Loksabha Election 2024 | ಚಿಕ್ಕಬಳ್ಳಾಪುರ ಅಭ್ಯರ್ಥಿ ನಾನೇ ಎಂದ ಬಿಜೆಪಿ ಶಾಸಕ ವಿಶ್ವನಾಥ್
ಬೆಂಗಳೂರು: ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ನನ್ನ ಪುತ್ರ ಅಲೋಕ್ ವಿಶ್ವನಾಥ್‌ಗೆ ನೀಡದಿದ್ದರೇ ನಾನೇ ಸ್ಪರ್ಧಿಸುತ್ತೇನೆ. ನನಗೇ ಟಿಕೆಟ್ ಕೊಡಿ ಎಂದು ಯಲಹಂಕದ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.
ಬುಧವಾರ ಸಂಜೆ ಸುದ್ದಿಗಾರರ ಜತೆ ಮಾತನಾಡಿದ ಅವರು, ʼʼನನ್ನ ಪುತ್ರ ಅಲೋಕ್ ವಿಶ್ವನಾಥ್ ಬಗ್ಗೆ ಕ್ಷೇತ್ರದಲ್ಲಿ ಒಲವು ಇದೆ ಎಂಬುದನ್ನು ಹಲವು ಸಮೀಕ್ಷೆಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರವಾಸವನ್ನೂ ಮಾಡಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಲಾಗಿದೆʼʼ ಎಂದು ತಿಳಿಸಿದರು.
ʼʼನಾನು ಪಕ್ಷಕ್ಕೆ ನಿಷ್ಠನಾಗಿರುವ ಶಿಸ್ತಿನ ಸಿಪಾಯಿ. ನನಗೆ ಚಮಚಾಗಿರಿ ಮಾಡಿ ಗೊತ್ತಿಲ್ಲ ಮತ್ತು ಲಾಬಿಯನ್ನೂ ಮಾಡುವುದಿಲ್ಲ. ಸಮೀಕ್ಷೆಯ ವಾಸ್ತವಾಂಶವನ್ನು ವರಿಷ್ಠರಿಗೆ ತಿಳಿಸಿದ್ದೇನೆ. ಒಂದು ವೇಳೆ ಅಲೋಕ್ ವಿಶ್ವನಾಥ್‌ಗೆ ಟಿಕೆಟ್ ನೀಡದಿದ್ದರೆ ನಾನೇ ಅಭ್ಯರ್ಥಿಯಾಗುತ್ತೇನೆ. ನನಗೇ ಟಿಕೆಟ್ ನೀಡುವಂತೆ ಪಕ್ಷದ ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದ್ದೇನೆʼʼ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿಶ್ವನಾಥ್, ಬಿಜೆಪಿಯ ಭದ್ರಕೋಟೆಯಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಕೈತಪ್ಪಬಾರದು ಎಂಬ ಕಾರಣಕ್ಕೆ ನಾನೇ ಅಭ್ಯರ್ಥಿಯಾಗಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ಚಿಕ್ಕಬಳ್ಳಾಪುರದ ಹಾಲೀ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ, ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿದ ನಂತರ ಆ ಕ್ಷೇತ್ರಕ್ಕೆ ಸಂಭಾವ್ಯರ ಹೆಸರು ಬೆಳೆಯುತ್ತಲೇ ಇದೆ. ಮೊದಲಿಗೆ ಡಾ.ಸುಧಾಕರ್ ಮತ್ತು ಅಲೋಕ್ ವಿಶ್ವನಾಥ್ ಹೆಸರು ಕೇಳಿ ಬರುತ್ತಿತ್ತು. ನಂತರ, ಎಚ್.ಡಿ.ಕುಮಾರಸ್ವಾಮಿ, ಡಿ.ವಿ.ಸದಾನಂದ ಗೌಡ ಮತ್ತು ಸುಮಲತಾ ಅಂಬರೀಶ್ ಅವರ ಹೆಸರೂ ಮುನ್ನಲೆಗೆ ಬಂದಿದ್ದವು.
ನಾನು ಮಂಡ್ಯ ಬಿಟ್ಟು ಬರುವ ಪ್ರಶ್ನೆಯೇ ಇಲ್ಲ, ಬಿಟ್ಟು ಬರುವ ಹಾಗಿದ್ದರೆ ಬೆಂಗಳೂರು ಉತ್ತರಕ್ಕೆ ಹೋಗುತ್ತಿದ್ದೆ ಎಂದು ಸುಮಲತಾ, ಚಿಕ್ಕಬಳ್ಲಾಪುರದಿಂದ ಸ್ಪರ್ಧಿಸುವ ವಿಚಾರಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ.
ಈ ನಡುವೆ, ಕ್ಷೇತ್ರಕ್ಕೆ ಅಚ್ಚರಿಯ ಅಭ್ಯರ್ಥಿ ನಾನೇ ಎಂದು ಹೇಳುವ ಮೂಲಕ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ.