ಬದಲಾದ ಮಂಡ್ಯ ಲೋಕಸಭಾ ಕಣ | ಜೋಡೆತ್ತು ಅದಲು– ಬದಲು; ಆಗ ಸ್ವಾಭಿಮಾನ, ಈಗ ಸಂಧಾನ

ಐದು ವರ್ಷಗಳಲ್ಲಿ ಮಂಡ್ಯ ಲೋಕಸಭೆ ಚುನಾವಣಾ ಕಣ ಅಚ್ಚರಿಯ ರೀತಿಯಲ್ಲಿ ಬದಲಾಗಿದೆ. ಮಿತ್ರ ಪಕ್ಷಗಳೇ ಬದಲಾಗಿವೆ. ಶತ್ರು ಪಾಳಯದಲ್ಲಿದ್ದವರು ಮಿತ್ರರಾಗಿದ್ದಾರೆ. ಜೋಡೆತ್ತುಗಳು ಬದಲಾಗಿವೆ..;

By :  Hitesh Y
Update: 2024-04-08 14:30 GMT
ಮಂಡ್ಯ ಲೋಕಸಭಾ ಕ್ಷೇತ್ರ

ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ, ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದು ರಾಜಕಾರಣಿಗಳು ಸದಾ ಬಳಸುವ ಸವಕಲು ನಾಣ್ಯಗಳು. ಐದು ವರ್ಷಗಳ ಹಿಂದೆ ರಾಜಕೀಯದಲ್ಲಿ ಬದ್ಧ ವೈರಿಗಳಾಗಿದ್ದವರೇ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪರಸ್ಪರ ಕೈಕುಲುಕುತ್ತಿದ್ದಾರೆ. ಇದಕ್ಕೆ ಮಂಡ್ಯ ಜಿಲ್ಲೆ ಸಾಕ್ಷಿಯಾಗಿದೆ.

ಬದ್ಧ ವೈರಿಗಳಾಗಿ, ಇಡೀ ರಾಜ್ಯವೇ ಮಾತಾಡಿಕೊಳ್ಳುವ ಮಟ್ಟಿಗೆ ಪರಸ್ಪರ ಬೈದಾಡಿಕೊಂಡಿದ್ದ ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರು ಈಗ ರಾಜಕೀಯ ಸಂಧಾನ ಮಾಡಿಕೊಂಡಿದ್ದಾರೆ. ಈ ಮೂಲಕ 2019ರ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಕಣಕ್ಕೂ 2024ರ ಪರಿಸ್ಥಿತಿಗೂ ಸಾಕಷ್ಟು ಬದಲಾವಣೆಗಳಾಗಿವೆ. ಅದರಲ್ಲಿ ಮುಖ್ಯವಾಗಿ, ಕಳೆದ ಬಾರಿಯ ಚುನಾವಣೆಯಲ್ಲಿ ರಾಜ್ಯಾದ್ಯಂತ ಸದ್ದು ಮಾಡಿದ್ದ ಜೋಡೆತ್ತಿನ ಪರಿಕಲ್ಪನೆ ಮತ್ತು ಸ್ವಾಭಿಮಾನ ಎನ್ನುವ ವಿಷಯಗಳು ಇದೀಗ ತಲೆಕೆಳಗಾಗಿವೆ.

ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್- ಕಾಂಗ್ರೆಸ್, ಸುಮಲತಾ ಅಂಬರೀಶ್- ಬಿಜೆಪಿ ಹಾಗೂ ನಟ ದರ್ಶನ್ ಹಾಗೂ ಯಶ್ ಅವರು ಜೋಡೆತ್ತಿನಂತೆ ಗುರುತಿಸಿಕೊಂಡಿದ್ದರು. ಇದೀಗ ಚುನಾವಣಾ ಕಣದ ಚಿತ್ರಣ ಸಂಪೂರ್ಣ ಬದಲಾಗಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಗಳೇ ಬದಲಾಗಿವೆ. ಬಿಜೆಪಿ –ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಸುಮತಲಾ ಅಂಬರೀಶ್ ಅವರು ಎಚ್.ಡಿ ಕುಮಾರಸ್ವಾಮಿ ಅವರಿಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ! ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಪಕ್ಷೇತರ  ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅವರಿಗೆ ಕಳೆದ ಬಾರಿ ಬಿಜೆಪಿ ಬೆಂಬಲ ಸೂಚಿಸಿತ್ತು.

2019ರ ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ ದೇವೇಗೌಡ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧಿಸಿದ್ದರು. ಆಗ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಇತ್ತು. ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸಿ, ಗೆದ್ದಿದ್ದರು. ಚುನಾವಣಾ ಪ್ರಚಾರದಲ್ಲಿ ಅವರಿಗೆ ಸಾಥ್ ನೀಡಿದವರು ಕನ್ನಡ ಚಿತ್ರರಂಗದ ಪ್ರಮುಖ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್. ಈ ಇಬ್ಬರು ನಟರು ಸುಮಲತಾ ಅವರಿಗೆ ಹೆಗಲು ಕೊಟ್ಟು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು. ಪ್ರಚಾರಕ್ಕೆ ಜನ ಸಾಗರವೇ ಸೇರುತ್ತಿತ್ತು. ನಟ ದರ್ಶನ್ ಮತ್ತು ಯಶ್ ಅವರ ಜೋಡಿ ಪ್ರಚಾರದಲ್ಲಿ ಮೋಡಿ ಮಾಡಿತ್ತು. ಚುನಾವಣಾ ಪ್ರಚಾರದಲ್ಲಿ ಮಾಸ್ ಡೈಲಾಗ್‌ಗಳು ಕೇಳಿಬಂದಿದ್ದವು. ಮತ್ತೊಂದು ಕಡೆ ಪುತ್ರನನ್ನು ಗೆಲ್ಲಿಸಬೇಕು ಎಂದು ಪಣತೊಟ್ಟಿದ್ದ ಎಚ್.ಡಿ ಕುಮಾರಸ್ವಾಮಿ ಅವರು ಏಕಾಂಗಿಯಾಗಿ ಸೆಣಸುತ್ತಿದ್ದರು.

ಸುಮಲತಾ ಅವರನ್ನು ಗೆಲ್ಲಿಸುವುದಕ್ಕೆ ದರ್ಶನ್ ಒಬ್ಬರೇ ಸಾಕಲ್ಲವೇ ಎನ್ನುವ ಪ್ರಶ್ನೆಗೆ ದರ್ಶನ್‌ ಅವರು, ʻಇಲ್ಲ ನನ್ನ ಜೊತೆಯಲ್ಲಿ ನಮ್ಮ ಹೀರೋ (ಯಶ್) ಇದ್ದಾರೆ. ನಮ್ಮದು ಜೋಡಿ ಎತ್ತಿನ ಗಾಡಿ' ಎಂದಿದ್ದರು. ಇದಕ್ಕೆ ಎಚ್.ಡಿ ಕುಮಾರಸ್ವಾಮಿ ಅವರು, (ನಟ ಯಶ್ ಮತ್ತು ದರ್ಶನ್ ಅವರ ಹೆಸರನ್ನು ಹೇಳದೆ) ಅವು ಜೋಡೆತ್ತುಗಳಲ್ಲ, ಕಳ್ಳೆತ್ತುಗಳು ಎಂದಿದ್ದರು. ಕಳ್ಳೆತ್ತು ಎನ್ನುವುದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಅದಕ್ಕೆ ಸ್ಪಷ್ಟನೆ ನೀಡಿದ್ದ ಎಚ್.ಡಿ ಕುಮಾರಸ್ವಾಮಿ, ʻನಾನೇಳಿದ್ದು ಮತ ಕೇಳಲು ಹಲವು ಎತ್ತುಗಳು ಬರ್ತಾವೆ ಅಂತ. ನಾನ್ಯಾವತ್ತೂ ಕಳ್ಳೆತ್ತು ಅಂದಿಲ್ಲ. ಹೊಲ ಉಳೋ ಎತ್ತುಗಳಲ್ಲ. ಶೋಕಿ ಎತ್ತುಗಳು ಎಂದೇಳಿದ್ದುʼ ಎಂದು ಸಮರ್ಥನೆ ಮಾಡಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಜೆಡಿಎಸ್‌ನ ಕೆಲವು ಪ್ರಮುಖ ಮುಖಂಡರು ಸುಮಲತಾ ಅವರ ಬಗ್ಗೆ ನೀಡಿದ್ದ ಕೀಳು ಹೇಳಿಕೆಗಳು ಜನಾಕ್ರೋಶಕ್ಕೂ ಕಾರಣವಾಗಿತ್ತು.

ಸುಮಲತಾ ಅವರಿಗೆ ನಿಂದನೆ

ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ 2019ರ ಲೋಕಸಭೆ ಚುನಾವಣಾ ಪ್ರಚಾರಗಳಲ್ಲಿ ಜೆಡಿಎಸ್ ನಾಯಕರು ಟೀಕೆಗಳ ಸುರಿಮಳೆಯನ್ನೇ ಸುರಿಸಿದ್ದರು. ಸುಮಲತಾ ಸ್ಪರ್ಧಿಸುತ್ತಿದ್ದಾರೆ ಎನ್ನುವುದು ಖಚಿತವಾಗುತ್ತಿದ್ದಂತೆಯೇ ಮಾಜಿ ಸಚಿವ ಎಚ್.ಡಿ ರೇವಣ್ಣ, ಸುಮಲತಾ ಅವರನ್ನು ಉದ್ದೇಶಿಸಿ ‘ಗಂಡ ಸತ್ತು ತಿಂಗಳಾಗಿಲ್ಲ. ಇವರಿಗೇಕೆ ಈ ರಾಜಕೀಯʼ ಎಂದು ಕೀಳು ಟೀಕೆ ಮಾಡಿದ್ದರು. ಮಾಜಿ ಸಂಸದ ಶಿವರಾಮೇಗೌಡ, ‘ಆಕೆ ಗೌಡ್ತಿಯಲ್ಲ, ನಾಯ್ಡು. ಮಂಡ್ಯವನ್ನು ನಾಯ್ಡುಮಯ ಮಾಡಲು ನಾವು ಬಿಡಬಾರದುʼ ಎಂದು ಕರೆ ನೀಡಿದ್ದರು. ಅಂಬರೀಶ್ ಅವರ ಅಂತ್ಯಕ್ರಿಯೆ ಬಗ್ಗೆಯೂ ಚರ್ಚೆ ನಡೆದಿತ್ತು. ಎಚ್.ಡಿ.ಕುಮಾರಸ್ವಾಮಿ ಅವರೇ ಅಂಬರೀಶ್ ಅವರ ಅಂತ್ಯಕ್ರಿಯೆಯ ಬಗ್ಗೆ ಮಾತನಾಡಿದ್ದರು.

ಸ್ವಾಭಿಮಾನದ ದಾಳ ಉರುಳಿಸಿದ್ದ ಸುಮಲತಾ

ಜೆಡಿಎಸ್‌ನ ಸಚಿವರು, ಶಾಸಕರು ಹಾಗೂ ಮುಖಂಡರು ಸೇರಿದಂತೆ ಹಲವರು ಸುಮಲತಾ ಅಂಬರೀಶ್ ಅವರನ್ನು ನಿಂದಿಸುತ್ತಿದ್ದರೂ, ಸುಮಲತಾ ಅವರು ವಿವಾದಕ್ಕೆ ಗುರಿಯಾಗಲಿಲ್ಲ. ಜಾಣ್ಮೆಯಿಂದ ಚುನಾವಣೆ ಎದುರಿಸಿದ್ದರು. ಸ್ವಾಭಿಮಾನದ ದಾಳ ಉರುಳಿಸಿದ್ದರು. ʻನಾನು ಸಭ್ಯತೆ ಇಲ್ಲದೆ ಮಾತನಾಡುವುದಿಲ್ಲ. ಅವರ (ಜೆಡಿಎಸ್) ಹಂತಕ್ಕೆ ಇಳಿದು ನಾನು ಮಾತನಾಡುವುದಿಲ್ಲ. ಮಂಡ್ಯದ ಸ್ವಾಭಿಮಾನದ ಭಿಕ್ಷೆ ಕೊಡಿ, ಮತ ಭಿಕ್ಷೆ ಕೊಡಿ, ನಿಮ್ಮನ್ನು ನಂಬಿಕೊಂಡು ಬಂದಿದ್ದೇನೆ, ನನ್ನ ಕೈಬಿಡಬೇಡಿʼ ಎಂದು ಸೆರಗೊಡ್ಡಿ ಮಂಡ್ಯ ಜನರಲ್ಲಿ ಸುಮಲತಾ ಅಂಬರೀಶ್ ಅವರು ಮನವಿ ಮಾಡಿದ್ದರು.

ಬದಲಾದ ಜೋಡೆತ್ತು

ಕಳೆದ ಬಾರಿ ಲೋಕಸಭೆ ಚುನಾವಣೆಗೂ ಈ ಬಾರಿಯ ಲೋಕಸಭೆ ಚುನಾವಣೆಗೂ ಸಾಕಷ್ಟು ಬದಲಾವಣೆ ಆಗಿದೆ, ಕಾವೇರಿ ನದಿಯಲ್ಲಿ ಬರದ ನಡುವೆಯೂ ಸಾಕಷ್ಟು ನೀರು ಹರಿದಿದೆ. ಕಳೆದ ಬಾರಿ ಸುಮಲತಾ ಅಂಬರೀಶ್ ಅವರಿಗೆ ಜೋಡೆತ್ತಿನ ರೀತಿ ನಟ ದರ್ಶನ್ ಹಾಗೂ ನಟ ಯಶ್ ಬೆಂಬಲ ಸೂಚಿಸಿದ್ದರು. ಚುನಾವಣಾ ಪ್ರಚಾರಗಳಲ್ಲಿ ಭಾಗವಹಿಸಿದ್ದರು. ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಜೋಡೆತ್ತಿನ ರೀತಿ ಯಾರು ಬೆಂಬಲ ಸೂಚಿಸುತ್ತಾರೆ ಎನ್ನುವುದು ಈಗ ಇರುವ ಕುತೂಹಲ. ಇನ್ನು ಕಳೆದ ಬಾರಿ ಸುಮಲತಾ ಅವರು ಸ್ವಾಭಿಮಾನದ ದಾಳ ಉರುಳಿಸಿದ್ದರು. ಈ ಬಾರಿ ಎಚ್.ಡಿ ಕುಮಾರಸ್ವಾಮಿ ಅವರು ನಾನು ಈ ಮಣ್ಣಿನ ಮಗ ಎನ್ನುತ್ತಿದ್ದಾರೆ.

Tags:    

Similar News