Lok Sabha Elections 2024 | ಬಹಿಷ್ಕಾರ, ಪ್ರತಿಭಟನೆ, ಲಾಠಿ ಪ್ರಹಾರ: ಬಹುತೇಕ ಶಾಂತಿಯುತ ಮತದಾನ

ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆಯ ಮತದಾನದ ದಿನವಾದ ಶುಕ್ರವಾರ ಹಲವು ಕಡೆಗಳಲ್ಲಿ ಮತದಾನ ಬಹಿಷ್ಕಾರ, ಗಲಾಟೆ, ಪ್ರತಿಭಟನೆಗಳು ನಡೆದವು.

Update: 2024-04-26 14:36 GMT
ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆಯನ್ನೇ ಧ್ವಂಸ ಮಾಡಿರುವ ಘಟನೆ ನಡೆದಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಶುಕ್ರವಾರ(ಏ.26) ಮತದಾನ ನಡೆಯಿತು. ಕೆಲವು ಕಡೆ ಮತದಾನ ಬಹಿಷ್ಕಾರ, ಮತಗಟ್ಟೆ ಮೇಲೆ ದಾಳಿ, ಪ್ರತಿಭಟನೆ, ಲಾಠಿ ಪ್ರಹಾರದಂತಹ ಘಟನೆಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಬಹುತೇಕ ಶಾಂತಿಯುತ ಮತದಾನ ನಡೆದಿದೆ.

ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕೆಲವು ಮತಗಟ್ಟೆಗಳಲ್ಲಿ ಮತದಾನ ಬಹಿಷ್ಕಾರದ ಘಟನೆಗಳು ವರದಿಯಾಗಿವೆ. ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಮೂಲ ಸೌಕರ್ಯಕ್ಕೆ ಆಗ್ರಹಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಆದರೆ, ಕೆಲವು ಹಾಡಿಯ ಜನರನ್ನು ಮತದಾನಕ್ಕೆ ಮನವೊಲಿಸಿ ಕರೆತಂದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಮತದಾನಕ್ಕೆ ಅವಕಾಶ ನೀಡದೆ ಮತಗಟ್ಟೆ ಸುತ್ತುವರಿದಿದ್ದರು. ಆ ವೇಳೆ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಸಂಘರ್ಷ ನಡೆದು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ.

ಇಂಡಿಗನತ್ತದಲ್ಲಿ ಘರ್ಷಣೆ

ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆಯನ್ನೇ ಧ್ವಂಸ ಮಾಡಿರುವ ಘಟನೆ ನಡೆದಿದೆ.

ಮೂಲ ಸೌಕರ್ಯವನ್ನು ಕಲ್ಪಿಸಲಾಗಿಲ್ಲ ಎಂದು ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಜನರು ಮತದಾನ ಬಹಿಷ್ಕರಿಸಿ ಮತದಾನದಿಂದ ದೂರ ಉಳಿದಿದ್ದರು. ಆದರೆ, ಅಧಿಕಾರಿಗಳು ಹಾಡಿಯ ಜನರನ್ನು ಮನವೊಲಿಸಿ ಕರೆತಂದು ಮತದಾನ ಮಾಡಿಸಲು ಮುಂದಾದರು. ಹಾಡಿನ ಜನರನ್ನು ಮತಗಟ್ಟೆಗೆ ಕರೆದುಕೊಂಡು ಬಂದಾಗ, ಮತದಾನ ಬಹಿಷ್ಕರಿಸಿದ್ದ ಗ್ರಾಮಸ್ಥರು ರೊಚ್ಚಿಗೆದ್ದು ಮತಗಟ್ಟೆಯನ್ನು ಸುತ್ತುವರಿದು, ಮತದಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದರು. ಈ ವೇಳೆ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಯಿತು. ಆಕ್ರೋಶಗೊಂಡ ಕಿಡಿಗೇಡಿಗಳು ಮತಗಟ್ಟೆ ಮೇಲೆ ದಾಳಿ ಮಾಡಿದ್ದು, ಮೇಜು, ಕುರ್ಚಿ, ಇವಿಎಂ ಧ್ವಂಸಗೊಂಡವು. ಪೊಲೀಸರು ಜನರನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ. ಲಾಠಿ ಚಾರ್ಜ್‌ ವೇಳೆ ಕಿಡಿಗೇಡಿಗಳು ಪೊಲೀಸರ ಮೇಲೆ ಲಾಠಿ ಚಾರ್ಜ್‌ ಮಾಡಿದ ಘಟನೆಯೂ ನಡೆದಿದೆ. ಸಾರ್ವಜನಿಕರು ಮತ್ತು ಅಧಿಕಾರಿಗಳೂ ಗಾಯಗೊಂಡಿದ್ದಾರೆ.

ಕೋಲಾರದಲ್ಲೂ ಮತದಾನ ಬಹಿಷ್ಕಾರ

ಮದ್ಯದ ಅಂಗಡಿ ಲೈಸನ್ಸ್ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಬೆಗಿ ಬೆಣಜೇನಹಳ್ಳಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಘಟನೆ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ. ಗ್ರಾಮದ ಪ್ರವೇಶದ್ವಾರದಲ್ಲೇ ಎಂಎಸ್‌ಐಲ್ ಮದ್ಯದಂಗಡಿ ತೆರೆದಿದ್ದು ಊರಿನ ಯುವಕರು ಕುಡಿದು ಬರುತ್ತಾರೆ. ವಿದ್ಯಾರ್ಥಿಗಳು, ಮಹಿಳೆಯರು ಆ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಶಾಂತಿ ನೆಮ್ಮದಿಗಾಗಿ ಮದ್ಯದಂಗಡಿಯನ್ನು ಮುಚ್ಚಿಸಿ ಎಂದು ಪಟ್ಟು ಹಿಡಿದ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು.

ಕೋಲಾರ ಗ್ರಾಮಾಂತರ ಇನ್ ಸ್ಪೆಕ್ಟರ್ ಕಾಂತರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದು ಪ್ರತಿಭಟನಕಾರರನ್ನು ಚದುರಿಸಿದರು. ಮೊದಲು ಮತ ಹಾಕುವಂತೆ ಗ್ರಾಮಸ್ಮರನ್ನು ಅಧಿಕಾರಿಗಳು ಮನವೊಲಿಸಲು ಪಟ್ಟ ಪ್ರಯತ್ನ ವಿಫಲವಾಯಿತು. ಮಧ್ಯಾಹ್ನ 1ಗಂಟೆಯಾದರು ಗ್ರಾಮಸ್ಥರು ಮತದಾನಕ್ಕೆ ಮುಂದಾಗಲಿಲ್ಲ.

ಚಿಕ್ಕಬಳ್ಳಾಪುರದಲ್ಲೂ ಮತದಾನ ಬಹಿಷ್ಕಾರ

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪುರ ತಾಲೂಕಿನ ಕೂಲೂರು ಹೋಬಳಿ ದೇವಿಕುಂಟೆ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ. ಮಾಗಾನುಕುಂಟೆಯಿಂದ ದೇವಿಕುಂಟೆ ಗ್ರಾಮಕ್ಕೆ 1994 ರಲ್ಲಿ ರಸ್ತೆ ಮಾಡಲಾಗಿದೆ. ಆದರೆ ಆ ರಸ್ತೆ ತೀರಾ ಹಾಳಾಗಿದೆ. ರಸ್ತೆ ಮಾಡುವಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಬೇಡಿಕೆ ಈಡೇರುವ ತನಕ ಮತದಾನ ಮಾಡಲ್ಲ ಎಂದ ಸಿದ್ದಾಪುರ ಗ್ರಾಮಸ್ಥರು

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಗಣಿಭಾದಿತ ಪ್ರದೇಶ ಪಟ್ಟಿಯಿಂದ ಸಿದ್ದಾಪುರ ಗ್ರಾಮವನ್ನು ಕೈಬಿಟ್ಟಿದ್ದಕ್ಕೆ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ. ಎಸ್ಸಿ ಮೀಸಲು ಕ್ಷೇತ್ರ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬೆಳಗ್ಗೆ 7 ರಿಂದ ಮತದಾನ ಆರಂಭವಾಗಿದೆ. ಎಲ್ಲೆಡೆ ಮತದಾನ ಚುರುಕಿನಿಂದ ನಡೆಯುತ್ತಿದೆ. ಆದರೆ, ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದರು.

ಬೆಳಿಗ್ಗೆ ಏಳು ಗಂಟೆಯಿಂದ ಮತದಾನ ಆರಂಭವಾದರೂ ಗ್ರಾಮಸ್ಥರು ಈವರೆಗೆ ಮತದಾನ ಮಾಡಲು ಮುಂದಾಗಿಲ್ಲ. ಗಣಿಭಾದಿತ ಪ್ರದೇಶ ಪಟ್ಟಿಯಿಂದ ಸಿದ್ದಾಪುರ ಗ್ರಾಮವನ್ನು ಕೈಬಿಟ್ಟಿದ್ದಕ್ಕೆ ಮತದಾನ ಮಾಡಲು ಹಿಂದೇಟು ಹಾಕಿದ್ದು, ನಮ್ಮ ಬೇಡಿಕೆ ಈಡೇರಿಸಿದರೆ ಮಾತ್ರ ಮತದಾನ ಮಾಡುತ್ತೇವೆ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಸಿದ್ದಾಪುರ ಗ್ರಾಮದ ಮತಗಟ್ಟೆ ಸಂಖ್ಯೆ 76ರಲ್ಲಿ ಈವರೆಗೆ ಮತದಾನ ಮಾಡದ ಗ್ರಾಮಸ್ಥರಿಗಾಗಿ ತಮ್ಮ ಹಕ್ಕು ಚಲಾಯಿಸುವಂತೆ ಅಧಿಕಾರಿಗಳು ಮನವಿ ಮಾಡಿದರೂ ಕೂಡ ಮತದಾರರು ಬಾರದೇ ಇರುವುದರಿಂದ ಸಿಬ್ಬಂದಿ ಮತಗಟ್ಟೆಯಲ್ಲಿ ಕಾದು ಕುಳಿತಿದ್ದರು.

Tags:    

Similar News