ಕೈ ಮೇಲೆ ಕಮಲದ ಮೆಹಂದಿ: ಕಾರ್ಯಕರ್ತರಿಗೆ ಮೋದಿ ಸಲಹೆ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದಕ್ಕೆ ಬೂತ್‌ ಮಟ್ಟದಲ್ಲಿ ಹೆಚ್ಚು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.;

Update: 2024-04-06 13:46 GMT
ಪ್ರಧಾನಿ ನರೇಂದ್ರ ಮೋದಿ

ಮೆಹಂದಿ ಮೂಲಕ ಕಮಲದ ಚಿಹ್ನೆಯನ್ನು ಕೈಯ ಮೇಲೆ ಹಾಕಿಕೊಳ್ಳುವ ಮೂಲಕ   ಜನಜಾಗೃತಿ ಮೂಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಿಗೆ  ಸಲಹೆ ನೀಡಿದ್ದಾರೆ. ಜತೆಗೆ ಯುಗಾದಿ ಸಂದರ್ಭದಲ್ಲಿ ಕಮಲ ಚಿಹ್ನೆ ಮೂಲಕ ರಂಗೋಲಿ ಬಿಡಿಸಿ ಎಂದೂ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಬಿಜೆಪಿ ಕಾರ್ಯಕರ್ತರಿಗೆ 'ಟಾರ್ಗೆಟ್‌ ೩೭೦' ಬಗ್ಗೆ ತಿಳಿಸಿದ್ದು, ಕರ್ನಾಟಕದ ಬೂತ್ ಕಾರ್ಯಕರ್ತರೊಂದಿಗೆ ನಮೋ ಆ್ಯಪ್ ಮೂಲಕ ಪ್ರಧಾನಿ ನರೇಂದ್ರ ಮೋದಿ  ಶುಕ್ರವಾರ ಸಂವಾದ ನಡೆಸಿದರು. ಆ ವೇಳೆ ಕರ್ನಾಟಕದ ಮತದಾರರ ಮನಸ್ಸು ಗೆಲ್ಲುವಂತೆ ಹೇಳಿದ್ದಾರೆ.

ಸಂವಾದದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಿ, ಮತದಾರರ ಮನ ಗೆಲ್ಲೋಣ. ಮತದಾರರ ಹೃದಯ ಗೆಲ್ಲುವುದು, ಕುಟುಂಬದ ಮನ ಗೆಲ್ಲುವುದು, ಬೂತ್‌ನ ಎಲ್ಲರ ಮನ ಗೆದ್ದು ಬಿಜೆಪಿಗೆ ಮತ ಕೊಡುವಂತೆ ಮಾಡುವ ಸವಾಲು ನಿಮ್ಮ ಮುಂದಿದೆ ಎಂದರು.

ಕರ್ನಾಟಕದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಇದೆ. ಪ್ರತಿ ಬೂತ್‌ನಲ್ಲೂ ಎರಡೂ ಪಕ್ಷಗಳ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಸಮನ್ವಯ ಸಭೆ ನಡೆಸಬೇಕು. ಇದು ಗೆಲುವಿಗೆ ಸಹಕಾರಿಯಾಗಲಿದೆ. ನಾವು ಅಧಿಕಾರದಲ್ಲಿ ಇಲ್ಲದಿದ್ದರೂ ಬೇಧ-ಭಾವ ಮಾಡಿಲ್ಲ. ಈ ವಿಷಯವನ್ನು ಜನರಿಗೆ ತಿಳಿಸೋಣ. ಸಣ್ಣ ಸಣ್ಣ ಗುಂಪುಗಳನ್ನು ರಚಿಸಿ, ಮತದಾನ ಖಚಿತಪಡಿಸಿಕೊಳ್ಳಿ, ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿ ಎಂದು ಹೇಳಿದರು.

ಕಾರ್ಯಕರ್ತರು ಜನರನ್ನು ಭೇಟಿ ಮಾಡುತ್ತಿದ್ದೀರಾ, ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿದ್ದೀರಾ, ಬಿಜೆಪಿ ಸರ್ಕಾರದ ಯಾವ ಕೆಲಸ ಹೆಚ್ಚು ಇಷ್ಟವಾಗಿದೆ ಎಂದು ಪ್ರಶ್ನೆಗಳನ್ನು ಕೇಳಿದರು. ಬಿಜೆಪಿ ಸರ್ಕಾರವು ಕಳೆದ 10 ವರ್ಷಗಳಲ್ಲಿ ನಾರಿ ಶಕ್ತಿಯ ಬಲವರ್ಧನೆ ಮಾಡಿದೆ. ‘ನಾರಿ ಶಕ್ತಿ ವಂದನಾ’ ರಾಜಕೀಯವಾಗಿ ಮಹಿಳಾ ಬಲವರ್ಧನೆ ಮಾಡಲಿದೆ. ಮಹಿಳೆಯರ ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಿ ಎಂದರು.

ಕಾಂಗ್ರೆಸ್ ಸರ್ಕಾರವು ರೈತರಿಗೆ ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ ಎನ್ನುವುದನ್ನು ಜನರಿಗೆ ತಿಳಿಸಿ, ʼಮೋದಿ ಗ್ಯಾರಂಟಿʼ ನುಡಿದಂತೆ ನಡೆಯುವ ಗ್ಯಾರಂಟಿ ಎಂದು ಜನರಿಗೆ ಮನವರಿಕೆ ಮಾಡಬೇಕು. ಬಡವರಿಗೆ ಮನೆ ನಿರ್ಮಾಣ, ಶೌಚಾಲಯ, ಗ್ಯಾಸ್ ಸಂಪರ್ಕ, ಮನೆ ಮನೆಗೆ ನೀರಿನ ಸಂಪರ್ಕ, ಕಿಸಾನ್ ಸಮ್ಮಾನ್ ನಿಧಿ ಸೇರಿ ಅನೇಕ ಯೋಜನೆಗಳನ್ನು ಕೇಂದ್ರ ಬಿಜೆಪಿ ಸರ್ಕಾರ ಪರಿಚಯಿಸಿದೆ. ಇದೇ ಮೋದಿ ಗ್ಯಾರಂಟಿ ಇದನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.

ಬೂತ್‌ ಟಾರ್ಗೆಟ್‌ 370

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದಕ್ಕೆ ಬೂತ್‌ ಮಟ್ಟದಲ್ಲಿ ಹೆಚ್ಚು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕರ್ತರಿಗೆ ಸೂಚನೆ ನೀಡಿದರು. ಬೂತ್ ಗೆದ್ದು ಲೋಕಸಭಾ ಸ್ಥಾನ ಗೆಲ್ಲಬೇಕು. ಪ್ರತಿ ಬೂತ್‌ನಲ್ಲಿ 370ಕ್ಕೂ ಹೆಚ್ಚು ಮತ ಪಡೆದು ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. ಬೇಸಿಗೆ ಇರುವುದರಿಂದ ಬಿಸಿಲು ಹೆಚ್ಚಾಗುತ್ತಿದೆ. ಹೀಗಾಗಿ, ಬೆಳಿಗ್ಗೆ ಸಮಯದಲ್ಲಿ ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಿ ಎಂದು ಹೇಳಿದರು.


Tags:    

Similar News