ಜೆಡಿಎಸ್‌- ಬಿಜೆಪಿ ಯಿಂದ ʼಶಾಲು ತಂತ್ರಗಾರಿಕೆʼ

ರಾಜ್ಯ ರಾಜಕೀಯದಲ್ಲಿ ಇದೀಗ ಸದ್ದಿಲ್ಲದೆ "ಶಾಲು ರಾಜಕೀಯ"ವೊಂದು ನಡೆಯುತ್ತಿದೆ. ಚುನಾವಣಾ ಮೈತ್ರಿ ಸಂದರ್ಭದಲ್ಲಿ ಆಯಾಯ ಪಕ್ಷದ ನಾಯಕರು ತಮ್ಮದೇ ಪಕ್ಷಗಳ ಲಾಂಛನಗಳುಳ್ಳ ಶಾಲುಗಳನ್ನು ಹೆಗಲಿಗೇರಿಸಿಕೊಳ್ಳುತ್ತಿದ್ದರು. ಈಗ ಹಾಗಲ್ಲ! ಮೈತ್ರಿಗೆ ʼಮರ್ಯಾದೆʼ ಕೊಡಲು ತಮ್ಮದೇ ಶಾಲಿನ ಜತೆ ಇನ್ನೊಂದು ಪಕ್ಷದ ಶಾಲನ್ನೂ ಹೆಗಲಿಗೇರಿಸಿ ʼಮೈತ್ರಿ ಧರ್ಮʼ ಪಾಲಿಸುತ್ತಿದ್ದಾರೆ!;

By :  Hitesh Y
Update: 2024-03-21 00:50 GMT
ಬಿಜೆಪಿ - ಜೆಡಿಎಸ್‌ ಮೈತ್ರಿ

ನಿನ್ನ ಶಾಲು ನನ್ನದು, ನನ್ನ ಶಾಲು ನಿನ್ನದು... ಹೌದು! ರಾಜ್ಯ ರಾಜಕೀಯದಲ್ಲಿ ಇದೀಗ ಸದ್ದಿಲ್ಲದೆ "ಶಾಲು ರಾಜಕೀಯ"ವೊಂದು ನಡೆಯುತ್ತಿದೆ. ಚುನಾವಣಾ ಮೈತ್ರಿ ಸಂದರ್ಭದಲ್ಲಿ ಆಯಾಯ ಪಕ್ಷದ ನಾಯಕರು ತಮ್ಮದೇ ಪಕ್ಷಗಳ ಲಾಂಛನಗಳುಳ್ಳ ಶಾಲುಗಳನ್ನು ಹೆಗಲಿಗೇರಿಸಿಕೊಳ್ಳುತ್ತಿದ್ದರು. ಈಗ ಹಾಗಲ್ಲ! ಮೈತ್ರಿಗೆ ʼಮರ್ಯಾದೆʼ ಕೊಡಲು ತಮ್ಮದೇ ಶಾಲಿನ ಜತೆ ಇನ್ನೊಂದು ಪಕ್ಷದ ಶಾಲನ್ನೂ ಹೆಗಲಿಗೇರಿಸಿ ʼಮೈತ್ರಿ ಧರ್ಮʼ ಪಾಲಿಸುತ್ತಿದ್ದಾರೆ!! ಈ ದಿಸೆಯಲ್ಲಿ ಜೆಡಿಎಸ್‌ ಇನ್ನಷ್ಟು ಉತ್ಸಾಹ ತೋರುತ್ತಿರುವುದರ ಬಗ್ಗೆ ಆ ಪಕ್ಷದ ಕಾರ್ಯಕರ್ತರೇ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗುವುದಕ್ಕೂ ಐದಾರು ತಿಂಗಳು  ಪೂರ್ವದಲ್ಲಿಯೇ ಬಿಜೆಪಿ ಹಾಗೂ ಜೆಡಿಎಸ್‌ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ.  ಈಚೆಗೆ ಈ ಮೈತ್ರಿಯಲ್ಲಿ ಸಣ್ಣ ಪುಟ್ಟ ಅಪಸ್ವರಗಳೂ ಕೇಳಿಬಂದಿವೆ. ಈ ಅಪಸ್ವರಗಳ ನಡುವೆಯೇ ಬಿಜೆಪಿ- ಜೆಡಿಎಸ್‌ ಮೈತ್ರಿಯಲ್ಲಿ ಬಿರುಕಿಲ್ಲ ಎನ್ನುವುದನ್ನು ಪ್ರದರ್ಶಿಸುವುದಕ್ಕೆ ಹಾಗೂ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದ ಬಿಜೆಪಿ ಹಾಗೂ ಜೆಡಿಎಸ್‌ನ ಪಕ್ಷದ ಮುಖಂಡರು, ವಿವಿಧ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಬಿಜೆಪಿ ಹಾಗೂ ಜೆಡಿಎಸ್‌ ಎರಡೂ ಪಕ್ಷದ ಶಾಲುಗಳನ್ನು ಧರಿಸುತ್ತಿದ್ದಾರೆ.

 ಕೇಸರಿ ಮತ್ತು ಹಸಿರು ಶಾಲಿನ ಬಲ ಪ್ರದರ್ಶನ

ರಾಜ್ಯದಲ್ಲಿ ಕೇಸರಿ ಶಾಲಿನ ರಾಜಕೀಯ ಕಳೆದ ಕೆಲವು ತಿಂಗಳಿನಿಂದ ಸದ್ದು ಮಾಡುತ್ತಲ್ಲೇ ಇದೆ. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ ಕುಮಾರಸ್ವಾಮಿ ಅವರು ಈಚೆಗೆ ಕೆರಗೋಡ ಗ್ರಾಮದಲ್ಲಿ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿ  ಬೆಂಬಲಿಗರ ಜತೆ ತೆರಳುವ ಸಂದರ್ಭದಲ್ಲಿ  ಕೇಸರಿ ಶಾಲು ಧರಿಸಿದ್ದರು. ಅದರಿಂದ ತಮ್ಮದೇ ಪಕ್ಷದ ಟೀಕೆಗೂ ಒಳಗಾಗಿದ್ದರು.  ಈಗ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು, ನಾಯಕರು ಹಾಗೂ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳು ಪಕ್ಷ ಲಾಂಛನಗಳುಳ್ಳ ಕೇಸರಿ (ಬಿಜೆಪಿ) ಹಾಗೂ ಹಸಿರು (ಜೆಡಿಎಸ್) ಶಾಲು ಧರಿಸಿ, ಪತ್ರಿಕಾಗೋಷ್ಠಿ, ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬುಧವಾರ ರಾಮನಗರದ ಜೆಡಿಎಸ್‌ ಕಚೇರಿಯಲ್ಲಿ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಜಂಟಿ ಪತ್ರಿಕಾಗೋಷ್ಠಿ ನಡೆದಿದ್ದು, ನಿಖಿಲ್‌ ಕುಮಾರಸ್ವಾಮಿ ಅವರು ಜೆಡಿಎಸ್‌ ಹಾಗೂ ಕೇಸರಿ ಶಾಲು ಧರಿಸಿದ್ದು ಕಂಡುಬಂತು. ಅದೇ ರೀತಿ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ (ಮೈತ್ರಿ) ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು, ಈಚೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೇಸರಿ ಶಾಲು ಧರಿಸಿದ್ದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ಸಂದರ್ಭದಲ್ಲಿಯೇ ಕಾರ್ಯಕರ್ತರೊಬ್ಬರು ಯದುವೀರ್‌ ಅವರಿಗೆ ಜೆಡಿಎಸ್‌ ಶಾಲು ಹಾಕಿದ್ದರು. ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗದಲ್ಲಿ ಭಾಗವಹಿಸಿದ್ದ ಬಹಿರಂಗ ಸಭೆಯಲ್ಲೂ ಈ ಎರಡೂ ಪಕ್ಷದ ಕೆಲವು ಮುಖಂಡರು ಎರಡೂ ಪಕ್ಷಗಳ ಶಾಲು ಧರಿಸಿದ್ದು ಕಂಡುಬಂತು.


 



ಕಾರ್ಯಕರನ್ನು ಮನವೊಲಿಸುವ ಪ್ರಯತ್ನ ?

ಬಿಜೆಪಿ ಹಾಗೂ ಜೆಡಿಎಸ್‌ (ಮೈತ್ರಿ)ಪಕ್ಷದ ಅಭ್ಯರ್ಥಿಗಳು ಈ ರೀತಿ ಎರಡೂ ಪಕ್ಷಗಳ ಶಾಲನ್ನು ಧರಿಸುತ್ತಿರುವುದರ ಹಿಂದೆ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಮನವೊಲಿಸುವ ತಂತ್ರಗಾರಿಕೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್‌ ಲೋಕಸಭೆ ಚುನಾವಣೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿ - ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳಿಗೆ ಎರಡೂ ಪಕ್ಷದ ಕಾರ್ಯಕರ್ತರು ಮತ ಹಾಕಬೇಕು ಹಾಗೂ ಎರಡೂ ಪಕ್ಷದ ಪ್ರಮುಖ ನಾಯಕರು ಹಾಗೂ ಮುಖಂಡರು ಒಮ್ಮತದಿಂದ ಕೆಲಸ ಮಾಡುತ್ತಿದ್ದೇವೆ ಎಂದು ಪಕ್ಷಗಳ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದ ಎರಡೂ ಪಕ್ಷದ ಪ್ರಮುಖರು ಎರಡೂ ಶಾಲನ್ನು ಧರಿಸುತ್ತಿರುವ ಸಾಧ್ಯತೆಯೂ ಇದೆ.

ಕೇಸರಿ ಶಾಲು ಧರಿಸಿದ್ದಕ್ಕೆ ಎಚ್.ಡಿ ದೇವೇಗೌಡ ವಿರೋಧಿಸಿದ್ದರು

ಒಂದೆರಡು ತಿಂಗಳ ಹಿಂದಿನ ಮಾತು. ಎಚ್‌.ಡಿ ಕುಮಾರಸ್ವಾಮಿ ಅವರು ಕೇಸರಿ ಶಾಲು ಧರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಮಂಡ್ಯ ತಾಲ್ಲೂಕಿನ ಕೆರಗೋಡ ಗ್ರಾಮದಲ್ಲಿ ಹನುಮ ಧ್ವಜ ತೆರವು (ವಿವಾದ) ಮಾಡಿದ್ದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ ಕುಮಾರಸ್ವಾಮಿ ಅವರು ಕೇಸರಿ ಶಾಲು ಧರಿಸಿದ್ದರು ಅದನ್ನು ಸ್ವತಃ ಕುಮಾರಸ್ವಾಮಿ ಅವರ ತಂದೆ, ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ ದೇವೇಗೌಡ ಅವರು ಖಂಡಿಸಿದ್ದರು.


ಕುಮಾರಸ್ವಾಮಿ ಅವರು ಕೇಸರಿ ಶಾಲು ಹಾಕಿಕೊಳ್ಳಬಾರದಾಗಿತ್ತು. ನಮ್ಮ ಪಕ್ಷದ ಶಾಲು ಹಾಕಿಕೊಳ್ಳಬಹುದಿತ್ತು ಎಂದಿದ್ದರು. ಅಲ್ಲದೇ ಮುಂದುವರಿದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೋದಾಗಲೂ ನನ್ನ ಪಕ್ಷದ ಶಾಲು ಹಾಕಿಕೊಳ್ಳುತ್ತೇನೆ. ನಾನು ಖಂಡಿತ ಕೇಸರಿ ಶಾಲು ಧರಿಸುವುದಿಲ್ಲ ಎಂದೂ ಹೇಳಿದ್ದರು. ಅಲ್ಲದೇ ಪ್ರತಿಭಟನೆ ಸಂದರ್ಭದಲ್ಲಿ ಯಾರೋ ಕೇಸರಿ ಶಾಲು ಹಾಕಿರುತ್ತಾರೆ. ಆಯಾ ಸಂದರ್ಭಕ್ಕೆ ಅನುಸಾರವಾಗಿ ಧರಿಸಿರಬಹುದು ಅದನ್ನು ದೊಡ್ಡದಾಗಿ ಬಿಂಬಿಸುವ ಅಗತ್ಯ ಇಲ್ಲ ಎಂದೂ ಹೇಳುವ ಮೂಲಕ ದೇವೇಗೌಡ ಅವರು ಕುಮಾರಸ್ವಾಮಿ ಅವರನ್ನು ಸಮರ್ಥನೆ ಸಹ ಮಾಡಿಕೊಂಡಿದ್ದರು.

ಈ ಹಿಂದೆ ನಡೆದ ಉದಾಹರಣೆ ಇಲ್ಲ

2018ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಆ ಸಂದರ್ಭದಲ್ಲಿ ರಾಜ್ಯದಲ್ಲೂ ಸಮ್ಮಿಶ್ರ ಸರ್ಕಾರ (ಕಾಂಗ್ರೆಸ್‌- ಜೆಡಿಎಸ್‌) ಇತ್ತು. ಆದರೆ, 2018ರಲ್ಲಿ ಎರಡೂ ಪಕ್ಷದ ನಾಯಕರು, ಮುಖಂಡರು ಅಥವಾ ಅಭ್ಯರ್ಥಿಗಳು ಮೈತ್ರಿ (ಕಾಂಗ್ರೆಸ್‌- ಜೆಡಿಎಸ್‌) ಪಕ್ಷದ ಎರಡೂ ಶಾಲು ಧರಿಸಿದ್ದು ಕಂಡಿರಲಿಲ್ಲ.  

Tags:    

Similar News