Loksabha Election 2024 | ಲೋಕ ಪ್ರಚಾರಕ್ಕೆ ರಂಗು ತಂದ ತಾರೆಯರು ಇವರು

ಈ ಬಾರಿ ಕರ್ನಾಟಕದಲ್ಲಿ ಚುನಾವಣಾ ಕಣದಲ್ಲಿ ಸ್ಟಾರ್‌ ವರ್ಚಸ್ಸು ಕಡಿಮೆ ಇದ್ದರೂ, ನಟ ಶಿವರಾಜ್‌ ಕುಮಾರ್‌, ದರ್ಶನ್‌ ಹಾಗೂ ಇತರ ಕೆಲವೇ ಸ್ಟಾರ್‌ ನಟ ನಟಿಯರು ಲೋಕಸಭಾ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ.;

Update: 2024-04-24 14:24 GMT
ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ದರ್ಶನ್ ಪ್ರಚಾರ
Click the Play button to listen to article

ತೆರೆ ಮೇಲೆ ಬಣ್ಣ ಹಚ್ಚುವ ಸಿನಿ ಸ್ಟಾರ್‌ಗಳಿಗೆ ರಾಜಕೀಯ ಆಕರ್ಷಣೆ ಮಾಮೂಲು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅನೇಕ ನಟ, ನಟಿಯರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಆಯ್ಕೆ ಆಗಿದ್ದರು.

ಪ್ರತಿ ಬಾರಿಯೂ ಚುನಾವಣೆ ವೇಳೆ ನಟ, ನಟಿಯರು ರಾಜಕೀಯ ಪಕ್ಷಗಳತ್ತ ಸ್ಟಾರ್‌ ಪ್ರಚಾರಕರಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವುದು ಕೂಡ ಹೊಸತೇನಲ್ಲ. ಈ ಬಾರಿ ಕರ್ನಾಟಕದ ಚುನಾವಣಾ ಕಣದಲ್ಲಿ ಸ್ಟಾರ್‌ ವರ್ಚಸ್ಸು ಕಡಿಮೆ ಇದ್ದರೂ, ನಟ ಶಿವರಾಜ್‌ ಕುಮಾರ್‌, ದರ್ಶನ್‌ ಹಾಗೂ ಇತರ ಕೆಲವೇ ಸ್ಟಾರ್‌ ನಟ- ನಟಿಯರು ಈ ಬಾರಿಯ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಕಣಕ್ಕಿಳಿದಿದ್ದಾರೆ.

ಸ್ಟಾರ್‌ ಚಂದ್ರು ಪರ ನಟ ದರ್ಶನ್‌ ಅಬ್ಬರದ ಪ್ರಚಾರ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಬ್ಬರದ ಪ್ರಚಾರ ಮಾಡಿದ್ದಾರೆ. ಕಳೆದ ಬಾರಿ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಪರ ನಟ ದರ್ಶನ್ ಪ್ರಚಾರ ನಡೆಸಿದ್ದರು. ಆದರೆ ಈ ಬಾರಿ ಚಲುವರಾಯಸ್ವಾಮಿ ಅವರ ಕೈ ಬಲಪಡಿಸಲು ಸ್ಟಾರ್ ಚಂದ್ರುಗೆ ಮತ ನೀಡಿ ಎಂದು ಮನವಿ ಮಾಡಿದರು. ನಾನು ಇಂದು ಕಾಂಗ್ರೆಸ್ ಪರ ಬಂದಿರುವುದಕ್ಕೆ ಒಂದೇ ಕಾರಣವಿದೆ. 2019ರ ಚುನಾವಣೆಯಲ್ಲಿ ಚೆಲುವಣ್ಣ ನಮಗೆ ಸಹಾಯ ಮಾಡಿದ್ರು, ಆ ಒಂದು ಋಣವನ್ನು ಜನ್ಮ ಪೂರ್ತಿ ತೀರಿಸಲು ಆಗಲ್ಲ. ಚಲುವಣ್ಣ ಮಾಡಿದ ಸಹಾಯ 7 ಜನ್ಮವಾದರೂ ತೀರಿಸಲು ಆಗಲ್ಲ. ಹೀಗಾಗಿ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿರುವುದಾಗಿ ನಟ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿರುವ ನಟ ದರ್ಶನ್‌

ಪತ್ನಿ ಗೀತಾ ಪರ ನಟ ಶಿವರಾಜ್‌ ಕುಮಾರ್ ಪ್ರಚಾರ

ಲೋಕಸಭೆ ಚುನಾವಣೆ 2024ರ ಶಿವಮೊಗ್ಗದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್ ಎರಡನೇ ಬಾರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ತಮ್ಮ ಪತ್ನಿ ಗೀತಾ ಪರವಾಗಿ ಪ್ರಚಾರಕ್ಕೆ ತೆರಳುವ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿದ್ದ ಶಿವರಾಜ್‌ ಕುಮಾರ್‌ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಏಳೂ ವಿಧಾನಸಭಾ ಕ್ಷೇತ್ರಗಳಲ್ಲೂ ಭರ್ಜರಿ ಪ್ರಚಾರ ನಡೆಸಿದ್ದಾರೆ. 

ಗೀತಾ ಶಿವರಾಜ್‌ ಕುಮಾರ್‌ ಪರ ಮತಯಾಚಿಸುತ್ತಿರುವ ನಟ ಶಿವರಾಜ್‌ ಕುಮಾರ್‌

ಬಸವರಾಜ ಬೊಮ್ಮಾಯಿ ಪರ ಮತ ತಾರಾ ಅನುರಾಧ

ಬಿಜೆಪಿ ಪಕ್ಷದ ಸ್ಟಾರ್‌ ಪ್ರಚಾರಕಿ, ನಟಿ ತಾರಾ ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪರ ಮತ ಯಾಚಿಸಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪರ ಮತ ಚಲಾಯಿಸುವಂತೆ ಪ್ರಚಾರ ನಡೆಸಿದ್ದರು. ಎಲ್ಲರೂ ಬಿಜೆಪಿಗೆ ಮತ ನೀಡಿ. ಮತ ಹಾಕಿಸಿ ಎಂದು ಬಿಜೆಪಿಯ ಸ್ಟಾರ್ ಪ್ರಚಾರಕಿ, ನಟಿ ತಾರಾ ಅನುರಾಧಾ ಮನವಿ ಮಾಡಿದ್ದರು.

ಬಿಜೆಪಿ ಅಭ್ಯರ್ಥಿಗಳ ಪ್ರಚಾರದಲ್ಲಿ  ನಟಿ ತಾರಾ

ಯದುವೀರ್‌ ಒಡೆಯರ್‌ ಪರವಾಗಿ ಮತ ಯಾಚಿಸಿ ಸುಮಲತಾ

ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್‌ ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್‌ ಒಡೆಯರ್‌ ಪರವಾಗಿ ಮತ ಯಾಚಿಸಿದರು. ಯದುವೀರ್ ಒಡೆಯರ್ ಅವರು ತುಂಬ ಸರಳ ವ್ಯಕ್ತಿ. ಯದುವೀರ್ ಒಬ್ಬ ವಿದ್ಯಾವಂತ ಯುವಕನಾಗಿದ್ದು, ಅವರಿಗೆ ರಾಜಕೀಯಕ್ಕೆ ಬರುವ ಅನಿವಾರ್ಯತೆ ಇಲ್ಲ. ನಿಮ್ಮೆಲ್ಲರ ಸೇವೆ ಮಾಡಲು ಬಂದಿದ್ದಾರೆ. ಅವರನ್ನ ಗೆಲ್ಲಿಸಿಕೊಂಡು ಬರುವ ಮೂಲಕ ಮೈಸೂರು ಮಹಾರಾಜರ ಋಣ ತೀರಿಸಿಕೊಳ್ಳುವ ಅವಕಾಶ ನಿಮಗೆ ಬಂದಿದೆ. ಅವರನ್ನ ಗೆಲ್ಲಿಸಿ ಲೋಕಸಭೆಗೆ ಕಳಿಸಿಕೊಡಿ ಎಂದು ಸುಮಲತಾ ಅಂಬರೀಶ್ ಮನವಿ ಮಾಡಿದ್ದಾರೆ. 

ನಟಿ ಸುಮಲತಾ

ಕಾಂಗ್ರೆಸ್‌ ಪರವಾಗಿ ಪ್ರಚಾರ ಕೈಗೊಂಡಿದ್ದ ಮುಖ್ಯಮಂತ್ರಿ ಚಂದ್ರು

ನಟ ಹಾಗೂ ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಬೆಂಗಳೂರು, ಕೋಲಾರ ಸಹಿತ ಹಲವು ಕಡೆಗಳಲ್ಲಿ ಕಾಂಗ್ರೆಸ್‌ ಪರವಾಗಿ ಪ್ರಚಾರ ಕೈಗೊಂಡಿದ್ದಾರೆ.

ನಟ ಮುಖ್ಯಮಂತ್ರಿ ಚಂದ್ರು

ಡಾ.ಮಂಜುನಾಥ್‌ ಪರ ಬಿಜೆಪಿ ನಾಯಕಿ ಶೃತಿ ಪ್ರಚಾರ

ನಟಿ ಹಾಗೂ ಬಿಜೆಪಿ ನಾಯಕಿ ಶೃತಿ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್‌ ಪರ ರಾಮನಗರ ಸಹಿತ ಹಲವು ಕಡೆ ಪ್ರಚಾರ ನಡೆಸಿದ್ದಾರೆ.

ಬಿಜೆಪಿ ಪರ ನಟಿ ಶೃತಿ ಪ್ರಚಾರ

2024ರ ಲೋಕಸಭೆ ಚುನಾವಣೆಗೆ ಕಳೆಗುಂದಿದ ಸ್ಟಾರ್‌ ವರ್ಚಸ್ಸು

ರಾಜ್ಯದಲ್ಲಿ ಈ ಬಾರಿ 2024ರ ಲೋಕಸಭೆ ಚುನಾವಣೆಯಲ್ಲಿ ಯಾವ ಸಿನಿ ತಾರೆಯರು ಕೂಡ ಸ್ಪರ್ಧಿಸುತ್ತಿಲ್ಲ. ಸಿನಿಮಾ ನಿರ್ಮಾಪಕರಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ನಿರ್ಮಾಪಕಿ, ನಟ ಶಿವರಾಜಕುಮಾರ್ ಅವರ ಪತ್ನಿ ಗೀತಾ ಶಿವರಾಜಕುಮಾರ್ ಕಣದಲ್ಲಿದ್ದರೂ ಇವರ ಪಾತ್ರ ಬೆಳ್ಳಿತೆರೆಯ ಹಿಂದೆ ಇದೆ.

ಕಳೆದ ಬಾರಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಸುಮಲತಾ ಅಂಬರೀಶ್ ಸಂಸದರಾಗಿದ್ದರು. ಈ ಸಲ ಟಿಕೆಟ್ ಸಿಗದೇ, ಕಣದಿಂದ ಹಿಂದೆ ಸರಿದಿದ್ದಾರೆ. ಅವರ ಜಾಗದಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ಹೀಗಾಗಿ ಈ ಲೋಕಸಭೆ ಚುನಾವಣೆಯಲ್ಲಿ ಸಿನಿ ಲೋಕದ ವರ್ಚಸ್ಸು ಇಲ್ಲವಾಗಿದೆ.

ಚಂದನವನದ ನಟರಾದ ಅಂಬರೀಶ್, ಅನಂತನಾಗ್, ಶಶಿಕುಮಾರ್, ಜಯಂತಿ, ರಮ್ಯಾ, ಸುಮಲತಾ, ದೊಡ್ಡಣ್ಣ, ನಿರ್ನಳ್ಳಿ ರಾಮಕೃಷ್ಣ, ಕೆ ಶಿವರಾಂ, ನಿಖಿಲ್ ಕುಮಾರಸ್ವಾಮಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಅದರಲ್ಲಿ ಶಶಿಕುಮಾರ್, ಅಂಬರೀಶ್, ರಮ್ಯಾ, ಸುಮಲತಾ ಅವರಿಗೆ ಮಾತ್ರ ಯಶಸ್ಸು ಸಿಕ್ಕಿದೆ.

ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದಂತೆ ಸ್ಯಾಂಡಲ್‌ವುಡ್ ಮತ್ತು ಕರ್ನಾಟಕ ರಾಜಕೀಯ ಯಾವತ್ತೂ ಜೊತೆಯಾಗಿ ಸಾಗಿಲ್ಲ. ಆದರೂ ಕೆಲವು ಸ್ಯಾಂಡಲ್‌ವುಡ್ ತಾರೆಯರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದಿದ್ದರೆ ಕರ್ನಾಟಕದಲ್ಲಿ ಚುನಾವಣೆಗಳು ಪೂರ್ಣಗೊಳ್ಳುವುದಿಲ್ಲ. ಆದರೆ ಈ ಬಾರಿ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಬಹಳಷ್ಟು ಕಡಿಮೆ ಸಿನಿಮಾ ಸ್ಟಾರ್‌ಗಳು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಅನೇಕರು ರಾಜಕೀಯದಿಂದ ದೂರವಿರಲು ಬಯಸಿದ್ದಾರೆ.

2023ರ ವಿಧಾನಸಭಾ ಚುನಾವಣೆಯ ವೇಳೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡಿದ್ದ ನಟ ಕಿಚ್ಚ ಸುದೀಪ್ ಈ ಬಾರಿ ಯಾವ ನಾಯಕನ ಪರವಾಗಿಯೂ ಪ್ರಚಾರ ಮಾಡಿಲ್ಲ. 2019ರ ಲೋಕಸಭೆ ಚುನಾವಣೆ ವೇಳೆ ಪ್ರಚಾರ ಮಾಡಿದ್ದ ಯಶ್ ಕೂಡ ಈಗ ಮೌನವಾಗಿದ್ದಾರೆ.

ಕರ್ನಾಟಕಕ್ಕೆ ತದ್ವಿರುದ್ಧವಾಗಿ ಜನಪ್ರಿಯ ಮಲಯಾಳಂ ನಟ ಸುರೇಶ್ ಗೋಪಿ ಕೇರಳದ ತ್ರಿಶೂರ್‌ನಿಂದ, ನಟ ಶರತ್‌ಕುಮಾರ್ ತಮಿಳುನಾಡಿನ ವಿರುದುನಗರ ಕ್ಷೇತ್ರದಿಂದ ಮತ್ತು ಜನಸೇನಾ ಸಂಸ್ಥಾಪಕ ಮತ್ತು ಜನಪ್ರಿಯ ತೆಲುಗು ನಟ ಪವನ್ ಕಲ್ಯಾಣ್ ಆಂಧ್ರಪ್ರದೇಶದ ಪಿಠಾಪುರದಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಕರ್ನಾಟಕ ದಿಂದ ಯಾವ ಸ್ಟಾರ್‌ ಕೂಡ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ.

Tags:    

Similar News