Lok Sabha Election 2024: ಗೊಂದಲಗಳಿಲ್ಲದೇ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಒಕ್ಕಲಿಗರದ್ದೇ ಪಾರುಪತ್ಯ

Update: 2024-03-11 01:38 GMT

ಕಾಂಗ್ರೆಸ್ ಪಕ್ಷ ಶುಕ್ರವಾರ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇದು ಕಾಂಗ್ರೆಸ್ ನಾಯಕರಾಗಲಿ ಅಥವಾ ವಿರೋಧ ಪಕ್ಷವಾಗಲಿ ಅಚ್ಚರಿ ಮೂಡಿಸಿಲ್ಲ ಏಕೆಂದರೆ ಅಭ್ಯರ್ಥಿಗಳ ಆಯ್ಕೆ ನಿರೀಕ್ಷಿತ ಮಟ್ಟದಲ್ಲಿದೆ.

ಕರ್ನಾಟಕದಲ್ಲಿ ಗರಿಷ್ಠ ಸಂಖ್ಯೆಯ ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಇನ್ನುಳಿದ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಹುಡುಕಲು ಹರಸಾಹಸಪಡುತ್ತಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಸಂಸದ ಡಿ ಕೆ ಸುರೇಶ್ ಮತ್ತು ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಅವರ ಪುತ್ರಿ, ಕನ್ನಡ ಸಿನಿ ತಾರೆ ಡಾ.ಶಿವರಾಜಕುಮಾರ್ ಅವರ ಪತ್ನಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸಹೋದರಿ ಗೀತಾ ಶಿವರಾಜಕುಮಾರ್ ಅವರಂತಹ ಅಭ್ಯರ್ಥಿಗಳ ಆಯ್ಕೆ ಒಂದು ರೀತಿಯಲ್ಲಿ ಪೂರ್ವಭಾವಿಯಾಗಿತ್ತು.

ಕಾಂಗ್ರೆಸ್ ಮೂಲಗಳ ಪ್ರಕಾರ, ಆಡಳಿತ ಪಕ್ಷವು ನಟ ಶಿವರಾಜಕುಮಾರ್ ಅವರನ್ನು ಸಂಪರ್ಕಿಸಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿತು, ಆದರೆ ಅವರು ಆ ಪ್ರಸ್ತಾಪವನ್ನು ನಿರಾಕರಿಸಿದರು, ಬದಲಿಗೆ 2014 ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಅವರ ಪತ್ನಿ ಗೀತಾ ಶಿವರಾಜಕುಮಾರ್‌ಗೆ ಟಿಕೆಟ್ ನೀಡುವಂತೆ ಲಾಬಿ ಮಾಡಿದರು.

ಡಿ ಕೆ ಶಿವಕುಮಾರ್ ಅವರ ಸಹೋದರ ಡಿ ಕೆ ಸುರೇಶ್ ಅವರು ಕಾಂಗ್ರೆಸ್‌ನ ಸ್ವಾಭಾವಿಕ ಆಯ್ಕೆಯಾಗಿದ್ದು, ಹಾಲಿ ಸಂಸದರಾಗಿ ಬೆಂಗಳೂರು ಗ್ರಾಮಾಂತರವನ್ನು ಕಾಂಗ್ರೆಸ್‌ನ ಭದ್ರಕೋಟೆಯನ್ನಾಗಿ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಹೆಸರನ್ನು ಶಾರ್ಟ್-ಲಿಸ್ಟ್ ಮಾಡುವ ಕಸರತ್ತು ಪ್ರಾರಂಭಿಸಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಯೋಜಿತ ವೈಜ್ಞಾನಿಕ ಸಮೀಕ್ಷೆಯೊಂದಿಗೆ ಘೋ಼ಷಿಸಲು ನಿರ್ಧರಿಸಿದೆ ಎಂದು ಹೆಸರು ಹೇಳಲಿಚ್ಚಿಸದ ಪ್ರದೇಶ ಕಾಂಗ್ರೆಸ್ ಸಮಿತಿ ಚುನಾವಣಾ ಸಮಿತಿ (PCCEC)ಯ ನಾಯಕರು ಫೆಡರಲ್‌ಗೆ ಹೇಳಿದ್ದಾರೆ.

ʼʼಎಂಟರಿಂದ ಹತ್ತು ಸ್ಥಾನಗಳನ್ನು ಹೊರತುಪಡಿಸಿ ಉಳಿದ ಸ್ಥಾನಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸುವುದು ಕಾಂಗ್ರೆಸ್‌ಗೆ ಕಷ್ಟಕರವಾದ ಕೆಲಸವಾಗಿದೆ. ನಾಯಕರ ಕೊರತೆ ಇದೆ ಎಂದಲ್ಲ. ರಾಜ್ಯದ ಪ್ರತಿ ಪ್ರದೇಶದಲ್ಲಿ ಸಾಕಷ್ಟು ಜನ ನಾಯಕರಿದ್ದಾರೆ, ಆದರೆ, ವಾಸ್ತವವೆಂದರೆ, ಅವರಲ್ಲಿ ಹೆಚ್ಚಿನವರು ಕೇಂದ್ರ ರಾಜಕಾರಣಕ್ಕೆ ಪ್ರವೇಶಿಸಲು ಹಿಂಜರಿಯುತ್ತಿದ್ದಾರೆʼʼ ಎಂದು ಅವರು ಹೇಳಿದರು.

ಅಭ್ಯರ್ಥಿಗಳ ಆಯ್ಕೆ ನಂತರ ಡಿ ಕೆ ಶಿವಕುಮಾರ್ ಮೇಲುಗೈ ಸಾಧಿಸಿದ್ದು, ಏಳು ಅಭ್ಯರ್ಥಿಗಳಲ್ಲಿ ನಾಲ್ವರು ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಮತ್ತು ತಲಾ ಒಬ್ಬರು ಈಡಿಗ, ವೀರಶೈವ ಲಿಂಗಾಯತ ಮತ್ತು ದಲಿತ ಸಮುದಾಯಕ್ಕೆ ಸೇರಿದವರು. ಡಿ ಕೆ ಸುರೇಶ್ ಅವರಲ್ಲದೆ, ತುಮಕೂರು, ಹಾಸನ ಮತ್ತು ಮಂಡ್ಯ ಕ್ಷೇತ್ರಗಳಿಗೆ ಕ್ರಮವಾಗಿ ಒಕ್ಕಲಿಗ ಸಮುದಾಯದ ಎಸ್‌ಪಿ ಮುದ್ದುಹನುಮೇಗೌಡ, ಶ್ರೇಯಸ್ ಪಟೇಲ್ ಮತ್ತು ವೆಂಕಟರಮಣೇಗೌಡ ಅವರಿಗೆ ಟಿಕೆಟ್ ನೀಡಲಾಗಿದೆ.

ಒಕ್ಕಲಿಗ ಪ್ರಾಬಲ್ಯ

2019ರಲ್ಲಿ ಜೆಡಿಎಸ್‌ನೊಂದಿಗಿನ ಮೈತ್ರಿಯಿಂದಾಗಿ ಕಾಂಗ್ರೆಸ್‌ನಿಂದ ಎಸ್‌ಪಿ ಮುದ್ದುಹನುಮೇಗೌಡ ಅವರಿಗೆ ಟಿಕೆಟ್ ಕೈ ತಪ್ಪಿತ್ತು. ಹಾಗಾಗಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಇತ್ತೀಚೆಗಷ್ಟೇ ಅವರು ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರಿದ್ದರು.

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಎಚ್‌ಡಿ ರೇವಣ್ಣ ವಿರುದ್ಧ ಕೇವಲ 3,152 ಮತಗಳ ಅಂತರದಿಂದ ಶ್ರೇಯಸ್ ಪಟೇಲ್ ಸೋತಿದ್ದರು. ಇದೀಗ 2024ರ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ಕುಟುಂಬದ ವಿರುದ್ಧವೇ ಶ್ರೇಯಸ್ ಪಟೇಲ್ ಸೆಣಸಲಿದ್ದಾರೆ.

ಒಕ್ಕಲಿಗ ಸಮುದಾಯಕ್ಕೆ ಸೇರಿದ ಸ್ಟಾರ್ ಚಂದ್ರು ಎಂದೇ ಖ್ಯಾತರಾಗಿರುವ ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟರಮಣೇಗೌಡ ಪ್ರತಿಷ್ಠಿತ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೆಣಸಲು ಸಜ್ಜಾಗಿದ್ದಾರೆ. ಅವರು ಗೌರಿಬಿದನೂರು ಕ್ಷೇತ್ರದ ಸ್ವತಂತ್ರ ಶಾಸಕ ಕೆ ಎಚ್ ಪುಟ್ಟಸ್ವಾಮಿಗೌಡ ಅವರ ಸಹೋದರ.

ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ಆನಂದಸ್ವಾಮಿ ಗಡ್ಡದೇವ್ರು ಮಠ ಅವರಿಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್ ಘೋಷಿಸುವ ಮೂಲಕ ಕಾಂಗ್ರೆಸ್ ದಿಟ್ಟ ನಿಲುವು ತಳೆದಂತಿದೆ. ಆನಂದಸ್ವಾಮಿ ಅವರ ತಂದೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಕಾಂಗ್ರೆಸ್ ಮೂಲಗಳು ಪ್ರಕಾರ, ''ಸಮೀಕ್ಷಾ ವರದಿ ಆಧರಿಸಿ ಆನಂದಸ್ವಾಮಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿದ ಏಳು ಲೋಕಸಭಾ ಕ್ಷೇತ್ರಗಳ ಪೈಕಿ ಹಾಸನ ಲೋಕಸಭಾ ಕ್ಷೇತ್ರ ರಂಗೇರಿದ್ದು, ಈ ಕ್ಷೇತ್ರದಲ್ಲಿ ದಿಗ್ಗಜರ ಮೊಮ್ಮಕ್ಕಳು ಕಣಕ್ಕೆ ಇಳಿಯಲಿದ್ದಾರೆ.

ಮಾಜಿ ಸಂಸದ ದಿವಂಗತ ಜಿ ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಮತ್ತು ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿ ಕೆ ಶಿವಕುಮಾರ್ ಅವರ ಹತ್ತಿರದ ಸಂಬಂಧಿ ಶ್ರೇಯಸ್ ಎಂ ಪಟೇಲ್ ಅವರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ವಿರುದ್ಧ ಸೆಣಸಲಿದ್ದಾರೆ.

ಹಾಸನದಿಂದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯುವ ಸಾಧ್ಯತೆಯಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆದ್ದ ಏಕೈಕ ಸಂಸದ ಪ್ರಜ್ವಲ್ ರೇವಣ್ಣ.

"1999 ರ ಲೋಕಸಭಾ ಚುನಾವಣೆಯಲ್ಲಿ ಪುಟ್ಟಸ್ವಾಮಿಗೌಡರು ಎಚ್ ಡಿ ದೇವೇಗೌಡರನ್ನು ಸೋಲಿಸಿದ್ದರು. 1985ರಲ್ಲಿ ಕಾಂಗ್ರೆಸ್ ಪಕ್ಷ ಪುಟ್ಟಸ್ವಾಮಿಗೌಡ ಅವರಿಗೆ ಟಿಕೆಟ್ ನೀಡಲು ನಿರಾಕರಿಸಿದ ನಂತರ ಮೊದಲ ಬಾರಿಗೆ ಅಂದಿನ ಜನತಾ ಪಕ್ಷದ ದೇವೇಗೌಡರ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಅವರು ಸೋತರು. ತಡವಾಗಿ 1989 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತು 1999 ರ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಗೆಲುವು ಸಾಧಿಸಿದರು.

ಡಾ ಮಂಜುನಾಥ್ ಬಿಜೆಪಿ ಟಿಕೆಟ್?

JD(S) ಮೂಲಗಳ ಪ್ರಕಾರ, ದೇವೇಗೌಡರ ಅಳಿಯ, ಜನಪ್ರಿಯ ಹೃದ್ರೋಗ ತಜ್ಞ ಹಾಗೂ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಚೋಳೇನಹಳ್ಳಿ ನಂಜಪ್ಪ ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ ಕೆ ಸುರೇಶ್ ಅವರ ವಿರುದ್ಧ ಸ್ಪರ್ಧೆ ಮಾಡಲಿದ್ದಾರೆ.

ವಂಶಾಡಳಿತ ರಾಜಕಾರಣ ಮಾಡುತ್ತಿರುವ ದೇವೇಗೌಡರಿಗೆ ಮುಜುಗರವಾಗುವುದನ್ನು ತಪ್ಪಿಸಲು ಜೆಡಿಎಸ್ ಅಭ್ಯರ್ಥಿ ಬದಲು ಡಾ.ಮಂಜುನಾಥ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಲಾಗುವುದು ಎಂದು ಹೇಳಲಾಗುತ್ತಿದೆ.

ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಮತ್ತು ಜೆಡಿಎಸ್ ನಡುವೆ ಟಿಕೆಟ್ ಗಾಗಿ ಪೈಪೋಟಿ ನಡೆಯುತ್ತಿದೆ. ಜೆಡಿಎಸ್ ಮೂಲಗಳ ಪ್ರಕಾರ, ಮಂಡ್ಯದಲ್ಲಿ ಕಾಂಗ್ರೆಸ್‌ನ ಸ್ಟಾರ್ ಚಂದ್ರು ವಿರುದ್ಧ ಜೆಡಿಎಸ್‌ನ ಮಾಜಿ ಸಚಿವ ಸಿಎಸ್ ಪುಟ್ಟರಾಜು ಕಣಕ್ಕಿಳಿಯುವ ಸಾಧ್ಯತೆ ಇದೆ. ಪುಟ್ಟರಾಜು ಅವರು 2014ರಲ್ಲಿ ಸಿನಿ ನಟಿ ರಮ್ಯಾ ದಿವ್ಯಸ್ಪಂದನಾ ಅವರನ್ನು ಸೋಲಿಸಿ ಮಂಡ್ಯದಿಂದ ಲೋಕಸಭೆಗೆ ಪ್ರತಿನಿಧಿಸಿದ್ದರು.

ಬಿಜೆಪಿಯೊಂದಿಗೆ ಸೀಟು ಹಂಚಿಕೆಯಲ್ಲಿ ಮಂಡ್ಯ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳು ಜೆಡಿಎಸ್‌ಗೆ ಹೋಗುತ್ತವೆ ಎಂದು ತಡವಾಗಿ ವರದಿಯಾಗಿದೆ. ಒಲ್ಲದ ಮನಸ್ಸಿನಿಂದ ಎಚ್‌ಡಿ ಕುಮಾರಸ್ವಾಮಿ ಪುಟ್ಟರಾಜು ಅವರನ್ನು ಮಂಡ್ಯದಲ್ಲಿ ಕಣಕ್ಕಿಳಿಸಲು ಬಯಸಿದ್ದರು ಎನ್ನಲಾಗಿದೆ.

2019 ರ ಚುನಾವಣೆಯಲ್ಲಿ ಕೇವಲ ಒಂದು ಲೋಕಸಭಾ ಸ್ಥಾನಕ್ಕೆ (ಬೆಂಗಳೂರು ಗ್ರಾಮಾಂತರ) ಸೀಮಿತವಾಗಿದ್ದ ಕಾಂಗ್ರೆಸ್ ಮತ್ತು ಎರಡಂಕಿಯ ಗಡಿ ದಾಟಲು ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಿದೆ. 2019ಕ್ಕೆ ಹೋಲಿಸಿದರೆ ಕಾಂಗ್ರೆಸ್ ಉತ್ತಮ ಸ್ಥಿತಿಯಲ್ಲಿದೆ. ಪ್ರಸ್ತುತ ಕಾಂಗ್ರೆಸ್ ಪಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಸಾಗುತ್ತಿದೆ, ಜೊತೆಗೆ ಕಳೆದ 10 ತಿಂಗಳ ಸರ್ಕಾರದ ಕಾರ್ಯಕ್ಷಮತೆ, ವಿಶೇಷವಾಗಿ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಗೆ ಸಹಾಯವಾಗಬಹುದು.

ಈಗ ಕಾಂಗ್ರೆಸ್ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲು ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದೆ. ಮಾರ್ಚ್ 11 ರ ನಂತರ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಡಿ ಕೆ ಶಿವಕುಮಾರ್ ಹೇಳಿದರು. ಉಳಿದ 21 ಸ್ಥಾನಗಳಿಗೆ ವಿವಿಧ ಅಭ್ಯರ್ಥಿಗಳ ಹೆಸರು ಸ್ಕ್ರೀನಿಂಗ್ ಕಮಿಟಿಯ ಮುಂದಿದ್ದು, ಸೋಮವಾರ ನಡೆಯಲಿರುವ ಸಭೆಯಲ್ಲಿ ಕೆಲವು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗುವುದು.

ದ ಫೆಡರಲ್ ಜೊತೆ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿ(ಎಸ್) ಮೈತ್ರಿಕೂಟ ಜಂಟಿಯಾಗಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲು ಹರಸಾಹಸ ಪಡುತ್ತಿದೆ ಎಂದು ಹೇಳಿದರು.

Tags:    

Similar News