ಲೋಕಸಭಾ ಚುನಾವಣೆl ಕೇರಳದ ತ್ರಿಶೂರ್‌ನಲ್ಲಿ ಪ್ರಚಾರ ಪ್ರಾರಂಭ
ಚೆರ್ಪು ಎಂಬಲ್ಲಿ ಬಿಜೆಪಿ ನಾಯಕನ ಬೃಹತ್ ಜಾಹೀರಾತು ಫಲಕ
ಕೇರಳ ರಾಜ್ಯ 2024ರ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಸಜ್ಜಾಗಿದೆ. ತ್ರಿಶೂರ್‌ನ ಇರಿಂಜಲಕುಡ ಬಳಿಯ ಚೆರ್ಪು ಎಂಬಲ್ಲಿ ಬಿಜೆಪಿಯ ಬೃಹತ್ ಜಾಹೀರಾತು ಫಲಕವನ್ನು ಹಾಕಲಾಗಿದೆ. ಇದರಲ್ಲಿ ನಟ ಕಮ್-ಬಿಜೆಪಿ ನಾಯಕ ಸುರೇಶ್ ಗೋಪಿ ಅವರ ಚಿತ್ರವನ್ನು ಪ್ರಮುಖವಾಗಿ ಪ್ರದರ್ಶಿಸಲಾಗಿದ್ದು, ಜನರಿಗೆ ಮತ ನೀಡುವಂತೆ ಮನವಿ ಮಾಡಲಾಗಿದೆ. ʼʼನಮಗೆ ಮತ ನೀಡುವುದರಿಂದ ನೀವು ಮೋಸ ಹೋಗುವುದಿಲ್ಲʼʼ ಎಂದು ಭರವಸೆಯ ಮಾತುಗಳನ್ನು ಫಲಕದಲ್ಲಿ ಬರೆಯಲಾಗಿದೆ.
ಕೇರಳದಲ್ಲಿ ಈವರೆಗೂ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸದಿದ್ದರೂ, ಸುರೇಶ್ ಗೋಪಿ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಜನವರಿ 3 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಸಮಾವೇಶ ನಡೆಸುವ ಮೂಲಕ ಅನಧಿಕೃತವಾಗಿ ಸಾರ್ವತ್ರಿಕ ಚುನಾವಣಾ ಪ್ರಚಾರವನ್ನುಪ್ರಾರಂಭಿಸಿದ್ದರು. ಅಂದಿನಿಂದ ಸುರೇಶ್ ಗೋಪಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಕೇರಳದ 20 ಲೋಕಸಭಾ ಕ್ಷೇತ್ರಗಳ ಪೈಕಿ ತ್ರಿಶೂರ್‌ನಲ್ಲಿ ಮಾತ್ರ ಎಲ್ಲಾ ಮೂರು ಪ್ರಮುಖ ಮೈತ್ರಿರಂಗಗಳು ತಮ್ಮ ಸಂಭವನೀಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಹಾಲಿ ಸಂಸದ ಕಾಂಗ್ರೆಸ್‌ನ ಟಿ.ಎನ್.ಪ್ರತಾಪನ್ ಅವರಿಗೆ ಮತ ಕೇಳುವ ಗೋಡೆ ಬರಹ ಅಳಿಸಿ ಹಾಕುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದರೂ ಕೂಡ ಅವರು ಕ್ಷೇತ್ರದ ಪ್ರಮುಖರನ್ನು ಭೇಟಿಯಾಗಲು ಆರಂಭಿಸಿದ್ದಾರೆ. ಸಿಪಿಐ ನಾಯಕ ಮತ್ತು ಮಾಜಿ ರಾಜ್ಯ ಸಚಿವ ವಿಎಸ್ ಸುನೀಲ್ ಕುಮಾರ್ ಅವರು ತ್ರಿಶೂರ್‌ನಲ್ಲಿ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕೇರಳದ ಅಂತರರಾಷ್ಟ್ರೀಯ ಸಾಹಿತ್ಯ ಉತ್ಸವದ ವೇದಿಕೆಯ ಬಳಿ, ʼದ ಫೆಡರಲ್ʼ ಪ್ರತಿನಿಧಿಯೊಂದಿಗೆ ಮಾತನಾಡಿದ ಸುನೀಲ್ ಕುಮಾರ್ ಅವರು, ʼʼನಾವು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಯಾವುದೇ ಪರಿಸ್ಥಿತಿ ಬಂದರೂ ನಾವು ಹೋರಾಟಕ್ಕೆ ಸಿದ್ಧರಿದ್ದೇವೆ. ಅವರು (ಸುರೇಶ್ ಗೋಪಿ) ಬಿಜೆಪಿಯಿಂದ ಸ್ಪರ್ಥಿಸಲು ಹಣದ ಹೊಳೆ ಹರಿಸುತ್ತಿದ್ದರೂ ಕೂಡ ಅವರಿಗೆ ಟಿಕೆಟ್ ಸಿಗುವ ಯಾವುದೇ ಸೂಚನೆಯಿಲ್ಲʼʼ ಎಂದು ತಿಳಿಸಿದರು.
ಮತ್ತೊಂದೆಡೆ, ಬಿಜೆಪಿಯ ರಾಜ್ಯ ನಾಯಕರೊಬ್ಬರು ಮಾತನಾಡಿದ್ದು, ʼʼಸಂಘ ಪರಿವಾರದ ಕಾರ್ಯಕರ್ತರು ಕಳೆದ ನಾಲ್ಕೈದು ವರ್ಷಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಆ ಬದಲಾವಣೆಯನ್ನು ನಾವು ಚುನಾವಣೆಯಲ್ಲಿ ನೋಡುತ್ತೇವೆ. ತ್ರಿಕೋನ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಗಳಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಆ ಬೃಹತ್ ಗುರಿಯ ಬಗ್ಗೆ ಉಳಿದವರು ಅಸಡ್ಡೆ ತೋರುತ್ತಿದ್ದಾರೆ. ಆ ನಿಟ್ಟಿನಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಬಹುಮುಖಿ ಕೆಲಸವನ್ನು ನಡೆಸುತ್ತಿದ್ದಾರೆʼʼ ಎಂದು ಹೇಳಿದರು.