಿವರಾಜ್ ಕುಮಾರ್ ಅವರು ಸೋಲು ಕಂಡಿದ್ದರು.
ರಾಜಶೇಖರ್ ಹಿಟ್ನಾಳ - ಕೊಪ್ಪಳ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಾಜಶೇಖರ ಹಿಟ್ನಾಳ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಕರಡಿ ಸಂಗಣ್ಣ ಎದುರು ಕಣಕ್ಕಿಳಿದು ಸೋಲು ಕಂಡಿದ್ದರು. ಈಗ ಎರಡನೇ ಬಾರಿಗೆ ಸ್ಪರ್ಧೆಯಲ್ಲಿದ್ದಾರೆ.