Loksabha Election 2024 | ಬಿಜೆಪಿ – ಜೆಡಿಎಸ್ ಮೊದಲ ಸಮನ್ವಯ ಸಭೆ, ಹಲವು ಪ್ರಮುಖ ನಿರ್ಣಯ

ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ಪಣ

Update: 2024-03-30 07:08 GMT
ಬಿಜೆಪಿ - ಜೆಡಿಎಸ್‌ ನಾಯಕರ ಮೊದಲ ಸಮನ್ವಯ ಸಭೆ

ಲೋಕಸಭೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಶುಕ್ರವಾರ ಮೊದಲ ಬಾರಿ ಸಮನ್ವಯ ಸಮಿತಿ ಸಭೆ ನಡೆಯಿತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ಉತ್ತಮ ಬೆಸುಗೆ ಮೂಡಿಸುವುದು ಹಾಗೂ ಮೈತ್ರಿ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಲು ಶ್ರಮಿಸುವ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ಒಂದೂವರೆ ದಶಕದ ನಂತರ ಎಚ್.ಡಿ ದೇವೇಗೌಡ ಹಾಗೂ ಬಿ.ಎಸ್ ಯಡಿಯೂರಪ್ಪ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು, ದೇಶ, ವಿದೇಶಗಳಲ್ಲಿ ಪ್ರವಾಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು 91ರ ವಯಸ್ಸಿನಲ್ಲೂ ಉತ್ಸಾಹದಿಂದ ರಾಜ್ಯ ಪ್ರವಾಸ ಮಾಡಲು ಮುಂದಾಗಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ನಮಗೆಲ್ಲ ಆದರ್ಶ ಎಂದರು.

ಇನ್ನು ಬಿಜೆಪಿ- ಜೆಡಿಎಸ್ ಬೇರೆಯಲ್ಲ. ನಾವೆಲ್ಲ ಒಂದೇ ತಾಯಿ ಮಕ್ಕಳು. ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸೋಣ ಎಂದು ಮನವಿ ಮಾಡಿದರು.

ಸಭೆಯಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರ ನಡುವೆ ಸಮನ್ವಯ ಸಾಧಿಸುವ ಬಗ್ಗೆ ಚರ್ಚೆ ನಡೆಸಿದಿದ್ದು, ಸಮನ್ವಯಕ್ಕೆ ಕೆಲವು ಸೂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಮುಖ್ಯವಾಗಿ ವಿಧಾನಸಭಾ ಕ್ಷೇತ್ರವಾರು ಸಮನ್ವಯ ಸಮಿತಿ ಸಭೆ ನಡೆಸಬೇಕು, ಬಿಜೆಪಿ-ಜೆಡಿಎಸ್ ಜಿಲ್ಲಾ ಕಚೇರಿಗಳಲ್ಲಿ ಎನ್‌ಡಿಎ ವಿಭಾಗವನ್ನು ಪ್ರಾರಂಭಿಸಬೇಕು. ಬ್ಯಾನರ್, ಬಂಟಿಂಗ್ಸ್ ಹಾಗೂ ಕರಪತ್ರ ಸೇರಿದಂತೆ ಚುನಾವಣಾ ಪ್ರಚಾರ ಸಾಮಗ್ರಿಗಳಲ್ಲಿ ಎರಡೂ ಪಕ್ಷಗಳ ಚಿಹ್ನೆ ಬಳಸಬೇಕು, ಪ್ರಚಾರದ ಸಂದರ್ಭದಲ್ಲಿ ಬಿಜೆಪಿ- ಜೆಡಿಎಸ್‌ನ ಬಾವುಟ ಬಳಸುವುದು ಕಡ್ಡಾಯ. ಅಲ್ಲದೇ ಎನ್‌ಡಿಎ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಎರಡೂ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಹಾಜರಿರಬೇಕು, ಒಟ್ಟಾರೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಹೊಂದಾಣಿಕೆ ಮೂಡಿಸುವುದು ಆಯಾ ಕ್ಷೇತ್ರಗಳ ಎರಡೂ ಪಕ್ಷಗಳ ನಾಯಕ ಜವಾಬ್ದಾರಿ ಎಂದು ಸಭೆಯಲ್ಲಿ ನಿರ್ಣಯ ಕೈಗಳ್ಳಲಾಯಿತು.

2006ರಲ್ಲೇ ಬಿಜೆಪಿ-ಜೆಡಿಎಸ್ ಮಧ್ಯೆ ಹೊಂದಾಣಿಕೆಯಾಗಿದ್ದರೂ ದೇವೇಗೌಡ ಅವರು ಮೈತ್ರಿಗೆ ಸಮ್ಮತಿಸಿರಲಿಲ್ಲ. ಇದೀಗ ದೇಶದ ಭದ್ರತೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಮೈತ್ರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಅನುಮತಿ ಸಿಕ್ಕಿದೆ. ಇದು ಮಹತ್ವದ ಬೆಳವಣಿಗೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಎಚ್.ಡಿ ದೇವೇಗೌಡ ಅವರಿಂದ ನಮಗೆ ಆನೆಬಲ ಬಂದಿದ್ದು, ಸಮನ್ವಯ ಸಮಿತಿ ಹಾಗೂ ಎಚ್.ಡಿ. ದೇವೇಗೌಡರ ಅವರ ಸಂದೇಶದಿಂದಾಗಿ ಎರಡೂ ಪಕ್ಷಗಳ ಕಾರ್ಯಕರ್ತರಿಗೆ ದೊಡ್ಡ ಶಕ್ತಿ ಸಿಕ್ಕಂತಾಗಿದೆ. ಎರಡೂ ಪಕ್ಷದ ಮುಖಂಡರ ನಡುವೆ ಯಾವುದೇ ಸಣ್ಣ ಪುಟ್ಟ ಸಮಸ್ಯೆಗಳಿದ್ದರೂ ಪಕ್ಷಗಳ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಿ, ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಸಮನ್ವಯ ಸಮಿತಿ ಸಭೆಯಲ್ಲಿ ಜೆಡಿಎಸ್ ನಾಯಕರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ನಿಖಿಲ್ ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಆರ್. ಅಶೋಕ, ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದಗೌಡ, ಗೋವಿಂದ ಕಾರಜೋಳ, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್‌ ಅಗರವಾಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಹಾಜರಿದ್ದರು.

Tags:    

Similar News