ಜೆ.ಪಿ.ನಡ್ಡಾ, ಬಿವೈ ವಿಜಯೇಂದ್ರ ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ , ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಅಮಿತ್ ಮಾಳವಿಯಾ ವಿರುದ್ಧ ಎಫ್ಐಆರ್ ದಾಖಲಾಗಿದೆ.;

Update: 2024-05-06 06:03 GMT
ಜೆಪಿ ನಡ್ಡಾ ಮತ್ತು ಬಿವೈ ವಿಜಯೇಂದ್ರ
Click the Play button to listen to article

ಬೆಂಗಳೂರು: ಎಸ್ಸಿ, ಎಸ್ಟಿ ಅನುದಾನ ಮುಸ್ಲಿಂ ಪಾಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಜಾಹೀರಾತು ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ , ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಅಮಿತ್ ಮಾಳವಿಯಾ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಎಸ್ಸಿ, ಎಸ್ಟಿ ಅನುದಾನ ಮುಸ್ಲಿಂ ಪಾಲಾಗುತ್ತಿದೆ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದು, ಈ ಮೂಲಕ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್​ ದೂರು ನೀಡಿದ್ದು, ಈ ದೂರಿನ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್ ಠಾಣೆಯಲ್ಲಿ ಬಿಜೆಪಿಯ ಮೂವರು ನಾಯಕರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

'ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳನ್ನು ಮೊಟ್ಟೆಗಳೆಂದು ಬಿಂಬಿಸಿ, ಆ ಮೊಟ್ಟೆಗಳಿರುವ ಬುಟ್ಟಿಗೆ ಮುಸ್ಲಿಂ ಮೊಟ್ಟೆಯನ್ನು ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಂದಿರಿಸಿದ್ದಾರೆ. ಮರಿಯಾವ ಬಳಿಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮರಿಗಳಿಗೆ ಸೇರಬೇಕಾದ ಅನುದಾನವನ್ನು ಮುಸ್ಲಿಂ ಮರಿಗಳಿಗೆ ಮಾತ್ರ ನೀಡುತ್ತಾರೆ...' ಎಂಬ ಹೇಳಿಕೆಯಳ್ಳ ವಿಡಿಯೊ ತುಣುಕನ್ನು ಬಿಜೆಪಿ ರಾಜ್ಯ ಘಟಕದ 'ಎಕ್ಸ್' ಖಾತೆಯಲ್ಲಿ ಶನಿವಾರ ಹಂಚಿಕೊಳ್ಳಲಾಗಿತ್ತು.

ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, 'ಮಾಳವೀಯ, ನಡ್ಡಾ ಮತ್ತು ವಿಜಯೇಂದ್ರ ಇಂತಹ ವಿಡಿಯೊ ಪ್ರಸಾರದ ಮೂಲಕ ಸಮುದಾಯಗಳ ಮಧ್ಯೆ ದ್ವೇಷ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇದು ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾಗಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸಬೇಕು' ಎಂದು ಒತ್ತಾಯಿಸಿದ್ದರು.

ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮೂವರ ವಿರುದ್ಧವೂ ಭಾನುವಾರ ಎಫ್‌ಐಆರ್ ದಾಖಲಿಸಲಾಗಿದೆ.

Tags:    

Similar News