Loksabha Election 2024 | 2ನೇ ಹಂತದ ಅಖಾಡದಲ್ಲಿ ಯಾರು, ಯಾರಿಗೆ ಎದುರಾಳಿ?

Update: 2024-04-23 09:39 GMT

ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು. ಒಟ್ಟು 335 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 272 ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತವಾಗಿವೆ. ಸೋಮವಾರ 45 ಮಂದಿ ನಾಮಪತ್ರಗಳನ್ನು ಹಿಂಪಡೆದರು. ಸದ್ಯ ಒಟ್ಟು 227 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಜೋಶಿ ಗೆಲುವಿಗೆ ಕಂಟಕವಾಗಿದ್ದ ದಿಂಗಾಲೇಶ್ವರ ಶ್ರೀ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಅವರನ್ನು ಸೋಲಿಸಲೇಬೇಕು ಎಂದು ಪಣ ತೊಟ್ಟು ಕಣಕ್ಕೆ ಇಳಿದಿದ್ದ ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಕೊನೆಯ ದಿನ ನಾಮಪತ್ರ ವಾಪಸ್‌ ಪಡೆದಿದ್ದಾರೆ. ಇದೀಗ ಜೋಶಿ ಅವರಿಗೆ ಸ್ವಲ್ಪ ಮಟ್ಟಿನ ನಿರಾಳ ಎನಿಸಿದರೂ, ಸ್ವಾಮೀಜಿಯ ಮುಂದಿನ ನಡೆ ನಿಗೂಢವಾಗಿದೆ. 

ಇನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಎಸ್‌ ಯಡಿಯೂರಪ್ಪ ಕುಟುಂಬದ ವಿರುದ್ಧ ಸಮರ ಸಾರಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಣದಲ್ಲಿ ಮುಂದುವರೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಗೆಲುವಿಗೆ ಈಶ್ವರಪ್ಪ ತೊಡಕಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

ದಾವಣಗೆರೆಯಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್‌ನ ಯುವ ನಾಯಕ ಜಿ ಬಿ ವಿನಯಕುಮಾರ್‌ ಅವರಿಗೆ ಟಿಕೆಟ್‌ ಕೈ ತಪ್ಪಿದ ಹಿನ್ನೆಲೆ ಅವರು ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಸೊಸೆ, ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ ಅವರ ಪತ್ನಿಯಾಗಿರುವ ಪ್ರಭಾ ಮಲ್ಲಿಕಾರ್ಜುನ ಅವರು ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದು, ಅವರಿಗೆ ಈ ಬಂಡಾಯದ ಬಿಸಿ ತಟ್ಟುವುದೇ? ಎಂಬ ಕುತೂಹಲವಿದೆ.

ಎರಡೂ ಪಕ್ಷಕ್ಕೂ ಭಿನ್ನಮತೀಯರ ಕಾಟ

ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಣ್ಣಾ ಸಾಹೇಬ ಜೊಲ್ಲೆ ಕಣದಲ್ಲಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಮಗಳು ಯುವನಾಯಕಿ ಪ್ರಿಯಾಂಕಾ ಜಾರಕಿಹೊಳಿ ಕಣದಲ್ಲಿದ್ದಾರೆ. ಇಲ್ಲಿ ಬಿಜೆಪಿ ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಮನೆ ಮಗಳ ವಿರುದ್ಧ ಪ್ರಚಾರ ಕಣಕ್ಕೆ ಇಳಿಯುವ ಮನಸ್ಸು ಮಾಡದೆ ದೂರ ಉಳಿದಿದ್ದಾರೆ. ಇನ್ನು ಪಕ್ಷದ ನಾಯಕರಾದ ರಮೇಶ ಕತ್ತಿ ಮತ್ತು ಪ್ರಭಾಕರ ಕೋರೆ ಅವರು ಪ್ರಚಾರದಿಂದ ದೂರ ಉಳಿದಿದ್ದು, ಜೊಲ್ಲೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಉತ್ತರ ಕನ್ನಡ ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಟಿಕೆಟ್‌ ತಪ್ಪಿದ ಕಾರಣಕ್ಕೆ ಅಸಮಾಧಾನಗೊಂಡಿರುವ ಹಾಲಿ ಸಂಸದ ಅನಂತ ಕುಮಾರ ಹೆಗಡೆ, ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ. ಇನ್ನು ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಅವರ ಚಿತ್ತ ಕಾಂಗ್ರೆಸ್‌ನತ್ತ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅವರ ಪುತ್ರ ಕಾಂಗ್ರೆಸ್ ಸೇರಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕ್ಷೇತ್ರದ ನಾಯಕರ ಬೆಂಬಲವಿಲ್ಲದೆ ಏಕಾಂಗಿಯಾಗಿದ್ದಾರೆ.

ಬಾಗಲಕೋಟೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ ಅವರಿಗೆ ಟಿಕೆಟ್‌ ಕೈ ತಪ್ಪಿದ ಬೆನ್ನಲ್ಲೇ ಬಂಡಾಯ ಸಾರುವ ಸೂಚನೆ ನೀಡಿದ್ದರು. ಆದರೆ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರ ನಾಮಪತ್ರ ಸಲ್ಲಿಕೆ ದಿನ ಪ್ರತ್ಯಕ್ಷರಾಗಿ ಕಣ್ಮರೆಯಾಗಿದ್ದಾರೆ. ಸದ್ಯ ಅವರು ಸಂಯುಕ್ತಾ ಪರ ಪ್ರಚಾರ ನಡೆಸುತ್ತಿಲ್ಲ. ಮತ್ತೊಂದು ಕಡೆ ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ ಅವರ ವಿರುದ್ಧ ಪಕ್ಷದೊಳಗೆ ಅಸಮಾಧಾನಗಳಿರುವುದೂ ಕಂಡುಬಂದಿದೆ.

ನೇರ ಹಣಾಹಣಿಯ ಕ್ಷೇತ್ರಗಳು

ಕ್ಷೇತ್ರ

ಬಿಜೆಪಿ

 ಕಾಂಗ್ರೆಸ್

ಚಿಕ್ಕೋಡಿ   

ಅಣ್ಣಾಸಾಹೇಬ ಜೊಲ್ಲೆ

ಪ್ರಿಯಾಂಕಾ ಜಾರಕಿಹೊಳಿ

ಬೆಳಗಾವಿ

ಜಗದೀಶ ಶೆಟ್ಟರ್ 

 ಮೃಣಾಲ್ ಹೆಬ್ಬಾಳ್ಳರ್

ಬಾಗಲಕೋಟೆ 

ಪಿ.ಸಿ.ಗದ್ದಿಗೌಡರ

 ಸಂಯುಕ್ತಾ ಪಾಟೀಲ

ವಿಜಯಪುರ 

ರಮೇಶ ಜಿಗಜಿಣಗಿ 

ರಾಜು ಆಲಗೂರ

ಕಲಬುರಗಿ  

ಡಾ.ಉಮೇಶ್ ಜಾಧವ್‌

ರಾಧಾಕೃಷ್ಣ ದೊಡ್ಡಮನಿ

ಬೀದರ್ 

ಭಗವಂತ ಖೂಬಾ 

ಸಾಗರ್ ಖಂಡ್ರೆ

ರಾಯಚೂರು 

ರಾಜಾ ಅಮರೇಶ್ವರ ನಾಯಕ 

ಜಿ.ಕುಮಾರನಾಯಕ

ಕೊಪ್ಪಳ 

ಡಾ.ಬಸವರಾಜ್ ಕ್ಯಾವಟ‌ರ್‌ 

ರಾಜಶೇಖರ ಹಿಟ್ನಾಳ

ಬಳ್ಳಾರಿ 

ಬಿ.ಶ್ರೀರಾಮುಲು 

ಇ.ತುಕಾರಾಂ

ಹಾವೇರಿ 

ಬಸವರಾಜ ಬೊಮ್ಮಾಯಿ 

ಆನಂದ ಗಡ್ಡದೇವರಮಠ

ಧಾರವಾಡ

 ಪ್ರಹ್ಲಾದ ಜೋಶಿ 

ವಿನೋದ್ ಅಸೂಟಿ

ಉತ್ತರ ಕನ್ನಡ 

ವಿಶ್ವೇಶ್ವರ ಹೆಗಡೆ ಕಾಗೇರಿ 

ಡಾ.ಅಂಜಲಿ ನಿಂಬಾಳ್ಳ‌ರ್

ತ್ರಿಕೋನ ಸ್ಪರ್ಧೆಯ ಕ್ಷೇತ್ರಗಳು

ಕ್ಷೇತ್ರ 

ಬಿಜೆಪಿ 

ಕಾಂಗ್ರೆಸ್ 

ಬಂಡಾಯ

ದಾವಣಗೆರೆ 

ಗಾಯತ್ರಿ ಸಿದ್ದೇಶ್ವರ 

ಡಾ.ಪ್ರಭಾ ಮಲ್ಲಿಕಾರ್ಜುನ 

ಜಿ.ಬಿ.ವಿನಯಕುಮಾರ್

ಶಿವಮೊಗ್ಗ

 ಬಿ.ವೈ.ರಾಘವೇಂದ್ರ 

ಗೀತಾ ಶಿವರಾಜ್‌ಕುಮಾರ್‌

 ಕೆ.ಎಸ್.ಈಶ್ವರಪ್ಪ

Tags:    

Similar News