ಮೈತ್ರಿ ಮುಗ್ಗಟ್ಟು | ಜೆಡಿಎಸ್ ಅಸಮಾಧಾನ ಉಪಶಮನಕ್ಕೆ ಬಿಜೆಪಿ ಯತ್ನ; ನಾಯಕರ ಮಾತುಕತೆ
ಸೋಮವಾರ ನಡೆದ ಅಧಿಕೃತ ಸಭೆಯಲ್ಲಿ ಜೆಡಿಎಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯ ಬಿಜೆಪಿ ಘಟಕದ ಮುಖ್ಯಸ್ಥ ಬಿ.ವೈ.ವಿಜಯೇಂದ್ರ ಅವರನ್ನು ಸಂಪರ್ಕಿಸಿ ಪರಿಹಾರೋಪಾಯದ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದಾರೆ. ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಜೆಡಿಎಸ್ ಪಾತ್ರ ಮತ್ತು ಸೀಟು ಹಂಚಿಕೆ ವಿಚಾರಗಳ ಕುರಿತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರೊಂದಿಗೆ ಮಾತುಕತೆ ನಡೆಸುವಂತೆ ನಡ್ಡಾ ಅವರು ವಿಜಯೇಂದ್ರ ಅವರಿಗೆ ಸೂಚಿಸಿದ್ದಾರೆ;
ಬಿಜೆಪಿ ಜೊತೆಗಿನ ಮೈತ್ರಿ ಕುರಿತು ಜೆಡಿಎಸ್ ನಾಯಕರ ಭಿನ್ನಾಭಿಪ್ರಾಯ ಹಾಗೂ ‘ಬಿಗ್ ಬಾಸ್ ಧೋರಣೆ’ ಆರೋಪವನ್ನು ಬಿಜೆಪಿಯ ಕೇಂದ್ರ ನಾಯಕತ್ವವು ಗಂಭೀರವಾಗಿ ಪರಿಗಣಿಸಿದೆ. ಯಾವುದೇ ಸಮಸ್ಯೆಗಳಿದ್ದಲ್ಲಿ ಕೂಡಲೇ ಜೆಡಿಎಸ್ ಮುಖಂಡರ ಜತೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳುವಂತೆ ರಾಜ್ಯ ಘಟಕಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ.
ಸೋಮವಾರ ನಡೆದ ಅಧಿಕೃತ ಸಭೆಯಲ್ಲಿ ಜೆಡಿಎಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯ ಬಿಜೆಪಿ ಘಟಕದ ಮುಖ್ಯಸ್ಥ ಬಿ.ವೈ.ವಿಜಯೇಂದ್ರ ಅವರನ್ನು ಸಂಪರ್ಕಿಸಿ ಪರಿಹಾರೋಪಾಯದ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದಾರೆ. ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಜೆಡಿಎಸ್ ಪಾತ್ರ ಮತ್ತು ಸೀಟು ಹಂಚಿಕೆ ವಿಚಾರಗಳ ಕುರಿತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರೊಂದಿಗೆ ಮಾತುಕತೆ ನಡೆಸುವಂತೆ ನಡ್ಡಾ ಅವರು ವಿಜಯೇಂದ್ರ ಅವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರತಿಯಾಗಿ, ವಿಜಯೇಂದ್ರ ಸೋಮವಾರ ಸಂಜೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವಿವರವಾದ ಚರ್ಚೆ ನಡೆಸಿದರು. ಜೆಡಿಎಸ್ ಪ್ರಭಾವ ಇರುವ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ನಿರ್ಣಯಗಳ ಬಗ್ಗೆಯೂ ತಮ್ಮ ನಾಯಕರ ಅಸಮಾಧಾನವನ್ನು ದೇವೇಗೌಡರು ಒತ್ತಿ ಹೇಳಿದರು ಎಂದು ಮೂಲಗಳು ಬಹಿರಂಗಪಡಿಸಿವೆ.
''ಮಂಡ್ಯ, ಹಾಸನ, ಕೋಲಾರ/ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ನಾಲ್ಕು ಸ್ಥಾನಗಳನ್ನು ಜೆಡಿಎಸ್ ಕೋರಿದ್ದರಿಂದ ಕೋಲಾರ ಮತ್ತು ತುಮಕೂರು ಕ್ಷೇತ್ರಗಳ ಬಗ್ಗೆಯೂ ಸೀಟು ಹಂಚಿಕೆ ಕುರಿತು ಚರ್ಚೆ ನಡೆದಿದ್ದು, ಸದ್ಯ ಮಂಡ್ಯ ಮತ್ತು ಹಾಸನ ಮಾತ್ರ ಜೆಡಿಎಸ್‌ಗೆ ಹಂಚಿಕೆಯಾಗಿದೆ. ಕೋಲಾರಕ್ಕೆ ಸಂಬಂಧಿಸಿದಂತೆ ಬಿಜೆಪಿ,ನಿರ್ಧಾರ ಕೈಗೊಂಡಿಲ್ಲ. ಕೋಲಾರ ಕ್ಷೇತ್ರ ಸೇರಿದಂತೆ ಕನಿಷ್ಠ ಮೂರು ಸ್ಥಾನಗಳನ್ನು ಜೆಡಿಎಸ್ ಬಯಸಿದೆ. ಇದನ್ನು ಕೂಡಲೇ ಪರಿಹರಿಸಬೇಕೆಂದು ದೇವೇಗೌಡರು ಬಿಜೆಪಿಯನ್ನು ಒತ್ತಾಯಿಸಿದರು,” ಎಂದು ಬಿಜೆಪಿ ನಾಯಕರೊಬ್ಬರು ʼದ ಫೆಡರಲ್ ಕರ್ನಾಕʼಕ್ಕೆ ತಿಳಿಸಿದ್ದಾರೆ.
ದೇವೇಗೌಡರು ಮತ್ತು ವಿಜಯೇಂದ್ರ ಅವರು ಕರ್ನಾಟಕದಲ್ಲಿ ಪಿಎಂ ಮೋದಿ ಅವರ ಚುನಾವಣಾ ಸಭೆಗಳಿಗೆ, ಪ್ರಮುಖವಾಗಿ ಜೆಡಿಎಸ್ ಪ್ರಭಾವ ಇರುವ ಹಳೆ ಮೈಸೂರು ಭಾಗದ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ನಾಯಕರನ್ನು ಆಹ್ವಾನಿಸುವ ಬಗ್ಗೆ ಮಾತುಕತೆ ನಡೆಸಿದರು. ಜೆಡಿಎಸ್ ಸಾಕಷ್ಟು ಪ್ರಭಾವ ಹೊಂದಿರುವ ಹಳೇ ಮೈಸೂರು ಭಾಗದಲ್ಲಿ ಜಂಟಿ ಚುನಾವಣಾ ಸಭೆಗಳಿಗೆ ದೇವೇಗೌಡ ಅಥವಾ ಕುಮಾರಸ್ವಾಮಿ ಅವರನ್ನು ಆಹ್ವಾನಿಸಲು ಬಿಜೆಪಿ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
"ಮೈತ್ರಿಕೂಟದಲ್ಲಿನ ಸಣ್ಣಪುಟ್ಟ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು. ನಮ್ಮ ರಾಷ್ಟ್ರೀಯ ನಾಯಕರು ಸೀಟು ಹಂಚಿಕೆ ಮತ್ತು ಇತರ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ," ಎಂದು ವಿಜಯೇಂದ್ರ ಅವರು ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
''ಬಿಜೆಪಿ-ಜೆಡಿಎಸ್ ನಡುವೆ ಏನೇ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಎಲ್ಲವೂ ಸುಖಾಂತ್ಯಗೊಳ್ಳಲಿದೆ. ಜೆಡಿಎಸ್ ಗೂ ತೃಪ್ತಿಯಾಗುವ ರೀತಿಯಲ್ಲಿ ನಮ್ಮ ರಾಷ್ಟ್ರೀಯ ನಾಯಕರು ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ. ನಮ್ಮ ರಾಷ್ಟ್ರೀಯ ನಾಯಕರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡರ ಜತೆ ದೂರವಾಣಿ ಮೂಲಕವೂ ಚರ್ಚೆ ನಡೆಸಿದ್ದೇನೆ. ನಮ್ಮ ಪಕ್ಷದ ಮುಖಂಡರು ಹಾಗೂ ಜೆಡಿಎಸ್ ಮುಖಂಡರೊಂದಿಗೂ ಈ ಬಗ್ಗೆ ಚರ್ಚೆ ನಡೆಸಿದ್ದೇನೆ" ಎಂದು ಹೇಳಿದ್ದರು.
ಹೆಚ್‌ಡಿಕೆ ಪತ್ರಿಕಾಗೋಷ್ಠಿ ನಡೆಸಿ ಮೈತ್ರಿ ವಿಚಾರದ ಗೊಂದಲಕ್ಕೆ ತೆರೆ ಎಳೆಯಲು ಯತ್ನಿಸಿದ್ದು, "ಎರಡೂ ಪಕ್ಷಗಳು ಚರ್ಚೆ ನಡೆಸುತ್ತಿವೆ. ಬಿಜೆಪಿ ವಿರುದ್ಧ ನಾವು ಯಾವತ್ತೂ ಅಸಮಾಧಾನ ವ್ಯಕ್ತಪಡಿಸಿಲ್ಲ, ಕಾಂಗ್ರೆಸ್ ಸೋಲಿಸಲು ಪಕ್ಷಗಳ ಸಂಬಂಧವನ್ನು ಸುಧಾರಿಸಲು ನಾವು ಶ್ರಮಿಸುತ್ತಿದ್ದೇವೆ," ಎಂದು ಅವರು ಹೇಳಿದರು.
ಮಂಜುನಾಥ್ ಬಗ್ಗೆ ಚರ್ಚೆ
ಆದರೆ, ಈಗಾಗಲೇ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಟಿಕೆಟ್‌ನಿಂದ ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್ ಅವರನ್ನು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ವಿರುದ್ಧ ಕಣಕ್ಕಿಳಿಸಲಾಗಿದೆ ಎಂದು ಬಿಜೆಪಿ, ಜೆಡಿಎಸ್‌ಗೆ ತಿಳಿಸಿದೆ ಎಂದು ಮೂಲಗಳು ಹೇಳಿವೆ. "ಡಿ.ಕೆ.ಸುರೇಶ್ ಅವರು ಜೆಡಿಎಸ್ ಮತ್ತು ಬಿಜೆಪಿ ಎರಡಕ್ಕೂ ಸಾಮಾನ್ಯ ರಾಜಕೀಯ ಎದುರಾಳಿಯಾಗಿರುವ ಹಿನ್ನೆಲೆಯಲ್ಲಿ ದೇವೇಗೌಡರ ಕುಟುಂಬದವರ ಕೋರಿಕೆಯ ಮೇರೆಗೆ ನಾವು ಅವರಿಗೆ ಅವಕಾಶ ಕಲ್ಪಿಸಿದ್ದೇವೆ. ಆ ಕ್ಷೇತ್ರದಿಂದ ನಮಗೆ ಮತ್ತೊಬ್ಬ ಪ್ರಮುಖ ನಾಯಕ ಸಿ.ಪಿ.ಯೋಗೇಶ್ವರ್ ಇದ್ದರೂ ಜೆಡಿಎಸ್ ಕೋರಿಕೆಯಿಂದಾಗಿ ಅವರನ್ನು ಕಣಕ್ಕಿಳಿಸಿಲ್ಲ. ಈ ಬಗ್ಗೆ ಜೆಡಿಎಸ್ ನಾಯಕರಿಗೆ ತಿಳಿಸಲಾಗಿದೆ,’’ ಎಂದು ಬಿಜೆಪಿ ನಾಯಕರೊಬ್ಬರು ಸ್ಪಷ್ಟಪಡಿಸಿದರು. ಆದರೆ, ಕೋಲಾರಕ್ಕೆ ಸಂಬಂಧಿಸಿದಂತೆ ನಿರ್ಧಾರ ಜೆಡಿಎಸ್ ಪರವಾಗಲಿದ್ದು, ಶೀಘ್ರವೇ ನಿರ್ಣಯ ಹೊರಬೀಳುವ ನಿರೀಕ್ಷೆ ಇದೆ.
ನಡ್ಡಾ, ಅಮಿತ್ ಶಾ ಚರ್ಚೆ
ಕರ್ನಾಟಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಕಾರ್ಯತಂತ್ರ ರೂಪಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅಥವಾ ಕೇಂದ್ರ ಸಚಿವ ಅಮಿತ್ ಶಾ ಶೀಘ್ರದಲ್ಲೇ ದೇವೇಗೌಡರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ಸೂಚಿಸುತ್ತವೆ.