ಲೋಕ ಸ್ವಾರಸ್ಯ | ಈಶ್ವರಪ್ಪ ರೋಡ್‌ ಶೋನಲ್ಲಿ ದಿಢೀರ್‌ ಪ್ರತ್ಯಕ್ಷರಾದ ʼಮೋದಿʼ!

ಮೆರವಣಿಗೆ ಉದ್ದಕ್ಕೂ ರಾರಾಜಿಸುತ್ತಿದ್ದ ಮೋದಿಯವರ ಫೋಟೋ, ಕೇಸರಿ ಧ್ವಜಗಳ ಜೊತೆಗೆ ವಾಹನದ ಮೇಲೆ ಸಾಕ್ಷಾತ್ ಮೋದಿಯವರೇ ಕಾಣಿಸಿಕೊಂಡರಲ್ಲ ಎಂದು ಜನ ಅಚ್ಚರಿಗೊಳಗಾದರು.;

Update: 2024-04-12 14:47 GMT

ಶಿವಮೊಗ್ಗದ ಜನ ಶುಕ್ರವಾರ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಅವರ ನಾಮಪತ್ರ ಸಲ್ಲಿಕೆ ರೋಡ್ ಶೋ ನೋಡಿ ಅವಕ್ಕಾದರು!

ಪಕ್ಷದ ಅಧಿಕೃತ ಅಭ್ಯರ್ಥಿ, ಹಾಲಿ ಸಂಸದ ಬಿ ವೈ ರಾಘವೇಂದ್ರ ವಿರುದ್ಧ ತೊಡೆ ತಟ್ಟಿರುವ ಈಶ್ವರಪ್ಪ ಪಕ್ಷದಲ್ಲಿ ನಿಂತು ಅವರ ನಾಮಪತ್ರ ಸಲ್ಲಿಕೆಗೆ ಸಾಥ್ ಕೊಟ್ಟುಬಿಟ್ರಲ್ಲಾ ಮೋದೀಜಿ,.. ಇದೇನಿದು ಎಂದು ಜನ ದಂಗಾದರು.

ಅದರಲ್ಲೂ ಪ್ರಧಾನಿ ಮೋದಿಯವರ ಫೋಟೋ, ಹೆಸರು ಬಳಸುವ ವಿಷಯದಲ್ಲಿ ಬಿ ವೈ ರಾಘವೇಂದ್ರ ಹಾಗೂ ಈಶ್ವರಪ್ಪ ನಡುವೆ ಪರಸ್ಪರ ವಾಗ್ವಾದ ಬೀದಿಯಿಂದ ಕೋರ್ಟ್ ಕಟಕಟೆ ಏರಿರುವ ಹೊತ್ತಲ್ಲಿ, ಹೀಗೆ ಮೋದಿಯವರು ದಿಲ್ಲಿಯಿಂದ ಶಿವಮೊಗ್ಗಕ್ಕೆ ಹಾರಿ ಬಂದು ಪಕ್ಷದ ವಿರುದ್ಧ ಬಂಡಾಯ ಸಾರಿರುವವ ಅಭ್ಯರ್ಥಿಯ ಪಕ್ಕದಲ್ಲಿ ನಿಂತು ಜನರತ್ತ ಕೈಬೀಸುವುದು ಎಂದರೆ ಏನಿದು ವಿಚಿತ್ರ ಎಂಬುದು ಎಲ್ಲರ ಹುಬ್ಬೇರಿಸಿತ್ತು.

ಮೋದಿ ಫೋಟೋ ಬಳಕೆಯ ವಿಷಯದಲ್ಲಿ ರಾಘವೇಂದ್ರ ಅವರ ಟೀಕೆಗೆ ತಿರುಗೇಟು ನೀಡುತ್ತಾ, “ಪ್ರಧಾನಿ ಮೋದಿಯವರು ಯಾರಪ್ಪನ ಮನೆ ಆಸ್ತಿಯಲ್ಲ, ಅವರು ದೇಶದ ಪ್ರಧಾನಿ, ವಿಶ್ವನಾಯಕ. ನನ್ನ ಎದೆ ಬಗೆದರೆ ಒಂದು ಕಡೆ ಮೋದಿ, ಮತ್ತೊಂದು ಕಡೆ ಶ್ರೀರಾಮ ಕಾಣಿಸುತ್ತಾನೆ.. ನಿಮಗೆ ತಾಕತ್ತಿದ್ದರೆ ಮೋದಿಯವರ ಫೋಟೋ ಬಳಸದೆ ನಿಮ್ಮ ಅಪ್ಪಮಕ್ಕಳ ಫೋಟೋ ಹಾಕಿಕೊಂಡು ಚುನಾವಣೆ ಗೆದ್ದು ತೋರಿಸಿ” ಎಂದು ಈಶ್ವರಪ್ಪ ಭರ್ಜರಿ ಆವಾಜ್ ಹಾಕಿದ್ದರು.


ಇದೀಗ ತಮ್ಮ ನಾಮಪತ್ರ ಸಲ್ಲಿಕೆಯ ದಿನ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಮೋದಿಯವರನ್ನೇ ಕರೆಸಿಬಿಟ್ಟರೇ? ಎಂಬುದು ಶಿವಮೊಗ್ಗ ಮತದಾರರ ಆಘಾತಕ್ಕೆ ಕಾರಣವಾಗಿತ್ತು.

ಆದರೆ, ವಾಸ್ತವವಾಗಿ ಆಗಿದ್ದು ಬೇರೆಯೇ. ಮೋದಿ ಕೈ ಬಲಪಡಿಸಲು ತಾವು ಕಣಕ್ಕಿಳಿಯುವುದಾಗಿ ಘೋಷಿಸಿರುವ ಈಶ್ವರಪ್ಪ, ನಾಮಪತ್ರ ಸಲ್ಲಿಕೆ ದಿನ ಅಸಲೀ ಮೋದಿ ಅಲ್ಲದಿದ್ದರೂ ನಕಲಿ ಮೋದಿಯಾದರೂ ತಮ್ಮೊಂದಿಗೆ ಇರಲಿ ಎಂದು ನರೇಂದ್ರ ಮೋದಿಯವರನ್ನೇ ಹೋಲುವ ಅವರ ತದ್ರೂಪಿಯಂತೆ ಇರುವ ಉಡುಪಿ ಜಿಲ್ಲೆಯ ಹಿರಿಯಡ್ಕದ ಸದಾನಂದ ನಾಯಕ ಅವರನ್ನು ಕರೆ ತಂದಿದ್ದರು. ಅವರಿಗೆ ಮೋದಿಯಂತೆಯೇ ಮುಂಡಾಸು ತೊಡಿಸಿ, ಅವರದೇ ಶೈಲಿಯ ಧಿರಿಸು ಹಾಕಿಸಿ ಮೆರವಣಿಗೆ ವಾಹನದಲ್ಲಿ ತಮ್ಮ ಬದಿಯಲ್ಲೇ ನಿಲ್ಲಿಸಿಕೊಂಡಿದ್ದರು.

ಮೆರವಣಿಗೆ ಉದ್ದಕ್ಕೂ ರಾರಾಜಿಸುತ್ತಿದ್ದ ಮೋದಿಯವರ ಫೋಟೋ, ಕೇಸರಿ ಧ್ವಜಗಳ ಜೊತೆಗೆ ವಾಹನದ ಮೇಲೆ ಸಾಕ್ಷಾತ್ ಮೋದಿಯವರೇ ಕಾಣಿಸಿಕೊಂಡರಲ್ಲ ಎಂದು ಜನ ಅಚ್ಚರಿಗೊಳಗಾದರು.

Tags:    

Similar News