ಕಾಂಗ್ರೆಸ್‌ಗೆ ಮತ್ತೆ ಮತ ಹಾಕಿ ಗೂಟ ಹೊಡೆಸಿಕೊಳ್ಳಬೇಡಿ: ಬಿ.ಎಸ್ ಯಡಿಯೂರಪ್ಪ

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿ ತಪ್ಪು ಮಾಡಿದ್ದೀರಿ, ಆ ತಪ್ಪನ್ನು ಮತ್ತೆ ಮಾಡಬೇಡಿ ಎಂದು ಬಿ.ಎಸ್‌ ಯಡಿಯೂರಪ್ಪ ಎಚ್ಚರಿಸಿದ್ದಾರೆ. ಸಿ.ಟಿ ರವಿಗೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಲಾಗುವುದು ಎಂದೂ ಅವರು ಹೇಳಿದರು.;

Update: 2024-04-11 14:12 GMT
ಬಿ.ಎಸ್‌ ಯಡಿಯೂರಪ್ಪ

"ದುಡಿಯುವ ಎತ್ತಿಗೆ ಮೇವು ಹಾಕಬೇಕು. ಈ ವಿಚಾರವನ್ನು ಕರ್ನಾಟಕದ ಜನ ಯೋಚಿಸಬೇಕಿತ್ತು" ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಚಿಕ್ಕಮಗಳೂರಿನ ಕಡೂರು ತಾಲ್ಲೂಕಿನ ಸಖರಾಯಪಟ್ಟಣದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮತನಾಡಿದ ಯೂಡಿಯೂರಪ್ಪ ಅವರು, 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು. "ಜನ ಯೋಚನೆ ಮಾಡಬೇಕಿತ್ತು. ಆದರೆ, ಕಾಂಗ್ರೆಸ್‌ಗೆ ಮತ ಹಾಕಿ ಗೂಟ ಹೊಡೆಸಿಕೊಳ್ಳಬೇಕಾಗಿದೆ. ಇನ್ಮುಂದೆ ಗೂಟ ಹೊಡೆಸಿಕೊಳ್ಳಬಾರದು ಎನ್ನುವುದಾದರೆ, ಬಿಜೆಪಿಗೆ ಮತ ಹಾಕಿ" ಎಂದರು.

"ವಿಧಾನಸಭೆಯಲ್ಲಿ ಗುಡುಗಬೇಕಾಗಿದ್ದವರು ಈಗ ಹೊರಗಡೆ ಇದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆಲ್ಲ ಅವಕಾಶ ಸಿಗಲೇಬೇಕು. ನಮ್ಮ ಸಿ.ಟಿ.ರವಿ ಅವರಿಗೂ ಅನ್ಯಾಯವಾಗಿದೆ. ವಿಧಾನಸಭೆ ಅಥವಾ ವಿಧಾನಪರಿಷತ್ತಿನಲ್ಲಿ ಅವಕಾಶ ಕಲ್ಪಿಸುವ ಮೂಲಕ ಆ ಅನ್ಯಾಯವನ್ನು ಸರಿಪಡಿಸಲಾಗುವುದು. ಸಿ.ಟಿ ರವಿ ಅವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವುದಕ್ಕೆ ಸರ್ವಪ್ರಯತ್ನ ಮಾಡಲಾಗುವುದು" ಎಂದು ಹೇಳಿದರು.

"ಮಾದರಸನ ಕೆರೆ ಹಾಗೂ ದಾಸರಹಳ್ಳಿ ಕೆರೆ ತುಂಬಿಸಿದ ಸಂದರ್ಭದಲ್ಲಿ ನೀವು ಮತ್ತೆ ಮತ ಕೇಳಲು ಬರುವುದು ಬೇಡ, ನಾವೆಲ್ಲ ನಿಮಗೇ ಮತದಾನ ಮಾಡುತ್ತೇವೆ ಎಂದು ಅಲ್ಲಿನ ಜನ ಹೇಳಿದ್ದರು. ಆದರೆ, ಚುನಾವಣೆ ಸಮಯದಲ್ಲಿ ಈ ವಿಷಯ ಚರ್ಚೆಯೇ ಆಗಲಿಲ್ಲ. ನಮ್ಮ ನಾಯಕರ ಹೆಸರನ್ನೂ ಬಳಸಿಕೊಂಡು ಅಪಪ್ರಚಾರ ನಡೆಯಿತು. ನಮ್ಮ ಗ್ರಹಚಾರ ಕೆಟ್ಟದಿತ್ತು ಅನಿಸುತ್ತೆ. ಆ ಸಮಯದಲ್ಲಿ ಜೆಡಿಎಸ್‌ನ ವರು ಸಹ ನಮಗೆ ಬೆಂಬಲಿಸಲಿಲ್ಲ" ಎಂದರು.

ಪ್ರಚಾರ ಸಭೆಗೂ ಮೊದಲು ಮಾತನಾಡಿದ್ದ ಬಿಜೆಪಿ ಮುಖಂಡ ಸಿ.ಟಿ.ರವಿ ಅವರು, ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ʼನಮ್ಮ ನಾಯಕರ ಹೆಸರು ಹೇಳಿಕೊಂಡು ವಿಧಾನಸಭೆ ಚುನಾವಣೆಯಲ್ಲಿ ಅಪಪ್ರಚಾರ ಮಾಡಲಾಯಿತು. ಹೀಗಾಗಿ, ಚುನಾವಣೆಯಲ್ಲಿ ಸೋಲುವಂತಾಯಿತುʼ ಎಂದು ಹೇಳಿದರು. 

Tags:    

Similar News