ನನ್ನ ಹೃದಯ ಬಗೆದರೆ ರಾಮ, ಮೋದಿ ಕಾಣಿಸ್ತಾರೆ, ಯಡಿಯೂರಪ್ಪ ಎದೆ ಬಗೆದರೆ……: ಕೆ ಎಸ್ ಈಶ್ವರಪ್ಪ

Update: 2024-03-16 06:26 GMT

ʼʼನನ್ನ ಹೃದಯ ಬಗೆದರೆ ಅಲ್ಲಿ ಶ್ರೀರಾಮ ಹಾಗೂ ನರೇಂದ್ರ ಮೋದಿ ಕಾಣಿಸುತ್ತಾರೆ. ಆದರೆ, ಯಡಿಯೂರಪ್ಪ ಅವರ ಎದೆ ಬಗೆದರೆ ಅಲ್ಲಿ ಒಂದುಕಡೆ ಅವರ ಇಬ್ಬರು ಮಕ್ಕಳು ಮತ್ತೊಂದು ಕಡೆ ಶೋಭಾ ಕರಂದ್ಲಾಜೆ ಕಾಣಿಸುತ್ತಾರೆ ಎಂದು ಕಾರ್ಯಕರ್ತರು ಮಾತಾಡಿಕೊಳ್ಳುತ್ತಾರೆʼʼ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಶುಕ್ರವಾರ ಬೆಂಬಲಿಗರ ಸಭೆಯಲ್ಲಿ ಛೇಡಿಸಿದ್ದಾರೆ.

ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಪುತ್ರ ಕಾಂತೇಶ್‌ ಅವರಿಗೆ ಟಿಕೆಟ್ ಸಿಗದಿದ್ದಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶಗೊಂಡಿದ್ದಾರೆ. ಶಿವಮೊಗ್ಗದಲ್ಲಿ ಶುಕ್ರವಾರ ತಮ್ಮ ಬೆಂಬಲಿಗರ ಅಭಿಪ್ರಾಯ ಸಂಗ್ರಹಣಾ ಸಭೆ ನಡೆಸಿದ ಅವರು, ತಮಗೆ ಯಡಿಯೂರಪ್ಪ ಅವರಿಂದಾಗಿ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ, ಮತ್ತು ಭಾರತೀಯ ಜನತಾ ಪಕ್ಷವನ್ನು ಉಳಿಸಲು ತಾವು ಶಿವಮೊಗ್ಗದಿಂದ ಸ್ವತಂತ್ರವಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದರು.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ ಈಶ್ವರಪ್ಪ. ʼʼಈ ಹಿಂದೆ ಕಾಂತೇಶ್ ಅವರು ಯಡಿಯೂರಪ್ಪ ಅವರ ಮನೆಗೆ ಹೋಗಿ ಮಾತಾಡಿದ್ದರು. ‘ತಾವು ಒಪ್ಪಿಗೆ ನೀಡಿದರೆ ಹಾವೇರಿಯಿಂದ ಸ್ಪರ್ಧಿಸುತ್ತೇನೆ’ ಅಂದಿದ್ದರು. ಆಗ ಯಡಿಯೂರಪ್ಪ ಅವರು ‘ಟಿಕೆಟ್ ಕೊಡಿಸುವುದು, ಪ್ರಚಾರ ಮಾಡಿ ಗೆಲ್ಲಿಸುವುದು ತಮ್ಮ ಜವಾಬ್ದಾರಿ’ ಎಂದಿದ್ದರು. ಟಿಕೆಟ್ ನೀಡಿದ್ದರೆ ಕಾಂತೇಶ್ ಗೆಲ್ಲುವು ನಿಶ್ಚಿತವಾಗಿತ್ತುʼʼ ಎಂದು ಹೇಳಿದರು.

ʼʼಟಿವಿಯಲ್ಲಿ ಹಾವೇರಿಗೆ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ಎಂದು ವರದಿ ಬಂದ ಮೇಲೆ ವಿವಿಧ ಸಮಾಜದ ಪ್ರಮುಖ ನಾಯಕರು ಯಡಿಯೂರಪ್ಪ ಅವರ ಮನೆಯಲ್ಲಿ ಭೇಟಿ ನೀಡಿದ್ದರು. ಆಗ ಯಡಿಯೂರಪ್ಪ ಅವರು ‘ಇನ್ನೂ ಪ್ರಯತ್ನ ಮಾಡುತ್ತೇನೆ’ ಎಂದಿದ್ದರು. ಆದರೆ ಯಡಿಯೂರಪ್ಪ ಅವರು ಚಿಕ್ಕಮಗಳೂರಿಗೆ ಹೋದಾಗ ಶೋಭಾ ಕರಂದ್ಲಾಜೆಗೆ ಮತ ಹಾಕಿ ಎಂದಿದ್ದರು. ಈ ಬಗ್ಗೆ ಕೇಂದ್ರದಲ್ಲಿ ಚರ್ಚೆ ಆಗಿತ್ತೊ ಇಲ್ಲವೊ ಗೊತ್ತಿಲ್ಲ. ಅಷ್ಟು ಹೊತ್ತಿಗೆ ಯಡಿಯೂರಪ್ಪ ಅವರೆ ಪ್ರಕಟಿಸಿದ್ದರು. ಆದರೆ ಕಾಂತೇಶ್‌ಗೆ ಮಾತು ಕೊಟ್ಟಿದ್ದು ಯಾಕೆ ಈಡೇರಿಸಲಿಲ್ಲ?ʼʼ ಎಂದು ಪ್ರಶ್ನೆ ಮಾಡಿದರು.

ಚುನಾವಣಾ ಸಮಿತಿ ಸಭೆಯಲ್ಲಿ ಕಾಂತೇಶ್ ಹೆಸರು ಪ್ರಸ್ತಾಪವಾಗಿತ್ತು. ಆದರೆ ಬಸವರಾಜ ಬೊಮ್ಮಾಯಿ ಹೆಸರು ಹೇಗೆ ಬಂತು ಗೊತ್ತಿಲ್ಲ. ಅವರಿಗೆ ನಿಲ್ಲುವ ಆಸಕ್ತಿ ಇಲ್ಲದಿದ್ದರೂ ಟಿಕೆಟ್ ನೀಡಲಾಗಿದೆ. ಇತ್ತ ಶೋಭಾ ಕರಂದ್ಲಾಜೆ ವಿರುದ್ಧ ಚಿಕ್ಕಮಗಳೂರಿನಲ್ಲಿ ಕಾರ್ಯಕರ್ತರು ಗೋ ಬ್ಯಾಕ್ ಚಳವಳಿ ನಡೆಸುತ್ತಿದ್ದಾರೆ. ಶೋಭಾ ಕರಂದ್ಲಾಜೆಗೆ ಟಿಕೆಟ್ ತಪ್ಪಿದರೆ ಸಿ.ಟಿ.ರವಿಗೆ ಅವಕಾಶ ಸಿಗಬೇಕಿತ್ತು. ಸಿ.ಟಿ.ರವಿ, ಪ್ರತಾಪ್ ಸಿಂಹ ಇವರೆಲ್ಲ ಹಿಂದುತ್ವದ ವಿಚಾರ ಬಂದಾಗ ಗಟ್ಟಿಯಾಗಿ ನಿಲ್ಲುತ್ತಿದ್ದ ಕಾರ್ಯಕರ್ತರು. ಆದರೆ ಇವರಿಗೆ ಟಿಕೆಟ್ ತಪ್ಪಿದೆʼʼ ಎಂದು ಹೇಳಿದರು.

"ನನ್ನ ಪ್ರಾಣ ಹೋದರೂ ಮೋದಿ ವಿರುದ್ಧ ಹೋಗಲ್ಲ. ನನ್ನ ಹೃದಯ ಬಗೆದರೆ ಒಂದೆಡೆ ರಾಮ, ಮತ್ತೊಂದು ಕಡೆ ಮೋದಿ ಕಾಣಿಸುತ್ತಾರೆ. ಯಡಿಯೂರಪ್ಪ ಅವರ ಎದೆ ಬಗೆದರೆ ಒಂದು ಕಡೆ ಮಕ್ಕಳು, ಮತ್ತೊಂದು ಕಡೆ ಶೋಭಾ ಕರಂದ್ಲಾಜೆ ಕಾಣಿಸುತ್ತಾರೆ ಎಂದು ಕಾರ್ಯಕರ್ತರು ಹೇಳುತ್ತಾರೆ" ಎಂದು ಈಶ್ವರಪ್ಪ ಈ ಸಂದರ್ಭದಲ್ಲಿ ಯಡಿಯೂರಪ್ಪ ವಿರುದ್ಧ ವ್ಯಂಗ್ಯವಾಡಿದರು.

Tags:    

Similar News