ಲೋಕ ಸ್ವಾರಸ್ಯ | ಮಲೆನಾಡಿನ ಮತದಾರನಿಗೆ ಮತದಾನಕ್ಕಿಂತ ಸವಾಲಾಯ್ತು ʼನೈಜತ್ವʼ ಪರೀಕ್ಷೆ!

ಯಾರು ಹೆಚ್ಚು ಮೋದಿ ಭಕ್ತ, ಯಾರೆಷ್ಟು ಉಗ್ರ ಹಿಂದುತ್ವವಾದಿ, ಯಾರೆಷ್ಟು ಗಟ್ಟಿ ರಾಷ್ಟ್ರಭಕ್ತ, ಯಾರು ಎಷ್ಟು ಪಕ್ಷ ನಿಷ್ಠ? ಎಂಬಂತಹ ಬಿಸಿಬಿಸಿ ವಾಗ್ವಾದದ ನಡುವೆ ಮಲೆನಾಡಿನ ಬಿಸಿಲೂ ಬಿಸಿಯೇರುತ್ತಿದೆ.

Update: 2024-04-09 11:43 GMT

ರಾಜ್ಯದ ಉಳಿದೆಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಥವಾ ಬಿಜೆಪಿಯ ಮಿತ್ರಪಕ್ಷ ಜೆಡಿಎಸ್ ನಡುವೆ ಈ ಬಾರಿ ಹಣಾಹಣಿ ನಡೆಯುತ್ತಿದೆ. ಆದರೆ, ರಾಜಕಾರಣದ ಶಕ್ತಿಕೇಂದ್ರ ಶಿವಮೊಗ್ಗದಲ್ಲಿ ಮಾತ್ರ ಈ ಬಾರಿಯ ಫೈಟ್ ಭಿನ್ನ. ಯಾಕೆಂದರೆ; ಅಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್‌ಗಿಂತ ಬಿಜೆಪಿ ವರ್ಸಸ್ ಬಿಜೆಪಿ ಫೈಟ್ ಭರ್ಜರಿಯಾಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಹಂಚಿಕೆಗೂ ಮುನ್ನ ನಿರೀಕ್ಷೆಯಂತೆ ಬಿ ಎಸ್ ಯಡಿಯೂರಪ್ಪ ಪುತ್ರ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಅಣ್ಣ ಹಾಗೂ ಮೂರು ಬಾರಿ ಸಂಸದರಾಗಿ ಕ್ಷೇತ್ರವನ್ನು ಪ್ರತಿನಿಧಿಸಿರುವ ಬಿ ವೈ ರಾಘವೇಂದ್ರ ಮತ್ತು ಕಾಂಗ್ರೆಸ್‌ನಿಂದ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಪುತ್ರಿ ಹಾಗೂ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ ಕಣಕ್ಕಿಳಿಯುವುದು ಖಾತರಿಯಾಗಿತ್ತು. ಹಾಗಾಗಿ ಈ ಬಾರಿ ಅಲ್ಲಿ ಮಾಜಿ ಮುಖ್ಯಮಂತ್ರಿಗಳಿಬ್ಬರ ಮಕ್ಕಳ ನಡುವೆ ಹಣಾಹಣಿ, ಸಾಂಪ್ರದಾಯಿಕ ಎದುರಾಳಿಗಳ ಕುಟುಂಬದ ನಡುವಿನ ಕಾದಾಟ ಮುಂದುವರಿಯಲಿದೆ ಎಂದೇ ಭಾವಿಸಲಾಗಿತ್ತು.

ಆದರೆ, ಯಾವಾಗ ಬಿಜೆಪಿ ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳ ಟಿಕೆಟ್ ಅಂತಿಮಗೊಳಿಸಿ ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಟಿಕೆಟನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಘೋಷಿಸಿತೊ, ಆ ಕ್ಷಣಕ್ಕೆ ಶಿವಮೊಗ್ಗದ ಲೋಕಸಭಾ ಕೇತ್ರದ ಚುನಾವಣಾ ಕಣದ ಚಿತ್ರಣವೇ ಬದಲಾಗಿ ಹೋಯಿತು. ತಮ್ಮ ಪುತ್ರ ಕಾಂತೇಶ್ ಅವರಿಗೆ ಹಾವೇರಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಈಶ್ವರಪ್ಪ, ಟಿಕೆಟ್ ಕೈತಪ್ಪುತ್ತಲೇ ಬಿಜೆಪಿ ಕೇಂದ್ರ ಸಂಸದೀಯ ಸಮಿತಿ ಸದಸ್ಯರಾಗಿ ಟಿಕೆಟ್ ಹಂಚಿಕೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ತಮ್ಮ ಒಂದು ಕಾಲದ ʼಕುಚುಕು ಗೆಳೆಯʼ ಯಡಿಯೂರಪ್ಪ ಮತ್ತು ಅವರ ಪುತ್ರರಾದ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ʼಶಂಖನಾದʼ ಮೊಳಗಿಸಿಯೇ ಬಿಟ್ಟರು.

ಹಾಗಾಗಿ ಸದ್ಯ ಶಿವಮೊಗ್ಗದಲ್ಲಿ ರಾಷ್ಟ್ರಭಕ್ತರ ಬಳಗದ ಹೆಸರಿನಲ್ಲಿ ಮಾಜಿ ಉಪ ಮುಖ್ಯಮಂತ್ರಿ, ಉಗ್ರ ಹಿಂದುತ್ವವಾದಿ ಕೆ ಎಸ್ ಈಶ್ವರಪ್ಪ ಬಂಡಾಯದ ಬಾವುಟ ಹಾರಿಸಿ ಕಣಕ್ಕಿಳಿದಿದ್ದಾರೆ. ʼದೇಶಕ್ಕಾಗಿ ನರೇಂದ್ರ ಮೋದಿ, ಶಿವಮೊಗ್ಗಕ್ಕಾಗಿ ಹಿಂದುತ್ವವಾದಿʼ ಎಂಬ ಘೋಷಣೆಯೊಂದಿಗೆ ಈಶ್ವರಪ್ಪ ಅವರು ಯಡಿಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧ ತೊಡೆತಟ್ಟಿದ್ದಾರೆ.

ಆರಂಭದಲ್ಲಿ ಈಶ್ವರಪ್ಪ ಅವರ ಈ ಬಂಡಾಯ ʼನಾಲ್ಕು ದಿನದ್ದುʼ ಎಂದುಕೊಂಡೇ ನಿರ್ಲಕ್ಷಿಸಿದ್ದ ಪರಿಗಣಿಸದೇ ಇದ್ದ ಯಡಿಯೂರಪ್ಪ ಮತ್ತು ಮಕ್ಕಳು, ಈಶ್ವರಪ್ಪ ಪಕ್ಷದ ದೆಹಲಿ ವರಿಷ್ಠ ಅಮಿತ್ ಶಾ ಭೇಟಿಗೆ ಹೋಗಿ ಬರಿಗೈಲಿ ವಾಪಸ್ಸಾದ ಮೇಲೆ ಅಪಾಯದ ಸುಳಿವರಿತರು. ವರಿಷ್ಠರು ಕರೆದು ಕಿವಿಮಾತು ಹೇಳಿದರೆ ಈಶ್ವರಪ್ಪ ಬಂಡಾಯ ಬಾವುಟ ಬದಿಗಿಟ್ಟು ತಮ್ಮ ಪರ ಪ್ರಚಾರಕ್ಕೆ ಬಂದುಬಿಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗುತ್ತಲೇ ಬಿ ವೈ ರಾಘವೇಂದ್ರ ಕೂಡ ಕೂಡ ಆತಂಕಕ್ಕೀಡಾಗಿದ್ದಾರೆ.

ಹಾಗಾಗಿ ಇದೀಗ ಕಳೆದ ಒಂದು ವಾರದಿಂದ ಶಿವಮೊಗ್ಗ ಕಣದಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್‌ಗಿಂತ ಬಿಜೆಪಿ ವರ್ಸಸ್ ಬಿಜೆಪಿಯ ಸದ್ದೇ ಜೋರಾಗಿದೆ. ಈಶ್ವರಪ್ಪ ಅವರು ತಾವು ʼಅಸಲಿ ಹಿಂದುತ್ವವಾದಿ, ಹಿಂದುತ್ವದ ಕಟ್ಟಾಳುವಾಗಿ ಧರ್ಮ, ದೇಶ ಉಳಿಸಲು ದಶಕಗಳ ಕಾಲ ದುಡಿದ ತಾವು ಮತ್ತು ತಮ್ಮಂತಹ ಹಲವು ನಾಯಕರನ್ನು ಯಡಿಯೂರಪ್ಪ ಮತ್ತು ಅವರ ಕುಟುಂಬ ತುಳಿಯುತ್ತಿದೆ. ಮೈಸೂರಿನಲ್ಲಿ ಪ್ರತಾಪ್ ಸಿಂಹ, ಚಿಕ್ಕಮಗಳೂರಿನಲ್ಲಿ ಸಿ ಟಿ ರವಿ, ದಕ್ಷಿಣ ಕನ್ನಡದಲ್ಲಿ ನಳೀನ್ ಕುಮಾರ್ ಕಟೀಲು, ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಉತ್ತರಕನ್ನಡದಲ್ಲಿ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಹಿಂದುತ್ವ ರಕ್ಷಣೆಗೆ ದನಿ ಎತ್ತಿದವರನ್ನೆಲ್ಲಾ ಈ ಬಾರಿ ಮೂಲೆಗುಂಪು ಮಾಡಿದ್ದಾರೆ. ಅವರೆಲ್ಲರ ದನಿಯಾಗಿ, ಅವರ ಬೆಂಬಲದೊಂದಿಗೆ ತಾವು ಯಡಿಯೂರಪ್ಪ ಕುಟುಂಬದ ಹಿಡಿತದಿಂದ ಪಕ್ಷವನ್ನು ಪಾರು ಮಾಡಲು ಈ ಬಾರಿ ಕಣಕ್ಕಿಳಿದಿದ್ದೇನೆʼ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ.

ʼಕ್ಷೇತ್ರದ ಮಾತ್ರವಲ್ಲದೆ, ಇಡೀ ರಾಜ್ಯದ ಹಿಂದುತ್ವವಾದಿಗಳು, ಸಂಘಪರಿವಾರ, ಬಿಜೆಪಿಯ ಹಿರಿಯರು ತಮಗೆ ಬೆಂಬಲ ಸೂಚಿಸಿದ್ದಾರೆ. ತಮ್ಮ ಗೆಲುವಿಗಾಗಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆʼ ಎಂದು ಈಶ್ವರಪ್ಪ ಕ್ಷೇತ್ರದುದ್ದಕ್ಕೂ ಪ್ರಚಾರ ಮಾಡುತ್ತಿದ್ದಾರೆ.

ಈಶ್ವರಪ್ಪ ಅವರ ಈ ಪ್ರಚಾರ ಸಹಜವಾಗೇ ಬಿಜೆಪಿ ಅಧಿಕೃತ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರನ್ನು ದಂಗುಬಡಿಸಿದೆ. ಈವರೆಗೆ ತಮ್ಮ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನೇ ಮುಂದು ಮಾಡಿ, ಮೋದಿ ಹೆಸರಿನಲ್ಲಿ ಮತ ಯಾಚಿಸುತ್ತಿದ್ದ ರಾಘವೇಂದ್ರ ಅವರಿಗೆ, ಮೋದಿ ಹೆಸರನ್ನೂ ಈಶ್ವರಪ್ಪ ಕ್ಲೈಮ್ ಮಾಡತೊಡಗಿದಾಗ ತಲೆಬಿಸಿ ಹೆಚ್ಚಾಗಿದೆ. ಮೋದಿ ಫೋಟೋವನ್ನೇ ಮುಂದಿಟ್ಟುಕೊಂಡು ಈಶ್ವರಪ್ಪ, ಮೋದಿ ಕೈ ಬಲಪಡಿಸಲು, ಮತ್ತೊಮ್ಮೆ ಪ್ರಧಾನಿ ಮಾಡಲು ತಮಗೆ ಮತ ಕೊಡುವಂತೆ ಕೇಳುತ್ತಿರುವುದು ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂಬುದು ಬಿವೈಆರ್‌ಗೆ ಗೊತ್ತಿರದ ಸಂಗತಿಯೇನಲ್ಲ. ಹಾಗಾಗಿಯೇ ಅವರು ಮೋದಿ ಫೋಟೋ ಬಳಸದಂತೆ ಈಶ್ವರಪ್ಪ ವಿರುದ್ಧ ಕಿಡಿಕಾರಿದ್ದರು. ಅದರ ಬೆನ್ನಲ್ಲೇ ಈಶ್ವರಪ್ಪ ಮೋದಿ ಫೋಟೋ ಬಳಕೆ ವಿಷಯದಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಹಾಗಾಗಿ ದಿನದಿಂದ ದಿನಕ್ಕೆ ಶಿವಮೊಗ್ಗ ಲೋಕಸಭಾ ಕಣ ʼಅಸಲೀ ಹಿಂದುತ್ವವಾದಿʼ ವರ್ಸಸ್ ʼನಕಲಿ ಹಿಂದುತ್ವವಾದಿʼ, ʼಮೋದಿ ಭಕ್ತʼ ವರ್ಸಸ್ ʼಮೋದಿ ಭಕ್ತʼ, ʼರಾಷ್ಟ್ರಭಕ್ತʼ ವರ್ಸಸ್ ʼದೇಶಪ್ರೇಮಿʼ ಎಂಬಂತಹ ಹಲವು ಪರ- ವಿರೋಧದ ಘೋಷಣೆಗಳ ನೆಲೆಯಾಗುತ್ತಿದೆ. ಯಾರು ಹೆಚ್ಚು ಮೋದಿ ಭಕ್ತ, ಯಾರೆಷ್ಟು ಉಗ್ರ ಹಿಂದುತ್ವವಾದಿ, ಯಾರೆಷ್ಟು ಗಟ್ಟಿ ರಾಷ್ಟ್ರಭಕ್ತ, ಯಾರು ಎಷ್ಟು ಪಕ್ಷ ನಿಷ್ಠ? ಎಂಬಂತಹ ಬಿಸಿಬಿಸಿ ವಾಗ್ವಾದದ ನಡುವೆ ಮಲೆನಾಡಿನ ಬಿಸಿಲೂ ಬಿಸಿಯೇರುತ್ತಿರುವಾಗ, ಮತ್ತೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮತ್ತು ಅವರ ಸಹೋದರ ಸಚಿವ ಮಧು ಬಂಗಾರಪ್ಪ ತಣ್ಣಗೆ ಕ್ಷೇತ್ರದ ಉದ್ದಗಲ ಸುತ್ತಿ ಪ್ರಚಾರ ಬಿರುಸುಗೊಳಿಸಿದ್ದಾರೆ.

ಮಲೆನಾಡಿನ ಮತದಾರರಿಗೆ ಈಗ ಮೇ 7ರ ಮತದಾನದ ದಿನ ಇಬ್ಬರು ಮೋದಿ ಭಕ್ತರು, ರಾಷ್ಟ್ರಭಕ್ತರು, ಹಿಂದುತ್ವವಾದಿಗಳ ನಡುವೆ ಯಾರು ಹೆಚ್ಚು, ಯಾರು ಕಡಿಮೆ ಎಂದು ನಿರ್ಧರಿಸುವ ತಲೆನೋವು ಎದುರಾಗಿದೆ. ಮತದಾನಕ್ಕಿಂತ ಈಶ್ವರಪ್ಪ ಮತ್ತು ರಾಘವೇಂದ್ರ ನಡುವಿನ ಈ ʼಉಗ್ರತ್ವʼದ ಪರೀಕ್ಷೆಯೇ ಅವರಿಗೆ ಸವಾಲಾಗಿದೆ!

Tags:    

Similar News