Loksabha Election 2024 | ಕಾಂಗ್ರೆಸ್‌ಗೆ ಎದುರಾಯ್ತು ಒಳ ಏಟಿನ ಭೀತಿ: ಡಿ.ಕೆ ಶಿವಕುಮಾರ್ ಎಚ್ಚರಿಕೆ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ಉದ್ದೇಶದಿಂದ ಒಳ ಏಟು ಕೊಡಲು ಮುಂದಾದರೆ, ನಾಯಕರನ್ನು ಪಕ್ಷದಿಂದ ಹೊರ ಹಾಕುವುದಾಗಿ ಡಿ.ಕೆ ಶಿವಕುಮಾರ್‌ ಎಚ್ಚರಿಸಿದ್ದಾರೆ.;

Update: 2024-04-06 08:06 GMT
ಡಿ.ಕೆ ಶಿವಕುಮಾರ್‌

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಒಳ ಏಟಿನ ಭೀತಿ ಎದುರಾಗಿದೆ. ಈ ವಿಷಯವನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಸೂಕ್ಷವಾಗಿ ಹೇಳಿದ್ದು, ಕಾಂಗ್ರೆಸ್‌ ಮುಖಂಡರು ಹಾಗೂ ನಾಯಕರಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವ ಉದ್ದೇಶದಿಂದ ಒಳ ಏಟು ಕೊಡುವುದು ಅಥವಾ ಸೋಲಿಸುವ ಪ್ರಯತ್ನ ಮಾಡಿದರೆ, ಕಾಂಗ್ರೆಸ್ ನಾಯಕರನ್ನು ತಕ್ಷಣವೇ ಪಕ್ಷದಿಂದ ಹೊರಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದಲ್ಲಿ 2ನೇ ಹಂತದಲ್ಲಿ ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ಉಸ್ತುವಾರಿ ಸಚಿವರು, ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಡಿ.ಕೆ ಶಿವಕುಮಾರ್ ಅವರು ಶುಕ್ರವಾರ ಸಭೆ ನಡೆಸಿದರು.

ಸಭೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು. ಯಾವುದೇ ನಾಯಕ ಒಳ ಏಟು ಕೊಡಲು ಪ್ರಯತ್ನಿಸಿದರೆ, ಅವರನ್ನು ಕೂಡಲೇ ಪಕ್ಷದಿಂದ ಉಚ್ಛಾಟನೆ ಮಾಡಲಾಗುವುದು. ಪಕ್ಷದ ಅಭ್ಯರ್ಥಿಯ ವಿರುದ್ಧ ಯಾರಾದರು ಕೆಲಸ ಮಾಡಿದರೆ, ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಅಲ್ಲದೇ ಚುನಾವಣೆ ಸಂದರ್ಭದಲ್ಲಿ ಇತರೆ ಪಕ್ಷಗಳ ಮುಖಂಡರು ಕಾಂಗ್ರೆಸ್‌ ಸೇರಲು ಬಯಸಿದರೆ, ನಿಮ್ಮ (ಕಾಂಗ್ರೆಸ್ ಪಕ್ಷದ ಮುಖಂಡರು, ನಾಯಕರು) ವೈಯಕ್ತಿಕ ದೃಷ್ಟಿಯಿಂದ ವಿರೋಧ ವ್ಯಕ್ತಪಡಿಸಬಾರದು. ರಾಜ್ಯದಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಕ್ಕೆ ಅವಕಾಶ ಇದೆ. ಎಲ್ಲರೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವುದಕ್ಕೆ ಪ್ರಯತ್ನಿಸಬೇಕು. ಪಕ್ಷ ವಿರೋಧಿ ಕೆಲಸಗಳನ್ನು ಮಾಡುವವರ ಬಗ್ಗೆ ಹೆಚ್ಚಿನ ನಿಗಾ ಇರಿಸಲಾಗಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್‌ಗೆ ಒಳ ಏಟಿನ ಭೀತಿ

ಕಾಂಗ್ರೆಸ್‌ಗೆ ವಿವಿಧ ಲೋಕಸಭಾ ಕ್ಷೇತ್ರದಲ್ಲಿ ಒಳ ಏಟಿನ ಭೀತಿ ಇದೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದ ಹಲವರಿಗೆ ಈ ಬಾರಿ ಟಿಕೆಟ್ ಕೈತಪ್ಪಿದ್ದು, ಹಲವು ಕಾಂಗ್ರೆಸ್ ನಾಯಕರು ಹಾಗೂ ಮುಖಂಡರು ಅಸಮಾಧಾನಗೊಂಡಿದ್ದಾರೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ವೀಣಾ ಕಾಶಪ್ಪನವರ ಅವರು ಅಸಮಾಧಾನಗೊಂಡಿದ್ದರು. ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಮುಖಂಡರ ನಡುವೆ ಭಿನ್ನಾಭಿಪ್ರಾಯಗಳಿದ್ದು, ಈ ಭಾಗದಲ್ಲಿ ನಾಯಕರು ಪ್ರತ್ಯೇಕ ಬಣಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯೊಂದಿಗೆ ನಾಮಪತ್ರ ಸಲ್ಲಿಸಿರುವುದು ಸಹ ವರದಿಯಾಗಿತ್ತು. ಹೀಗಾಗಿ, ಕಾಂಗ್ರೆಸ್ ಒಳಏಟಿನ ಸಾಧ್ಯತೆಯ ಬಗ್ಗೆ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸುತ್ತಿದೆ.

Tags:    

Similar News